ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಮಕ್ಕಳಲ್ಲಿ ಅಪೌಷ್ಟಿಕತೆ

ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಹಿರಂಗ
Last Updated 8 ಡಿಸೆಂಬರ್ 2012, 5:22 IST
ಅಕ್ಷರ ಗಾತ್ರ

ಜಗಳೂರು: ಇಲ್ಲಿನ ತಾಲ್ಲೂಕಿನಲ್ಲಿ ಇಲಾಖೆ ವತಿಯಿಂದ ಈಚೆಗೆ ನಡೆಸಲಾದ ಸಮೀಕ್ಷೆಯಲ್ಲಿ ಅಂಗನವಾಡಿಗಳ 254 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಅಧಿಕಾರಿ ಸುಶೀಲಮ್ಮ ಅವರು ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಇಲಾಖಾವಾರು ವರದಿ ಮಂಡಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ 247 ಅಂಗನವಾಡಿ ಕೇಂದ್ರಗಳಲ್ಲಿರುವ 6 ವರ್ಷದ ಒಳಗಿನ 18 ಸಾವಿರ ಮಕ್ಕಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ 254 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ಇಂತಹ ಮಕ್ಕಳ ಆರೋಗ್ಯ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ತಾಲ್ಲೂಕಿನಲ್ಲಿ ಎಚ್‌ಐವಿ ಸೋಂಕಿತ 11 ಪ್ರಕರಣಗಳು ಪತ್ತೆಯಾಗಿವೆ. ಹಾಲೇಕಲ್ಲು ಗ್ರಾಮದಲ್ಲಿ ಒಂದು ಡೆಂಗೆ ಜ್ವರದ ಪ್ರಕರಣ ದೃಢಪಟ್ಟಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ವಸಂತ್ ನಾಯ್ಕ ಸಭೆಯ ಗಮನಕ್ಕೆ ತಂದರು.

ಸಮಾಜಕಲ್ಯಾಣ ಇಲಾಖೆ ಅಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ 12 ಸಾವಿರ ವಿದ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ಆನ್‌ಲೈನ್‌ಗೆ ಅಳವಡಿಸಲಾಗಿದೆ. ಉಳಿದ 3,500 ವಿದ್ಯಾರ್ಥಿಗಳ ವೇತನ ಆನ್‌ಲೈನ್ ಆಗಬೇಕಿದೆ ಎಂದು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಮಹೇಶ್ ಮಾಹಿತಿ ನೀಡಿದರು.

ಹಿಂಗಾರು ಮಳೆ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಿದ್ದಿದೆ. ಸೂರ್ಯಕಾಂತಿ, ಬಿಳಿಜೋಳ, ಕಡಲೆ ಬೆಳೆಗಳು ಉತ್ತಮವಾಗಿವೆ. ಕಡಲೆ ಬೆಳೆಗೆ ಕೀಟಬಾಧೆ ಹೆಚ್ಚಾಗಿದೆ. ನಿಯಮಿತವಾಗಿ ಔಷಧಿ ಸಿಂಪಡಿಸಲು ರೈತರಿಗೆ ಸಲಹೆ ನೀಡಲಾಗಿದೆ. ಸುವರ್ಣ ಭೂಮಿ ಯೋಜನೆಯಡಿ 2,582 ಫಲಾನುಭವಿಗಳಿಗೆ ಮೊದಲ ಕಂತಿನ ಹಣವನ್ನು ಜಮಾ ಮಾಡಲಾಗಿದೆ. ಮುಂದಿನ ವಾರ ಎರಡನೇ ಕಂತಿನ ಹಣ ನೀಡಲಾಗುವುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್. ಮಾರುತಿ ಹೇಳಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ಸುಮಲತಾ  ಸತೀಶ್, ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಂ. ಪ್ರಭುಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT