ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜುಮನ್-ಎ-ಇಸ್ಲಾಂ ಸಂಸ್ಥೆಗೆ 8ರಂದು ಚುನಾವಣೆ

Last Updated 6 ಜುಲೈ 2012, 6:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಅಂಜುಮನ್-ಎ-ಇಸ್ಲಾಂ ಸಂಸ್ಥೆಗೆ ಇದೇ 8ರಂದು ಚುನಾವಣೆ ನಡೆಯಲಿದೆ. ಒಟ್ಟು 52 ಸ್ಥಾನಗಳಿಗೆ ಸ್ಪರ್ಧೆ ಏರ್ಪಟ್ಟಿದ್ದು, ವಿವಿಧ ಗುಂಪುಗಳ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆದಿದೆ.

ಇಬ್ಬರು ಮಾಜಿ ಸಚಿವರು, ಹಾಲಿ ಅಧ್ಯಕ್ಷರು ಸೇರಿದಂತೆ ಮೂರು ಗುಂಪುಗಳು ಚುನಾವಣಾ ಕಣದಲ್ಲಿದ್ದು, ಗೆಲುವಿಗಾಗಿ ಜಿದ್ದಾಜಿದ್ದಿಯ ಪ್ರಚಾರದಲ್ಲಿ ತೊಡಗಿವೆ. ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಬಳಗ 52 ಅಭ್ಯರ್ಥಿಗಳ ಪೂರ್ಣ ತಂಡದೊಂದಿಗೆ ಸ್ಪರ್ಧೆಗೆ ಇಳಿದಿದೆ. ಮತ್ತೊಬ್ಬ ಮಾಜಿ ಸಚಿವ ಜಬ್ಬಾರ್‌ಖಾನ್ ಹೊನ್ನಳ್ಳಿ 51 ಬೆಂಬಲಿಗರೊಂದಿಗೆ ಸ್ಪರ್ಧೆಯಲ್ಲಿದ್ದಾರೆ.

2009ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧ್ಯಕ್ಷಗಿರಿ ತಮ್ಮದಾಗಿಸಿಕೊಂಡಿದ್ದ ಯುಸೂಫ್ ಸವಣೂರ ಸಹ ಮತ್ತೊಮ್ಮೆ ಅಧ್ಯಕ್ಷ ಹುದ್ದೆಗೇರುವ ಆಸೆ ಹೊತ್ತು 51 ಸಹವರ್ತಿ ಗಳೊಡನೆ ಸ್ಪರ್ಧೆಗೆ ಇಳಿದಿದ್ದಾರೆ.
ಹುಬ್ಬಳ್ಳಿ ನಗರದ ವ್ಯಾಪ್ತಿ ಹೊಂದಿರುವ ಅಂಜುಮನ್ ಸಂಸ್ಥೆ ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿದೆ.

1903ರಲ್ಲಿ ಸ್ಥಾಪಿತವಾದ ಸಂಸ್ಥೆಯ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದ ಸರ್ದಾರ್ ಮೆಹಬೂಬ್ ಖಾನ್‌ರಿಂದ ಸವಣೂರ ಅವರ ವರೆಗೆ ಸುಮಾರು 16 ಮಂದಿ ಅಧ್ಯಕ್ಷರಾಗಿ ಹೋಗಿದ್ದಾರೆ. ಇದೀಗ ಸಂಸ್ಥೆಯ ಸದಸ್ಯರ ಸಂಖ್ಯೆ 17 ಸಾವಿರ ದಾಟಿದೆ.

ಇಂತಹ ಪ್ರತಿಷ್ಠಿತ ಸಂಘಟನೆಯ ಚುಕ್ಕಾಣಿ ಹಿಡಿಯುವುದು ಸಮುದಾಯವೊಂದರ ನೇತೃತ್ವ ವಹಿಸಿದಂತೆ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಇದು ಮೂವರು ನಾಯಕರ ಪಾಲಿಗೂ ಪ್ರತಿಷ್ಠೆಯ ಕಣವಾಗಿದೆ.
ಎ.ಎಂ. ಹಿಂಡಸಗೇರಿ ಹಾಗೂ ಜಬ್ಬಾರ್‌ಖಾನ್ ಹೊನ್ನಳ್ಳಿ ಇಬ್ಬರು ಮಾಜಿ ಸಚಿವರೂ ಹೌದು.
 
ಅಂತೆಯೇ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷರೂ ಹೌದು ಎನ್ನುವುದು ವಿಶೇಷ. 1983ರಿಂದ 89ರ ವರೆಗೆ ಹಿಂಡಸಗೇರಿ ಹಾಗೂ 1996ರಿಂದ 2006ರ ವರೆಗೆ ಜಬ್ಬಾರ್‌ಖಾನ್ ಅಧ್ಯಕ್ಷರಾಗಿದ್ದರು.ಇಬ್ಬರೂ ರಾಜಕೀಯದಲ್ಲಿ ಪಳಗಿದವರೇ ಆಗಿದ್ದು, ಇವರಿಗೆ ಸವಣೂರು ಬಳಗ ಹೇಗೆ ಸ್ಪರ್ಧೆ ನೀಡಲಿದೆ ಎಂಬುದೇ ಕುತೂಹಲದ ಸಂಗತಿ ಯಾಗಿದೆ.

ಸಕಲ ಸಿದ್ಧತೆ: ತಾ.8ರಂದು ಬೆಳಿಗ್ಗೆ 9.30ರಿಂದ ಸಂಜೆ 5.30ರ ವರೆಗೆ ಚುನಾವಣೆ ನಡೆಯಲಿದೆ. ಅಂಜುಮನ್ ಸಂಸ್ಥೆಯ ವಿದ್ಯಾಸಂಸ್ಥೆಗಳು ಸೇರಿದಂತೆ 29 ಮತಗಟ್ಟೆಗಳನ್ನು ಇದಕ್ಕಾಗಿ ಗುರುತಿಸಲಾಗಿದೆ. 17,039 ಮತದಾರರು ಮತ ಚಲಾಯಿಸಲಿದ್ದಾರೆ.

52 ಹುದ್ದೆಗಳಿಗೆ 155 ಅಭ್ಯರ್ಥಿಗಳು ಕಣದಲ್ಲಿ ್ದದಾರೆ. ಇದರಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಆರು ವೈಯಕ್ತಿಕ ಹುದ್ದೆಗಳು ಹಾಗೂ ಶಿಕ್ಷಣ ಬೋರ್ಡ್ (7 ಸ್ಥಾನ), ಆಸ್ಪತ್ರೆ ಬೋರ್ಡ್ (4 ಸ್ಥಾನ), ಎಕ್ಸಿಕ್ಯೂಟಿವ್ ಕೌನ್ಸಿಲ್ ಕೌನ್ಸಿಲ್ ಫಾರ್ ಪೆಟ್ರಾನ್ (10 ಸ್ಥಾನ), ಅಜೀವ ಸದಸ್ಯರ ಕಾರ್ಯಕಾರಿ ಮಂಡಳಿ (25 ಸ್ಥಾನ) ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಐವರು ಪಿಎಸ್‌ಐ, ಆರು ಹೆಡ್ ಕಾನ್‌ಸ್ಟೆಬಲ್, 96 ಕಾನ್‌ಸ್ಟೆಬಲ್‌ಗಳನ್ನು ಚುನಾವಣಾ ಭದ್ರತೆ ಗಾಗಿ ನಿಯೋಜಿಸಲಾಗಿದೆ. 335 ಮಂದಿಯನ್ನು ಒಳಗೊಂಡ 35ತಂಡಗಳು ಚುನಾವಣಾ ಪ್ರಕ್ರಿಯೆ ಯನ್ನು ನಿರ್ವಹಿಸಲಿವೆ. 9ರಂದು ಬೆಳಿಗ್ಗೆ ನಗರದ ನೆಹರು ಕಾಲೇಜಿನಲ್ಲಿ ಮತಎಣಿಕೆ ಕಾರ್ಯ ನಡೆಯಲಿದೆ.

`ನಕಲಿ ಮತದಾನ ತಪ್ಪಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಅಷ್ಟು ಮತದಾರರ ಸ್ಪಷ್ಟ ಭಾವಚಿತ್ರಗಳನ್ನು ಒಳಗೊಂಡ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಭಾವಚಿತ್ರ ನೋಡಿಯೇ ಮತ ಚಲಾವಣೆಗೆ ಅವಕಾಶ ನೀಡಲಾಗುತ್ತದೆ.  ಅನುಮಾನಾಸ್ಪದ ಗುರುತು ಪತ್ರಗಳನ್ನು ಮತ್ತೊಮ್ಮೆ ಪರಿಶೀಲಿಸಲಾಗುತ್ತಿದೆ. ಶಾಂತಿಯುತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸಿದ್ಧತೆ ನಡೆದಿದೆ~ಎಂದು ಚುನಾವಣಾಧಿಕಾರಿ ಶಿವಾನಂದ ಕಾಪಸೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT