ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಕಾರ್ಯಕರ್ತೆಯರಿಗೆ ಮುಕ್ತಿ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು `ಅನ್ಯ ಕೆಲಸಗಳಿಗೆ~ ಬಳಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು, ಸಮಗ್ರ ಶಿಶು ಅಭಿವೃದ್ಧಿ ಕಾರ್ಯಕ್ರಮದಲ್ಲಿ ಅವರು ಪೂರ್ಣವಾಗಿ ತೊಡಗಿಸಿಕೊಳ್ಳುವ ವಾತಾವರಣ ಕಲ್ಪಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇತ್ತೀಚೆಗೆ ಆದೇಶ ಹೊರಡಿಸಿದೆ.

ಕೇಂದ್ರ ಪುರಸ್ಕೃತ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶದಲ್ಲಿ 22 ಲಕ್ಷ ಹಾಗೂ ರಾಜ್ಯದಲ್ಲಿ 1.25 ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ನೌಕರರಿದ್ದಾರೆ. ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆ, ಚುಚ್ಚುಮದ್ದು, ಆರೋಗ್ಯ ತಪಾಸಣೆ, ಮಾಹಿತಿ ಸೇವೆ, ತಾಯಂದಿರಿಗೆ ಆರೋಗ್ಯ ಮತ್ತು ಪೌಷ್ಟಿಕ ಆಹಾರ ಕುರಿತ ಮಾಹಿತಿ, 3ರಿಂದ 6 ವರ್ಷದ ಮಕ್ಕಳಿಗೆ ಅನೌಪಚಾರಿಕ ಶಾಲಾ ಪೂರ್ವ ಶಿಕ್ಷಣ ನೀಡುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಿರ್ವಹಿಸುತ್ತಿದ್ದಾರೆ.
ಇವರು ಗ್ರಾಮಾಂತರ, ನಗರ, ಪಟ್ಟಣ, ಕೊಳಚೆ ಪ್ರದೇಶ ಎನ್ನದೇ ಕೆಲಸ ಮಾಡಿ, ಆಯಾ ಪ್ರದೇಶದ ಕುಟುಂಬಗಳೊಂದಿಗೆ ಸಂಪರ್ಕ ಇಟ್ಟುಕೊಂಡಿರುವ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಇದರೊಂದಿಗೆ, ಚುನಾವಣೆ ಸಂಬಂಧಿಸಿದ, ಜನಗಣತಿ, ಆರೋಗ್ಯ ಇಲಾಖೆಯ ವಿವಿಧ ರೀತಿಯ ಕೆಲಸಗಳು, ಬಿಪಿಎಲ್ ಪಡಿತರ ಚೀಟಿ ಫಲಾನುಭವಿಗಳ ಸಮೀಕ್ಷೆ ಮೊದಲಾದ ಕೆಲಸಗಳನ್ನು ಇವರಿಂದ ಮಾಡಿಸಲಾಗುತ್ತಿದೆ.

ಇದರಿಂದ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತಿದೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಇವರನ್ನು ಅನ್ಯ ಕಾರ್ಯಗಳಿಗೆ ನಿಯೋಜಿಸದಂತೆ ಆದೇಶ ಹೊರಡಿಸಲಾಗಿದೆ ಎಂದು ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಇಲಾಖೆಯ ಕಾರ್ಯಗಳು, ಚುನಾವಣೆ, ಪಲ್ಸ್ ಪೋಲಿಯೊ  ಮತ್ತು ವಿಶೇಷ ಕೆಲಸಗಳಲ್ಲಿ ಮಾತ್ರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಬಳಸಿಕೊಳ್ಳಬೇಕು. ಇಲಾಖೆಯ ಅಂಕಿಸಂಖ್ಯೆ ಪ್ರಕಾರ, ರಾಜ್ಯಾದ್ಯಂತ 65 ಸಾವಿರಕ್ಕೂ ಹೆಚ್ಚು ಅಪೌಷ್ಟಿಕ ಮಕ್ಕಳಿದ್ದಾರೆ. ಈ ಹಿನ್ನೆಲೆಯಲ್ಲಿ, ಅಪೌಷ್ಟಿಕತೆ ಹೋಗಲಾಡಿಸುವ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಎಚ್ಚರಿಕೆ: `ಇತರ ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಬಳಸಿಕೊಳ್ಳುತ್ತಿರುವುದರಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತಿದೆ. ಗಣತಿ ಕಾರ್ಯ, ವಿವಿಧ ಯೋಜನೆಯ ಫಲಾನುಭವಿಗಳ ಸಮೀಕ್ಷೆ ಮೊದಲಾದ ಕಾರ್ಯಕ್ಕೆ ಅವರನ್ನು ಬಳಸಿಕೊಳ್ಳುವುದು ಸರಿಯಲ್ಲ.

ಸಚಿವರು, ಮುಖ್ಯಮಂತ್ರಿ ಮೊದಲಾದವರು ಆಗಮಿಸಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ಕಾರ್ಯಕರ್ತೆಯರು, ಸಹಾಯಕಿಯರನ್ನು ಪೂರ್ಣಕುಂಭ ಮೆರವಣಿಗೆಗೆ ಅಧಿಕಾರಿಗಳು ಬಳಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ.

ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದುರಂತ. ಅವರಿಂದ ನಿಗದಿತ ಕೆಲಸವನ್ನಷ್ಟೇ ಮಾಡಿಸಬೇಕು. ಇಲ್ಲವಾದಲ್ಲಿ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ~ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಒಕ್ಕೂಟ (ಎಐಟಿಯುಸಿ)ದ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಎಚ್ಚರಿಸಿದ್ದಾರೆ.

`ಅಂಗನವಾಡಿ ಕಾರ್ಯಕರ್ತೆಯರಿಗೆ ಇಲಾಖೆಯದ್ದೇ ಹಲವು ಜವಾಬ್ದಾರಿಗಳಿವೆ. ಇದರೊಂದಿಗೆ ಹೆಚ್ಚುವರಿ ಕೆಲಸ ಮಾಡಿಸಲಾಗುತ್ತಿದೆ. ಇದಕ್ಕೆ ತಕ್ಕಂತೆ ವೇತನ ಏರಿಕೆಯಾಗಿಲ್ಲ. ಪ್ರಸ್ತುತ ಕಾರ್ಯಕರ್ತೆಯರಿಗೆ ರೂ 4,500 ಹಾಗೂ ಸಹಾಯಕಿಯರಿಗೆ ರೂ 2,250 ವೇತನ ನೀಡಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಈ ಸಂದರ್ಭದಲ್ಲಿ ಇಷ್ಟು ಕಡಿಮೆ ವೇತನದಿಂದ ಜೀವನ ನಡೆಸಲು ಸಾಧ್ಯವೇ?~ ಎಂಬುದು ಕಾರ್ಯಕರ್ತೆಯರ ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT