ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಲ್ಲಿ ಆತ್ಮಸ್ಥೈರ್ಯ ತುಂಬಿ

Last Updated 13 ಜನವರಿ 2011, 6:30 IST
ಅಕ್ಷರ ಗಾತ್ರ

ಯಾದಗಿರಿ: ಅಂಗವಿಕಲತೆ ಎನ್ನುವುದು ಶಾಪವಲ್ಲ. ಅದನ್ನು ಮೆಟ್ಟಿನಿಂತು ಸಾಧನೆ ಮಾಡುವ ಸ್ಥೈರ್ಯ ಬೆಳೆಸಿಕೊಳ್ಳುವಂತೆ ನಗರಸಭೆ ಅಧ್ಯಕ್ಷ ನಾಗರತ್ನಾ ಅನಪೂರ ಹೇಳಿದರು. ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಶ್ವಜ್ಯೋತಿ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಬುಧವಾರ ಇಲ್ಲಿಯ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಗವಿಕಲರಿಗೆ ಅನುಕಂಪ ನೀಡುವ ಬದಲು ಅವಕಾಶಗಳನ್ನು ನೀಡಬೇಕು. ಆ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸಮಾಜ ಮಾಡಬೇಕು.ಅಂದಾಗ ಮಾತ್ರ ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಜೀವನವನ್ನು ಸವಾಲಾಗಿ ಸ್ವೀಕರಿಸಬೇಕು. ಜೀವನದಲ್ಲಿ ಸೋಲು ಗೆಲುವುಗಳು ಸಹಜ. ಅವುಗಳನ್ನು ಸಮರ್ಥವಾಗಿ ಎದುರಿಸುವ ಗಟ್ಟಿತನ ಬೆಳೆಸಿಕೊಳ್ಳಬೇಕು. ಸರ್ಕಾರದ ಸೌಲಭ್ಯಗಳ ಪ್ರಯೋಜನ ಪಡೆಯುವ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ಮಾಡಿದರು.

2009-10 ನೇ ಸಾಲಿನ ನಗರಸಭೆ ಆಯವ್ಯಯದಲ್ಲಿ ಅಂಗವಿಕಲರಿಗೆ ಮೀಸಲಿಟ್ಟ ಅನುದಾನದ ಬಳಕೆ ಆಗಿಲ್ಲ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ ಅವರು, ಸರ್ಕಾರದ ಸೌಲಭ್ಯಗಳನ್ನು ಅಂಗವಿಕಲರಿಗೆ ತಲುಪಿಸುವಲ್ಲಿ ಅಧಿಕಾರಿಗಳು  ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎ. ಹಾನಗಲ್ ಮಾತನಾಡಿ, ದೈನಂದಿನ ಜೀವನದಲ್ಲಿ ಎದುರಾಗುವ ಹಲವಾರು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಅವಶ್ಯಕ. ಮೊದಲು ಸಾಧಿಸುವ ಛಲವನ್ನು ಅಳವಡಿಸಕೊಳ್ಳಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಮೀನಾಕ್ಷಿ, ಜಿಲ್ಲೆಯಲ್ಲಿ ಒಟ್ಟು 27,831 ಅಂಗವಿಕಲರಿದ್ದು, ಅವರಿಗೆ ಸರ್ಕಾರದ ಮಾಸಾಶನವನ್ನು ನೀಡಲಾಗುತ್ತಿದೆ. ಅಂಗವಿಕಲರಿಗೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅರ್ಹರಿಗೆ ಅವುಗಳ ಪ್ರಯೋಜನ ಸಿಗುವಂತಾಗಬೇಕು. ಇದಕ್ಕೆ ಅಂಗವಿಕಲರ ಸಂಘಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಯಾದಗಿರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕಾರ್ಯದರ್ಶಿ ಕಾಂತಿಲಾಲ ದೋಖಾ, ಉದ್ಯಮಿಗಳಾದ ಭಾರತ ಭಟ್ಟಡ, ಹನುಮಾನದಾಸ ಮುಂದಡಾ, ನಾರಾಯಣಸ್ವಾಮಿ ಮುಂತಾದವರು ವೇದಿಕೆಯಲ್ಲಿದ್ದರು. ಚಂದ್ರಕಾಂತ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಅಂಗವಿಕಲರನ್ನು ಸನ್ಮಾನಿಸಲಾಯಿತು. ಅಂಗವಿಕಲ ವಿದ್ಯಾರ್ಥಿಗಳಿಗೆ ಶಿಷ್ಯವೇತನ  ವಿತರಿಸಲಾಯಿತು. ಮೀನಾಕ್ಷಿ ಪಾಟೀಲ  ಸ್ವಾಗತಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಅಂಗವಿಕಲರು  ಕಾರ್ಯಕ್ರಮದಲ್ಲಿ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT