ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ಕಾಲೇಜು ಸ್ಪರ್ಧೆಗೆ ಹೊಸ ರಂಗು...

Last Updated 21 ಡಿಸೆಂಬರ್ 2010, 10:30 IST
ಅಕ್ಷರ ಗಾತ್ರ

ಅಲ್ಲಿ ಎಲ್ಲರಲ್ಲೂ ಗೆಲ್ಲುವ ಉತ್ಸಾಹ ತುಂಬಿ ತುಳುಕಿತ್ತು. ತಮ್ಮ ಪ್ರತಿಭೆ ಅನಾವರಣಗೊಳಿಸುವ ತವಕದೊಂದಿಗೆ ಸಾವಿರಾರು ವಿದ್ಯಾರ್ಥಿಗಳು ಸೇರಿದ್ದರು.ಎಲ್ಲರಲ್ಲೂ ಸಂಭ್ರಮ ಮುಗಿಲು ಮುಟ್ಟಿತ್ತು. ಇಂತಹ ವೈವಿಧ್ಯಮಯ ಕಾರ್ಯಕ್ರಮ ನಡೆದದ್ದು ಮೌಂಟ್ ಕಾರ್ಮೆಲ್ ಕಾಲೇಜು ಇತ್ತೀಚೆಗೆ ಆಯೋಜಿಸಿದ್ದ ESPLENDIDA’ ಅಂತರ ಕಾಲೇಜು ಸ್ಪರ್ಧೆಯಲ್ಲಿ.

ನಗರ ಪ್ರದೇಶದ ಕಾಲೇಜುಗಳಲ್ಲಿ ತಿಂಗಳಿಗೊಮ್ಮೆ ಒಂದಲ್ಲ ಒಂದು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಇದರಲ್ಲೇನು ಹೊಸತು ಎನ್ನುವವರಿಗೆಂದೇ ಹೊಸ ಬಗೆಯ ಸ್ಪರ್ಧೆಗಳನ್ನು ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಯುವಜನತೆಯ ಅಭಿರುಚಿಗೆ ತಕ್ಕಂತೆ ರೂಪುಗೊಳಿಸಿದ್ದ ಈ ಕಾರ್ಯಕ್ರಮದಿಂದ ಅಂತರ ಕಾಲೇಜು ಸ್ಪರ್ಧೆ ರಂಗೇರಿತ್ತು.

ಅನೇಕ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ತಮ್ಮ ವಿನೂತನ ಚಿಂತನೆಗಳಿಂದ  ಸ್ಪರ್ಧೆಗೆ ಹೊಸ ಮೆರುಗು ತಂದಿದ್ದರು. ಮಿಸ್ ಹಾಗೂ ಮಿಸ್ಟರ್ ESPLENDIDA ಎಂಬ ಬಿರುದಿಗೆ ಎಲ್ಲರಲ್ಲೂ ಪೈಪೋಟಿ ನಡೆದಿದ್ದು ವಿದ್ಯಾರ್ಥಿಗಳಲ್ಲಿನ ಸ್ಪರ್ಧಾ ಮನೋಭಾವಕ್ಕೆ ಸಾಕ್ಷಿಯಾಗಿತ್ತು.ಕ್ವಿಜ್, ಪರ್ಸನಾಲಿಟಿ ಸ್ಕಿಲ್, ಸ್ಪೆಲ್ಲಿಂಗ್ ಬೀ, ಕ್ರ್ಯಾಕ್ ಯುವರ್ ಸ್ಕಲ್ಸ್, ಬ್ಲೂಕ್ಲೂ ಮುಂತಾದ ಬುದ್ಧಿಗೆ ಕೆಲಸ ಕೊಡುವ ಸ್ಪರ್ಧೆಗಳೊಂದಿಗೆ ಪಾಶ್ಚಾತ್ಯ ನೃತ್ಯ, ಭಾರತೀಯ ಸಂಗೀತ, ನೃತ್ಯ,  ಫ್ಯಾಷನ್ ಷೋ ಮುಂತಾದ ಮನರಂಜನಾ ಸ್ಪರ್ಧೆಗಳೂ ಕಣ್ಣಿಗೆ ಹಿತ ತಂದವು. ಎಲ್ಲ ಯುವ ವಿದ್ಯಾರ್ಥಿಗಳೂ ಉನ್ಮಾದದಿಂದ ಕುಣಿದು ನಲಿದರು.  ಎಲ್ಲ ಕಾರ್ಯಕ್ರಮಗಳಿಗಿಂತ ಹೆಚ್ಚು ಗಮನ ಸೆಳೆದದ್ದು, ‘ಬ್ಯಾಟಲ್ ಆಫ್ ದಿ ಬ್ಯಾಂಡ್ಸ್’   ಶೀರ್ಷಿಕೆ ಅಡಿ ನಡೆದ ಸಂಗೀತ ಕಾರ್ಯಕ್ರಮ. ಅದರಲ್ಲಿ ಅನೇಕ ತಂಡಗಳು ಭಾಗವಹಿಸಿ ಹೊಸ ಶೈಲಿಯ ಸಂಗೀತ  ಪ್ರಯೋಗ ಮಾಡಿದವು.

ಸಂಗೀತ ಯುದ್ಧದಲ್ಲಿ ನಾವೇ ಗೆಲ್ಲಬೇಕು ಎನ್ನುತ್ತಾ ಯುವತಂಡ ಉತ್ಸಾಹದಿಂದ ಪಾಲ್ಗೊಂಡವು. ಸ್ವತಹ ಬರೆದ ಹಾಡುಗಳನ್ನು ಹಾಡಿದ ಯುವ ಗಾಯಕರ ಕಂಠಸಿರಿಗೆ ಎಲ್ಲರೂ ತಲೆದೂಗಿದರು. ಆ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ ಲಲನೆಯರ ನೃತ್ಯ ಪ್ರೇಕ್ಷಕರನ್ನೂ ಕೂಡ ಸಂತಸದ ಕಡಲಲ್ಲಿ ತೇಲಿಸಿತು. ಸ್ಪರ್ಧೆಯೊಂದಿಗೆ ಹೊಸ  ಪ್ರತಿಭೆಗಳ ಅನಾವರಣಕ್ಕೂ ಇಲ್ಲಿ ಅವಕಾಶ ಒದಗಿಬಂದದ್ದು ವಿಶೇಷವಾಗಿತ್ತು.  ‘ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂಬ ನುಡಿಗಟ್ಟಿನಂತೆ ಈಗಿನ ಟ್ರೆಂಡ್‌ಗೆ ತಕ್ಕಂತೆ ವಿವಿಧ ಸ್ಪರ್ಧೆಗಳು ‘ESPLENDIDA’ ದಲ್ಲಿ ನಡೆದದ್ದು ನಿಜಕ್ಕೂ ಹೊಸ ಅನುಭವ ನೀಡಿತು’ ಎಂದು ಜೈನ್ ಕಾಲೇಜು ವಿದ್ಯಾರ್ಥಿ ಸೆಂತಿಲ್ ಕುಮಾರ್ ಸಂತಸ ಹಂಚಿಕೊಂಡರು. ‘ಕಾಲೇಜಿನಲ್ಲಿ ನಡೆದ ಎಲ್ಲ ಸ್ಪರ್ಧೆಗಳು ವಿನೂತನವಾಗಿದ್ದವು.

ನಾನು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ, ಇದು ಕೇವಲ ಸ್ಪರ್ಧೆಯಾಗಿರದೇ ಮನರಂಜನೆಯನ್ನೂ ನೀಡಿತು, ಇದು ನಮ್ಮಲ್ಲಿನ ಪ್ರತಿಭೆ  ಪ್ರದರ್ಶಿಸಲು ಒಳ್ಳೆಯ ವೇದಿಕೆ ಕಲ್ಪಿಸಿಕೊಟ್ಟಿತು’ ಎಂದು ಕ್ರೈಸ್ಟ್ ಕಾಲೇಜಿನ ಪಿಯು ವಿದ್ಯಾರ್ಥಿನಿ ರಾಧಿಕಾ ದತ್ ಸಂತಸ ವ್ಯಕ್ತಪಡಿಸಿದರು.   ‘ಇಲ್ಲಿ ನಡೆದ ಸ್ಪರ್ಧೆಗಳು ಹೊಸ ಅನುಭವ ನೀಡಿದವು. ಸ್ಪರ್ಧೆಗಳು ಕಠಿಣವೆನಿಸಿದರೂ ಅನುಭವ ತುಂಬಾ ಸಂತಸ ತಂದಿತು. ಐಸ್ ಬ್ರೇಕರ್, ಏರ್ ಕ್ರಾಶ್ ಎಂಬ ಸ್ಪರ್ಧೆಗಳಲ್ಲಂತೂ ಸಖತ್ ಜೋಶ್ ಇತ್ತು’ ಎಂದು ಸೆಂಟ್ ಜೋಸೆಫ್ ಕಾಲೇಜು ವಿದ್ಯಾರ್ಥಿ ಕರನ್ ಕಪೂರ್ ತಿಳಿಸಿದರು.ಕೊನೆಗೆ ಸ್ಪರ್ಧೆಯ ಮಿಸ್ಟರ್ ESPLENDIDA ಬಿರುದಿಗೆ ಸೇಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿ ನೀಲ್ ನ್ಯೂಟನ್ ಆಯ್ಕೆಯಾದರು.          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT