ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಜ್ಜು

Last Updated 15 ಜನವರಿ 2012, 9:55 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ನಾನಾವಾಡಿ ಬಳಿಯ ಮೈದಾನವು ಜ.15 ರಿಂದ ಆರಂಭಗೊಳ್ಳಲಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಜ್ಜುಗೊಂಡಿದೆ. ದೇಶ-ವಿದೇಶಿ ತಂಡಗಳು ಶನಿವಾರ ರಾತ್ರಿ ನಗರಕ್ಕೆ ಬಂದಿಳಿಯಲಿವೆ.

ಇಂಗ್ಲೆಂಡ್, ಅಮೆರಿಕಾ, ಟರ್ಕಿ, ಡೆನ್ಮಾಕ್, ಸಿಂಗಾಪುರ, ಐರ‌್ಲೆಂಡ್, ನೆದರಲ್ಯಾಂಡ್ ಸೇರಿದಂತೆ 22 ವಿದೇಶಿ ತಂಡಗಳ 53 ಪಟುಗಳು ಹಾಗೂ ಅಹ್ಮದಾಬಾದ್, ಮೈಸೂರು, ಜೋಧಪುರ, ತಮಿಳುನಾಡು, ಬೆಳಗಾವಿ, ಹೈದರಾಬಾದ್, ಚಾಮರಾಜನಗರ ಸೇರಿದಂತೆ ದೇಶದ 25 ತಂಡಗಳ 80 ಪಟುಗಳು ಉತ್ಸವದಲ್ಲಿ ಭಾಗವಹಿಸಲಿವೆ. ಇದರಲ್ಲಿ ಸ್ಥಳೀಯ ಎರಡು ತಂಡಗಳು ಇರುವುದು ವಿಶೇಷ.

ಪರಿವರ್ತನ ಪರಿವಾರ ವತಿಯಿಂದ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಜ.15 ಮತ್ತು 16ರಂದು ನಡೆಯಲಿರುವ ಉತ್ಸವ ವೀಕ್ಷಣೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ. ಉತ್ಸವ ನಡೆಯುವ ಸ್ಥಳಕ್ಕೆ ಸಿಟಿ ಬಸ್ ವ್ಯವಸ್ಥೆ ಮಾಡಲಾಗಿದೆ. ನಗರದ ಎಲ್ಲ ಬಡಾವಣೆಗಳಿಂದಲೂ ಬಸ್ ಬಿಡಲಾಗಿದೆ.

ಜ.15 ರಂದು ಸಂಜೆ 6.30 ರಿಂದ ರಾತ್ರಿ 9ರ ವರೆಗೆ ರಾತ್ರಿ ವೇಳೆ ಗಾಳಿಪಟ ಹಾರಿಸಲಾಗುವುದು. ಗಾಳಿಪಟ ಉತ್ಸವದ ಇನ್ನೊಂದು ವಿಶೇಷವೆಂದರೆ ರಾಜ್ಯ ಹಾಗೂ ಬೇರೆ ರಾಜ್ಯದ ಹೆಸರಾಂತ ತಿಂಡಿ-ತಿನಿಸುಗಳ ಮಳಿಗೆಗಳನ್ನೂ ತೆರೆಯಲಾಗುತ್ತಿದೆ.

ದಾವಣಗೆರೆಯ ಬೆಣ್ಣೆದೋಸಾ, ಸವಣೂರು ಖಾರಾ, ಕೊರ್ತಿ ಕೊಲ್ಲಾರದ ಮೊಸರವಲಕ್ಕಿ, ಗುಳೆದಗುಡ್ಡದ ಎಣ್ಣೆ ಬದನೆಕಾಯಿ, ಕೊಲ್ಲಾಪುರದ ರಾಜಾಭಾವು ಬೇಲ್, ಪಡತರೆ ಮಿಸಳ, ಐನಾಪುರದ ಪೆಡಾ, ಗೋಕಾಕಿನ ಕರಡಂಟು, ಪಂಜಾಬಿ ಲಸ್ಸಿ ಸೇರಿದಂತೆ ಹಲವು ಬಗೆಯ ತಿನಿಸುಗಳ ತಯಾರಕರು ಮಳಿಗೆ ತೆರೆಯಲಿದ್ದಾರೆ. ಗಾಳಿಪಟ ಹಾರಾಟ ವೀಕ್ಷಣೆಯ ಜೊತೆಗೆ ತಿಂಡಿಗಳ ಸವಿಯನ್ನೂ ಸವಿಯಬಹುದಾಗಿದೆ.

ಒಟ್ಟು 200 ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ 50 ತಿಂಡಿ-ತಿನಿಸುಗಳಿಗೆ, ಕೆಲವನ್ನು ಸ್ವಸಹಾಯ ಹಾಗೂ ಸ್ತ್ರೀಶಕ್ತಿ ಗುಂಪುಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಹಾಗೂ ವಿವಿಧ ವಸ್ತುಗಳ ಉತ್ಪಾದಕರಿಗೆ ನೀಡಲಾಗಿದೆ.

ಉತ್ಸವ ವೀಕ್ಷಣೆಗೆ ಆಗಮಿಸುವ ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡು ನಾಲ್ವರು ವೈದ್ಯರು, ನರ್ಸ್ ಹಾಗೂ ಇತರೆ ಸಿಬ್ಬಂದಿ ಒಳಗೊಂಡ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದೆ. ಎರಡು ಅಂಬುಲೆನ್ಸ್ ಹಾಗೂ ಮೂರು ಅಗ್ನಿ ಶಾಮಕ ವಾಹನಗಳು ಇರಲಿವೆ.
 
ಸಂಚಾರ ನಿರ್ವಹಣೆಗೆ ಪೊಲೀಸ್ ಸಿಬ್ಬಂದಿಯಲ್ಲದೇ ಖಾಸಗಿಯಾಗಿ 200 ಭದ್ರತಾ ಸಿಬ್ಬಂದಿಯನ್ನೂ ನೇಮಿಸಲಾಗಿದ್ದು, ಸುಗಮ ಸಂಚಾರಕ್ಕಾಗಿ `ಓನ್‌ವೇ~ ಸಂಚಾರ ವ್ಯವಸ್ಥೆ ಮಾಡಲಾಗಿದೆ. 2 ಸಾವಿರದಷ್ಟು ವಾಹನಗಳ ಪಾರ್ಕಿಂಗ್ ಮಾಡಬಹುದಾಗಿದೆ.

ಉತ್ಸವ ಸ್ಥಳದಿಂದಲೇ ಸುದ್ದಿಗಳನ್ನು ಕಳುಹಿಸಲು ಅನುವಾಗುವಂತೆ ಮಾಧ್ಯಮ ಕೇಂದ್ರ ತೆರೆಯಲಾಗಿದೆ. ಉತ್ಸವ ವೀಕ್ಷಣೆಗೆ ಆಗಮಿಸುವ ಜನರಿಗೆ ಟೆಂಟ್ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು ಪೂರೈಕೆಗೂ ಕ್ರಮಕೈಗೊಳ್ಳಲಾಗಿದೆ.

ಕಳೆದ ಬಾರಿ ಹೆಚ್ಚಿನ ಬೆಲೆಗೆ ತಿಂಡಿಗಳನ್ನು ಮಾರಾಟ ಮಾಡಿದ್ದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಪ್ರತಿ ತಿಂಡಿಗೂ ದರ ನಿಗದಿ ಪಡಿಸಲಾಗಿದ್ದು, ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರದಂತೆ ಸೂಚಿಸಲಾಗಿದೆ. ಇದರ ಪರಿಶೀಲನೆಗೆ ತಂಡವೊಂದನ್ನು ರಚಿಸಲಾಗಿದೆ ಎಂದು ಶಾಸಕ ಅಭಯ ಪಾಟೀಲ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಉದ್ಘಾಟನೆ: ಜ.15 ರಂದು ಬೆಳಿಗ್ಗೆ 9 ಗಂಟೆಗೆ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ಕೆಆರ್‌ಡಿಸಿಎಲ್ ಚೇರಮನ್ ಕಳಕಪ್ಪ ಬಂಡಿ, ಬುಡಾ ಅಧ್ಯಕ್ಷ ಬಾಳಾಸಾಹೇಬ ಕಂಗ್ರಾಳಕರ ಭಾಗವಹಿಸಲಿದ್ದಾರೆ. ಶಾಸಕ ಅಭಯ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT