ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲ ಮಗುವಿಗೆ ಉಚಿತ ಚಿಕಿತ್ಸೆ ಭರವಸೆ

Last Updated 13 ಮೇ 2012, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕೋಳೂರು ಗ್ರಾಮದ ಸವಿತಾ ಮತ್ತು ಬಸವರಾಜ ಮಾದರ ದಂಪತಿಗೆ ಜನಿಸಿರುವ 25 ದಿನಗಳ ಬಹು ಅಂಗವೈಕಲ್ಯ ಇರುವ ಮಗು ಸಂಗಮೇಶಗೆ ಬೆಂಗಳೂರಿನ ಸ್ಪರ್ಶ ಫೌಂಡೇಶನ್ ಉಚಿತ ಚಿಕಿತ್ಸೆ ನೀಡುವ ಭರವಸೆ ನೀಡಿದೆ.

ಬಾಗಲಕೋಟೆ ನಗರದಲ್ಲಿ ಭಾನುವಾರ ಖಾಸಗಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ಪರ್ಶ ಫೌಂಡೇಶನ್ ನಿರ್ದೇಶಕ ಡಾ. ಶರಣ್ ಪಾಟೀಲ ಅವರನ್ನು ಭೇಟಿ ಮಾಡಿದ ದಂಪತಿ ತಮ್ಮ ಸಂಕಷ್ಟವನ್ನು ವೈದ್ಯರ ಬಳಿ ತೋಡಿಕೊಂಡರು.

ದಂಪತಿಯ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿದ ಡಾ. ಶರಣ್ ಪಾಟೀಲ, ಮಗುವನ್ನು ಪರೀಕ್ಷಿಸಿ, ಇದೊಂದು ಬಹು ಅಂಗವೈಕಲ್ಯ ಇರುವ ಮಗುವಾಗಿದೆ, ಸೂಕ್ತ ಚಿಕಿತ್ಸೆ ನೀಡಿದರೆ ಮಗು ಸಾಮಾನ್ಯ ಮಗುವಿನಂತೆ ಆಗಲಿದೆ ಎಂದರು.

ಸೀಳು ತುಟಿ, ಪೂರ್ಣ ರಚನೆಯಾಗದಿರುವ ಕೈ ಮತ್ತು ಕಾಲು,  ಎರಡೆರಡು ಬೆರಳುಗಳು ಮಾತ್ರ ಕೈ ಮತ್ತು ಕಾಲಿನಲ್ಲಿ ಇವೆ, ತುಟಿ-ಬಾಯಿ ಒಂದೇ ಆಗಿದೆ (multiple congenintal annomalyes)  ಇದನ್ನು ಸರಿಪಡಿಸಲು ಕನಿಷ್ಠ ನಾಲ್ಕೈದು ವರ್ಷ ಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಮಗುವನ್ನು ಸಾಮಾನ್ಯ ರೂಪಕ್ಕೆ ತರಲು ಚಿಕಿತ್ಸೆಗಾಗಿ ಸುಮಾರು ನಾಲ್ಕೈದು ಲಕ್ಷ ರೂಪಾಯಿ ಅಗತ್ಯವಿದೆ, ಈ ವೆಚ್ಚವನ್ನು ಸ್ಪರ್ಶ ಫೌಂಡೇಶನ್ ಭರಿಸಲಿದೆ. ಎರಡು ವಾರಗಳ ಬಳಿಕ ಬೆಂಗಳೂರಿಗೆ ಮಗುವನ್ನು  ಕರೆತರುವಂತೆ ದಂಪತಿಗೆ ಸೂಚಿಸಿದರು. ಮುದ್ದೇಬಿಹಾಳದಿಂದ ಬೆಂಗಳೂರಿಗೆ ಬಂದು ಹೋಗುವ ಖರ್ಚುನ್ನು ಮಾತ್ರ ದಂಪತಿ ಭರಿಸಬೇಕಾಗುತ್ತದೆ ಎಂದು ತಿಳಿಸಿದರು.

ಸ್ಪರ್ಶ ಸಹಭಾಗಿತ್ವ:  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಶರಣ್ ಪಾಟೀಲ, ಸ್ಪರ್ಶ ಫೌಂಡೇಷನ್ ಆರೋಗ್ಯ ಸೇವೆಯನ್ನು ರಾಜ್ಯ ವ್ಯಾಪಿ ವಿಸ್ತರಿಸುವ ಉದ್ದೇಶದಿಂದ ಆಸಕ್ತ  ಖಾಸಗಿ ಆಸ್ಪತ್ರೆಗಳೊಂದಿಗೆ ಆರೋಗ್ಯ ಸಂಬಂಧಿ ಒಪ್ಪಂದ ಮಾಡಿಕೊಳ್ಳಲು ಮುಕ್ತವಾಗಿದೆ ಎಂದು ತಿಳಿಸಿದರು.

ಸ್ಪರ್ಶದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಆಸ್ಪತ್ರೆಗಳಿಗೆ ಸ್ಪರ್ಶ ಆಸ್ಪತ್ರೆಯ ವೈದ್ಯರ ಭೇಟಿ,  ರೋಗಿಗಳಿಗೆ ಚಿಕಿತ್ಸೆ, ವೈದ್ಯರಿಗೆ ಸಲಹೆ, ಉಪನ್ಯಾಸವನ್ನು ನೀಡಲಿದೆ ಎಂದರು. ಈಗಾಗಲೇ ದಾವಣಗೆರೆಯ ಎಸ್.ಎಸ್.ವೈದ್ಯಕೀಯ ಕಾಲೇಜು ಮತ್ತು ಕೋಲಾರ ವೈದ್ಯಕೀಯ ಕಾಲೇಜುಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದರು.

ವೈದ್ಯಕೀಯ ಶಿಕ್ಷಣ ದುಬಾರಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಹೆಚ್ಚು ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ತೆರೆದು ಗುಣಾತ್ಮಕ ತರಬೇತಿ ನೀಡಿದರೆ ಮಾತ್ರ ಈ ಸಮಸ್ಯೆ ನಿವಾರಣೆಯಾಗಬಲ್ಲದು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT