ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಬ್ಯಾಂಕ್‌ಗೆ ರೂ.1,300 ಕೋಟಿ

Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಭಾರತೀಯ ಅಂಚೆ ಕೆಲವೇ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರ ಪ್ರವೇಶಿಸಲಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ ರೂ.1,300 ಕೋಟಿ ಮೀಸಲಿಡಲು ಮುಂದಾಗಿದೆ.

`ವಿನಿಯೋಜನೆ ಹಣಕಾಸು ಆಯೋಗ' ಇದೇ ತಿಂಗಳು ಸಭೆ ನಡೆಸಿ, ಉದ್ದೇಶಿತ `ಪೋಸ್ಟ್ ಬ್ಯಾಂಕ್ ಆಫ್ ಇಂಡಿಯ'ಕ್ಕಾಗಿ ಮೀಸಲಿಡಲಾಗುವ  ಬಂಡವಾಳ ಮೊತ್ತ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ಸೋಮವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಹೊಸದಾಗಿ ಬ್ಯಾಂಕ್ ಆರಂಭಿಸಲು ಅನುಮತಿ ಕೋರಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಂಚೆ ಇಲಾಖೆ, ಮೂಲ ಬಂಡವಾಳಕ್ಕಾಗಿ ರೂ.1,300 ಕೋಟಿ ಒದಗಿಸುವಂತೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಜುಲೈನಲ್ಲಿ ಮನವಿ ಸಲ್ಲಿಸಿದೆ.

ಬ್ಯಾಂಕಿಂಗ್ ಕ್ಷೇತ್ರ ಪ್ರವೇಶಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ಅಂಚೆ ಇಲಾಖೆ, ಮೊದಲ ವರ್ಷ ಆಯ್ದ 50 ಅಂಚೆ ಕಚೇರಿಗಳಲ್ಲಿ ಬ್ಯಾಂಕಿಂಗ್ ಚಟುವಟಿಕೆ ಆರಂಭಿಸಲಿದೆ. ಮುಂದಿನ ಐದು ವರ್ಷಗಳಲ್ಲಿ 150 ಶಾಖೆಗಳಿಗೆ ವಿಸ್ತರಿಸುವ ಯೋಜನೆ ಇಟ್ಟುಕೊಂಡಿದೆ. ಪ್ರಸ್ತುತ ದೇಶದಾದ್ಯಂತ 1.54 ಅಂಚೆ ಕಚೇರಿಗಳನ್ನು ಇಲಾಖೆ ನೆಲೆಗೊಳಿಸಿದೆ. 1.39 ಲಕ್ಷ ಕಚೇರಿಗಳು ಗ್ರಾಮೀಣ ಭಾಗದಲ್ಲಿಯೂ, 15,736 ಕಚೇರಿಗಳು ನಗರ ಪ್ರದೇಶದಲ್ಲಿಯೂ ಇವೆ.

ಅನುಮತಿ ಇನ್ನೂ ತಡ
ಮುಂಬೈ(ಪಿಟಿಐ):
ಈ ಮಧ್ಯೆ, ಮುಂಬೈನಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ `ಆರ್‌ಬಿಐ' ಡೆಪ್ಯುಟಿ ಗವರ್ನರ್ ಆನಂದ್ ಸಿನ್ಹಾ, `ಹೊಸ ಬ್ಯಾಂಕ್ ಆರಂಭಕ್ಕೆ ನಿಗದಿಪಡಿಸಿರುವ ನಿಯಮ ಮತ್ತು ಮಾನದಂಡಗಳಲ್ಲಿ ಯಾವುದೇ ರಿಯಾಯಿತಿ ತೋರಲಾಗುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

ಹೊಸದಾಗಿ ಬ್ಯಾಂಕ್ ಆರಂಭಿಸಲು ಅನುಮತಿ ಕೋರಿ ಈವರೆಗೆ 26 ಸಂಸ್ಥೆಗಳು ಅರ್ಜಿ ಸಲ್ಲಿಸಿವೆ. ಅರ್ಜಿಗಳ ಪರಿಶೀಲನೆ ಆರಂಭವಾಗಿದೆ. ಬಹಳ ವಿವರವಾಗಿ ಪರಿಶೀಲಿಸುವ ಅಗತ್ಯ ಇರುವುದರಿಂದ ಪೂರ್ಣಗೊಳ್ಳಲು ಇನ್ನೂ ಸ್ವಲ್ಪ ಸಮಯ ಹಿಡಿಯಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಭಾರತೀಯ ಅಂಚೆ ಇಲಾಖೆ, ಟಾಟಾ ಕ್ಯಾಪಿಟಲ್, ರಿಲಯನ್ಸ್ ಕ್ಯಾಪಿಟಲ್, ಬಿರ್ಲಾ, ಬಜಾಜ್ ಸಮೂಹ ಬ್ಯಾಂಕ್ ಆರಂಭಿಸಲು ಅರ್ಜಿ ಸಲ್ಲಿಸಿರುವ ಪ್ರಮುಖ ಸಂಸ್ಥೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT