ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಿಕ್ಷ ಪ್ರವಾಸ; ಶೀಘ್ರ ನನಸು

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

`ಪ್ರಾಯಶಃ ಈ ವರ್ಷದ ಕ್ರಿಸ್‌ಮಸ್ ವೇಳೆಗೆ ನಾನು ಮಗಳು ಮತ್ತು ಮಗನೊಂದಿಗೆ ಬಾಹ್ಯಾಕಾಶಕ್ಕೆ ಪ್ರವಾಸ ಹೋಗಲುಸಾಧ್ಯವಾಗಬಹುದು~ ಎನ್ನುತ್ತಾರೆ ಖ್ಯಾತ ಉದ್ಯಮಿ ಮತ್ತು `ವರ್ಜಿನ್ ಗ್ಯಾಲಕ್ಟಿಕ್~ ಸಂಸ್ಥಾಪಕ  ರಿಚರ್ಡ್ ಬ್ರಾನ್ಸನ್.

`ವರ್ಜಿನ್ ಗ್ಯಾಲಕ್ಟಿಕ್~ ಒಂದರಲ್ಲಿಯೇ 476 ಜನರು ಬಾಹ್ಯಾಕಾಶ ಪ್ರವಾಸಕ್ಕಾಗಿ ಟಿಕೆಟ್ ಕಾಯ್ದಿರಿಸಿದ್ದಾರೆ. ವರ್ಜಿನ್  ಸಂಸ್ಥೆಯು ಸ್ವತಃ ನಿರ್ಮಿಸಿರುವ ಬಾಹ್ಯಾಕಾಶ ವಿಮಾನ `ಸ್ಪೇಸ್‌ಶಿಪ್ 2~ ಮೂಲಕ ಗಗನ ಕುತೂಹಲಿಗಳಿಗೆ ಅಂತರಿಕ್ಷ ಪ್ರವಾಸದ ಅನುಭವವನ್ನು ಉಣಬಡಿಸಲಿದೆ. ಅಲಿಯಾಂಜ್ ಎಂಬ ಕಂಪೆನಿ ಪ್ರವಾಸಿಗರಿಗೆ ವಿಮಾ ಸೌಲಭ್ಯ ಒದಗಿಸಲೂ ಮುಂದೆ ಬಂದಿದೆ.

ಪ್ರವಾಸ ಹೇಗೆ?
ಅಂತರಿಕ್ಷ ಪ್ರವಾಸ ಎಂದ ಕೂಡಲೇ, ಗಗನಯಾತ್ರಿಗಳು ಕೈಗೊಳ್ಳುವ ಯಾನದ ರೀತಿಯಲ್ಲಿ ಇರುತ್ತದೆ ಎಂದು ಭಾವಿಸಬೇಡಿ. ಈ ಯಾನದಲ್ಲಿ ಪ್ರವಾಸಿಗರು 50,000 ಅಡಿ ಎತ್ತರದಲ್ಲಿರುವ ಭೂವಾತಾವರಣವನ್ನು ದಾಟಿ ಅಂತರಿಕ್ಷದ ಅಂಚನ್ನು ಸ್ಪರ್ಶಿಸಿ ಹಿಂದಿರುಗುತ್ತಾರೆ. ಗಗನಯಾತ್ರಿಗಳಿಗೆ ಆಗುವ ಎಲ್ಲಾ ಅನುಭವಗಳಾಗದಿದ್ದರೂ, ಭೂವಾತಾವರಣ ದಾಟಿ ಶೂನ್ಯದಲ್ಲಿ ತೇಲುವಾಗ ಐದು ನಿಮಿಷಗಳ ಕಾಲ ಪ್ರವಾಸಿಗರಿಗೆ ದೇಹ ತೂಕ ಕಳೆದುಕೊಂಡ ಅನುಭವ ಆಗುತ್ತದೆ.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿರುವ ಬೃಹತ್ ರೋಲರ್ ಕೋಸ್ಟರ್‌ನಲ್ಲಿ (ಜಾರು ಬಂಡಿ) ಕುಳಿತಾಗ ಆಗುವ ಅನುಭವವನ್ನು ಈ ಪ್ರವಾಸ ನೀಡಬಹುದು.

`ವರ್ಜಿನ್~ ಸಂಸ್ಥೆ ಒಂದು ಟಿಕೆಟ್‌ಗೆ 2 ಲಕ್ಷ ಡಾಲರ್ (ಸುಮಾರು ್ಙ1.5 ಕೋಟಿ ) ದರ ನಿಗದಿ ಪಡಿಸಿದೆ. ಬಾಹ್ಯಾಕಾಶಕ್ಕೆ ಪ್ರವಾಸ ಕೈಗೊಳ್ಳುವ ಅವಧಿ ಎರಡೂವರೆ ಗಂಟೆ ಆದರೂ, ಪ್ರವಾಸ ಎಂಬುದು ಒಟ್ಟು ಮೂರು ದಿನಗಳ ಕಾರ್ಯಕ್ರಮ. ಮೊದಲ ಎರಡು ದಿನಗಳ ಕಾಲ ಭೂಮಿಯಲ್ಲೇ ಪ್ರವಾಸಿಗರಿಗೆ ಸಿದ್ಧತೆ ಮತ್ತು ತರಬೇತಿಗಳನ್ನು ನೀಡಲಾಗುತ್ತದೆ.

ಮೂರನೇ ದಿನ ಇತರ ವಿಮಾನಗಳಂತೆ ರನ್‌ವೇನಿಂದ ಆಗಸಕ್ಕೆ ನೆಗೆಯುವ `ಸ್ಪೇಸ್‌ಶಿಪ್2 ರಾಕೆಟ್ ನೌಕೆ~  50,000ಅಡಿ ಎತ್ತರದಲ್ಲಿ  ಭೂ ವಾತಾವರಣ ದಾಟಿ ಅಂತರಿಕ್ಷ ತಲುಪುತ್ತದೆ. ವಾತಾವರಣ ದಾಟುವ ಮುನ್ನ ರಾಕೆಟ್ ನೌಕೆ ಕಾರ್ಯನಿರ್ವಹಿಸಲು ಆರಂಭಿಸುತ್ತದೆ. ಈ  ಸಂದರ್ಭದಲ್ಲಿ ಬಾಹ್ಯಾಕಾಶ ವಿಮಾನದ ವೇಗೋತ್ಕರ್ಷದ ಒತ್ತಡ ಹೆಚ್ಚಾಗುವುದರಿಂದ ಪ್ರಯಾಣಿಕರಿಗೆ ತೂಕ ಕಳೆದುಕೊಂಡ ಅನುಭವವಾಗುತ್ತದೆ.

ಭೂ ವಾತಾವರಣ ದಾಟಿ ಅಂತರಿಕ್ಷದ ಅಂಚನ್ನು ತಲುಪಿದ ಬಳಿಕ ಪ್ರವಾಸಿಗರು ಸೀಟ್ ಬೆಲ್ಟನ್ನು ತೆಗೆದು ವಿಮಾನದ ಒಳಗಡೆ ತೇಲಬಹುದು. ಅಂತರಿಕ್ಷದಿಂದ ದುಂಡಗಿನ ಭೂಮಿಯತ್ತ ದೃಷ್ಟಿ ಹಾಯಿಸಬಹುದು.  ಭೂಮಿಯನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು ಫೋಟೊವನ್ನೂ ಕ್ಲಿಕ್ಕಿಸಬಹುದು! ಅದುವರೆಗೂ ನೀಲಿ ಆಕಾಶವನ್ನು ಕಂಡಿದ್ದ ಪ್ರವಾಸಿಗರಿಗೆ ಸುತ್ತಲೂ ಕತ್ತಲಿನ ಆಕಾಶ ಗೋಚರಿಸುತ್ತದೆ.

ಅಮೆರಿಕದಾದ್ಯಂತ ಬಾಹ್ಯಾಕಾಶ ಪ್ರವಾಸೋದ್ಯಮದ ಏಜೆಂಟ್‌ಗಳು ಈಗಾಗಲೇ ಹುಟ್ಟಿಕೊಂಡಿದ್ದಾರೆ. ಎಲ್ಲಾ ಪ್ರಮುಖ ನಗರಗಳಲ್ಲಿ ಟಿಕೆಟ್ ಕಾಯ್ದಿರಿಸುವ ಕೇಂದ್ರಗಳಿವೆ.
ಒಮ್ಮೆ ಅಂತರಿಕ್ಷ ಪ್ರವಾಸ ಆರಂಭಗೊಂಡು ಇದಕ್ಕೆ ಇನ್ನಷ್ಟು ಹೆಚ್ಚು ಪ್ರಚಾರ ದೊರೆತರೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಬಾಹ್ಯಾಕಾಶ ಪ್ರವಾಸಯಾನ ಕೂಡ ಸಾಮಾನ್ಯ ವಿಮಾನಯಾನದಂತೆ ಆಗಲಿದೆ ಎಂದು ಏಜೆಂಟರೊಬ್ಬರು ಹೇಳುತ್ತಾರೆ.

`ವರ್ಜಿನ್~ ಒಂದೇ ಅಲ್ಲ...
ರಿಚರ್ಡ್ ಬ್ರಾನ್ಸನ್ ಅವರ `ವರ್ಜಿನ್ ಗ್ಯಾಲಾಕ್ಟಿಕ್~ ಹೊರತು ಪಡಿಸಿ ಇನ್ನಷ್ಟು ಹಲವು ಸಂಸ್ಥೆಗಳು ಅಂತರಿಕ್ಷ ಪ್ರವಾಸೋದ್ಯಮ ಆರಂಭಿಸಲು ಮುಂದೆ ಬಂದಿವೆ. ಎಲೊನ್ ಮಸ್ಕ್ ನೇತೃತ್ವದ ಸ್ಪೇಸ್‌ಎಕ್ಸ್, ಅಮಜಾನ್‌ಡಾಟ್‌ಕಾಮ್ ಸಂಸ್ಥಾಪಕ ಜೆಫ್ರಿ ಪಿ ಬೆಜೊಸ್ ಅವರ ಸಂಸ್ಥೆ, ಮೈಕ್ರೊಸಾಫ್ಟ್ ಸಹಸಂಸ್ಥಾಪಕ ಪೌಲ್ ಜಿ ಅಲೆನ್ ಅವರ ಸಂಸ್ಥೆಯೂ ಬಾಹ್ಯಾಕಾಶಕ್ಕೆ ಪ್ರವಾಸಿಗರನ್ನು ಕರೆದೊಯ್ಯಲು ಸಿದ್ಧತೆ ನಡೆಸಿದೆ.

ಮೊಜಾವೆ ಮೂಲದ ಎಕ್ಸ್‌ಸಿಒಆರ್ ಏರೊಸ್ಪೇಸ್ ಸಂಸ್ಥೆಯಲ್ಲಿ ಈಗಾಗಲೇ 100 ಜನರು ಆಸನಗಳನ್ನು ಕಾಯ್ದಿರಿಸಿದ್ದಾರೆ. ಪ್ರತಿ ಟಿಕೆಟ್‌ಗೆ  95,000 ಡಾಲರ್ (್ಙ 49,40,000) ದರವನ್ನು ಸಂಸ್ಥೆ ವಿಧಿಸಿದೆ. 2013ರಲ್ಲಿ ಸಂಸ್ಥೆಯು ಅಂತರಿಕ್ಷ ಪ್ರವಾಸೋದ್ಯಮವನ್ನು ಆರಂಭಿಸಲಿದೆ.ವಿಯೆನ್ನಾದ ಆಂಡ್ ಸ್ಪೇಸ್ ಅಡ್ವೆಂಚರ್ಸ್‌ ಲಿಮಿಟೆಡ್ ಕೂಡ ಪ್ರತಿ ಟಿಕೆಟ್‌ಗೆ 1.1ಲಕ್ಷ ಡಾಲರ್  (್ಙ 57.2 ಲಕ್ಷ ) ದರದಲ್ಲಿ ಪ್ರವಾಸಿಗರನ್ನು ನಭಕ್ಕೆ ಕೊಂಡೊಯ್ಯಲು 200 ಜನರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಉದ್ದೇಶಕ್ಕಾಗಿಯೇ ಅದರ ಪಾಲುದಾರ ಸಂಸ್ಥೆ ಟೆಕ್ಸಾಸ್‌ನ  ಅರ್ಮಾಡಿಲೊ ಏರೊಸ್ಪೇಸ್ ಸಂಸ್ಥೆಯು ಪೈಲಟ್ ರಹಿತ ವಿಮಾನ ರೂಪಿಸುವ ಯೋಜನೆಯಲ್ಲಿದೆ.

ಶ್ರೀಮಂತರಿಗಷ್ಟೇ ಅಲ್ಲ... 
ಅಂತರಿಕ್ಷ ಪ್ರವಾಸೋದ್ಯಮದ ಕಲ್ಪನೆಯೇ ಅಸಾಮಾನ್ಯವಾದದ್ದು. ಬಾಹ್ಯಾಕಾಶ ಪ್ರವಾಸಕ್ಕಾಗಿ ಜನರು ಭಾರಿ ಮೊತ್ತವನ್ನೇ ತೆರಬೇಕು. ಹೀಗಾಗಿ ಅಂತರಿಕ್ಷ ಪ್ರವಾಸ ಕೈಗೊಳ್ಳುವುದು ಆಗರ್ಭ ಸಿರಿವಂತರಿಗೆ ಮಾತ್ರ ಸಾಧ್ಯ ಎಂಬ ಅಭಿಪ್ರಾಯ ಇದೆ.
ಇದಕ್ಕೆ ಪೂರಕವೆಂಬಂತೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರವಾಸ ಹೋಗಲು ಇದುವರೆಗೆ ವಿಶ್ವದ ಏಳು ಶ್ರೀಮಂತರು ಮಾತ್ರ ಕೋಟ್ಯಂತರ ರೂಪಾಯಿಗಳನ್ನು ಪಾವತಿ ಮಾಡಿ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ.

 ಈಗ ಪ್ರಸ್ತಾಪಿಸಲಾಗಿರುವ ಬಾಹ್ಯಾಕಾಶ ಪ್ರವಾಸಕ್ಕೆ ಅಷ್ಟೊಂದು ಹಣ ತೆರಬೇಕಾಗಿಲ್ಲವಾದರೂ, ವಿವಿಧ ಸಂಸ್ಥೆಗಳು ನಿಗದಿ ಪಡಿಸಿರುವ ದರಗಳು ಸಾಮಾನ್ಯ ಜನರಿಗೆ ಕೈಗೆ ಎಟಕುವಂತಿಲ್ಲ. ಮುಂದಿನ ದಿನಗಳಲ್ಲಿ ದರ ಇಳಿಕೆಯಾದರೆ ಇನ್ನಷ್ಟು ಹೆಚ್ಚು ಜನರು ಅಂತರಿಕ್ಷ ಪ್ರವಾಸ ಕೈಗೊಳ್ಳಲು ಇಚ್ಛಿಸಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.

    
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT