ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಿಕ್ಷ್- ದೇವಾಸ್ ಒಪ್ಪಂದ: ಇಸ್ರೊ ವಿಜ್ಞಾನಿಗಳ ಅಸಮಾಧಾನ

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

 ಬೆಂಗಳೂರು (ಪಿಟಿಐ): ಅಂತರಿಕ್ಷ್- ದೇವಾಸ್ ಒಪ್ಪಂದದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಘನತೆಗೆ ಕುಂದುಂಟಾಗಿದೆ ಎಂದು ವಿಜ್ಞಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ ಒಪ್ಪಂದ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಇಸ್ರೊ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಸೇರಿದಂತೆ ನಾಲ್ಕು ಮಂದಿ ವಿಜ್ಞಾನಿಗಳನ್ನು ಸರ್ಕಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸದಂತೆ ನಿರ್ಬಂಧ ಹೇರಿದ್ದು, ಇದರಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಚಲನ ಉಂಟಾಗಿದೆ.

`ಇದೊಂದು ದುರದೃಷ್ಟಕರ ಘಟನೆ~ ಎಂದು ಹೆಸರು ಹೇಳಲು ಇಚ್ಛಿಸದ ವಿಜ್ಞಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. `ಇಷ್ಟು ವರ್ಷಗಳ ಇಸ್ರೊ ಸಾಧನೆ ಈ ಬೆಳವಣಿಗೆಯಿಂದ ಮಂಕಾಗಿದೆ~ ಎಂದು ಮತ್ತೊಬ್ಬ ವಿಜ್ಞಾನಿ ಹೇಳಿದ್ದಾರೆ.
ಈ ಕುರಿತು ಇಸ್ರೊದ ಮತ್ತೊಬ್ಬ ಮಾಜಿ ಅಧ್ಯಕ್ಷ ಯು.ಆರ್.ರಾವ್ ಪ್ರತಿಕ್ರಿಯೆ ನೀಡಿ, `ವಿವಾದ ಕುರಿತು ನನಗೇನೂ ಗೊತ್ತಿಲ್ಲ~ ಎಂದಿದ್ದಾರೆ.

ಕೇಂದ್ರ ಸರ್ಕಾರದ ತೀರ್ಮಾನದ ಬಗ್ಗೆ ಗುರುವಾರವೂ ಪ್ರತಿಕ್ರಿಯೆ ನೀಡಿರುವ ನಾಯರ್ `ಇದೊಂದು ದುರುದ್ದೇಶಪೂರಿತ ಕ್ರಮ~ ಎಂದು ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ಅಂದಾಜು ಮಾಡಿರುವ ಪ್ರಕಾರ ಸರ್ಕಾರದ ಖಜಾನೆಗೆ ಈ ಒಪ್ಪಂದದಿಂದ ಭಾರಿ ನಷ್ಟ ಆಗಿದೆ ಎನ್ನುವುದೇ ಸುಳ್ಳು. ಅದರ ಅಂದಾಜು ಊಹೆಗೆ ನಿಲುಕದ್ದು~ ಎಂದು ಆಕ್ಷೇಪಿಸಿದ್ದಾರೆ.

`ಇಸ್ರೊ ಅಧ್ಯಕ್ಷ ಕೆ.ರಾಧಾಕೃಷ್ಣನ್ ವೈಯಕ್ತಿಕ ಲಾಭಕ್ಕಾಗಿ ಕೇಂದ್ರ ಸರ್ಕಾರಕ್ಕೆ ಸುಳ್ಳು ಮಾಹಿತಿ ಕೊಟ್ಟು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಅಂತರಿಕ್ಷ್- ದೇವಾಸ್ ಒಪ್ಪಂದವನ್ನು ರದ್ದು ಮಾಡುವ ಪ್ರಸ್ತಾವ ಇಟ್ಟಿದ್ದೇ ರಾಧಾಕೃಷ್ಣನ್. ಅವರು ಅಧ್ಯಕ್ಷರಾದ ನಂತರ ಇಲ್ಲ-ಸಲ್ಲದ ಮಾಹಿತಿಯನ್ನು ಬಾಹ್ಯಾಕಾಶ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನೀಡಿದರು. ಬೇಕಾಬಿಟ್ಟಿ ನಿರ್ಧಾರಗಳನ್ನು ತೆಗೆದುಕೊಂಡು, ನಂತರ ಅದಕ್ಕೆ ಪೂರಕವಾದ ಸಮರ್ಥನೆಗಳನ್ನು ನೀಡುವ ಕೆಲಸ ಮಾಡಿದ್ದಾರೆ~ ಎಂದು ಅವರು ದೂರಿದರು.

ಈ ವಿಷಯ ತಿಳಿಯದ ಅನೇಕರು ತರಂಗಾಂತರ ಮತ್ತು ಉಪಗ್ರಹ ಟ್ರಾನ್ಸ್‌ಪಾಂಡರ್‌ಗಳ ಗುತ್ತಿಗೆ ಒಪ್ಪಂದ ಕುರಿತು ಮಾತನಾಡುತ್ತಿದ್ದಾರೆ. ಇವೆರಡೂ ಪ್ರತ್ಯೇಕ ವಿಚಾರಗಳು. ಇಸ್ರೊ ಕೇವಲ ಟ್ರಾನ್ಸ್‌ಪಾಂಡರ್‌ಗಳನ್ನು ಗುತ್ತಿಗೆ ನೀಡುವ ಕೆಲಸ ಮಾಡುತ್ತದೆ.
 
ಇಷ್ಟಕ್ಕೂ ಆಪರೇಟರುಗಳಿಗೆ ಇಸ್ರೊ ಟ್ರಾನ್ಸ್‌ಪಾಂಡರ್‌ಗಳನ್ನು ಹಂಚಿಕೆ ಮಾಡಿದರೂ ಅದಕ್ಕೆ ಕೇಂದ್ರ ದೂರಸಂಪರ್ಕ ಇಲಾಖೆಯ ಪರವಾನಗಿ ಬೇಕಾಗುತ್ತದೆ. ಅಲ್ಲಿಯವರೆಗೂ ಅವುಗಳನ್ನು ಬಳಸಲು ಸಾಧ್ಯ ಇಲ್ಲ. ಒಪ್ಪಂದದ ಪ್ರಕಾರವೇ 2009ರಲ್ಲೂ ದೇವಾಸ್, ದೂರಸಂಪರ್ಕ ಇಲಾಖೆ ಪರವಾನಗಿ ಪಡೆಯಲು ಪ್ರಯತ್ನ ನಡೆಸಿತ್ತು. ಆಗ ಪರವಾನಗಿ ಸಿಕ್ಕಿರಲಿಲ್ಲ ಎಂದು ನಾಯರ್ ಹೇಳಿದರು.

ಈ ಪ್ರಕರಣ ತರಂಗಾಂತರ ಬಳಕೆ ಸೇರಿದಂತೆ ಇತರ ವಿಚಾರಗಳಿಗೆ ಸಂಬಂಧಿಸಿದ್ದಲ್ಲ. ಹಾಗೆಯೇ ಈ ಒಪ್ಪಂದದಿಂದ 20 ಸಾವಿರ ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ಅಂದಾಜು ಮಾಡುವುದು ಕೂಡ ಸರಿಯಲ್ಲ.

ಇಸ್ರೊ ಬಜೆಟ್ ಇರುವುದೇ ಸುಮಾರು ರೂ 4,000 ಕೋಟಿ. ಹಾಗಿದ್ದ ಮೇಲೆ ಇಸ್ರೊ ಹೇಗೆ ಕೇವಲ ಎರಡು ಟ್ರಾನ್ಸ್‌ಪಾಂಡರ್‌ಗಳನ್ನು ಸರಬರಾಜು ಮಾಡುವ ಮೂಲಕ ರೂ 20 ಸಾವಿರ ಕೋಟಿ ಗಳಿಸುತ್ತದೆ. ಇದು ನಿಜಕ್ಕೂ ನಿಜವೇ ಆಗಿದ್ದರೆ ಇಸ್ರೊ ಏಕೆ ಸರ್ಕಾರ ಕೊಡುವ ಹಣವನ್ನು ಅವಲಂಬಿಸಬೇಕಿತ್ತು ಎಂದೂ ನಾಯರ್ ಪ್ರಶ್ನಿಸಿದ್ದಾರೆ.

ಟೀಕೆ ಮಾಡುವವರು ಮೊದಲು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟ್ರಾನ್ಸ್‌ಪಾಂಡರ್‌ಗಳ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಬೇಕು. ಒಪ್ಪಂದ ಕುರಿತ ತಪ್ಪು ಗ್ರಹಿಕೆಗಳಿಂದಾಗಿ ಅದನ್ನು ದೊಡ್ಡ ಹಗರಣ ಎಂದು ಬಿಂಬಿಸುತ್ತಿದ್ದು, ಇದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT