ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ನೌಕರರ ಅತೃಪ್ತಿ

Last Updated 24 ಫೆಬ್ರುವರಿ 2011, 9:10 IST
ಅಕ್ಷರ ಗಾತ್ರ

ಮಂಗಳೂರು: ಸರ್ಕಾರ ಘೋಷಿಸಿರುವ ‘ವಿಶ್ರಾಂತ ಗೌರವ ಧನ’ ಯೋಜನೆಗೆ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಗ್ಗೆ ಬುಧವಾರ ‘ಪ್ರಜಾವಾಣಿ’ ಜತೆ ಮಾತನಾಡಿದ ಸಂಘದ ಅಧ್ಯಕ್ಷೆ ಬಿ.ಆರ್.ಜಯಲಕ್ಷ್ಮಿ, ‘ವೇತನ ಹೆಚ್ಚಳ, ಪಿಂಚಣಿ, ನಿವೃತ್ತಿ ಗೌರವ ಸಂಭಾವನೆಗಾಗಿ ಮೂರು ದಶಕದಿಂದಲೂ ಸಂಘ ಹೋರಾಟ ನಡೆ–ಸುತ್ತಿದೆ. ತಿಂಗಳ ಹಿಂದೆ ಈ ಬಗ್ಗೆ ಸರ್ಕಾರದ ಜತೆ ಸಮಾಲೋಚನೆ ನಡೆದಿದ್ದು, ಈ ಸಂದರ್ಭದಲ್ಲಿ ಕಾರ್ಯಕರ್ತೆಯರಿಗೆ ರೂ. 1 ಲಕ್ಷ, ಮತ್ತು ಸಹಾಯಕಿಯರಿಗೆ ರೂ. 80 ಸಾವಿರ ನಿವೃತ್ತಿ ಗೌರವ ಸಂಭಾವನೆ ನೀಡಬೇಕೆಂದು ಒತ್ತಾಯಿಸಲಾಗಿತ್ತು’ ಎಂದರು.

‘ಸರ್ಕಾರ ರೂ. 80 ಸಾವಿರ ಮತ್ತು 50 ಸಾವಿರ ನೀಡುವುದಾಗಿ ಆಗ ವೇಳೆ ಭರವಸೆ ನೀಡಿತ್ತು. ಆದರೆ ಇದೀಗ ರೂ. 50 ಸಾವಿರ ಮತ್ತು 30 ಸಾವಿರ ನಿಗದಿಪಡಿಸಿರುವುದು ತೀವ್ರ ನಿರಾಶೆ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.

‘ಪುದುಚೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ರೂ. 12 ಸಾವಿರ, ಸಹಾಯಕಿಯರಿಗೆ 8 ಸಾವಿರ, ತಮಿಳುನಾಡಿನಲ್ಲಿ 5 ಸಾವಿರ ಮತ್ತು 3 ಸಾವಿರ ವೇತನ ನೀಡಲಾಗುತ್ತಿದೆ. ನಮ್ಮಲ್ಲಿ ಅಲ್ಲಿನ ಅರ್ಧದಷ್ಟೂ ಸಿಗುತ್ತಿಲ್ಲ. ಸರ್ಕಾರ ತಾನು ಕೊಟ್ಟ ಮಾತಿಗೆ ತಪ್ಪಿದೆ. ನಮ್ಮಿಂದ ಗರಿಷ್ಠ ಕೆಲಸ ಮಾಡಿಸಿಕೊಳ್ಳುವ ಸರ್ಕಾರ ಇಷ್ಟು ಕನಿಷ್ಠ ವಾಗಿ ನೋಡಿಕೊಳ್ಳುತ್ತಿರುವುದು ಸರಿಯಲ್ಲ. ಇಷ್ಟಾದರೂ ನೀಡಿದೆಯಲ್ಲ ಎಂದು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗಿದೆ ಎಂದು ವಿಷಾದಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಯೋಜನೆಗಳ ಫಲಾನುಭವಿಗಳನ್ನು ಗುರುತಿಸುವಲ್ಲಿಂದ ಆರಂಭಿಸಿ ಅಂಗನವಾಡಿಯ ಮೂಲಕಾರ್ಯದ ಹೊರತಾದ ಅನೇಕ ಕಾರ್ಯಗಳನ್ನೂ ಕಾರ್ಯಕರ್ತೆಯರು ನಿರ್ವಹಿಸುತ್ತಿದ್ದಾರೆ. ಸಮಾಜದ ಕಣ್ಣಿಗೆ ನಮ್ಮ ಕೆಲಸ ಕೇವಲ ಮಕ್ಕಳನ್ನು ನೋಡಿಕೊಳ್ಳುವುದು ಮಾತ್ರ ಎಂಬಂತೆ ಕಾಣುತ್ತದೆ. ಆದರೆ ಸರ್ಕಾರದ ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾ ಸೇರಿದಂತೆ ಅನೇಕ ಯೋಜನೆಗಳ ಫಲಾನುಭವಿಗಳನ್ನು ಗುರುತಿಸುವಲ್ಲಿ ನಮ್ಮ ಶ್ರಮವೂ ಇದೆ.

ಮಹಿಳೆಯೊಬ್ಬಳು ಗರ್ಭಿಣಿ ಎಂದು ಗೊತ್ತಾದ ತಕ್ಷಣದಿಂದ ಅಂಗನವಾಡಿ ಕಾರ್ಯಕರ್ತೆ ಆಕೆಯ ಬಗ್ಗೆ ನಿಗಾ ವಹಿಸಬೇಕಾಗುತ್ತದೆ. ಮುಂದೆ ಕಾಲಕಾಲಕ್ಕೆ ಚುಚ್ಚುಮದ್ದು ನೀಡುವುದು, ಪೌಷ್ಠಿಕ ಆಹಾರ ಒದಗಿಸುವುದೂ ಸೇರಿದಂತೆ ಮಗುವಿನ ಬೆಳವಣಿಗೆ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಗಮನ ಹರಿಸುತ್ತಾಳೆ ಎಂದು ಬಿ.ಆರ್.ಜಯಲಕ್ಷ್ಮಿ ವಿವರಿಸಿದರು.

ಇಷ್ಟೆಲ್ಲಾ ಕೆಲಸ ನಿರ್ವಹಿಸಿದರೂ ಸರ್ಕಾರ ಕಾರ್ಯಕರ್ತೆಯರಿಗೆ ರೂ. 3000 ಮತ್ತು ಸಹಾಯಕಿಯರಿಗೆ ರೂ. 1250 ವೇತನ ನೀಡುತ್ತಿದೆ. ಆದಾಗ್ಯೂ ಗರಿಷ್ಠ ಕೆಲಸಗಳನ್ನು ನಮ್ಮಿಂದ ಮಾಡಿಸಿಕೊಳ್ಳುವ ಸರ್ಕಾರ ಇಷ್ಟು ಕನಿಷ್ಠವಾಗಿ ನೋಡಿಕೊಳ್ಳುತ್ತಿರುವುದು ಸರಿಯಲ್ಲ’ ಎಂದು ಅಸಮಾಧಾನ ಹೊರಹಾಕಿದರು.

‘ವೇತನ ಹೆಚ್ಚಳ, ಪಿಂಚಣಿ, ನಿವೃತ್ತಿ ಗೌರವ ಸಂಭಾವನೆಗಾಗಿ 3ದಶಕದಿಂದಲೂ ಹೋರಾಟ ನಡೆಯುತ್ತಿದೆ. ಕಾರ್ಮಿಕ ಸಂಘಟನೆಗಳ ಜತೆ, ಸ್ವತಂತ್ರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಹೋರಾಟ ನಡೆಸಲಾಗಿದೆ. ಬಂಧನಕ್ಕೂ ಒಳಗಾಗಿದ್ದೇವೆ. ಈ ಬಗ್ಗೆ ತಿಂಗಳ ಹಿಂದೆ ಸರ್ಕಾರದ ಜತೆ ಸಮಾಲೋಚನೆ ನಡೆಸಿದ ಸಂದರ್ಭ ಕಾರ್ಯಕರ್ತೆಯರಿಗೆ ರೂ.1ಲಕ್ಷ, ಮತ್ತು ಸಹಾಯಕಿಯರಿಗೆ ರೂ. 80ಸಾವಿರ ನಿವೃತ್ತಿ ಗೌರವ ಸಂಭಾವನೆ ನೀಡಬೇಕೆಂದು ಒತ್ತಾಯಿಸಲಾಗಿತ್ತು. ಆಗ ಸರ್ಕಾರ ರೂ. 80ಸಾವಿರ ಮತ್ತು 50ಸಾವಿರ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಇದೀಗ ರೂ. 50 ಸಾವಿರ ಮತ್ತು 30 ಸಾವಿರ ನಿಗದಿಪಡಿಸಿರುವುದು ನಿರಾಶೆ ತಂದಿದೆ’ ಎಂದರು.

‘ಅಂಗನವಾಡಿ ಕಾರ್ಯಕರ್ತೆಯರಾಗಿ 35 ವರ್ಷದಿಂದ ದುಡಿಯುತ್ತಿದ್ದೇವೆ. ನಿವೃತ್ತಿ ನಂತರ ಕೆಲಸ ಮಾಡಲು ಸಾಧ್ಯವಿಲ್ಲ. ಈಗ ಸರ್ಕಾರ ಪ್ರಕಟಿಸಿರುವ ಪಿಂಚಣಿ ಎಲೆ ಅಡಿಕೆ ತಿನ್ನಲೂ ಸಾಕಾಗುವುದಿಲ್ಲ. ಕನಿಷ್ಠ ರೂ. 1 ಲಕ್ಷ ನಿವೃತ್ತಿ ಸಂಭಾವನೆಯನ್ನಾದರೂ ನೀಡಬೇಕು’ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಮಾಜಿ ಅಧ್ಯಕ್ಷೆ, ಸುಳ್ಯ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಚೆರಿಯಮ್ಮ.

‘35 ವರ್ಷಕ್ಕಿಂತಲೂ ಹೆಚ್ಚು ವರ್ಷ ದುಡಿದು ನಿವೃತ್ತರಾಗುತ್ತಿರುವ 80 ವರ್ಷ ವರ್ಷದ ಸಹಾಯಕಿಯರಿಗೆ ವಿಶ್ರಾಂತ ಗೌರವ ಸಂಭಾವನೆ ಎಂದು 30ಸಾವಿರ ನೀಡುವುದರಲ್ಲಿ ಏನು ಅರ್ಥ ಇದೆ? ಆಗತಾನೆ ಹುಟ್ಟಿದ ಹೆಣ್ಣುಮಗುವಿಗೆ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ರೂ. 1 ಲಕ್ಷ ನೀಡುವುದಾದರೆ ಇಷ್ಟು ವರ್ಷ ದುಡಿದು ನಿವೃತ್ತರಾಗುತ್ತಿರುವ 60 ವರ್ಷ ಮೇಲ್ಪಟ್ಟ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ರೀತಿಯ ಅವಮಾನ ಏಕೆ’ ಎನ್ನುವ ಪ್ರಶ್ನೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಉಡುಪಿ ಜಿಲ್ಲಾ ಘಟಕ ಕಾರ್ಯದರ್ಶಿ ಪದ್ಮಾವತಿ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT