ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಸಮೀಕ್ಷೆಗೆ ಆದ್ಯತೆ: ರಾಜಣ್ಣ

Last Updated 4 ಸೆಪ್ಟೆಂಬರ್ 2013, 19:47 IST
ಅಕ್ಷರ ಗಾತ್ರ

ಬೆಂಗಳೂರು: `ಸ್ವತಃ ನಾನೇ ಅಂಗವಿಕಲ. ಹೀಗಾಗಿ ಅಂಗವಿಕಲರ ನೋವುಗಳ ಅರಿವು ನನಗಿದೆ. ಅಂಗವಿಕಲರ ಸಮೀಕ್ಷೆಯೇ ಇದುವರೆಗೆ ಸಮರ್ಪಕವಾಗಿ ನಡೆದಿಲ್ಲ. 40 ವರ್ಷಗಳ ಹಿಂದಿನ ಅಂಕಿ ಸಂಖ್ಯೆಗಳನ್ನೇ ಇಂದಿಗೂ ಬಳಸಲಾಗುತ್ತಿದೆ. ಮೊದಲು ಅಂಗವಿಕಲರ ಸಮೀಕ್ಷೆಯಾಗಬೇಕು ಮತ್ತು ಸರ್ಕಾರಿ ಸೌಲಭ್ಯಗಳು ಸುಲಭವಾಗಿ ದೊರೆಯುವಂತೆ ನಿಯಮಗಳನ್ನು ರೂಪಿಸಬೇಕು...'
-ಇದು ಅಂಗವಿಕಲರ ಅಧಿನಿಯಮದ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ಕೆ.ಎಸ್.ರಾಜಣ್ಣ ಅವರ ಉದ್ದೇಶಿತ ಯೋಜನೆಗಳು.

`ಅಂಗವಿಕಲರ ಸಮೀಕ್ಷೆ ಕೈಗೊಂಡು ಎಲ್ಲರಿಗೂ ವಿಶೇಷ ಗುರುತಿನ ಚೀಟಿ ನೀಡುವ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು. ವಿಧಾನಸೌಧ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರಿಗೆ ಮುಕ್ತ ಪ್ರವೇಶ ದೊರೆಯಬೇಕು. ಜತೆಗೆ ಉಚಿತ ಬಸ್ ಪಾಸ್ ನೀಡಬೇಕು.  ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಅಂಗವಿಕಲರಿಗೆ ಆದಾಯದ ಮಿತಿ ಹೇರಬಾರದು. ಅಂಗವಿಕಲರಿಗಾಗಿ ಈ ಬೇಡಿಕೆಗಳನ್ನು ಸದ್ಭಾವನೆಯಿಂದ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ' ಎಂದು ರಾಜಣ್ಣ `ಪ್ರಜಾವಾಣಿ'ಗೆ ತಿಳಿಸಿದರು.

`ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡುವಂತೆ ಅಂಗವಿಕಲರು ಮತ್ತು ಅವರ ಮಕ್ಕಳಿಗೆ ಶೈಕ್ಷಣಿಕ ಮೀಸಲಾತಿ, ಸರ್ಕಾರಿ ಉದ್ಯೋಗದಲ್ಲಿ ಅಂಗವಿಕಲರಿಗೆ ಆದ್ಯತೆ, ಅಂಧರನ್ನು ವಿವಾಹವಾಗುವ ವ್ಯಕ್ತಿಗೆ ನೀಡುವ 50 ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನು ಎಲ್ಲ ಅಂಗವಿಕಲರಿಗೂ ವಿಸ್ತರಿಸುವುದು ಮತ್ತು ಎಲ್ಲ ಅಂಗವಿಕಲರಿಗೂ ಅಂತ್ಯೋದಯ ಪಡಿತರ ಚೀಟಿ ನೀಡಬೇಕು.
 

ಕೆಎಸ್‌ಆರ್‌ಟಿಸಿಯಲ್ಲಿ `ಆನ್‌ಲೈನ್ ಬುಕಿಂಗ್' ಗುತ್ತಿಗೆ ಹಾಗೂ ಸರ್ಕಾರಿ ಕಚೇರಿಗಳಲ್ಲಿನ `ಲಿಫ್ಟ್ ಆಪರೇಟರ್' ಕೆಲಸಗಳನ್ನು ಅಂಗವಿಕಲರಿಗೆ ಮಾತ್ರ ಮೀಸಲಿಡುವಂತೆ ಸಿ.ಎಂ ಜತೆ ಮಾತುಕತೆ ನಡೆಸುತ್ತೇನೆ' ಎಂದು ಹೇಳಿದರು.

ಹೋರಾಟದ ಬದುಕು: ಅಂಗವಿಕಲ ಅಧಿನಿಯಮದ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಕೆ.ಎಸ್. ರಾಜಣ್ಣ ಬದುಕಿನ ಉದ್ದಕ್ಕೂ ಹೋರಾಟದ ಹಾದಿಯಲ್ಲಿ ಸಾಗಿ ಬಂದಿದ್ದಾರೆ. ಕಷ್ಟಗಳನ್ನೇ ಹೊದ್ದುಕೊಂಡು ಬೆಳೆದ ಅವರು ಬಡತನವನ್ನೇ ಸವಾಲಾಗಿ ಸ್ವೀಕರಿಸಿದವರು. ಬಡತನಕ್ಕೆ ಎದೆಗುಂದದೆ ಛಲ, ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿದವರು.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪದ ಸಿಂಗಾಚಾರ್ ಮತ್ತು ಲಕ್ಷ್ಮಮ್ಮ ದಂಪತಿಯ 7ನೇ ಪುತ್ರ ರಾಜಣ್ಣ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಪೋಷಕರು ಕೂಲಿ ಮಾಡಿದರೆ ಮಾತ್ರ ಮನೆಯಲ್ಲಿ ಒಲೆ ಉರಿಯುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಆರು ತಿಂಗಳ ಮಗು ರಾಜಣ್ಣಗೆ ಪೋಲಿಯೊ ತಗುಲಿ ಎರಡೂ ಕೈ ಹಾಗೂ ಕಾಲುಗಳು ವೈಕಲ್ಯಕ್ಕೆ ಒಳಗಾದವು.

`ಕೊಪ್ಪದಲ್ಲಿದ್ದ ಸರ್ಕಾರಿ ಶಾಲೆಗೆ ದಾಖಲಾಗಲು ಹೋದಾಗ ಪ್ರವೇಶಾವಕಾಶ ನೀಡದೆ ಇಂತಹ ಮಗುವಿಗೆ ಶಿಕ್ಷಣ ಏಕೆ? ಎಂದು ಅಲ್ಲಿನ ಶಿಕ್ಷಕ ಪ್ರಶ್ನಿಸಿದ್ದ. ಆ ಶಿಕ್ಷಕ ಮಾಡಿದ ಅವಮಾನಕ್ಕೆ ಧೈರ್ಯಗೆಡದೆ ನನ್ನ ತಂದೆ ಪಣ ತೊಟ್ಟು ಮನೆಯಲ್ಲೇ ಮರಳಿನ ಮೇಲೆ ವಿದ್ಯಾಭ್ಯಾಸ ಆರಂಭಿಸಿದರು. ಒಂದು ಕಡ್ಡಿ ಹಿಡಿಯುವುದನ್ನು ಅಭ್ಯಾಸ ಮಾಡಿ ಚಿತ್ರ ಬಿಡಿಸುವುದನ್ನು ಕಲಿತೆ. ನಂತರ ಶಾಲೆಗೆ ಡಿ.ಸಿ ಭೇಟಿ ನೀಡಿದಾಗ ನಮಗಾದ ನೋವನ್ನು ತಂದೆ ವಿವರಿಸಿದರು. ಡಿ.ಸಿ  ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು ಅಕ್ಷರ ಜ್ಞಾನದ ಬಗ್ಗೆ ಪರೀಕ್ಷೆ ನಡೆಸಿ ನೇರವಾಗಿ 3ನೇ ತರಗತಿಗೆ ದಾಖಲಾಗಲು ಅನುಮತಿ ನೀಡಿದರು' ಎಂದು ಅವರು ನೆನಪಿಸಿಕೊಳ್ಳುತ್ತಾರೆ.  

ಮೇಲುಕೋಟೆಯಲ್ಲಿರುವ `ಕರುಣಾ ಗೃಹ'ದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ ಬೆಂಗಳೂರಿನ ಅಸೋಸಿಯೇಷನ್ ಆಫ್ ಫಿಜಿಕಲ್ ಹ್ಯಾಂಡಿಕ್ಯಾಪ್'ನಲ್ಲಿ ಮೆಕ್ಯಾನಿಕಲ್ ಡಿಪ್ಲೋಮಾ ಮುಗಿಸಿದ್ದ ರಾಜಣ್ಣ, ಸ್ವಂತ ಉದ್ಯಮ ಪ್ರಾರಂಭಿಸಿ 500 ಮಂದಿಗೆ ಉದ್ಯೋಗ ನೀಡಿದ್ದರು. ಎನ್‌ಜಿಎಫ್ ಸಂಸ್ಥೆ ಮೇಲೆಯೇ ಅವರ ಉದ್ಯಮ ಅವಲಂಬನೆಯಾಗಿತ್ತು.

ಕ್ರೀಡೆ ಹಾಗೂ ಚಿತ್ರಕಲೆಯಲ್ಲಿ ಪರಿಣತಿ ಪಡೆದಿರುವ ರಾಜಣ್ಣ, ಮಲೇಷ್ಯಾದಲ್ಲಿ ನಡೆದ ಪ್ಯಾರಾ ಒಲಂಪಿಕ್ ಕ್ರೀಡೆಯ ಈಜು ವಿಭಾಗದಲ್ಲಿ ರಜತ ಪದಕ ಹಾಗೂ ತಟ್ಟೆ ಎಸೆತದಲ್ಲಿ ಚಿನ್ನದ ಪದಕ ಪಡೆದು ಗಮನಸೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT