ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲ ಗಂಗಮ್ಮ ನ ಮನೋಬಲ

Last Updated 3 ಡಿಸೆಂಬರ್ 2013, 10:11 IST
ಅಕ್ಷರ ಗಾತ್ರ

ಹೊಸಪೇಟೆ: ‘ಅಂಗವೈಕಲ್ಯ ದೌರ್ಬಲ್ಯವಲ್ಲ. ಉನ್ನತ ಸಾಧನೆಗೆ ಅದು ಅಡ್ಡಿಯಲ್ಲ’ ಎಂಬುದಕ್ಕೆ ಇಲ್ಲೊಬ್ಬ ಯುವತಿ ನಿದರ್ಶನವಾಗಿದ್ದಾರೆ.
ಪೋಲಿಯೊದಿಂದಾಗಿ ಎರಡೂ ಕಾಲುಗಳಲ್ಲಿ ಶಕ್ತಿ ಇಲ್ಲದಂತಾಗಿದ್ದರಿಂದ,  ಓಡಾಡುವುದಕ್ಕೆ ಕಷ್ಟಪಡುವ ಇವರು, ಆ ದೌರ್ಬಲ್ಯವನ್ನು ಹಿನ್ನಡೆ ಎಂದುಕೊಳ್ಳದೆ, ಸಮಾಜದಲ್ಲಿ ನಾನು ಯಾರಿಗೂ ಕಡಿಮೆಯಲ್ಲ ಎಂಬುದನ್ನು ತೋರಿಸುತ್ತ ಸ್ವಾವಲಂಬೀ ಜೀವನ ಸಾಗಿಸುವುದು ಕಷ್ಟವಲ್ಲ ಎಂಬುದನ್ನು ಸಾರಿ ಹೇಳುತ್ತಿದ್ದಾರೆ.

ಕಾಲುಗಳ ಶಕ್ತಿ ಅಡಗಿದರೂ, ಆತ್ಮವಿಶ್ವಾಸ ಕಳೆದುಕೊಳ್ಳದ ಹೊಸಪೇಟೆಯ ಬಾಣದ ಗಂಗಮ್ಮ ಕಡು ಬಡತನದ ನಡುವೆಯು ಕಂಪ್ಯೂಟರ್‌ ಶಿಕ್ಷಣ ಪಡೆದು, ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಬಾಲ್ಯದಿಂದಲೇ ಧೈರ್ಯವನ್ನು ಮೈಗೂಡಿಸಕೊಂಡಿದ್ದಾರೆ.
ತಂದೆಯನ್ನು ಕಳೆದುಕೊಂಡಿರುವ ಇವರಿಗೆ ತರಕಾರಿ ಮಾರುವ ತಾಯಿಯೇ ಆಸರೆ. ಮುಪ್ಪಿನಲ್ಲಿ ತಾಯಿಗೆ ಹೊರೆ ಆಗಬಾರದು ಎಂದು ಆಲೋಚಿಸಿ, ಸ್ವಯಂ ಉದ್ಯೋಗ ಕಂಡುಕೊಂಡಿರುವ ಈ ಯುವತಿ, ಇತರರಿಗೂ ಮಾದರಿಯಾಗಿದ್ದಾರೆ.

‘ನನಗೆ ಕಾಲು ಮಾತ್ರ ಇಲ್ಲ, ನನಗಿಂತಲೂ ವಿಚಿತ್ರವಾಗಿ ಮತ್ತು ಬಹುತೇಕ  ಅವಯವಗಳಿಲ್ಲದ ಸಂಪೂರ್ಣ ಪರಾವಲಂಬಿಗಳು ಎಷ್ಟೋ ಜನ ಇರುವಾಗ, ನನ್ನ ನ್ಯೂನತೆ ದೊಡ್ಡದೇನೂ ಅಲ್ಲ ಎಂದುಕೊಂಡೇ ಕುಟುಂಬ ವರ್ಗಕ್ಕೂ ಆಧಾರವಾಗಿದ್ದೇನೆ. ವೃತ್ತಿ ಕೌಶಲವನು್ನು ರೂಢಿಸಿಕೊಂಡು ಸ್ವಾವಲಂಬಿ ಜೀವನ ನಡೆಸುವುದರ ಜತೆಗೆ, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಷಯದ ಸ್ನಾತಕೋತ್ತರ ಪದವಿಗಾಗಿ ಪ್ರವೇಶ ಪಡೆದು, ಉನ್ನತ ಶಿಕ್ಷಣದ ಕನಸು ನನಸಾಗಿಸಿಕೊಳ್ಳಲು ಮುಂದಾಗಿದ್ದೇನೆ’ ಎಂದು ಗಂಗಮ್ಮ ಹೆಮ್ಮೆಯಿಂದ ಹೇಳುತ್ತಾರೆ.

ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಗುತ್ತಿಗೆ ಆಧಾರದ ‘ಕಂಪ್ಯೂಟರ್‌ ಆಪರೇಟರ್‌’ ಕೆಲಸ ಮಾಡುತ್ತಿರುವ ಇವರು, ಬಿಡುವಿನ ವೇಳೆಯಲ್ಲಿ ಓದು, ಬರವಣಿಗೆ, ಮತ್ತಿತರ ಹವ್ಯಾಸದಲ್ಲಿ ತಲ್ಲೀನರಾಗಿರುವುದರ  ಜತೆಗೆ ಮನೆ ಕೆಲಸಗಳನ್ನು ನಿರ್ವಹಿಸುವ ಮೂಲಕ ಕುಟುಂಬಕ್ಕೂ ಆಧಾರವಾಗಿದ್ದಾರೆ.

‘ಅವಕಾಶಕ್ಕೆ ಇಲ್ಲಿ ಕೊರತೆ ಇಲ್ಲ. ಸಾಧಿಸಬೇಕು ಎಂಬ ಮನಸ್ಸುಗಳ ಕೊರತೆ ಇದೆಯಷ್ಟೇ. ಗುರಿ ಸಾಧನೆಯ ಹಾದಿಯಲ್ಲಿ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರ ಅಂಗವಿಕಲರ ಸ್ವಾವಲಂಬನೆಗಾಗಿ ಇನ್ನೂ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮನೋಬಲ ತುಂಬಿದ್ದಾದರೆ ನನ್ನಂತೆಯೇ ಇರುವ ಅನೇಕ ಅಂಗವಿಕಲರು ಉನ್ನತ ಸಾಧನೆ ಮಾಡುವುದು ಸಾಧ್ಯ ಎಂದು ಅವರು ಗರ್ವದಿಂದ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT