ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲ ಯುವತಿಗೆ ಅಪಘಾತ- ನೆರವಿನ ಮೊರೆ

ಆಘಾತದ ಮೇಲೊಂದು ಆಘಾತ
Last Updated 18 ಜುಲೈ 2013, 9:54 IST
ಅಕ್ಷರ ಗಾತ್ರ

ಉಳ್ಳಾಲ: ಆ ಕುಟುಂಬಕ್ಕೆ ಆಘಾತದ ಮೇಲೊಂದು ಆಘಾತಗಳೇ. ಅಂಗವಿಕಲ ಮಗಳ ದುಡಿಮೆ ಮತ್ತು ತಾಯಿಯ ಬೀಡಿ ಕಟ್ಟುವ ಕಾಯಕದಿಂದ ಸಂಸಾರವೆಂಬ ನೌಕೆ ಕಷ್ಟಕರವಾಗಿ ಸಾಗುತ್ತಿತ್ತು. ಅದರ ನಡುವೆ ಅಂಗವಿಕಲ ಮಗಳಿಗೆ  ಆದ ಅಪಘಾತವೊಂದು ಆಕೆಯ ಬಾಳಿನಲ್ಲಿದ್ದ ಸಂತಸವನ್ನೇ ಕಸಿದುಕೊಂಡಿದೆ. ಇದೀಗ ಈ ಕುಟುಂಬ ನೆರವಿಗಾಗಿ ಮೊರೆ ಹೋಗಿದೆ.

ತೊಕ್ಕೊಟ್ಟು ಕಾಪಿಕಾಡಿನ ಎಆರ್‌ಎಸ್ ರಸ್ತೆ ನಿವಾಸಿ ಅಪ್ಪಿ ಪೂಜಾರ‌್ತಿ ಅವರ ಕುಟುಂಬ ಆಘಾತಗಳಿಂದ ಕಮರಿ ಹೋಗಿದೆ. ಇವರ ಐವರು ಮಕ್ಕಳಲ್ಲಿ ಕೊನೆಯವರಾದ ಪ್ರೇಮಲತಾ (20) ಹುಟ್ಟಿದ ಮೂರು ವರ್ಷಗಳಲ್ಲಿ  ಮನೆಯೊಳಗೆ ಜಾರಿ ಬಿದ್ದು ಕಾಲಿಗೆ ಗಾಯಗೊಂಡು ಚೇತರಿಸಿಕೊಂಡಿದ್ದರು.

ಮತ್ತೆ  ಐದು ವರ್ಷ ಪ್ರಾಯದಲ್ಲಿ  ಮನೆ ಅಂಗಳದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸೊಂಟದ ಬಲವನ್ನು ಕಳೆದುಕೊಂಡಿದ್ದರು. ಹೀಗೆ ಜೀವನದಲ್ಲಿ ಏಟುಗಳನ್ನೇ ಎದುರಿಸಿಕೊಂಡು ಬಂದ ಪ್ರೇಮಲತಾ ಅಂಗವಿಕಲರಾಗಿ ಐದನೇ ತರಗತಿವರೆಗೆ ಶಾಲೆಗೆ ಹೋಗಿ ಬಳಿಕ ಕಿತ್ತು ತಿನ್ನುವ ಬಡತನದಿಂದ ಶಿಕ್ಷಣವನ್ನೇ ಮೊಟಕುಗೊಳಿಸಿದ್ದರು.

18 ವರ್ಷ ತುಂಬುತ್ತಲೇ  ಕುಟುಂಬದ ನಿರ್ವಹಣೆ ಮಾಡುತ್ತಿರುವ ತಾಯಿಯೊಬ್ಬಳ ಕಷ್ಟವನ್ನು ನೋಡಲಾಗದೆ ಅಂಗವಿಕಲತೆ ನಡುವೆ ಮನೆ ಕೆಲಸಕ್ಕೆ ಹೋಗಲು ಆರಂಭಿಸಿದ್ದರು. ಎಂಟು ತಿಂಗಳ ಹಿಂದೆ ಕೆಲಸದಿಂದ ವಾಪಸಾಗುತ್ತಿದ್ದ ಪ್ರೇಮಲತಾರಿಗೆ ಮನೆ ಸಮೀಪದ ಕಾಪಿಕಾಡು ಹೆದ್ದಾರಿ ದಾಟುತ್ತಿದ್ದ ಸಂದರ್ಭ ಅಪರಿಚಿತ ಬೈಕ್ ಡಿಕ್ಕಿ ಹೊಡೆದು ಪರಾರಿಯಾಗಿತ್ತು. 

ಪ್ರೇಮಲತಾ ಸೊಂಟ ಹಾಗೂ ಎಡ ಕಾಲಿಗೆ ಗಂಭೀರವಾಗಿ ಗಾಯಗೊಂಡರು. ಕೂಡಲೇ ಉಳ್ಳಾಲ ಪುರಸಭೆ ಮಾಜಿ ಕೌನ್ಸಿಲರ್ ಪ್ರಶಾಂತ್ ಹಾಗೂ ಸ್ಥಳೀಯರು ಸೇರಿ ತೊಕ್ಕೊಟ್ಟುವಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮತ್ತೆ ಹೆಚ್ಚುವರಿ ಚಿಕಿತ್ಸೆಗಾಗಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದರು.

ಅಲ್ಲಿ ಆರು ತಿಂಗಳ ಕಾಲ  ಚಿಕಿತ್ಸೆ ಪಡೆದರೂ ಮತ್ತೆ ಎರಡು ಬಾರಿ ಶಸ್ತ್ರಚಿಕಿತ್ಸೆ ನಡೆಸಿದರೆ ಗುಣಮುಖಳಾಗುವ ಭರವಸೆ ವೈದ್ಯರು ನೀಡಿದ್ದಾರೆ. ಆರು ತಿಂಗಳ ಕಾಲದ ಆಸ್ಪತ್ರೆಯ  ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದೇ ತಾಯಿ ಅಪ್ಪಿ ಪೂಜಾರ‌್ತಿ ಕೈಚಾಚಿಕೊಂಡಾಗ, ಆಸ್ಪತ್ರೆಯ ಬಿಲ್ ಅನ್ನು ಕಡಿತಗೊಳಿಸಿ ಈ ಭಾಗದ ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನ ಆಡಳಿತ ಮಂಡಳಿ, ಬಿಲ್ಲವ ಸಂಘಟನೆ ಹಾಗೂ ಸ್ಥಳೀಯರ ಸಹಕಾರದಿಂದ ಚಿಕಿತ್ಸೆ ವೆಚ್ಚ ಭರಿಸಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದರು.

  ಕೆಲಸಕ್ಕೆ ಹೋಗಿ ಜೀವನ ನಿರ್ವಹಣೆಯಲ್ಲಿ ವೃದ್ಧ ತಾಯಿಯೊಂದಿಗೆ ಸಹಕರಿಸುತ್ತಿದ್ದ ಮಗಳು ಹಾಸಿಗೆ ಹಿಡಿದಿರುವುದರಿಂದ ಆಕೆಯ ಆರೈಕೆಯೊಂದಿಗೆ ಜೀವನ ನಿರ್ವಹಣೆಯನ್ನು ನಡೆಸಿ ತುಂಬಾ ಕಷ್ಟಕರ ಜೀವನವನ್ನು ಎದುರಿಸಲು ಅಸಾಧ್ಯವಾದ ಸ್ಥಿತಿಯಲ್ಲಿದ್ದಾರೆ.

ಇದೀಗ ಮೊದಲಿನಂತೆ  ಬಾಳು ನಡೆಸಲು ಇಚ್ಛಿಸುವ ಪ್ರೇಮಲತಾ ಹಾಗೂ ತಾಯಿ ಅಪ್ಪಿ ಪೂಜಾರ‌್ತಿ ದಾನಿಗಳ ಮೊರೆಹೋಗಿದ್ದಾರೆ. ದಾನ ಮಾಡಲಿಚ್ಛಿಸುವವರು ಅಪ್ಪಿ ಪೂಜಾರ‌್ತಿ, ಕಾರ್ಪೊರೇಷನ್ ಬ್ಯಾಂಕ್ ತೊಕ್ಕೊಟ್ಟು ಶಾಖೆ ಎಸ್‌ಬಿ 11490210 1002702, ಐಎಫ್‌ಎಸ್‌ಇ ಕೋಡ್ : ಸಿಓಆರ್‌ಪಿ0001149 ಇಲ್ಲಿಗೆ ಹಣ ಜಮೆ ಮಾಡಬಹುದು.
ಮಾಹಿತಿಗೆ ಮೊಬೈಲ್ ಸಂಖ್ಯೆ: 99724 10351

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT