ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ ಕಾಲೇಜು ಯುವಜನೋತ್ಸವ

Last Updated 19 ಜನವರಿ 2013, 9:33 IST
ಅಕ್ಷರ ಗಾತ್ರ

ರಾಯಚೂರು: ಶಿವಧನಸ್ಸು ಮುರಿದವರು ಯಾರು?.... ಸರ್ ನಾನಂತೂ ಮುರಿದಿಲ್ಲ ಸರ್!  ಚೌಡಯ್ಯನವರ ಪೀಟಿಲು ಕೇಳಿದ್ದೀಯಾ...? ಹೌದು ಸರ್ ನಾನು  ಕೇಳಿದೆ ಅವ್ರ ಕೋಡೋದಿಲ್ಲ ಅಂದ್ರು...!

ದೋಸ್ತ್ ಯಾಕೋ ನನ್ನ ಹೆಂಡ್ತಿ ದಿನಾ 100 ರೂಪಾಯಿ ಕೇಳ್ತಾಳೋ? ಯಾಕಂತೆ? ಅದೇ ನನ್ಗೂ ಗೊತ್ತಾಗ್ತಿಲ್ಲ. ಒಮ್ಮೆ ಕೊಟ್ಟಾದ್ರು ನೋಡಬೇಕ್ಬಿದೆ!

ಫ್ರೆಂಡ್ ನಾನು ಈ ಊರಾಗಿನ ಎಲ್ಲಾ ಆಸ್ಪತ್ರೆಯಲ್ಲಿದ್ದು ಬಂದಿದ್ದೇನೆ. ಹೌದಾ! ಹೆರಿಗೆ ಆಸ್ಪತ್ರೆಯಲ್ಲೂ ಇದ್ದ ಬಂದಿಯೇನೋ ನೀನು? ಹೌದು ನಾನು ಹುಟ್ಟಿದ್ದೇ ಅಲ್ಲೇ!

ಬನ್ನಿ ಬನ್ನಿ ಅಂಕಲ್ ಕುತ್ಕೊಳ್ರಿ. ನೀರು ಕುಡಿತಿರೇನ್? ಬೇಡಪ್ಪ ಬೇಡ. ಬಾಯಾರಿಕೆ ಆಗಿಲ್ಲ. ಇಲ್ಲ ಅಂಕಲ್ ನೀವ್ ನೀರು ಕುಡಿರಿ ಒಂದು ಗ್ಲಾಸ್ ಕೊಡ್ತೀನಿ. ಯಾಕಪ್ಪ ನಾನು ನೀರು ಕುಡಿಯೋದನ್ನ ಹಿಂಗ್ ನೋಡ್ತಿದಿ.. ಇಲ್ಲಾ ಅಂಕಲ್ ನಮ್ಮಪ್ಪ ಆವಾಗ ಆವಾಗ ಮನೆಲಿ ಮಾತಾಡ್ತಿದ್ರು... ನೀವು ನೀರು ಕುಡಿಯುವಾಗ ನಾಯಿ ಬಾಯಿ ಛಪ್ಪರಿಸಿದಂಗ ಛಪ್ಪರಿಸ್ತಾರ  ಅಂಥ. ಅದ್ಕ ನೋಡೋಣ ಅಂಥ ನೋಡ್ತಿದ್ದೆ!( ಮಕ್ಕಳ ಮುಂದೆ ಏನು ಹೇಳಬಾರದೋ ಅದನ್ನ ಹೇಳಿದ್ರೆ ಆಗೋ ಅದ್ವಾನಕ್ಕೆ ಉದಾಹರಣೆ)

ಹೀಗೆ ಒಂದರ ಹಿಂದೊಂದರಂತೆ ಹಾಸ್ಯ ಚಟಾಕಿಗಳ ಬಂಡಿ ಸಾಗಿದ್ದು ಇಲ್ಲಿನ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಶುಕ್ರವಾರ ಕೃಷಿ ವಿವಿ ಹಾಗೂ ಕೃಷಿ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಅಂತರ ಮಹಾವಿದ್ಯಾಲಯ ಯುವಜನೋತ್ಸವ-2012-13ರ ಉದ್ಘಾಟನೆ ಸಮಾರಂಭದಲ್ಲಿ.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಕೃಷಿ ಸಂಶೋಧಕರು, ಮೂಲತಃ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನವರು ಹಾಗೂ ಬೆಂಗಳೂರಿನ ಏಷ್ಯಾ ಫೆಸಿಪಿಕ್ ನುನ್‌ಹೇಮ್ಸ ಸಂಶೋಧನಾ ಮುಖ್ಯಸ್ಥ ಡಾ.ಶರಣ್ ಅಂಗಡಿ ಅವರು ಈ ಹಾಸ್ಯ ಚಟಾಕಿ ಹಾರಿಸುವ ಮೂಲಕ ಯುವಜನೋತ್ಸವಕ್ಕೆ ಆಗಮಿಸಿದ್ದ ವಿವಿಧ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ನಗೆಗಡಲಲ್ಲಿ ತೇಲಿಸುವ ಮೂಲಕ ಯುವಜನೋತ್ಸವವನ್ನು ಅರ್ಥಪೂರ್ಣವಾಗಿ ಉದ್ಘಾಟಿಸಿದರು. ಧಾರವಾಡದ ಕೃಷಿ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಜೀವನದ ಅನುಭವ, ಅಧ್ಯಾಪಕರ ಮಾರ್ಗದರ್ಶನ ಹಂಚಿಕೊಂಡರು.

ಸಮಯ ಪ್ರಜ್ಞೆ ಬೇಕು: ಜೀವನದಲ್ಲಿ ಏನೇ ಸಾಧನೆ ಮಾಡಬೇಕಾದರೂ ಸಮಯಪ್ರಜ್ಞೆ ಅವಶ್ಯ. ಪ್ರತಿ ಹಂತದಲ್ಲೂ ಸಮಯ ಪ್ರಜ್ಞೆಯಿಂದ ನಡೆದುಕೊಂಡರೆ ಅದೇ ಸಾಧನೆಗೆ ಬುನಾದಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗ್ರಾಮೀಣ ಪ್ರದೇಶದಿಂದ ಬಂದವರು ಎಂಬ ಕೀಳಿರಿಮೆ ಬೇಡ. ಮನುಷ್ಯನಿಗೆ ಆತ್ಮಗೌರವ, ಸಾಧನೆ ಮಾಡುವ ಛಲ ಇರಬೇಕು. ಉತ್ತಮ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಕೃಷಿ ಪದವಿ ಶಿಕ್ಷಣ ಪೂರ್ಣ ಗೊಳಿಸಿದ ಬಳಿಕ ಜನರಿಗೆ ವಿಷಯ ಜ್ಞಾನ ತಿಳಿಸಲು ಲೇಖನ ಬರೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ಧ ಕೃಷಿ ವಿವಿಯ ಕುಲಪತಿ ಡಾ. ಬಿ.ವಿ ಪಾಟೀಲ್ ಮಾತನಾಡಿ, ವಿಶ್ವವಿದ್ಯಾಲಯವು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಶೈಕ್ಷಣಿಕ ಏಳ್ಗೆ, ಕ್ರೀಡೆ, ಕಲೆ, ಸಂಶೋಧನಾ ಆಸಕ್ತಿ ಚಟುವಟಿಕೆ ಸೇರಿದಂತೆ ಎಲ್ಲ ರೀತಿಯಲ್ಲೂ ಮುತುವರ್ಜಿವಹಿಸಿ ಅನುಕೂಲ ಮಾಡಿಕೊಡುತ್ತಿದೆ. ಈ ಬಾರಿ ಕೃಷಿ ವಿವಿಗೆ 50 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ. ಇದರಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳಿಗೆ ಉಪಯೋಗಿಸಬೇಕು ಎಂದು ಸೂಚಿಸಿದ್ದಾರೆ ಎಂದರು.

ಈ ವರ್ಷ ಯುವಜನೋತ್ಸವಕ್ಕೆ 5 ಕಾಲೇಜುಗಳಿವೆ. ಮುಂದಿನ ವರ್ಷ 6 ಕಾಲೇಜುಗಳು ಪಾಲ್ಗೊಳ್ಳುತ್ತವೆ. ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಯುವಜನೋತ್ಸವದಲ್ಲಿ ಆಸಕ್ತಿಯಿಂದ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರತಿಭೆ ಮೆರೆಯಬೇಕು ಎಂದು ಹೇಳಿದರು.

ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಲ್.ಬಿ ಹೂಗಾರ, ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಆರ್.ಎಸ್ ಗಿರಡ್ಡಿ, ಗುಲ್ಬರ್ಗ ಕೃಷಿ ಮಹಾವಿದ್ಯಾಲಯ ಡೀನ್ ಡಾ.ಬಿ.ಟಿ ಪೂಜಾರಿ, ಕೃಷಿ ಮಹಾವಿದ್ಯಾಲಯ ಸ್ನಾತಕೋತ್ತರ ಡೀನ್ ಡಾ.ಎಂ.ಕೆ ನಾಯ್ಕ, ಕೃಷಿ ವಿವಿಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನ್ ಡಾ.ಎ ನಾಗನಗೌಡ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಡಾ.ಶರಣ್ ಅಂಗಡಿ ಅವರನ್ನು ಸತ್ಕರಿಸಲಾಯಿತು. ಎರಡು ದಿನ ನಡೆಯುವ ಈ ಯುವಜನೋತ್ಸವದಲ್ಲಿ 5 ಕಾಲೇಜಿನ ವಿದ್ಯಾರ್ಥಿಗಳು 18 ವಿವಿಧ ವಿಭಾಗಗಳಲ್ಲಿ ಪ್ರತಿಭೆ ಮೆರೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT