ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಸಿಬ್ಬಂದಿ ಹೆರಿಗೆ ರಜೆಗೆ ಕತ್ತರಿ

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದ ಅಂಗನವಾಡಿಯಲ್ಲಿರುವ ಸುಮಾರು ಮೂವತ್ತು ಲಕ್ಷ ಮಕ್ಕಳ ಲಾಲನೆ ಪಾಲನೆಯ ಹೊಣೆ ಹೊತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಹೆರಿಗೆ ರಜೆಗೆ ರಾಜ್ಯ ಸರ್ಕಾರ ಕತ್ತರಿ ಪ್ರಯೋಗ ಮಾಡಿದೆ.

ಇತರ ಎಲ್ಲ ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರಿಗೆ ನೀಡುವಂತೆಯೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ (ಐಸಿಡಿಎಸ್) ಕೆಲಸ ಮಾಡುತ್ತಿರುವ ಅಂಗನವಾಡಿ ಸಹಾಯಕಿಯರು, ಮೇಲ್ವಿಚಾರಕಿಯರಿಗೂ ವೇತನ ಸಹಿತ ಆರು ತಿಂಗಳ ಹೆರಿಗೆ ರಜೆ ನೀಡಿ ಕೇಂದ್ರ ಸರ್ಕಾರ ಕಳೆದ ವರ್ಷವೇ ಆದೇಶಿಸಿತ್ತು. ಆದರೆ ಇಲ್ಲಿಯವರೆಗೂ ಅದನ್ನು ಜಾರಿ ಮಾಡದೆ ನುಣುಚಿಕೊಂಡಿದ್ದ ರಾಜ್ಯ ಸರ್ಕಾರ, ಈಗ ಆದೇಶ ಹೊರಡಿಸಿದೆ. ಆದರೆ ಅದರಲ್ಲಿ ಹೆರಿಗೆ ರಜೆಯನ್ನು `ಆರು ತಿಂಗಳ' ಬದಲಿಗೆ ಕೇವಲ `ನಾಲ್ಕೂವರೆ ತಿಂಗಳಿಗೆ' ಸೀಮಿತಗೊಳಿಸಿದೆ.

`ಆರು ತಿಂಗಳು ರಜೆ ನೀಡಲು ಸಾಧ್ಯವಿಲ್ಲ. ಅಷ್ಟೊಂದು ರಜೆ ಕೊಟ್ಟರೆ ಅಂಗನವಾಡಿ ಮಕ್ಕಳಿಗೆ ಆಹಾರ ಪೂರೈಕೆಗೆ ತೊಂದರೆಯಾಗಲಿದೆ. ಹೀಗಾಗಿ ನಾಲ್ಕೂವರೆ ತಿಂಗಳಷ್ಟೇ ನೀಡಲಾಗುವುದು' ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿರುವುದು ಈಗ ಚರ್ಚೆಯ ವಿಷಯವಾಗಿದೆ.

ಗರ್ಭಿಣಿಯರು, ಬಾಣಂತಿಯರು, ಮಕ್ಕಳ ಅಪೌಷ್ಟಿಕತೆ, ಆರೋಗ್ಯ ಸುಧಾರಣೆ ಕಾರ್ಯದಲ್ಲಿ ರಾಜ್ಯದಲ್ಲಿ ಸುಮಾರು 1.20 ಲಕ್ಷ ಅಂಗನವಾಡಿ ಸಹಾಯಕಿಯರು, ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ಆದರೆ ಇಲಾಖೆಯ ಆದೇಶದಿಂದಾಗಿ ಸ್ವತಃ ಈಗ ಈ ಮಹಿಳೆಯರೇ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

`ಇಲಾಖೆಯ ಸಚಿವರಿಗೆ ಇದು ಗೊತ್ತಾಗುವುದಿಲ್ಲ. ಅವರೊಂದಿಗೆ ಮಾತನಾಡಿದರೂ ಅವರು ಕಾಳಜಿ ತೋರಿಸುತ್ತಿಲ್ಲ. ಅಧಿಕಾರಿಗಳು ಕೇಳಿದಂತೆ ಅವರು ಕೆಲಸ ಮಾಡುತ್ತಿದ್ದಾರೆ. ಇದು ಕೇಂದ್ರ ಸರ್ಕಾರದ ಯೋಜನೆ. ಕೇಂದ್ರ ಸರ್ಕಾರವೇ ರಜೆ ಕೊಟ್ಟಿರುವಾಗ ಇವರಿಗೆ ಯಾಕೆ ಕೊಡಲು ಸಾಧ್ಯವಾಗುವುದಿಲ್ಲ' ಎಂದು ಅಂಗನವಾಡಿ ಕಾರ್ಯಕರ್ತೆಯರ ಒಕ್ಕೂಟದ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ವರಲಕ್ಷ್ಮಿ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

`ಎಲ್ಲ ಮಹಿಳೆಯರಿಗೂ ಒಂದೇ ನ್ಯಾಯ ಅನ್ವಯವಾಗಬೇಕು. ರಾಜ್ಯದಲ್ಲಿ ಪ್ರಸ್ತುತ 1.20 ಲಕ್ಷ ಕಾರ್ಯಕರ್ತೆಯರಲ್ಲಿ ಸಾಕಷ್ಟು ಹಿರಿಯರು ಇದ್ದಾರೆ. ತಿಂಗಳಿಗೆ 20 ರಿಂದ 30 ಕಾರ್ಯಕರ್ತೆಯರು ಹೆರಿಗೆ ರಜೆ ಪಡೆಯಬಹುದು. ಅಲ್ಲದೆ ಸಹಾಯಕಿಯರು, ಕಾರ್ಯಕರ್ತೆಯರು ಇಬ್ಬರು ಕೂಡ ಏಕ ಕಾಲದಲ್ಲೇ ಹೆರಿಗೆ ರಜೆ ಪಡೆಯುವುದಿಲ್ಲ. ಇಲಾಖೆಯ ನಿರ್ಧಾರ ಸರಿಯಲ್ಲ' ಎಂದು ಹೆಸರು ಹೇಳಲಿಚ್ಛಿಸದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹೇಳಿದರು.

`ಅಗತ್ಯ ಸೇವೆಗಳಾದ ಪೊಲೀಸ್, ಅಂಚೆ ಇಲಾಖೆಯಲ್ಲೇ ಆರು ತಿಂಗಳು ರಜೆ ನೀಡಲಾಗುತ್ತದೆ. ರಜೆ ಹೋದಾಗ ತಾತ್ಕಾಲಿಕವಾಗಿ ಕಾರ್ಯಕರ್ತೆಯನ್ನು ನೇಮಿಸಲು ಅವಕಾಶವೂ ಇದೆ. ಇಷ್ಟೆಲ್ಲ ಇದ್ದು ಹೆರಿಗೆ ರಜೆ ಕಡಿತಗೊಳಿಸಿರುವುದು ಸರಿಯಲ್ಲ. ಇದು ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ಬೇರೆಯವರ ಮಕ್ಕಳ ಆರೋಗ್ಯ ಸುಧಾರಣೆಗೆ ದುಡಿಯುವ ನಾವುಗಳೇ ನಮ್ಮ ಮಕ್ಕಳ ಬೆಳವಣಿಗೆ ನೋಡಿಕೊಳ್ಳಲು ಆಗದ ಸ್ಥಿತಿಗೆ ಸರ್ಕಾರ ದೂಡುತ್ತಿದೆ' ಎಂದೂ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT