ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ಕುಸಿತ: ನೆಲಕಚ್ಚುತ್ತಿರುವ ತೆಂಗು, ಅಡಿಕೆ

Last Updated 6 ಜುಲೈ 2013, 5:49 IST
ಅಕ್ಷರ ಗಾತ್ರ

ಹಳೇಬೀಡು: ಮೂರು ವರ್ಷದಿಂದ ಸತತ ಬರಗಾಲಕ್ಕೆ ತುತ್ತಾ ಗಿರುವ ಹಳೇಬೀಡು ಭಾಗದಲ್ಲಿ ಅಂತರ್ಜಲ ಪ್ರಮಾಣ ಪಾತ ಳಕ್ಕೆ ಕುಸಿದಿರುವುದಲ್ಲದೇ, ಬಹುವಾರ್ಷಿಕ ಬೆಳೆಗಳಾದ ತೆಂಗು, ಅಡಿಕೆ ಮೊದಲಾದ ತೋಟಗಾರಿಕಾ ಬೆಳೆ ನೆಲಕಚ್ಚುತ್ತಿವೆ.

ಸುಳಿ ಒಣಗಿ ಬಿದ್ದಿರುವ ಅಡಿಕೆ, ತೆಂಗು ಸಮೃದ್ಧ ಮಳೆ ಬಂದರೂ ಚೇತರಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಪಂಪ್‌ಸೆಟ್ ಕೊಳವೆ ಬಾವಿಯಲ್ಲಿ ಅಲ್ಪ ಸ್ವಲ್ಪ ಜಲ ಬರುತ್ತಿರುವ ಕೆಲವು ತೋಟಗಳಲ್ಲಿ ಮರಗಿಡಗಳು ಹಸಿರಾಗಿದ್ದರೂ, ಮಳೆಗಾಲ ಇದೇ ರೀತಿಯಾದರೆ ಮುಂದೆ ಬೆಳೆ ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಮಲೆನಾಡ ಸೆರಗಿನಲ್ಲಿರುವ ಅರೆಮಲೆನಾಡು ಪ್ರದೇಶವಾದ ಹಳೇಬೀಡು ಭಾಗದಲ್ಲಿ ಮುಂಗಾರು ಹಂಗಾಮಿನ ಬೆಳೆಗಳು ಜುಲೈ ವೇಳೆಗೆ ಫಸಲು ಬೀಡುವ ಹಂತ ತಲುಪುತ್ತಿದ್ದವು. ಈಗ ಸೂರ್ಯಕಾಂತಿ, ಹತ್ತಿ, ಜೋಳ ಹಾಗೂ ದ್ವಿಧಳ ಧಾನ್ಯದ ಬೆಳೆಗಳು ಮಳೆಗಾಗಿ ಹಪಹಪಿಸುತ್ತಿವೆ.

ಮೇ ತಿಂಗಳಲ್ಲಿ ಮಳೆ ಬಿದ್ದ ತಕ್ಷಣ ಭೂಮಿ ಹದ ಮಾಡಿಕೊಂಡು ಬಿತ್ತನೆ ಮಾಡಿದ ಬೆಳೆಗಳು ಉದುರಿದ ಮಳೆಯಲ್ಲಿ ಚೇತರಿಸಿಕೊಳ್ಳುತ್ತಿವೆ. ಬಂಡವಾಳ ಹೂಡಿ ಕೂಲಿ ಕಾರ್ಮಿಕರನ್ನು ಕರೆತಂದು ಕೃಷಿ ಚಟುವಟಿಕೆ ಆರಂಭಿಸಲು ಸಾಧ್ಯವಾಗದ ಬಹಳಷ್ಟು ರೈತರು ಇಂದಿಗೂ ಬಿತ್ತನೆ ಕೆಲಸಕ್ಕಾಗಿ ಪರದಾಡುತ್ತಿದ್ದಾರೆ.

`500 ಅಡಿ ಕೊಳವೆ ಬಾವಿ ಮಾಡಿಸಿದರೂ ಹನಿ ನೀರು ಸಿಗುತ್ತಿಲ್ಲ. ನೀರು ಬಂದರೂ ಮೋಟಾರ್ ಪಂಪ್ ಅಳವಡಿಸಿ ಒಂದೇರಡು ದಿನ ಜಮೀನಿಗೆ ಹರಿಸುವುದರಲ್ಲಿಯೇ ಬಾವಿ ಒಣಗಿರುತ್ತದೆ. ಕುಡಿಯುವುದಕ್ಕೂ ನೀರು ದೊರಕದೆ ಎತ್ತಿನಗಾಡಿ ಕಟ್ಟಿಕೊಂಡು ಇಲ್ಲವೇ ವಾಹನದಲ್ಲಿ ಡ್ರಂಗಳನ್ನು ಹೊಂದಿಸಿಕೊಂಡು ಊರಿಂದ ಊರಿಗೆ ನೀರಿಗಾಗಿ ಅಲೆದಾಡುವಂತಾಗಿದೆ.  ಜನುವಾರುಗಳಿಗೆ ನೀರು ಕುಡಿಸುವುದಕ್ಕೂ ಪರದಾಟವಾಗಿದೆ' ಎನ್ನುತ್ತಾರೆ ರೈತ ಗಡಿ ಮಲ್ಲಿಕಾರ್ಜುನ.

`ಮುಂದಿನ ಮಳೆಯಾದರೂ ಸಮೃದ್ಧವಾಗಿ ಸುರಿದರೆ ರೈತರು ಬದುಕುಳಿಯುತ್ತಾರೆ. ಯಗಚಿ ಜಲಾಶಯದಿಂದ ಏತ ನೀರಾವರಿ ಮುಖಾಂತರ ಹಳೇಬೀಡು, ಮಾದಿಹಳ್ಳಿ ಹೋಬಳಿಗೆ ನೀರು ಹರಿಸುವ ಯೋಜನೆಯ ಕಾಮಗಾರಿಯಲ್ಲಿ ಶೀಘ್ರ ದಲ್ಲಿಯೇ ಪೂರ್ಣಗೊಳಿಸಬೇಕು. ಹಳೇಬೀಡು ಹೋಬಳಿಯ ಪ್ರತಿಹಳ್ಳಿಗೂ ಯಗಚಿ ನದಿ ಹಿನ್ನೀರಿನ ಪೈಪ್‌ಲೈನಿನಿಂದ ಕುಡಿಯುವ ನೀರು ಸರಬರಾಜು ಮಾಡುವ ಕೆಲಸಕ್ಕೆ ಜನಪ್ರ ತಿನಿಧಿಗಳು ಮುಂದಾಗಬೇಕಾಗಿದೆ ಎಂಬುದು ಶಿವಕುಮಾರ್ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT