ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗೈಯಲ್ಲಿ ಜೀವ ಹಿಡಿದು ಪ್ರತಿನಿತ್ಯ ಸಂಚಾರ

ಕಿರು ಸೇತುವೆ ಕಾಣದ ಹಡಗಿನಮಕ್ಕಿ ಗ್ರಾಮಸ್ಥರು
Last Updated 31 ಜುಲೈ 2013, 11:12 IST
ಅಕ್ಷರ ಗಾತ್ರ

ತೀರ್ಥಹಳ್ಳಿ:  `ಸಾಕಪ್ಪಾ ಸಾಕು ಈ ಊರಿನ ಸಹವಾಸ, ಮಳೆಗಾಲ ಬಂತೆಂದರೆ ನಮ್ಮ ಕಡು ವೈರಿಗೂ ಬೇಡ ಈ ಕಷ್ಟ' ಎಂದು ಮರುಗುವ ಹಡಗಿನಮಕ್ಕಿ ಗ್ರಾಮಸ್ಥರು ಗಡೆಬಡೆಹಳ್ಳಕ್ಕೆ ಯಾವಾಗ ಕಿರು ಸೇತುವೆ ನಿರ್ಮಾಣವಾಗುತ್ತದೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.

ತಾಲ್ಲೂಕಿನ ಬಹುತೇಕ ಹಳ್ಳಿಗಳ ಕಥೆ ಕೂಡ ಹಡಗಿನಮಕ್ಕಿ ಗ್ರಾಮಕ್ಕಿಂತ ಭಿನ್ನವಾಗಿಲ್ಲ!. ಮಲೆನಾಡಿನಲ್ಲಿ ಪ್ರತಿ ಗದ್ದೆ ಬಯಲಿನ ಅಂಚಲ್ಲಿ ಹಳ್ಳ, ಕಿರು ಹಳ್ಳಗಳು ಸಾಮಾನ್ಯವಾಗಿ ಹರಿಯುತ್ತವೆ. ಈ ಹಳ್ಳಗಳನ್ನು ದಾಟಿ ಶಾಲಾ, ಕಾಲೇಜು, ಪೇಟೆಗೆ ಹೋಗಬೇಕಾಗುತ್ತದೆ.

ಮಳೆಗಾಲದಲ್ಲಿ ಸುರಿಯುವ ಮಳೆಯಿಂದಾಗಿ ಬೋರ್ಗೆರೆಯುವ ಹಳ್ಳಗಳು ತಗ್ಗಿದ ಮೇಲೆ ದಾಟಿ ಸಾಗಬೇಕಾಗುತ್ತದೆ. ಕೆಲವು ಹಳ್ಳಗಳಿಗೆ ಗ್ರಾಮಸ್ಥರೇ ಸೇರಿಕೊಂಡು ಮರದ ಕಿರು ಸೇತುವೆಯನ್ನು  ನಿರ್ಮಿಸಿ ತಮ್ಮ ಮಕ್ಕಳನ್ನು ಶಾಲೆಗೆ ದಾಟಿಸಿ ಬರುತ್ತಾರೆ. ಸಂಜೆ ಶಾಲೆ ಬಿಟ್ಟ ನಂತರ ಮಕ್ಕಳನ್ನು ಈ ಕಾಲುಸಂಕದಲ್ಲಿ ನಿಧಾನಕ್ಕೆ ಕೈಹಿಡಿದು ದಾಟಿಸಿ ಕರೆ ತರುತ್ತಾರೆ. ಶಾಲೆಗೆ ಮಕ್ಕಳನ್ನು ಕಳುಹಿಸಿದ ಪೋಷಕರು ನಿರಾತಂಕವಾಗಿ ಇರುವಂತಿಲ್ಲ. ಎರಡು ಬಾರಿ ಮಕ್ಕಳನ್ನು ಪ್ರತಿ ನಿತ್ಯ ಕಾಲು ಸಂಕ ದಾಟಿಸುವ ಕೆಲಸ ಮಾಡಲೇ ಬೇಕು.

ದೇವಂಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಡಗಿನಮಕ್ಕಿ  ಗಡಬಡೆ ಹಳ್ಳಕ್ಕೆ ಕಳೆದ ಅನೇಕ ವರ್ಷಗಳಿಂದ ಕಿರು ಸೇತುವೆ ನಿರ್ಮಿಸಿಕೊಡಿ ಎಂಬ ಗ್ರಾಮಸ್ಥರ ಬೇಡಿಕೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ಭಾಗದ ಕುಪಳ್ಳಿ, ಜಟ್ಟಿನಮಕ್ಕಿ, ಹಡಗಿನಮಕ್ಕಿ ಊರುಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಮನೆಗಳಿವೆ.  ಪ್ರತಿನಿತ್ಯದ ಸಂಚಾರಕ್ಕೆ ಹಡಗಿನಮಕ್ಕಿ ಗಡಬಡೆಹಳ್ಳವನ್ನು ಜೀವ ಕೈಯಲ್ಲಿ ಹಿಡಿದು ದಾಟಬೇಕಾಗಿದೆ. ಜನಪ್ರತಿನಿಧಿಗಳು, ತಾಲ್ಲೂಕ ಆಡಳಿತ ಸ್ಪಂದಿಸದೇ ಇದ್ದುದನ್ನು ಮನಗಂಡ ಗ್ರಾಮಸ್ಥರು ಅಡಿಕೆ ಮರಗಳ ಸಹಾಯದಿಂದ ಸಾರ(ಸಂಕ) ನಿರ್ಮಿಸಿಕೊಂಡಿದ್ದಾರೆ.

`ಮಳೆಗಾಲದಲ್ಲಿ ಈ ಭಾಗದ ಹಳ್ಳಿಗಳ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಬೇಸಿಗೆಯಲ್ಲಿ ಹೇಗೋ ನಡೆಯುತ್ತದೆ. ಕಿರು ಸೇತುವೆ ನಿರ್ಮಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಈವರೆವಿಗೂ ಸೇತುವೆ ನಿರ್ಮಾಣಕ್ಕೆ ಹಣ ಬಂದಿಲ್ಲ' ಎಂದು ದೇವಂಗಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ದೇವಂಗಿ ಮಹೇಶ್ ತಿಳಿಸಿದ್ದಾರೆ.

`ಈ ಹಳ್ಳಕ್ಕೆ ಹಿಂದೆ ಕಲ್ಲು ಸಾರ ಇತ್ತು. ಈಗ ಅದು ಬಿದ್ದು ಹೋಗಿದೆ. ಬಡವರು ಕೂಲಿಕಾರರೇ ಹೆಚ್ಚಾಗಿರುವ ಈ ಊರಿನ ಸಂಪರ್ಕಕ್ಕೆ ಕಿರು ಸೇತುವೆಯ ಅಗತ್ಯವಿದೆ. ಗ್ರಾಮ ಪಂಚಾಯ್ತಿಗೆ ಬರುವ ಅನುದಾನದಲ್ಲಿ ಇದನ್ನು ನಿರ್ಮಿಸಲು ಸಾಧ್ಯವಾಗಿಲ್ಲ.
ಸರ್ಕಾರ ಈ ಬಗ್ಗೆ ಹೆಚ್ಚು ಗಮನಹರಿಸಿ ಆದಷ್ಟು ಬೇಗ ಕಿರು ಸೇತುವೆಯನ್ನು ನಿರ್ಮಿಸಬೇಕು' ಎಂದು ದೇವಂಗಿ ಗ್ರಾಮ ಪಂಚಾಯ್ತಿ ಸದಸ್ಯೆ ರೇವತಿ ಸುಬ್ರಮಣ್ಯ ಹೇಳುತ್ತಾರೆ.
       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT