ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಯುವ ರಂಗು!

Last Updated 1 ಜನವರಿ 2014, 19:48 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ನಡೆಯು­ತ್ತಿ­ರುವ ಆರನೇ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ರಂಗು ತುಂಬಿರುವುದು ವಿದ್ಯಾರ್ಥಿಗಳ, ಯುವಜನರ ದೊಡ್ಡ ಸಮೂಹ. 750ಕ್ಕೂ ಹೆಚ್ಚು ವಿದ್ಯಾರ್ಥಿ­ಗಳು ಚಿತ್ರೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಇವರಲ್ಲಿ 550 ಜನರಿಗೆ ವಿದ್ಯಾರ್ಥಿ ಪಾಸ್‌ ಹಂಚಿಕೆ­ಯಾಗಿದ್ದರೆ, 250 ಮಂದಿ ಫಿಲ್ಮ್ ಕ್ಲಬ್‌ ವಿದ್ಯಾರ್ಥಿಗಳೂ ಇದ್ದಾರೆ.

‘ಹಿರಿಯರ ನಡುವೆ ಕುಳಿತು ಸಿನಿಮಾ ನೋಡುವುದು ಅದೃಷ್ಟ. ಅದರಲ್ಲೂ ನಮ್ಮ ನೆಚ್ಚಿನ ಸಿನಿಮಾ ನಿರ್ದೇಶಕರನ್ನು ಭೇಟಿಯಾಗುವ ಅವಕಾಶ ಸಿಕ್ಕಿರುವುದು ನಮ್ಮ ಯೋಚನಾ ಲಹರಿಯನ್ನೇ ಬದ­ಲಾಯಿಸಿದೆ’ ಎನ್ನುತ್ತಾರೆ ಸಿನಿಮಾ ವಿದ್ಯಾರ್ಥಿನಿ ಅಮೃತ.

‘ತರಗತಿಯಲ್ಲಿ ಕುಳಿತು ಲೈಟ್‌, ಕ್ಯಾಮೆರಾ, ಆ್ಯಕ್ಷನ್‌ಗಳ ಕಲಿಕೆಯೇ ಬೇರೆ.ವಿಶ್ವದ ಶ್ರೇಷ್ಠ ಚಿತ್ರಗಳನ್ನು ಚಿತ್ರೋ­ತ್ಸವಗಳಲ್ಲಿ ನೋಡುವ ಅನು­ಭವವೇ ಬೇರೆ. ‘ವರ’ ರೀತಿಯ ಸಿನಿಮಾ ದೃಶ್ಯ ಮಾಧ್ಯಮದ ಸಾಧ್ಯತೆ­ಗಳ ಬಗ್ಗೆ ನಮಗೆ ಮೂಡಿಸಿದ ತಿಳಿವಳಿಕೆ­ಯನ್ನು ಚಿತ್ರೋ­ತ್ಸವ­ಗಳಲ್ಲಷ್ಟೇ ಪಡೆ­ಯಲು ಸಾಧ್ಯ’ ಎಂದು ‘ಆದರ್ಶ ಚಲನ­ಚಿತ್ರ ಸಂಸ್ಥೆ’­ಯಿಂದ ಬಂದಿದ್ದ ವಿದ್ಯಾರ್ಥಿ­ಗಳು ಒಕ್ಕೊರಲಿ­­ನಿಂದ ಹೇಳಿದರು.

ನಿರ್ದೇಶಕರಾಗುವ ಕನಸು ಹೊತ್ತು ಚಿತ್ರೋತ್ಸವಕ್ಕೆ ಬಂದಿದ್ದ ತರುಣ್‌, ‘ಕೇವಲ ಕನ್ನಡ ಹಾಗೂ ಭಾರತೀಯ ಸಿನಿಮಾಗಳನ್ನು ನಾವು ನೋಡಿದರೆ ಅತ್ಯುತ್ತಮ ಚಿತ್ರಗಳನ್ನು ಕೊಡಲು ಸಾಧ್ಯವಿಲ್ಲ. ಪ್ರಪಂಚದ ಸಿನಿಮಾಗಳು ನಮ್ಮನ್ನು ಸಾಂಪ್ರದಾಯಿಕ ನೆಲೆಗಟ್ಟಿ­ನಿಂದ ಹೊರಗೆ ನೋಡುವ ಸಾಮರ್ಥ್ಯ ಕಲಿಸುತ್ತವೆ. ಇದರ ಉಪಯೋಗ ಸಿನಿಮಾ ಮಾಡುವವರಿಗೂ ಹಾಗೂ ಪ್ರೇಕ್ಷಕರಿಗೂ ಇದೆ’ ಎಂದರು.

‘‘ಚಲನಚಿತ್ರೋ­ತ್ಸವದಲ್ಲಿ ತೃತೀಯ ಜಗತ್ತಿನಲ್ಲಿ ನಿರ್ಮಾಣಗೊಳ್ಳುವ ಸಿನಿಮಾ­ಗಳಿಗೆ ಬೇಡಿಕೆ ಹೆಚ್ಚಿದೆ. ಮೇಕಪ್‌ ಹಾಕಿಕೊಂಡ ನಾಯಕ–ನಾಯಕಿಯರಿಗೆ ಕ್ಯಾಮೆರಾ ಹಿಡಿಯಲು ಹಪಹಪಿಸುವ ಸಿನಿಮಾ ಮಂದಿಯೇ ನಮ್ಮಲ್ಲಿ ಹೆಚ್ಚು. ಇಂಥ ಸಿನಿಮಾಗಳ ನಡುವೆ– ಆಫ್ಘನ್‌, ಇರಾನ್‌, ಇರಾಕ್‌ನ ಚಲನಚಿತ್ರಗಳು ನಮಗೆ ಹೊಸ ದಾರಿಗಳನ್ನು ತೋರಿಸುವಂತಿವೆ. ಇತ್ತೀಚೆಗೆ, ಕನ್ನಡ ಸಿನಿಮಾಗಳಲ್ಲೂ ‘ಜಟ್ಟ’, ‘ಲೂಸಿಯಾ’, ‘ಭಾರತ್‌ ಸ್ಟೋರ್ಸ್‌’ನಂತಹ ಸಿನಿಮಾ ಪ್ರಯೋಗ­ಗಳು ನಡೆದಿರುವುದನ್ನು ಚಿತ್ರೋತ್ಸವ ಪರಿಣಾಮಕಾರಿಯಾಗಿ ಬಿಂಬಿಸಿದೆ’’ ಎನ್ನುವುದು ಅಲಹಾಬಾದ್‌ ವಿಶ್ವ­ವಿದ್ಯಾಲಯ­ದಲ್ಲಿ ಕಾಗ್‌ನಿಟಿವ್‌ ವಿಜ್ಞಾನ ಓದಿ, ಈಗ ಬೆಂಗಳೂರಿನಲ್ಲಿ ನೆಲೆಸಿರುವ ಅಕ್ಷತಾ ಅವರ ಅನಿಸಿಕೆ.

ಭರ್ತಿಯಾದ ಮಲ್ಟಿಫ್ಲೆಕ್ಸ್‌: ‘ಫನ್ ಸಿನಿಮಾ’ ಮತ್ತು ‘ಲಿಡೋ’ಗಳಲ್ಲಿ ಪ್ರದ­ರ್ಶನ­ಗೊಂಡ ಬಹುತೇಕ ಸಿನಿಮಾಗಳು ಕಳೆದ ನಾಲ್ಕೈದು ವರ್ಷಗಳಲ್ಲಿ ನಿರ್ಮಾಣಗೊಂಡಿವೆ. ಆದ್ದರಿಂದ ಇಲ್ಲಿ ಹುಡುಗ–ಹುಡುಗಿಯರ ಸಂಖ್ಯೆ ಹೆಚ್ಚಾ­ಗಿತ್ತು. ಸಿನಿಮಾ ನಿರ್ದೇಶಕರ ಸುತ್ತ ಸುತ್ತಿ­ಕೊಳ್ಳುತ್ತಿದ್ದ ಯುವಕ–ಯುವತಿ­ಯರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದುದು ವಿಶೇಷ­ವಾಗಿತ್ತು. ಪ್ರಿಯ­ದರ್ಶಿನಿ ಚಿತ್ರ­ಮಂದಿರದಲ್ಲಿ ಪ್ರದರ್ಶನ­ಗೊಂಡ ಬಿಮಲ್‌ ರಾಯ್‌ ನಿರ್ದೇ­ಶನದ ಚಿತ್ರ­ಗಳು ಹಾಗೂ ರಾಜ್‌­ಕುಮಾರ್‌ ಅಭಿ­ನಯದ ಸಿನಿಮಾಗಳು ಹೆಚ್ಚಾಗಿ ಹಿರಿಯ ಪ್ರೇಕ್ಷಕರನ್ನು ನೆಚ್ಚಿಕೊಂಡಂತಿದ್ದವು.

ಈ ಚಿತ್ರೋತ್ಸವ ಕೇವಲ ಬೆಂಗಳೂರಿಗೆ ಸೀಮಿತವಾದ ಉತ್ಸವವಾಗಿ ಈಗ ಉಳಿದಿಲ್ಲ. ಸಾಹಿತ್ಯ, ಸಂಗೀತ, ಸಿನಿಮಾ, ವಿಜ್ಞಾನ ಸೇರಿದಂತೆ ಬೇರೆ ಬೇರೆ ಆಸಕ್ತಿಯ ಯುವಜನ ದೇಶದ ಬೇರೆ ಬೇರೆ  ಊರುಗಳಿಂದ ಬಂದು ಬೆಂಗಳೂರಿನಲ್ಲಿ ಸಿನಿಮಾ ನೋಡಿದ್ದಾರೆ. ಈ ನೆಲೆಗಟ್ಟಿನಲ್ಲಿ ಉತ್ಸವ ಯಶಸ್ವಿಯಾಗಿದೆ ಎಂದೇ ಹಲವರ ಅಭಿಪ್ರಾಯ.

ಈ ನೆಲದ ಸಮಸ್ಯೆಗಳೇ ಬೇರೆ
ಕಳೆದ ವರ್ಷದ ಚಲನಚಿತ್ರೋತ್ಸವದಲ್ಲಿ ಸಿನಿಮಾ ಅಧ್ಯಯನ ಮಾಡುವ ಯುವಕ–ಯುವತಿಯರ ಸಂಖ್ಯೆ ಹೆಚ್ಚಿತ್ತು. ಆದರೆ ಈ ಬಾರಿ ಸಿನಿಮಾ ಒಂದು ಆಸಕ್ತಿಯಷ್ಟೇ ಎನ್ನುವ ಹುಡುಗ– ಹುಡುಗಿಯರ ಸಂಖ್ಯೆ ಹೆಚ್ಚಾಗಿದೆ. ಇದು ಒಂದು ರೀತಿಯಲ್ಲಿ ಒಳ್ಳೆಯ ಬೆಳವಣಿಗೆ.

ಕೆಲವು ಹುಡುಗರು ‘ಇರಾಕ್‌, ಇರಾನ್‌ ತರಹದ ಚಿತ್ರಗಳು ಯಾಕೆ ಇಲ್ಲಿ ಬರುತ್ತಿಲ್ಲ’ ಎಂದು ನನ್ನನ್ನು ಕೇಳಿದರು. ಆದರೆ, ಅಂತಹ ಚಿತ್ರಗಳು ಇಲ್ಲಿ ಯಾಕೆ ನಿರ್ಮಾಣಗೊಳ್ಳಬೇಕು ಎನ್ನುವುದು ನನ್ನ ಪ್ರಶ್ನೆ. ಈ ನೆಲದ ಸಮಸ್ಯೆಗಳೇ ಬೇರೆ. ಸತ್ಯಜಿತ್‌ ರೈ, ಪುಟ್ಟಣ್ಣ ಕಣಗಾಲ್‌ ತರಹದವರು ಈ ನೆಲದ ಸಮಸ್ಯೆಗಳನ್ನೇ ಸಿನಿಮಾ ಮಾಡಿದ್ದಾರೆ. ಅಂದಹಾಗೆ, ಈ ಬಾರಿ ಚಿತ್ರೋತ್ಸವದಲ್ಲಿ ಕಾಣಿಸಿಕೊಂಡ ಯುವಜನತೆಯ ಕಣ್ಣಲ್ಲಿ ಒಂದು ರೀತಿಯ ಬೆರಗು ಇದೆ. ಇಷ್ಟೆಲ್ಲ ಜನ ಸಿನಿಮಾ ನೋಡಲು ಬರುತ್ತಾರೆ ಅಂದರೆ ಕನ್ನಡ ಸಿನಿಮಾದಲ್ಲಿ ಆಗುತ್ತಿರುವ ಪ್ರಯೋಗಗಳು ಕೂಡ ಕಾರಣ ಇರಬಹುದು.
–ಜಯತೀರ್ಥ, ಕನ್ನಡ ಸಿನಿಮಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT