ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಾಲು ರಕ್ಷಣೆಗೆ `ತಂಪು ಪಥ'!

ಮೈಸೂರು ಅರಮನೆ ಆವರಣದಲ್ಲಿ ಹೊಸ ವ್ಯವಸ್ಥೆ
Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆಗೆ ಭೇಟಿ ನೀಡುವ ಪ್ರವಾಸಿಗರ  ಅಂಗಾಲು ರಕ್ಷಣೆಗೆ ಮುಂದಾಗಿರುವ ಅರಮನೆ ಆಡಳಿತ ಮಂಡಳಿಯು ಇದಕ್ಕಾಗಿ ಅರಮನೆ ಆವರಣದಲ್ಲಿ `ಬಿಳಿ ತಂಪು ಪಥ' (ವೈಟ್ ಟ್ರ್ಯಾಕ್) ಸಿದ್ಧಪಡಿಸಿದೆ.

ಅಂಬಾವಿಲಾಸ ಅರಮನೆಗೆ ಪ್ರತಿ ವರ್ಷ ಸರಾಸರಿ 35 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ದಸರಾ ಉತ್ಸವ ಹಾಗೂ ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಬಹುತೇಕ ಪ್ರವಾಸಿಗರು ಅರಮನೆ ಆವರಣ ಪ್ರವೇಶಕ್ಕೂ ಮುನ್ನ ಪಾದರಕ್ಷೆಗಳನ್ನು ತಮ್ಮ ವಾಹನಗಳಲ್ಲೇ ಬಿಟ್ಟು ಬರುತ್ತಾರೆ. ಇನ್ನುಳಿದ ಎಲ್ಲರೂ ಪಾದರಕ್ಷೆ ಸ್ಟ್ಯಾಂಡ್‌ನಲ್ಲಿ ಕಡ್ಡಾಯವಾಗಿ ಬಿಡಬೇಕು. ಹೀಗೆ ಪಾದರಕ್ಷೆ ಕಳಚಿಟ್ಟು ಬರಿಗಾಲಲ್ಲಿ ನಡೆಯುವುದು ಕೆಂಡದ ಮೇಲೆ ಕಾಲಿಟ್ಟ ಅನುಭವ. ಇದನ್ನು ತಪ್ಪಿಸುವ ಉದ್ದೇಶದಿಂದ 'ಬಿಳಿ ತಂಪು ಪಥ' ಸಹಕಾರಿಯಾಗಲಿದೆ.

ಏನಿದು ಬಿಳಿ ಪಥ?
ಧರ್ಮಸ್ಥಳದ ಮಂಜುನಾಥೇಶ್ವರ ದೇವಸ್ಥಾನದ ಆವರಣದಲ್ಲಿ `ಬಿಳಿ ತಂಪು ಪಥ' ಅಳವಡಿಸಲಾಗಿದ್ದು, ಅದೇ ಮಾದರಿಯಲ್ಲಿ ಅರಮನೆ ಆವರಣದಲ್ಲೂ 150 ಅಡಿ ಉದ್ದದ ನಡಿಗೆ ಪಥ ನಿರ್ಮಿಸಲಾಗಿದೆ. ಅರಮನೆ ಆವರಣದಲ್ಲಿರುವ ಸಿಮೆಂಟ್ ಟೈಲ್ಸ್‌ಗಳ ಮೇಲೆ ಬಿಳಿ ಬಣ್ಣ (ಮೊಡಿಫೈಡ್ ಸಿಪಿಎಸ್‌ಎಂ ರಾಸಾಯನಿಕ) ಅನ್ನು ಲೇಪಿಸಲಾಗಿದೆ. ಇದರ ಮೇಲೆ ನಡೆದರೆ ಕೊಂಚ ಮಟ್ಟಿನ ತಂಪು ಅನುಭವ ಉಂಟಾಗುತ್ತದೆ. ಸದ್ಯ ಪ್ರಾಯೋಗಿಕವಾಗಿ ಒಂದು ಭಾಗದಲ್ಲಿ ಮಾತ್ರ ಇದನ್ನು ಸಿದ್ಧಪಡಿಸಲಾಗಿದೆ.

ಹೇಗೆ ಸಹಕಾರಿ?
ಬಿಳಿ ಬಣ್ಣವನ್ನು ಬಳಿಯುವ ಮುನ್ನ ನೆಲವನ್ನು ಸ್ವಚ್ಛಗೊಳಿಸಲಾಗುತ್ತದೆ. ಬಳಿಕ ಸುಧಾರಿತ ಸಿಪಿಎಸ್‌ಎಂ ರಾಸಾಯನಿಕದ ಕೋಟ್ ಹಾಕಲಾಗುತ್ತದೆ. ಅದರ ಮೇಲೆ ಟೆಕ್ನೋಬಾಂಡ್ ತಂತ್ರಜ್ಞಾನ ಬಳಸಿ, ರಿಫ್ಲೆಕ್ಟ್‌ಕೋಟ್ ಉಪಯೋಗಿಸಲಾಗುತ್ತದೆ. ಹೀಗೆ ಮಾಡುವುದರಿಂದ ಈ ಜಾಗ ಸೂರ್ಯನ ಬಿಸಿಲನ್ನು ಹೀರಿಕೊಂಡು ತಂಪು ಅನುಭವ ನೀಡುತ್ತದೆ. ಬಿಸಿಲು ಎಷ್ಟೇ ಪ್ರಖರವಾಗಿದ್ದರೂ ಇದರ ಮೇಲೆ ನಡೆದಾಗ ತಣ್ಣನೆಯ ಭಾವ ಉಂಟಾಗುತ್ತದೆ.

`ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಅರಮನೆಯ 25 ಎಕರೆ ಪ್ರದೇಶದಲ್ಲಿರುವ ಉದ್ಯಾನ ಹಾಗೂ 10ಕ್ಕೂ ಹೆಚ್ಚು ದೇವಸ್ಥಾನಗಳನ್ನೂ ಬರಿಗಾಲಲ್ಲೇ ವೀಕ್ಷಿಸಬೇಕು. ಮೈಸೂರು ನಗರದಲ್ಲಿ ಸದ್ಯ 35 ರಿಂದ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದೆ. ಹೀಗಾಗಿ ಬಿಸಿಲಿನಲ್ಲಿ ಹೆಜ್ಜೆ ಹಾಕುವುದು ಕಷ್ಟದ ಕೆಲಸ. ಬಿಳಿ ಪಥದಲ್ಲಿ ನಡೆದರೆ ಖುಷಿಯಿಂದ ಇಡೀ ಆವರಣ ಕಣ್ತುಂಬಿಕೊಳ್ಳಬಹುದು' ಎಂಬುದು ಅರಮನೆ    ಆಡಳಿತ ಮಂಡಳಿ ಲೆಕ್ಕಾಚಾರ.

ಅಂಬಾವಿಲಾಸ ಅರಮನೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಈಗಾಗಲೇ ಬ್ಯಾಟರಿ ಚಾಲಿತ ವಾಹನ, ಛತ್ರಿ, ಸೈಕಲ್ ಹಾಗೂ ಗಾಲಿ ಕುರ್ಚಿ ಸೇವೆಯನ್ನು ಉಚಿತವಾಗಿ ಒದಗಿಸಲಾಗಿದೆ. ಇವುಗಳ ಜತೆಗೆ ಇದೀಗ ಬಿಳಿ ತಂಪು ಪಥ ಸೇರ್ಪಡೆಗೊಂಡಿದೆ.

ಈ ಕುರಿತು `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.  ಎಸ್.ಎಸ್.ಸುಬ್ರಹ್ಮಣ್ಯ, 'ಅರಮನೆ ಆವರಣದಲ್ಲಿರುವ ಸಿಮೆಂಟ್ ಟೈಲ್ಸ್ ಮೇಲೆ 62 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. ಆ ಬಳಿಕ ನೆಲಹಾಸು (ಕಾರ್ಪೆಟ್) ಹಾಕಿ ನೋಡಿದಾಗ ತಾಪಮಾನ 57 ಡಿಗ್ರಿಗೆ ಇಳಿಕೆಯಾಯಿತು. ಬಿಳಿ ತಂಪು ಪಥ ನಿರ್ಮಿಸಿದ ಬಳಿಕ ಉಷ್ಣಾಂಶದ ಪ್ರಮಾಣ 34 ಡಿಗ್ರಿಗೆ ತಗ್ಗಿದೆ. ಒಂದು ಚದುರ ಮೀಟರ್ ಬಣ್ಣ ಬಳಿಯಲು ರೂ. 45ರಿಂದ ರೂ.50  ವೆಚ್ಚ ತಗುಲುತ್ತಿದ್ದು, ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ' ಎಂದು  ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT