ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಚೀಟಿ ಇತಿಹಾಸದ ಪ್ರತಿಬಿಂಬ

Last Updated 10 ಅಕ್ಟೋಬರ್ 2012, 8:15 IST
ಅಕ್ಷರ ಗಾತ್ರ

ಉಡುಪಿ: `ಅಂಚೆ ಚೀಟಿಗಳು ದೇಶದ ಇತಿಹಾಸವನ್ನು ಹೇಳುತ್ತವೆ~ ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ರಾಜಶೇಖರ ಭಟ್ ಹೇಳಿದರು.

ರೋಟರಿ ಮಲ್ಪೆ ಕೊಡವೂರು ಹಾಗೂ ಉಡುಪಿ ಫೌಂಡೇಶನ್ ಉಡುಪಿಯ ರಥಬೀದಿಯ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಿರುವ ಅಂಚೆ ಇಲಾಖೆ ಉದ್ಯೋಗಿ ಪೂರ್ಣಿಮಾ ಜನಾರ್ದನ್ ಕೊಡವೂರು ಅವರ ಅಂಚೆ ಚೀಟಿ ಸಂಗ್ರಹ ಮತ್ತು ಕಲಾವಿದ ವಸಂತರಾವ್ ಅವರ ಕಲಾಕೃತಿ ಪ್ರದರ್ಶನ `ಕುಂಚದೊಳು ಬೆರೆತ ಅಂಚೆ ಚೀಟಿ~ ಪ್ರದರ್ಶನವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಇತಿಹಾಸವನ್ನು ನೋಡಬೇಕಾದರೆ ನಾವು ಅಂಚೆ ಚೀಟಿಗಳನ್ನು ನೋಡಬೇಕು. ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಅಂಚೆ ಚೀಟಿಗಳನ್ನು ಇಲಾಖೆ ಹೊರತಂದಿದೆ. ನಶಿಸಿ ಹೋಗುತ್ತಿದ್ದ ಕಾವಿ ಕಲೆಯ ಬಗ್ಗೆ ಅಂಚೆ ಚೀಟಿ ತರಲಾಗಿದೆ. ಆ ಮೂಲಕ ಜನರನ್ನು ಮುಟ್ಟುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

`ಅಂಚೆ ಚೀಟಿ ಸಂಗ್ರಹ ಒಂದು ದುಬಾರಿ ಹವ್ಯಾಸವಾಗಿದೆ. ಇದೊಂದು ರೀತಿಯ ಹೂಡಿಕೆಯೂ ಹೌದು, ಸಂಗ್ರಹಿಸಿದ ಅಂಚೆ ಚೀಟಿಗಳ ಬೆಲೆಯೂ ಅಧಿಕವಾಗಿರುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ಬಿಡುಗಡೆಯಾದ ಅಂಚೆ ಚೀಟಿ ಒಂದರ ಬೆಲೆ ಸುಮಾರು ಹನ್ನೆರಡು ಸಾವಿರ ರೂಪಾಯಿ ಇದೆ. ದೇಶದಲ್ಲಿ ಈಗ ಐದು ಕೋಟಿ ಅಂಚೆ ಚೀಟಿ ಸಂಗ್ರಹಕಾರರು ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಅಂಚೆ ಚೀಟಿ ಸಂಗ್ರಹದ ಬಗ್ಗೆ ಆಸಕ್ತಿ ಇರುವವರು ಇಲಾಖೆಯಲ್ಲಿ ಇನ್ನೂರು ರೂಪಾಯಿ ಶುಲ್ಕ ಕೊಟ್ಟು ನೋಂದಣಿ ಮಾಡಿಕೊಳ್ಳಬಹುದು. ಇಲಾಖೆ ಯಾವುದೇ ಹೊಸ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರೆ ಅದನ್ನು ನೋಂದಣಿ ಮಾಡಿಕೊಂಡವರಿಗೆ ಕಳುಹಿಸಿಕೊಡಲಾಗುತ್ತದೆ~ ಎಂದು ಅವರು ಹೇಳಿದರು.

`ಯಾವುದೇ ಒಂದು ಕೆಲಸಕ್ಕೆ ಪರಿಶ್ರಮದ ಹಿನ್ನೆಲೆ ಇರುತ್ತದೆ. ನಾವು ಬೆಲೆ ಕಟ್ಟಬೇಕಾದದ್ದು ಕೆಲಸಕ್ಕೆ ಅಲ್ಲ. ಅದರ ಹಿಂದಿನ ಪರಿಶ್ರಮಕ್ಕೆ. ಅಂಚೆ ಚೀಟಿ ಸಂಗ್ರಹವೂ ಹೆಚ್ಚಿನ ಪರಿಶ್ರಮ ಬೇಡುವ ಹವ್ಯಾಸ ಆಗಿದೆ~ ಎಂದು ರೋಟರಿ ಅಸಿಸ್ಟೆಂಟ್ ಗೌರ‌್ನರ್ (ಝೋನ್ 2) ಅಶೋಕ್ ಕುಮಾರ್ ಶೆಟ್ಟಿ ಹೇಳಿದರು.

ಪಾಡಿಗಾರ್ ಲಕ್ಷ್ಮಿನಾರಾಯಣ ಉಪಾಧ್ಯ ಪ್ರಾರ್ಥಿಸಿದರು. ರೋಟರಿ ಮಲ್ಪೆ ಕೊಡವೂರಿನ ಅಧ್ಯಕ್ಷ ಎಂ. ಮಹೇಶ್ ಕುಮಾರ್, ಓಸಿಮಾ ಫಾರ್ಮ ನಿರ್ದೇಶಕ ಮಹೇಶ್ ಭಟ್, ವಸಂತ್ ರಾವ್, ಪೂರ್ಣಿಮಾ ಜನಾರ್ದನ್ ಕೊಡವೂರು ಉಪಸ್ಥಿತರಿದ್ದರು.

ರಥಬೀದಿಯ ಅದಮಾರು ಮಠದ ಎದುರು ಇರುವ ಉಡುಪಿ ಆರ್ಟ್ ಗ್ಯಾಲರಿಯಲ್ಲಿ ಈ ಪ್ರದರ್ಶನ ಅ10ರಿಂದ 15ರ ವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT