ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ಹಣಾಹಣಿಗೆ ಚೀನಾದ ಲೀ

Last Updated 2 ಜೂನ್ 2011, 19:30 IST
ಅಕ್ಷರ ಗಾತ್ರ

ಪ್ಯಾರಿಸ್ (ಪಿಟಿಐ):  ಚೆಲುವಿನ ಆಟದಿಂದ ಪ್ರೇಕ್ಷಕರ ಮನಗೆದ್ದ ಚೀನಾದ ಲೀ ನಾ ಅವರು ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಫೈನಲ್ ತಲುಪಿದ್ದಾರೆ.

ರೋಲಂಡ್ ಗ್ಯಾರೋಸ್ ಅಂಗಳದಲ್ಲಿ ಗುರುವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಲೀ ಎದುರು ರಷ್ಯಾದ ಮರಿಯಾ ಶರಪೋವಾ ಅಚ್ಚರಿಯ ಫಲಿತಾಂಶವನ್ನು ಪಡೆಯಲು ಸಾಧ್ಯವಾಗಲಿಲ್ಲ. ಚಾಕಚಕ್ಯೆತೆಯ ಆಟವಾಡಿದ ಆರನೇ ಶ್ರೇಯಾಂಕ ಹೊಂದಿರುವ ಚೀನಾದ ಆಟಗಾರ್ತಿಯು 6-4, 7-5ರಲ್ಲಿ ಏಳನೇ ಶ್ರೇಯಾಂಕದ ಶರಪೋವಾ ಅವರನ್ನು ಪರಾಭವಗೊಳಿಸಿದರು.

ಪ್ರೇಕ್ಷಕರ ನೆಚ್ಚಿನ ತಾರೆ ಶರಪೋವಾ ಆಗಿದ್ದರು. ಆದ್ದರಿಂದ ಅವರಿಗೆ ಆರಂಭದಲ್ಲಿ ಅಪಾರ ಬೆಂಬಲ ದೊರೆಯಿತು. ಆದರೆ ಮೊದಲ ಸೆಟ್‌ನಲ್ಲಿ ಲೀ ಸುಲಭವಾಗಿ ಮೇಲುಗೈ ಸಾಧಿಸಿದ ನಂತರ ಕ್ರೀಡಾಂಗಣದಲ್ಲಿದ್ದ ಟೆನಿಸ್ ಪ್ರೇಮಿಗಳು ಪಕ್ಷಾಂತರ ಮಾಡಿದರು.

ಎರಡನೇ ಸೆಟ್‌ನಲ್ಲಿ ಚಪ್ಪಾಳೆ ಸದ್ದಿನ ನಡುವೆ ಉತ್ಸಾಹದಿಂದ ಆಡಿದ ಚೀನಾದ ಯುವತಿಯು ಯಶಸ್ಸು ಪಡೆದು ಮುಗಿಲತ್ತ ಮುಷ್ಟಿ ಎತ್ತಿ ಸಂಭ್ರಮಿಸಿದರು.

ಮಿರ್ನಿ-ನೆಸ್ಟರ್‌ಗೆ ಗೆಲುವು: ಬೆಲಾರೂಸ್‌ನ ಮ್ಯಾಕ್ಸ್ ಮಿರ್ನಿ ಹಾಗೂ ಕೆನಡಾದ ಡೇನಿಯಲ್ ನೆಸ್ಟರ್ ಜೋಡಿಯು ಪುರುಷರ ಡಬಲ್ಸ್‌ನಲ್ಲಿ ಫೈನಲ್‌ಗೆ ರಹದಾರಿ ಪಡೆದಿದೆ. ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಈ ಜೋಡಿಗೆ ಫ್ರಾನ್ಸ್‌ನ ಮೈಕಲ್ ಲೋಡ್ರಾ ಹಾಗೂ ಸರ್ಬಿಯಾದ ನೆನಾಡ್ ಜಿಮೊಂಜಿಕ್ ಶರಣಾದರು.

ನಿರೀಕ್ಷಿತ ಗೆಲುವು ಪಡೆದ ಮಿರ್ನಿ-ನೆಸ್ಟರ್ ಎರಡೂ ಸೆಟ್‌ಗಳಲ್ಲಿ ನಿಕಟ ಪೈಪೋಟಿ ಎದುರಿಸಿದರು. ಲೋಡ್ರಾ-ಜಿಮೊಂಜಿಕ್ ಸುಲಭವಾಗಿ ಪಂದ್ಯವನ್ನು ಬಿಟ್ಟುಕೊಡಲಿಲ್ಲ. ಚುರುಕಿನಿಂದ ಚೆಂಡನ್ನು ಹಿಂದಿರುಗಿಸಿದ ಹಾಗೂ ಹೊಂದಾಣಿಕೆಯನ್ನು ಕಾಯ್ದುಕೊಂಡ ಬೆಲಾರೂಸ್-ಕೆನಡಾದ ಡಬಲ್ಸ್ ಆಟಗಾರರು ಕಷ್ಟದ ಹಾದಿಯಲ್ಲಿಯೂ ಯಶಸ್ಸಿನೆಡೆ ನಡೆದರು.

ಪ್ರಭಾವಿ ಸರ್ವ್‌ಗಳಿಂದ ಎದುರಾಳಿಗಳನ್ನು ಒತ್ತಡದಲ್ಲಿಟ್ಟ ಮಿರ್ನಿ ಮತ್ತು ನೆಸ್ಟರ್ 7-6 (7-4), 7-6 (7-5)ರಲ್ಲಿ ಗೆಲುವು ಸಾಧಿಸಿದರು. ಸೋಲಿನಲ್ಲಿಯೂ ಜಿಮೊಂಜಿಕ್ ತಮ್ಮ ಪ್ರಭಾವಿ ಆಟದ ಪರಿಣಾಮವಾಗಿ ಪ್ರೇಕ್ಷಕರಿಂದ ಅನೇಕ ಬಾರಿ ಚಪ್ಪಾಳೆ ಗಿಟ್ಟಿಸಿದರು. ಲೋಡ್ರಾ ಅನೇಕ ಸಂದರ್ಭದಲ್ಲಿ ಲಯ ತಪ್ಪಿದರು. ಆದ್ದರಿಂದ ವಿಜಯಿಗಳ ಪಾಲಿಗೆ ಕೆಲವು ಪಾಯಿಂಟುಗಳು ಸೇರಿದವು.

ಫೈನಲ್‌ಗೆ ಸಾನಿಯಾ: ಭಾರತದ ಸಾನಿಯಾ ಮಿರ್ಜಾ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಜೋಡಿ ಮಹಿಳೆ ಯರ ವಿಭಾಗದ ಡಬಲ್ಸ್‌ನಲ್ಲಿ  ಇದೇ ಮೊದಲ ಬಾರಿಗೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು. ಈ ಜೋಡಿ  6-3, 2-6,  6-4ರಲ್ಲಿ ಅಮೆರಿಕದ ಲಿಜೆಲ್ ಹುಬೆರ್ ಮತ್ತು ಲೀಸಾ ರೇಮಂಡ್ ಜೋಡಿಯನ್ನು ಮಣಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT