ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಂತಃಕರಣದ ಹಣತೆ ಬೆಳಗಿ'

Last Updated 16 ಜುಲೈ 2013, 8:50 IST
ಅಕ್ಷರ ಗಾತ್ರ

ಮಂಡ್ಯ: `ಮಾನವನ ಎದೆಗೂಡಿನಲ್ಲಿ ಅಂತಃಕರಣದ ಹಣತೆ ಬೆಳೆಗಿದಾಗ ಮಾತ್ರವೇ, ಸಮಾಜದಲ್ಲಿರುವ ಕೊಳಕು ತೊಳೆಯಲು ಸಾಧ್ಯ' ಎಂದು ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಅಧ್ಯಕ್ಷ ಎಂ.ಎಲ್. ಪರಶುರಾಮ್ ಹೇಳಿದರು.

ಕೆ.ವಿ. ಶಂಕರಗೌಡ ಸಾಂಸ್ಕೃತಿಕ ಪ್ರತಿಷ್ಠಾನ, ಪಿಇಎಸ್ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಕೊಡಮಾಡುವ ರಾಜ್ಯ ಮಟ್ಟದ ಕೆ.ವಿ. ಶಂಕರಗೌಡ ಸಮಾಜ ಸೇವಾ ಪ್ರಶಸ್ತಿಯನ್ನು ತಮ್ಮ ಇನ್ನೊಬ್ಬ ಸ್ನೇಹಿತ ಕೆ.ವಿ. ಸ್ಟ್ಯಾನ್ಲಿ ಅವರೊಂದಿಗೆ ಸೋಮವಾರ ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ಲೇಸ್‌ಮೆಂಟ್ ಸ್ವೀಕರಿಸಿ ಅವರು ಮಾತನಾಡಿದರು.

`ಸಮಾಜದಲ್ಲಿ ಕುತ್ಸಿತ ಮನಸ್ಸುಗಳ ಸಂಖ್ಯೆ ಹೆಚ್ಚುತ್ತಿದೆ. ಸೌಜನ್ಯ, ಸಜ್ಜನಿಕೆ, ಪ್ರೀತಿ, ಸಂಬಂಧಗಳು ಕಳೆದು  ಹೋಗುತ್ತಿವೆ. ಹೀಗಾಗಿಯೇ, ಅನೇಕ ಅಮಾನವೀಯ ಸಮಸ್ಯೆಗಳು ಸಮಾಜದಲ್ಲಿ ಬೇರೂರಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ, ಮಾನವನ ಹೃದಯದಲ್ಲಿ ಅಂತಃಕರಣದ ಹಣತೆ ಬೆಳಗಬೇಕು' ಎಂದರು.

ಒಡನಾಡಿ ಸೇವಾ ಸಂಸ್ಥೆ ಕಾರ್ಯದರ್ಶಿ ಕೆ.ವಿ. ಸ್ಟ್ಯಾನ್ಲಿ ಮಾತನಾಡಿ, `ಅನೇಕ ಮಕ್ಕಳ ಬಾಲ್ಯ ಮತ್ತು ಬದುಕನ್ನು ಕಿವುಚುವ ಕೆಲಸಗಳು ನಡೆಯುತ್ತಿವೆ. ಮಕ್ಕಳ ಸಾಗಾಣಿಕೆ, ಮಾರಾಟ, ಲೈಂಗಿಕ ದೌರ್ಜನ್ಯ, ಭಿಕ್ಷಾಟನೆಗೆ ದೂಡುವುದು ಸೇರಿದಂತೆ ಅನೇಕ ಸಮಸ್ಯೆಗಳು ಸಮಾಜವನ್ನು ಹಿಂಡುತ್ತಿವೆ' ಎಂದು ಬೇಸರ ವ್ಯಕ್ತಪಡಿಸಿದರು.

ಇಂತಹ ಮಕ್ಕಳಿಗೆ ಘನತೆಯುಕ್ತ ಬದುಕು ನೀಡಲು ಸರ್ಕಾರಗಳಿಗೆ ಇಂದಿಗೂ ಸಾಧ್ಯವಾಗದಿರುವುದು ಅತ್ಯಂತ ನಾಚಿಕೆಗೇಡು. ಸರ್ಕಾರಗಳ ಕಿವಿ ಹಿಂಡುವ ಕೆಲಸವನ್ನು `ನಾಗರಿಕ' ಸಮಾಜ ಮಾಡಿದರೆ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೇನೋ ಎಂಬ ಭರವಸೆ ವ್ಯಕ್ತಪಡಿಸಿದರು.

`ಅವಕಾಶ ವಂಚಿತ ಮಕ್ಕಳಿಗೆ ನೆರವುಬೇಕು. ನೊಂದವರಿಗೆ ಸ್ವಾಂತನ, ರಕ್ಷಣೆ, ಆಶ್ರಯ ಬೇಕು. ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮಾನ ಅವಕಾಶ ದೊರೆತರೆ ಉತ್ತಮವಾದುದನ್ನು ನಿರೀಕ್ಷಿಸಬಹುದು ಎಂದರು.

ರಂಗಕರ್ಮಿ ಪಿ.ವೆಂಕಟರಾಮಯ್ಯ ಅವರಿಗೆ ರಾಜ್ಯ ಮಟ್ಟದ ಕೆ.ಎಸ್. ಸಚ್ಚಿದಾನಂದ ರಂಗಭೂಮಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಪ್ರದಾನ ಮಾಡಿದರು.

ಪ್ರಶಸ್ತಿ ಪುರಸ್ಕೃತರಿಗೆ ತಲಾ 15 ಸಾವಿರ ರೂಪಾಯಿ ನಗದು, ಪ್ರಶಸ್ತಿಪತ್ರ, ಫಲಕ ನೀಡಿ ಗೌರವಿಸಲಾಯಿತು.
ಪಿಇಟಿ ಅಧ್ಯಕ್ಷ ಡಾ. ಎಚ್.ಡಿ. ಚೌಡಯ್ಯ, ಪ್ರತಿಷ್ಠಾನದ ಅಧ್ಯಕ್ಷ, ಮಾಜಿ ಶಾಸಕ ಎಂ. ಶ್ರೀನಿವಾಸ್, ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ವಿ. ಶ್ರೀಧರ್,  ಡಾ. ರಾಮಲಿಂಗಯ್ಯ, ಪ್ರೊ. ಕೆ.ಎಂ. ಜಗದೀಶ್, ಪ್ರೊ. ಕೆ. ರಮೇಶ್, ಎಂ.ಜೆ. ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT