ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೆ ಸಮನ್ವಯ ಶಿಕ್ಷಣ ವರದಾನ

Last Updated 19 ಡಿಸೆಂಬರ್ 2012, 9:01 IST
ಅಕ್ಷರ ಗಾತ್ರ

ಚಾಮರಾಜನಗರ: ವಿಶೇಷ ಅಗತ್ಯತೆವುಳ್ಳ ಅಂಗವಿಕಲ ಮಕ್ಕಳು ಸಾಮಾನ್ಯ ಮಕ್ಕಳೊಂದಿಗೆ ಸೇರಿಕೊಂಡು ಲಭ್ಯವಿರುವ ಶೈಕ್ಷಣಿಕ ಅವಕಾಶ ಪಡೆಯಲು ಶಿಕ್ಷಣ ಇಲಾಖೆಯು ಸಮನ್ವಯ ಶಿಕ್ಷಣ ಕಾರ್ಯಕ್ರಮ ರೂಪಿಸಿದೆ.

ಅಂಗವಿಕಲ ಮಕ್ಕಳು ಶಿಕ್ಷಣದ ಮುಖ್ಯವಾಹಿನಿಯಿಂದ ವಂಚಿತರಾಗದೆ ಸಮಾಜದಲ್ಲಿರುವ ಇತರೇ ಮಕ್ಕಳಂತೆ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಸರ್ವಶಿಕ್ಷಣ ಅಭಿಯಾನದಡಿ ಸಮನ್ವಯ ಶಿಕ್ಷಣ ಕಾರ್ಯಕ್ರಮ ಚಟುವಟಿಕೆ ನಡೆಯುತ್ತವೆ.

ಅಂಗವಿಕಲ ಮಕ್ಕಳನ್ನು ಗುರುತಿಸಿ ಅವರ ನ್ಯೂನತೆಯ ವಿಧಗಳನ್ನು ಗಮನಿಸಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಶೈಕ್ಷಣಿಕ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ.

ಜಿಲ್ಲೆಯ 5 ಶೈಕ್ಷಣಿಕ ವಲಯದಡಿ 2012-13ನೇ ಸಾಲಿನಲ್ಲಿ 6ರಿಂದ 14ವರ್ಷ ವಯೋಮಾನದ 2,230 ಅಂಗವಿಕಲ ಮಕ್ಕಳನ್ನು ಗುರುತಿಸಲಾಗಿತ್ತು. ಈ ಪೈಕಿ ಚಾಮರಾಜನಗರ- 649, ಗುಂಡ್ಲುಪೇಟೆ- 629, ಹನೂರು ವಲಯ- 362, ಕೊಳ್ಳೇಗಾಲ- 360 ಹಾಗೂ ಯಳಂದೂರಿನಲ್ಲಿ 230 ಮಕ್ಕಳನ್ನು ಗುರುತಿಸಲಾಗಿದೆ.

ಇದರಲ್ಲಿ 1,947 ಮಕ್ಕಳು ಸಾಮಾನ್ಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 187 ಮಕ್ಕಳು ವಿಶೇಷವಾಗಿ ರೂಪಿಸಲಾಗಿರುವ ಶಾಲಾ ಸಿದ್ಧತಾ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಗಂಭೀರ ವಿಕಲತೆ ಹೊಂದಿರುವ 56 ಮಕ್ಕಳಿಗೆ ಮನೆಯಲ್ಲಿಯೇ ಗೃಹಾಧಾರಿತ ಶಿಕ್ಷಣ ನೀಡಲಾಗುತ್ತಿದೆ.

2012-13ನೇ ಸಾಲಿನಡಿ ಸಮನ್ವಯ ಶಿಕ್ಷಣ ನಿರ್ವಹಣೆಗೆ ಜಿಲ್ಲೆಗೆ ಅನುದಾನ ಕೂಡ ನಿಗದಿಯಾಗಿದೆ. ವೈದ್ಯಕೀಯ ನ್ಯೂನತಾ ಮೌಲ್ಯಾಂಕನ ತಪಾಸಣಾ ಶಿಬಿರ, ಸಾಧನಾ ಸಲಕರಣೆ, ಶ್ರವಣೋಪಕರಣ ಪೂರೈಕೆಗೆ ಅನುದಾನವನ್ನು ವೆಚ್ಚ ಮಾಡಲಾಗುತ್ತದೆ. ಶಾಲಾ ಸಿದ್ಧತಾ ಕೇಂದ್ರಗಳಿಗೆ ಅಗತ್ಯವಿರುವ ಸಾಧನಾ ಸಲಕರಣೆಗಳ ವಿತರಣೆ, ವಿಶೇಷ ಸಂಪನ್ಮೂಲ ಶಿಕ್ಷಕರಿಗೆ ಮಾಸಿಕ ಗೌರವ ಸಂಭಾವನೆ, ಗೃಹಾಧಾರಿತ ಶಿಕ್ಷಣ ನೀಡುವ ಸ್ವಯಂಸೇವಕರಿಗೆ ಗೌರವಧನ ನೀಡಲಾಗುತ್ತಿದೆ.

ಸಮನ್ವಯ ಶಿಕ್ಷಣಕ್ಕೆ ಯೋಜನಾ ರೂಪರೇಷೆ ಸಿದ್ಧಪಡಿಸಲು ವಿಶೇಷ ಅಗತ್ಯತೆವುಳ್ಳ ಮಕ್ಕಳ ಗಣತಿ ಕಾರ್ಯವನ್ನು ಶಿಕ್ಷಣ ಇಲಾಖೆ ನಡೆಸುತ್ತಿದೆ. 2012-13ನೇ ಸಾಲಿನಡಿ ರಾಜ್ಯದಲ್ಲಿ 1,47,999 ಅಂಗವಿಕಲ ಮಕ್ಕಳನ್ನು ಗುರುತಿಸಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 2012-13ನೇ ಸಾಲಿಗೆ ಗುರುತಿಸಲಾಗಿರುವ ಅಂಗವಿಕಲ ಮಕ್ಕಳ ಪ್ರಮಾಣ ಶೇ. 1.76 ರಷ್ಟಿದೆ.

ಜಿಲ್ಲೆಯಲ್ಲಿ 2013-14ನೇ ಸಾಲಿನಡಿ ಸಮನ್ವಯ ಶಿಕ್ಷಣ ಯೋಜನೆ ಸಿದ್ಧತೆಗಾಗಿ ಅಂಗವಿಕಲ ಮಕ್ಕಳ ವಿಶೇಷ ಗಣತಿ ಕಾರ್ಯಕ್ಕೆ ಎಲ್ಲ ಶೈಕ್ಷಣಿಕ ವಲಯದಲ್ಲಿ ಚಾಲನೆ ನೀಡಲಾಗಿದೆ. ಗಣತಿದಾರರು ಗ್ರಾಮಮಟ್ಟದ ಪುನರ್ವಸತಿ, ಕಾರ್ಯಕರ್ತರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಅಂಗವಿಕಲ ಮಕ್ಕಳ ಶೈಕ್ಷಣಿಕ ಚಟುವಟಿಕೆಯಲ್ಲಿ ನಿರತವಾಗಿರುವ ಸರ್ಕಾರೇತರ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಗಣತಿ ಕೆಲಸ ನಿರ್ವಹಿಸಲಿದ್ದಾರೆ. ಗಣತಿಯಲ್ಲಿ 3ರಿಂದ 18ವರ್ಷ ವಯೋಮಾನದ ಎಲ್ಲ ಅಂಗವಿಕಲ ಮಕ್ಕಳನ್ನು ಗುರುತಿಸುವ ಜವಾಬ್ದಾರಿವಹಿಸಲಾಗಿದೆ.

ಪಾರ್ಶ್ವ ಹಾಗೂ ಪೂರ್ಣ, ಶ್ರವಣ ಮಾತಿನ ದೋಷ, ದೈಹಿಕ ನ್ಯೂನತೆ, ಬುದ್ಧಿಮಾಂದ್ಯತೆ, ಬಹುವಿಕಲತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಮೆದುಳಿನ ಪಾರ್ಶ್ವವಾಯು ಹಾಗೂ ಆಟಿಸಂ ನ್ಯೂನತೆಗಳಿರುವ ಮಕ್ಕಳನ್ನು ಗುರುತಿಸಿ ದಾಖಲು ಮಾಡಬೇಕಿದೆ.
ಗಣತಿ ನಿರ್ವಹಿಸುವ ವೇಳೆ ವಿಶೇಷ ಅಗತ್ಯವಿರುವ ಅಂಗವಿಕಲ ಮಕ್ಕಳು ಪ್ರಸಕ್ತ ಸಾಲಿನಲ್ಲಿ ಶಾಲೆಗೆ ಸೇರ್ಪಡೆಯಾಗದೆ ಹೊರಗುಳಿದಿದ್ದರೆ ಅಥವಾ ಮಾಹಿತಿ ಕೊರತೆಯಿಂದ ಗೃಹಾಧಾರಿತ ಶಿಕ್ಷಣ ಕೇಂದ್ರಗಳಲ್ಲಿ ಉಳಿದಿದ್ದರೆ ಅಂತಹ ಮಕ್ಕಳನ್ನು ಗುರುತಿಸಿ ತಕ್ಷಣವೇ ಶಾಲೆಗೆ ದಾಖಲು ಮಾಡಲು ಕ್ರಮವಹಿಸಬೇಕು ಎಂದ ಸರ್ವಶಿಕ್ಷಣ ಅಭಿಯಾನ ಕಾರ್ಯಕ್ರಮದ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT