ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ಘಟಕ ವರ್ಗಾವಣೆ: ಎರಡು ಬಾರಿಗೆ ವಿಸ್ತರಣೆ

ಶಿಕ್ಷಕರ ವರ್ಗಾವಣೆ: ಪತಿ- ಪತ್ನಿ ಪ್ರಕರಣ
Last Updated 7 ಡಿಸೆಂಬರ್ 2013, 8:54 IST
ಅಕ್ಷರ ಗಾತ್ರ

ಸುವರ್ಣಸೌಧ (ಬೆಳಗಾವಿ): ಶಿಕ್ಷಕರ ವರ್ಗಾವಣೆ ನೀತಿಯನ್ನು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.

ಅರುಣ್ ಶಹಾಪುರ ಅವರ ಪ್ರಶ್ನೆಗೆ ಶುಕ್ರವಾರ ವಿಧಾನ ಪರಿಷತ್ ನಲ್ಲಿ ಲಿಖಿತ ಉತ್ತರ ನೀಡಿದ ಅವರು ಪತಿ-ಪತ್ನಿ ಪ್ರಕರಣ, ತೀವ್ರತರ ಕಾಯಿಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂತರ ಘಟಕ ವರ್ಗಾವಣೆಯನ್ನು ಎರಡು ಬಾರಿಗೆ ಹೆಚ್ಚಿಸಲಾಗು ವುದು ಎಂದು ಹೇಳಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಾವಳಿ ರಚನೆ ಕಡತವನ್ನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಗೆ ಕಳುಹಿಸಲಾಗಿತ್ತು. ಕೆಲವು ಮಾರ್ಪಾಡುಗಳನ್ನು ಮಾಡಲು ಸೂಚಿಸಿ ಇಲಾಖೆ ಕಡತವನ್ನು ವಾಪಸು ಮಾಡಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಪರಿಶೀಲನಾ ಸಮಿತಿ ಇದನ್ನು ಪರಿಶೀಲಿಸಿ ನಂತರ ಸಂಪುಟದಲ್ಲಿ ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು. ಡಿ.೧೨ರಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದ್ದು ಅಲ್ಲಿ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಗಡಿ ಶಾಲೆಗಳಿಗೆ ಪುಸ್ತಕಗಳ ಪೂರೈಕೆ
ರಾಜ್ಯದ ಗಡಿ ಭಾಗಗಳಲ್ಲಿರುವ ಕನ್ನಡ ಶಾಲೆಗಳಿಗೆ ರಾಜ್ಯದ ಇತರ ಭಾಗಗಳಲ್ಲಿರುವ ಶಾಲೆಗಳಿಗೆ ನೀಡಿದಂತೆಯೇ ಪಠ್ಯಪುಸ್ತಕಗಳನ್ನು ನೀಡಲಾಗುತ್ತಿದ್ದು ಯಾವುದೇ ತೊಂದರೆ ಆಗಿಲ್ಲ.

ವಿಧಾನ ಪರಿಷತ್‌ ಸದಸ್ಯ ಮೃತ್ಯುಂಜಯ ಜಿನಗಾ ಅವರ ಪ್ರಶ್ನೆಗೆ ರತ್ನಾಕರ ಅವರು ಈ ಮಾಹಿತಿ ನೀಡಿದ್ದಾರೆ.

ನೂತನ ಪಠ್ಯಕ್ರಮ
ಸರ್ಕಾರಿ ಶಾಲೆಗಳಲ್ಲಿ ಸಿಬಿಎಸ್ ಸಿ ಮಾದರಿ ಪಠ್ಯಕ್ರಮ ಅನುಷ್ಠಾನಗೊಂಡಿಲ್ಲ. ೨೦೧೨-೧೩ನೇ ಸಾಲಿನಲ್ಲಿ ರಾಷ್ಟ್ರೀಯ ಪಠ್ಯಕ್ರಮವನ್ನು ಆಧರಿಸಿ ಪಠ್ಯವನ್ನು ಪರಿಷ್ಕರಿಸಲಾಗಿದೆ. ೨೦೧೨-೧೩ನೇ ಸಾಲಿನಲ್ಲಿ ೮ನೇ ತರಗತಿ, ೨೦೧೩-೧೪ನೇ ಸಾಲಿನಲ್ಲಿ ೯ನೇ ತರಗತಿ ಹಾಗೂ ೨೦೧೪-೧೫ನೇ ಸಾಲಿನಲ್ಲಿ ೧೦ನೇ ತರಗತಿ ಪಠ್ಯಕ್ರಮ ಬದಲಾಯಿಸಲಾಗು ವುದು ಎಂದು ಅವರು ರಾಮಚಂದ್ರ ಗೌಡ ಅವರ ಪ್ರಶ್ನೆಗೆ ತಿಳಿಸಿದ್ದಾರೆ.

ಬದಲಾದ ಪಠ್ಯಕ್ರಮಕ್ಕೆ ಅನುಗುಣವಾಗಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದೂ ಕಿಮ್ಮನೆ ರತ್ನಾಕರ ಅವರು ಹೇಳಿದ್ದಾರೆ.

ಅವಕಾಶ ಇಲ್ಲ
ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರಕರಿಗೆ ಸೇವಾ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.

ಬಿಜೆಪಿಯ ಸಿ.ಎಚ್.ವಿಜಯ ಶಂಕರ್ ಅವರ ಪ್ರಶ್ನೆಗೆ ನೀಡಿರುವ ಲಿಖಿತ ಹೇಳಿಕೆಯಲ್ಲಿ ಈ ವಿಷಯ ತಿಳಿಸಿರುವ ಅವರು, ಪ್ರಸ್ತುತ ೫೫೦೦ ರೂಪಾಯಿ ಗೌರವಧನ ನೀಡಲಾಗುತ್ತಿದೆ. ಅವರು ಗೌರವ ಸಂಭಾವನೆಯ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಸೇವಾ ಭದ್ರತೆ ವಿಷಯ ಬರುವುದಿಲ್ಲ ಎಂದಿದ್ದಾರೆ.

ಲೆಕ್ಕಪರಿಶೋಧನೆ ಆಗಿಲ್ಲ
ರಾಜ್ಯದಲ್ಲಿ ಒಟ್ಟು ೫೭೯ ಗ್ರಾಮ ಪಂಚಾಯಿತಿ ಗಳಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಲೆಕ್ಕಪರಿಶೋಧನೆ ಆಗಿಲ್ಲ ಎಂದು ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ತಿಳಿಸಿದ್ದಾರೆ.

ಕಾಂಗ್ರೆಸ್ ಸದಸ್ಯ ಕೆ.ಪ್ರತಾಪಚಂದ್ರಶೆಟ್ಟಿ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಲೆಕ್ಕ ತಪಾಸಣೆ ನಡೆಸಲು ಕಾಲ ಕಾಲಕ್ಕೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.


ಶಾಲೆ ಬಿಟ್ಟ ಮಕ್ಕಳಲ್ಲಿ ಪರಿಶಿಷ್ಟ ಪಂಗಡದವರೇ ಹೆಚ್ಚು
೨೦೦೯–೧೦ರಿಂದ ೨೦೧೨–೧೩ನೇ ಸಾಲಿನವರೆಗೆ ಶಾಲೆ ಬಿಟ್ಟ ಮಕ್ಕಳಲ್ಲಿ ಪರಿಶಿಷ್ಟ ಪಂಗಡದ ಮಕ್ಕಳ ಸಂಖ್ಯೆಯೇ ಹೆಚ್ಚು ಎಂದು ಅವರು ಪ್ರೊ.ಪಿ.ವಿ.ಕೃಷ್ಣ ಭಟ್ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.

೨೦೦೯–೧೦ನೇ ಸಾಲಿನ ೭ ತರಗತಿಯಲ್ಲಿ ಒಟ್ಟು ೯,೯೯,೧೭೯ ಮಕ್ಕಳಿದ್ದರೆ ೨೦೧೨–೧೩ನೇ ಸಾಲಿನ ೧೦ನೇ ತರಗತಿಯಲ್ಲಿ ೮,೦೦,೮೭೦ ಮಕ್ಕಳು ಇದ್ದರು. ಒಟ್ಟು ೧,೯೮,೩೦೯ ವಿದ್ಯಾರ್ಥಿಗಳು ಶಾಲೆ ಬಿಟ್ಟಿದ್ದರು. ಇದರಲ್ಲಿ ಪರಿಶಿಷ್ಟ ಪಂಗಡದ ಶೇ ೩೨.೮೫ರಷ್ಟು ಮಕ್ಕಳು ಶಾಲೆ ಬಿಟ್ಟಿದ್ದಾರೆ. ಪರಿಶಿಷ್ಟ ಜಾತಿಯ ಶೇ ೨೫.೩೬ ಹಾಗೂ ಹಿಂದುಳಿದ ವರ್ಗದ ಶೇ ೧೯.೦೪ರಷ್ಟು ಮಕ್ಕಳು ಶಾಲೆ ಬಿಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT