ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಜ್ಜು

Last Updated 3 ಜನವರಿ 2011, 9:30 IST
ಅಕ್ಷರ ಗಾತ್ರ

ಬೆಳಗಾವಿ: ಬಣ್ಣ, ಬಣ್ಣದ... ವಿವಿಧ ಆಕಾರದ ನೂರಾರು ಗಾಳಿಪಟಗಳು ಜ.16 ಮತ್ತು 17ರಂದು ನಗರದ ನಾನಾವಾಡಿ ಮೈದಾನದಲ್ಲಿ ಹಾರಾಡಲಿವೆ.ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದ ಗಾಳಿಪಟ ತಂಡಗಳು, ಶಾಸಕ ಅಭಯ ಪಾಟೀಲ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಲಿವೆ.

‘12 ದೇಶೀಯ ಹಾಗೂ ಐದು ವಿದೇಶಿ ತಂಡಗಳು ಈಗಾಗಲೇ ಭಾಗವಹಿಸುವುದನ್ನು ಖಚಿತ ಪಡಿಸಿದ್ದು, ಮುಂದಿನ ದಿನಗಳಲ್ಲಿ ತಂಡಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ’ ಎಂದು ಶಾಸಕ ಅಭಯ ಪಾಟೀಲ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.  ‘ಹೊಸ ವರ್ಷದ ಆಚರಣೆಗಾಗಿ ವಿದೇಶಿಯರು ಗೋವಾಕ್ಕೆ ಬರುತ್ತಾರೆ. ಅವರನ್ನು ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ಗಾಳಿಪಟ ಉತ್ಸವಕ್ಕೂ ಆಹ್ವಾನಿಸಲಾಗುವುದು. ಅದಕ್ಕಾಗಿ ಬಸ್ ವ್ಯವಸ್ಥೆ ಮಾಡಲಾಗಿದ್ದು, ಜತೆಗೆ ಸುತ್ತಲಿನ ಪ್ರವಾಸ ಸ್ಥಳಗಳ ವೀಕ್ಷಣೆಗೂ ವ್ಯವಸ್ಥೆ ಮಾಡಲಾಗುವುದು’ ಎಂದು ಅವರು ಹೇಳಿದರು.

‘ಇಂಗ್ಲೆಂಡ್, ಕೆನಡಾ, ಇಂಡೋನೇಶಿಯಾ, ಆಸ್ಟ್ರೇಲಿಯಾ ಹಾಗೂ ರಾಜಸ್ತಾನ, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು ಮುಂತಾದ ರಾಜ್ಯಗಳ ತಂಡಗಳು ಭಾಗವಹಿಸಲಿವೆ’ ಎಂದು ಅವರು ತಿಳಿಸಿದರು. ‘ಗುಜರಾತ್ ರಾಜ್ಯದಲ್ಲಿ ಗಾಳಿಪಟ ಉತ್ಸವಕ್ಕಾಗಿ 20 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಗಾಳಿಪಟ ಉತ್ಸವಕ್ಕೆ ನೆರವು ಕೋರಿ ಈಗಾಗಲೇ ರಾಜ್ಯ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಇಲ್ಲಿಯೂ ನೆರವು ಸಿಗಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು.

‘ಗಾಳಿಪಟ ಉತ್ಸವವನ್ನು ಪ್ರತಿ ವರ್ಷ ಆಯೋಜಿಸುವ ಯೋಜನೆ ಹೊಂದಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ. 50 ಮಳಿಗೆಗಳನ್ನು ಹಾಕಲಾಗುತ್ತಿದೆ.ಅದರಲ್ಲಿ 20 ಮಳಿಗೆಗಳಲ್ಲಿ ಗಾಳಿಪಟಗಳ ಪ್ರದರ್ಶನ ಹಾಗೂ ಉಳಿದ ಮಳಿಗೆಗಳಲ್ಲಿ ಶಹಾಪುರ ಸೀರೆ, ಗೃಹ  ಕೈಗಾರಿಕೆ ಹಾಗೂ ಸ್ತ್ರೀ ಶಕ್ತಿ ಸಂಘಗಳು ಉತ್ಪಾದಿಸಿದ ವಸ್ತುಗಳ ಪ್ರದರ್ಶನಕ್ಕೆ ನೀಡಲಾಗುವುದು’ ಎಂದು ಹೇಳಿದರು.

‘ಜ. 16ರಂದು ಬೆಳಿಗ್ಗೆ 10 ಗಂಟೆಗೆ ಗಾಳಿಪಟ ಉತ್ಸವ ಉದ್ಘಾಟಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿದೆ. ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಉಪಸ್ಥಿತರಿರಲಿದ್ದಾರೆ’ ಎಂದರು. ಕೈಟ್ ಕ್ಲಿನಿಕ್ ಕ್ಲಬ್ ಅಧ್ಯಕ್ಷ ಎ. ಕೃಷ್ಣಾಜಿರಾವ್ ಮಾತನಾಡಿ, ಕ್ಲಬ್ ವತಿಯಿಂದ ದೇಶದ ವಿವಿಧೆಡೆ ಗಾಳಿಪಟ ಉತ್ಸವಗಳನ್ನು ಆಯೋಜಿಸಲಾಗಿದೆ. ವಿವಿಧ ತರಹದ 20ಕ್ಕೂ ಹೆಚ್ಚು ಗಾಳಿಪಟ ಹೊಂದಿದವರಿಗೆ ಉತ್ಸವದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದರು.

‘2 ಇಂಚಿನಿಂದ ಹಿಡಿದು 30 ಅಡಿ ಎತ್ತರದವರೆಗಿ ಗಾಳಿಪಟಗಳು ಉತ್ಸವದಲ್ಲಿ ಇರಲಿವೆ. ಮೊದಲ ಬಾರಿಗೆ ರಾತ್ರಿ ಗಾಳಿಪಟ ಹಾಡಿಸಲಾಗುವುದು. ಜ.16ರಂದು ಸಂಜೆ 7ರಿಂದ ರಾತ್ರಿ 9ರ ವರೆಗೆ ಕೋಟೆ ಕೆರೆ ಪ್ರದೇಶದಲ್ಲಿ ದೀಪಗಳಿಂದ ಕೂಡಿದ ಗಾಳಿಪಟಗಳು ಹಾರಲಿವೆ’ ಎಂದು ಹೇಳಿದರು. ‘ಜ.17ರಂದು ಒಂದು ಸಾವಿರ ಮಕ್ಕಳಿಗೆ ಗಾಳಿಪಟ ತಯಾರಿಕೆ ಹಾಗೂ ಹಾರಿಸುವ ಬಗೆಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಆ ಮೂಲಕ ಗಾಳಿಪಟದ ಬಗೆಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಲಾಗುವುದು.

ಉತ್ಸವಕ್ಕೆ ಅಂದಾಜು 25 ಲಕ್ಷ ರೂಪಾಯಿ ಖರ್ಚಾಗಬಹುದು’ ಎಂದು ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು. ಚೇತನ್ ಕುಲಕರ್ಣಿ, ಕನ್ನುಬಾಯಿ ಠಕ್ಕರ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT