ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಾಲ ಖಾತೆಗೆ ಕನ್ನ ಹಾಕಲು ‘ಮೊಬೈಲ್‌ ಬ್ಲಾಕ್‌’ ತಂತ್ರ!

Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಂಡವರ ಖಾತೆಗೆ ಕನ್ನ ಹಾಕಲು ವಂಚಕರು ಹೊಸ ವಿಧಾನವನ್ನು ಕಂಡು ಕೊಂಡಿದ್ದಾರೆ.
ಅಂತರ್ಜಾಲದ ಮೂಲಕ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುತ್ತಿದ್ದವರ ಹೊಸ ವಿಧಾನವನ್ನು ಪತ್ತೆ ಹಚ್ಚಲು ದೆಹಲಿ ಪೊಲೀಸರು ಯಶಸ್ವಿ ಯಾಗಿದ್ದಾರೆ.

ಈ ರೀತಿಯ ಅನಧಿಕೃತ ವ್ಯವಹಾರಕ್ಕೆ ಇಳಿಯುವ ಮೊದಲು ವಂಚಕರು ಮೊದಲು ಅಂತರ್ಜಾಲ ಬ್ಯಾಂಕ್‌ ಖಾತೆ ಹೊಂದಿರುವ ಗ್ರಾಹಕನ ಖಾತೆಯ ಐ.ಡಿ ಪಾಸ್‌ವರ್ಡ್ ಪಡೆದು ಬ್ಯಾಂಕ್‌ನಿಂದ ಎಸ್‌ಎಂಎಸ್‌ ಸಂದೇಶ ಹೋಗುವ ಮೊಬೈಲ್‌ ಸಂಖ್ಯೆಗಳನ್ನು ಕಲೆ ಹಾಕುತ್ತಾರೆ.

ಈ ವಿವರ ಕಲೆಹಾಕಿದ ನಂತರ ವಂಚಕರು ಮೊಬೈಲ್‌ ಸೇವೆ ನೀಡುವವರ ಬಳಿ ಹೋಗಿ ಮೊಬೈಲ್‌ ಕಳೆದು ಹೋಗಿದೆ ಅಥವಾ ಕಳುವಾಗಿದೆ ಎನ್ನುವ ನೆಪ ಹೇಳಿ ಆ ಮೊಬೈಲ್‌ ಸಂಖ್ಯೆಯನ್ನು ಬ್ಲಾಕ್‌ ಮಾಡಿಸುತ್ತಾರೆ.

‘ಹೀಗೆ ಬ್ಯಾಂಕ್‌ ಗ್ರಾಹಕನ ಹೆಸರು ಮತ್ತು ವಿಳಾಸವನ್ನು ಮೊದಲೇ ಅರಿತಿರುವ ವಂಚಕರು ನಕಲಿ ಸಿಮ್‌ ಪಡೆದುಕೊಳ್ಳುತ್ತಾರೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಈ ಹೊಸ ವಿಧಾನದ ಮೂಲಕ ಜಪಾನ್‌ನಲ್ಲಿ ಅನಿವಾಸಿ ಭಾರತೀಯನೊಬ್ಬನ ಬ್ಯಾಂಕ್‌ ಖಾತೆ ಯಿಂದ ರೂ 70 ಲಕ್ಷವನ್ನು ವಂಚಕರು ವಂಚಿಸಿದ್ದಾರೆ ಎನ್ನುವ ಆರೋಪದ ಮೇಲೆ ದಕ್ಷಿಣ ದೆಹಲಿ ಪೊಲೀಸರು ಇತ್ತೀಚೆಗಷ್ಟೇ ಇಬ್ಬರು ನೈಜೀರಿಯನ್‌ ಪ್ರಜೆಗಳನ್ನು ಬಂಧಿಸಿ,  1.5 ಕೋಟಿ ಗ್ರಾಹಕರ ಮಾಹಿತಿ ಇರುವ ಲ್ಯಾಪ್‌ಟಾಪ್‌ನ್ನು ವಶಪಡಿಸಿ ಕೊಂಡಿದ್ದರು. ಬಂಧಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಹೊಸ ವಿಧಾನದ ಬಗ್ಗೆ ಅವರು ಬಾಯಿಬಿಟ್ಟಿದ್ದಾರೆ.

‘ವಂಚನೆಗೆ ಬಳಸುವ ಮೊಬೈಲ್‌ ಮಾಲೀಕನ ಹೆಸರಿನಲ್ಲೇ  ನಕಲಿ ಸಿಮ್‌ ಕಾರ್ಡ್‌ನ್ನು ವಂಚಕರು ಪಡೆಯುವುದರಿಂದ ಅವರ ಹೆಸರು ಮತ್ತು ವಿಳಾಸ ಮೊದಲೇ ಅವರಿಗೆ ತಿಳಿದಿರುತ್ತದೆ’ ಎನ್ನುತ್ತಾರೆ ಹಿರಿಯ ಪೊಲೀಸ್‌ ಅಧಿಕಾರಿಗಳು

ಪೊಲೀಸರ ಪ್ರಕಾರ ಮೊಬೈಲ್‌ ಸಂಖ್ಯೆ ಬ್ಲಾಕ್‌ ಆದ ನಂತರ ಹೊಸ ವಿಧಾನದಿಂದ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆಗಳು ಸಾಕಷ್ಟು ನಡೆದಿವೆ.

‘ಗ್ಲೋಬಲ್‌ ಅಲೈಯನ್ಸ್‌ ಫಾರ್‌ ಇಂಪ್ರೂಡ್‌ ನ್ಯೂಟ್ರಿಷಿನ್‌’ನ ಬಾಂಗ್ಲಾದೇಶದ ಮುಖ್ಯಸ್ಥ ಬಸಂತ ಕುಮಾರ ಅವರ ಮೊಬೈಲ್‌ ಸಂಖ್ಯೆಯನ್ನು ಬ್ಲಾಕ್‌ ಮಾಡಿದ ವಂಚಕರು ಅವರ ಖಾತೆಯಿಂದ ರೂ 19,31,000  ವಂಚಿಸಿದ್ದರು. ಈ ಕುರಿತು ಅವರು ದೆಹಲಿ ಪೊಲೀಸ್‌ನ ಆರ್ಥಿಕ ವ್ಯವಹಾರಗಳ ವಿಭಾಗಕ್ಕೆ ಆ. 13ರಂದು ದೂರು ನೀಡಿದ್ದರು.

‘ತಮ್ಮ ವ್ಯವಹಾರಗಳ ಕುರಿತು ಬ್ಯಾಂಕ್‌ಗಳು ಗ್ರಾಹಕರಿಗೆ ಎಸ್‌ಎಂಎಸ್‌ ಸಂದೇಶಗಳನ್ನು ಕಳುಹಿಸಲು ಆರಂಭಿಸಿದ ನಂತರ ಅಪರಾಧಿಗಳು ಒಂದು ಹೆಜ್ಜೆ ಮುಂದೆ ಸಾಗಿದ್ದಾರೆ’ ಎನ್ನುತ್ತಾರೆ ಪೊಲೀಸರು.

‘ಮೊದಲು ಗ್ರಾಹಕರು ತಮ್ಮ ಅಂತರ್ಜಾಲ ಖಾತೆಗಳ ಪಾಸ್‌ವರ್ಡ್‌ನ್ನು ನಿಯಮಿತವಾಗಿ ಬದಲಿಸುತ್ತಿರಬೇಕು. ಈ ರೀತಿಯ ವಂಚನೆಯ ವ್ಯವಹಾರಗಳು ಸಾಮಾನ್ಯವಾಗಿ ರಾತ್ರಿ ವೇಳೆ ಯಲ್ಲಿ ನಡೆಯುತ್ತವೆ. ಬ್ಯಾಂಕ್‌ಗಳು ತಮ್ಮ ನಿಯ ಮಗಳಲ್ಲಿ ಕೆಲವು ಬದಲಾವಣೆಗಳನ್ನು ತಂದು ಅಪವೇಳೆಯಲ್ಲಿ ನಡೆಯುವ ಖಾತೆಗಳ ವ್ಯವಹಾ ರಗಳ ಬಗ್ಗೆ ಟಿಪ್ಪಣಿಯನ್ನು ಪಡೆಯಬೇಕು’ ಎನ್ನುತ್ತಾರೆ ಒಬ್ಬ ಪೊಲೀಸ್‌ ಅಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT