ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತು ಇಂತು ನದಿ ನೀರು ಬಂತು

Last Updated 6 ಡಿಸೆಂಬರ್ 2012, 8:52 IST
ಅಕ್ಷರ ಗಾತ್ರ

ಅರಸೀಕೆರೆ: ಬರದ ನಾಡು ಅರಸೀಕೆ ರೆಗೆ ಕೊನೆಗೂ ಹೇಮಾವತಿ ನದಿಯ ನೀರು ಲಭ್ಯವಾಗಿದೆ. ಈ ಭಾಗದ ಜನರ ಎರಡು ದಶಕಗಳ ಹೋರಾಟ, ಬೇಡಿಕೆ  ಕೊನೆಗೂ ಈಡೇರಿದೆ.

ಮಂಗಳವಾರ ಸಂಜೆ 5.30ಕ್ಕೆ ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಕಾಮಸಮುದ್ರ ಕೆರೆಗೆ ಈ ನೀರು ಹರಿಯಿತು. ಹೇಮಾವತಿ ನದಿಯ ನೀರು ಊರಿನ ಕೆರೆಗೆ ಸೇರುವುದನ್ನು ನೋಡಲು ಸುತ್ತಮುತ್ತಲಿನ ಹಲವು ಗ್ರಾಮಗಳ ಜನರು ಆಗಮಿಸಿದ್ದರು. ಕೊಳವೆ ಮೂಲಕ ಬಂದ ನೀರು ಕೆರೆಯ ಒಡಲು ಸೇರುತ್ತಿದ್ದಂತೆ ನೆರೆದಿದ್ದ ಜನರು ಕೇಕೇ ಹಾಕಿ ಕುಣಿದರು. ಶಾಸಕ ಶಿವಲಿಂಗೇಗೌಡರು ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.

ತಿಪಟೂರು ತಾಲ್ಲುಕಿನಲ್ಲಿ ಹಾದು ಹೋಗಿರುವ ಹೇಮಾವತಿ ನಾಲೆಯ ಹೊಗನಘಟ್ಟದಿಂದ 11ಕಿಮೀ ದೂರ ಇರುವ ಬೊಮ್ಮಲಾಪುರ ಬಳಿ ನಿರ್ಮಿಸಿರುವ ದೊಡ್ಡ ತೊಟ್ಟಿಗೆ ನೀರನ್ನು ಹರಿಸಿ ಅಲ್ಲಿಂದ 300 ಕೆ.ವಿ ಸಾಮರ್ಥ್ಯದ ಮೂರು ಭಾರಿ ಗಾತ್ರದ ಜನರೇಟರ್‌ಗಳ ಮೂಲಕ ನೀರೆತ್ತಿ ಕೊಳವೆ ಮಾರ್ಗದ ಮೂಲಕ 13 ಕಿ.ಮೀ ದೂರ ಇರುವ ಅರಸೀಕೆರೆ ತಾಲ್ಲೂಕಿನ ಕಾಮಸಮುದ್ರ ಕೆರೆಗೆ ಹರಿಸಲಾಗುತ್ತಿದೆ. ಅಂದಾಜು ರೂ.100 ಕೋಟಿ ವೆಚ್ಚದ  ಯೋಜನೆ ಯನ್ನು ಹೈದ್ರಾಬಾದ್ ಮೂಲದ ಐಆರ್‌ಸಿಎಲ್ ಎಂಬ ಸಂಸ್ಥೆ ಎರಡೂ ವರೆ ವರ್ಷದಲ್ಲಿ ಪೂರ್ಣಗೊಳಿಸಿದೆ.

ಕಾಮಸಮುದ್ರ ಕೆರೆಗೆ ನೀರು ತುಂಬಿಸಿ, ಎರಡನೇ ಹಂತದಲ್ಲಿ ಕಣಕಟ್ಟೆ ಕೆರೆಗೆ ನೀರು ಹರಿಸುವ ಉದ್ದೇಶ ಯೋಜನೆಯಲ್ಲಿದೆ. ಕಾಮಸಮುದ್ರ ಕೆರೆ ಹೋಬಳಿಯಲ್ಲೇ ದೊಡ್ಡ ಕೆರೆಯಾಗಿದ್ದು, ಪೂರ್ಣ ಭರ್ತಿಯಾಗಲು ಸುಮಾರು 20 ದಿನ ಬೇಕಾಗಬಹುದು ಎಂದು ಕಾವೇರಿ ನಿಗಮದ ಎ.ಇ.ಇ ವಿಜಯ್ ಕುಮಾರ್ ತಿಳಿಸಿದರು.

ಶಾಸಕ ಶಿವಲಿಂಗೇಗೌಡ ಮಾತನಾಡಿ, `ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಜನತೆಗೆ ಶುದ್ಧ ಕುಡಿ ಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸಲು ದಶಕಗಳಿಂದ ಹೋರಾಟ ನಡೆದಿತ್ತು. ಜಲಸಂಪ ನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸಹಕಾರದಿಂದ ಈ ಯೋಜನೆ ಸಾಕಾರಗೊಂಡಿದೆ. ಅವರು ಮನಸ್ಸು ಮಾಡದಿದ್ದರೆ ಈ ಯೋಜನೆ ಇಷ್ಟು ಬೇಗ ಕಾರ್ಯಗತ ವಾಗುತ್ತಿರ ಲಿಲ್ಲ. ಜತೆಗೆ ಶಾಸಕ ನಾಗೇಶ್ ಅವರೂ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ' ಎಂದರು.

`ಯೋಜನೆಯ ಪ್ರಕಾರ ತಿಪಟೂರು ತಾಲ್ಲೂಕಿನ 13 ಕೆರೆಗಳು ತುಂಬಿದ ನಂತರ ಅರಸೀಕೆರೆ ತಾಲ್ಲೂಕಿನ ಕಾಮಸಮುದ್ರ ಹೊಳಲ್ಕೆರೆ ಹಾಗೂ ಕಣಕಟ್ಟೆ ಕೆರೆಗಳಿಗೆ ನೀರು ಬರಬೇಕಾಗಿತ್ತು. ಆದರೆ ಇದಕ್ಕೆ ತುಂಬ ವಿಳಂಬವಾಗಬಹುದು ಎಂಬ ಹಿನ್ನೆಲೆಯಲ್ಲಿ ಅರಸೀಕೆರೆ ತಾಲ್ಲೂಕಿಗೆ ಬೇರೆ ಕೊಳವೆ ಮಾರ್ಗಬೇಕು ಎಂದು ಹೋರಾಟ ನಡೆಸಿದ ಪರಿಣಾಮ ಈ ಯೋಜನೆ ಕೈಗೂಡುವಂತಾಯಿತು ಎಂದು ಶಿವಲಿಂಗೇಗೌಡ ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿಳಿಚೌಡಯ್ಯ, ತಾಲ್ಲೂಕು ಪಂಚಾ ಯಿತಿ ಅಧ್ಯಕ್ಷ ಸಿದ್ದಾಭೋವಿ, ಹಾರನ ಹಳ್ಳಿ ಶಿವಮೂರ್ತಿ ಕೆ.ಎಂ.ನಂಜುಂಡಪ್ಪ, ಚಂದ್ರಶೇಖರ್  ಕಾಮಸಮುದ್ರ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT