ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತೂ ಇಂತೂ ಚೇತರಿಸಿಕೊಂಡ ಕಾರ್ ಉದ್ಯಮ

Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ತತವಾಗಿ ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದ ಕಾರ್ ಉದ್ಯಮ ಮತ್ತೆ ಚೇತರಿಸಿಕೊಂಡಿದೆ. ಉತ್ತಮ ವಿನ್ಯಾಸದ ಕೊರತೆ, ಹೊಸ ಹೊಸ ಪ್ರಯೋಗಗಳನ್ನು ಭಾರತೀಯ ಕಾರ್ ಉದ್ದಿಮೆಗಳು ಮಾಡುತ್ತಿಲ್ಲ ಎಂದು ಬೇಸರಿಸಿಕೊಂಡಿದ್ದ ಗ್ರಾಹಕ ಈಗ ಕೊಂಚ ತನ್ನ ಮುನಿಸು ಕಡಿಮೆ ಮಾಡಿಕೊಂಡಿದ್ದಾನೆ. ಹಳೆಯ ಕಾರ್‌ಗಳಿಗೆ ಹೊಸ ಸಿಂಗಾರ ಮಾಡಿ ಬಿಡುವುದು, ಹೆಚ್ಚದ ಮೈಲೇಜ್, ಅದೇ ಹಳೆಯ ತಂತ್ರಜ್ಞಾನದಿಂದಾಗಿ ಕೊಟ್ಟ ಹಣಕ್ಕೆ ಮೌಲ್ಯವಿಲ್ಲವೇನೋ ಎಂಬ ಅನುಮಾನ ಗ್ರಾಹಕನಿಗೆ ಕಾಡಿದ್ದಂತೂ ನಿಜ. ಅದಕ್ಕೆ ತಕ್ಕಂತೆ ಕಾಲಕ್ಕೆ ತಕ್ಕಂತೆ ಬದಲಾಗದೆ ಹಣ ಉಳಿಸುವ ತಂತ್ರಕ್ಕೆ ಕಾರ್ ಕಂಪೆನಿಗಳು ಇಳಿದದ್ದೂ ನಿಜವೇ.

ಹಾಗಾಗೇ ೨೦೧೨-–-೧೩ನೇ ಸಾಲಿನ ಆರ್ಥಿಕ ವರ್ಷದ ಆರಂಭದಲ್ಲಿ ಕಾರ್ ಮಾರುಕಟ್ಟೆ ಬರೋಬ್ಬರಿ ಶೇ. ೩೦ರಷ್ಟು ಇಳಿತ ಕಂಡಿತ್ತು. ಸಣ್ಣ ಪುಟ್ಟ ಕಂಪೆನಿಗಳಾದರೆ ದಿವಾಳಿಯಾಗುವಷ್ಟು ದೊಡ್ಡ ಹೊಡೆತವಿದು. ಭಾರತದಲ್ಲಿನ ಕಾರ್ ಕಂಪೆನಿಗಳಾವುವೂ ತೀರ ಕಷ್ಟದಲ್ಲಿ ಇಲ್ಲದಿದ್ದ ಕಾರಣ ಅಪಾಯದಿಂದ ಪಾರಾದವು. ಆದರೂ ತಪ್ಪನ್ನು ತಿದ್ದಿಕೊಳ್ಳುವ ಮನಸ್ಥಿತಿ ಇನ್ನೂ ಕೆಲವು ಕಂಪೆನಿಗಳಿಗೆ ಬರದಿರುವ ಕಾರಣ, ಸೋಲಿನಿಂದ ಚೇತರಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ.

ಇತ್ತೀಚೆಗಷ್ಟೇ ರೂಪಾಯಿಯ ಅಪಮೌಲ್ಯವಾಗಿದ್ದು ಗ್ರಾಹಕ ಮತ್ತು ಕಂಪೆನಿ ಇಬ್ಬರಿಗೂ ಹೊಡೆತ ನೀಡಿದ್ದನ್ನು ಅಲ್ಲಗಳೆಯುವಂತಿಲ್ಲ. ಆದರೆ ಹಣದ ಅಪಮೌಲ್ಯವಾಗುವುದಕ್ಕೂ ಮುಂಚೆಯೆ ಕುಸಿತ ಆರಂಭವಾಗಿದ್ದು ಮಾತ್ರ ಬರಲಿರುವ ಅತಿ ಕೆಟ್ಟ ದಿನಗಳ ಮುನ್ಸೂಚನೆಯೇ ಆಗಿತ್ತು.

ಇಷ್ಟೆಲ್ಲ ಸಮಸ್ಯೆಗಳ ನಡುವೆ ಕೊಂಚ ಚೇತರಿಕೆಯ ಹೆಜ್ಜೆಯನ್ನಿಟ್ಟ ಕಂಪೆನಿಗಳೆಂದರೆ, ಮಾರುತಿ ಸುಜುಕಿ, ಹೋಂಡಾ ಹಾಗೂ ಹುಂಡೈ. ಈ ಮೂರೂ ಕಂಪೆನಿಗಳು ೨೦೧೨ರ ಆಗಸ್ಟ್ ತಿಂಗಳ ತಮ್ಮ ಮಾರಾಟಕ್ಕಿಂತ, ೨೦೧೩ರ  ಆಗಸ್ಟ್‌ನಲ್ಲಿ ಶೇ. ೫೦ ರಷ್ಟು ಹೆಚ್ಚಳ ಕಂಡಿದ್ದೇವೆ ಎಂದು ತೋರಿಸಿಕೊಂಡಿವೆ.

ಮಾರುತಿ ಸುಜುಕಿ ತಾನು ಆರಂಭವಾದ ಕಾಲದಿಂದ ಇಂದಿನವರೆಗೂ ಎಂದಿಗೂ ನಷ್ಟವನ್ನೇ ಕಂಡರಿಯದಿದ್ದ ಕಂಪೆನಿ. ೨೦೦೫ ರಿಂದ ೨೦೧೨ ರವರೆಗೆ ಗರಿಷ್ಠ ಲಾಭ ಗಳಿಸಿದ್ದು ಮಾರುತಿ ಸುಜುಕಿ ಕಂಪೆನಿ. ಆದರೆ ೨೦೧೨ರಲ್ಲಿ ತನ್ನ ಮಾನೇಸರ ಘಟಕದಲ್ಲಿ ಕಾರ್ಮಿಕರಿಂದಾದ ಗಲಭೆಯಿಂದಾಗಿ ಸುಮಾರು ೧ ತಿಂಗಳ ಕಾಲ ಘಟಕವನ್ನು ಮುಚ್ಚಬೇಕಾಗಿ ಬಂದಿತ್ತು. ಇದರಿಂದ ಶೇ.೫೧.೬ ಮಾರಾಟ ಇಳಿತವನ್ನು ಕಂಪೆನಿ ಅನುಭವಿಸಬೇಕಿತ್ತು.

ಮಾರುತಿ ಸುಜುಕಿಯೂ ಹೊಸ ಕಾರ್‌ಗಳನ್ನೇನೂ ಈ ಒಂದು ವರ್ಷದಲ್ಲಿ ನೀಡಿಲ್ಲ. ಆದರೂ ತನ್ನ ಉತ್ತಮ ಗುಣಮಟ್ಟದಿಂದಾಗಿ ಮಾರಾಟ ಹೆಚ್ಚಳ ಕಂಡುಬಂದಿದೆ. ಮಾರುತಿ ಆಲ್ಟೊ ೮೦೦ ಗರಿಷ್ಠ ಮಾರಾಟ ಕಂಡಿದೆ. ೨೦೧೨ ರ ಆಗಸ್ಟ್ ತಿಂಗಳಲ್ಲಿ ಮಾರುತಿ ಸುಜುಕಿ ೫೦,೧೨೯ ಕಾರ್‌ಗಳನ್ನು ಮಾರಾಟ ಮಾಡಿತ್ತು. ೨೦೧೩ ರ ಆಗಸ್ಟ್ ತಿಂಗಳಲ್ಲಿ ೭೬,೦೧೮ ಕಾರ್‌ಗಳನ್ನು ಮಾರಾಟ ಮಾಡಿದೆ.

ಸಣ್ಣ ಕಾರ್‌ಗಳ ಪೈಕಿ ಆಲ್ಟೊ ೮೦೦, ಎ-ಸ್ಟಾರ್ ಹಾಗೂ ವೇಗನ್-ಆರ್ ಅತ್ಯಧಿಕ ಮಾರಾಟವಾದ ಪಟ್ಟಿಯಲ್ಲಿವೆ. ಈ ಮೂರು ಕಾರ್‌ಗಳೇ ಶೇ ೪೫.೧ (೩೨೦೧೯ ಕಾರ್‌ಗಳು) ಪ್ರಮಾಣದ ಮಾರಾಟ ಪಾಲನ್ನು ಹೊಂದಿವೆ. ಸ್ವಿಫ್ಟ್, ಎಸ್ಟಿಲೊ ಹಾಗೂ ರಿಟ್ಸ್ ೧೭,೪೦೯ ಕಾರ್‌ಗಳು ಮಾರಾಟವಾಗಿವೆ. ಅಲ್ಲದೇ, ಸಣ್ಣ ಸೆಡಾನ್ ಕಾರ್‌ಗಳಲ್ಲಿ ಸ್ವಿಫ್ಟ್ ಡಿಸೈರ್ ಅತ್ಯಧಿಕ ಮಾರಾಟಗೊಂಡಿದೆ. ೨೦೧೨ ರ ಆಗಸ್ಟ್ ತಿಂಗಳಲ್ಲಿ ಕೇವಲ ೩,೦೮೫ ಕಾರ್‌ಗಳು ಮಾರಾಟವಾಗಿದ್ದರೆ, ೨೦೧೩ ರ ಆಗಸ್ಟ್‌ನಲ್ಲಿ ೧೩,೭೨೩ ಕಾರ್‌ಗಳು ಮಾರಾಟವಾಗಿವೆ.

ಜೀವ ಕೊಟ್ಟ ಅಮೇಜ್!
ಬಹುರಾಷ್ಟ್ರೀಯ ಕಾರ್ ಕಂಪೆನಿ ಹೋಂಡಾ ಭಾರತದಲ್ಲಿ ಕುಸಿತ ಕಂಡು ನಿಟ್ಟುಸಿರು ಬಿಟ್ಟಿದ್ದು ಹೌದು. ಆದರೆ ತನ್ನ ಯಶಸ್ಸಿನ ದಾರಿಯನ್ನು ಕಂಡುಕೊಳ್ಳುವಲ್ಲಿ ಹೋಂಡಾ ಎಂದೂ ಮುಂದು. ಭಾರತೀಯ ಕಾರ್ ಗ್ರಾಹಕನ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು, ಕಡಿಮೆ ಬೆಲೆ, ಹೆಚ್ಚು ಮೈಲೇಜ್ ಎಂಬ ತಂತ್ರವನ್ನು ಕೊನೆಗೂ ಅಳವಡಿಸಿಕೊಂಡಿತು. ಅದಕ್ಕಾಗೇ ಡೀಸೆಲ್ ಕಾರ್ ಅನ್ನು ಪರಿಚಯಿಸಿತು. ಹೋಂಡಾ ಪೆಟ್ರೋಲ್ ಪ್ರಿಯರ ಕಾರ್.

ಅದು ಡೀಸೆಲ್ ಕಾರ್ ಅನ್ನು ಹೊರಬಿಡುತ್ತದೆ ಎಂದರೆ ಯಾರೂ ನಂಬುತ್ತಲೇ ಇರಲಿಲ್ಲ. ಆದರೆ ಅಮೇಜ್ ಕಾರ್ ಅನ್ನು ಹೊರಬಿಟ್ಟಿದ್ದು ಮಾತ್ರ ಅದಕ್ಕೆ ಜೀವದಾನ ಸಿಕ್ಕಂತಾಯಿತು. ಅಲ್ಲದೆ ಹೋಂಡಾದ ಅತಿ ಕಡಿಮೆ ಬೆಲೆಯ ಕಾರ್ ಸಹ ಅದು. ಒಟ್ಟಾರೆ ಶೇ. ೬೩ ರಷ್ಟು ಮಾರುಕಟ್ಟೆ ಚೇತರಿಕೆ ಕಂಡಿರುವ ಹೋಂಡಾ ೨೦೧೩ ರ ಆಗಸ್ಟ್‌ವರೆಗೆ ೮,೯೧೩ ಕಾರ್‌ಗಳನ್ನು ಮಾರಾಟ ಮಾಡಿದೆ. ಆಗಸ್ಟ್ ತಿಂಗಳಲ್ಲೇ ೬,೨೪೩ ಅಮೇಜ್ ಕಾರ್‌ಗಳು ಮಾರಾಟವಾಗಿ ಆಶ್ಚರ್ಯ ಹುಟ್ಟಿಸಿದೆ.

ಪ್ರಾಣ ಉಳಿಸಿಕೊಂಡ ಫೋರ್ಡ್, ಹ್ಯುಂಡೈ

ಚೇತರಿಕೆಯಲ್ಲಿ ಕೊಂಚ ಮಾತ್ರವೇ ಸುಧಾರಣೆ ಕಂಡಿರುವುದು ಫೋರ್ಡ್ ಹಾಗೂ ಹ್ಯುಂಡೈ ಕಂಪೆನಿಗಳು. ಫೋರ್ಡ್‌ಗೆ ಚೇತರಿಕೆ ನೀಡಿರುವುದು ಎಕೊ ಸ್ಪೋರ್ಟ್ಸ್‌. ಆಗಸ್ಟ್ ೨೦೧೩ ವರೆಗೆ ೮,೦೦೮ ಎಕೊಸ್ಪೋರ್ಟ್ಸ್‌ ಕಾರ್‌ಗಳು ಮಾರಾಟವಾಗಿವೆ.

ಆದರೆ ಒಟ್ಟಾರೆ ಕಾರ್ ಮಾರಾಟ ಮಾತ್ರ ಕಡಿಮೆಯೇ. ೨೦೧೩ ರ ಆಗಸ್ಟ್ ತಿಂಗಳವರೆಗೆ ಕೇವಲ ಶೇ ೨.೧೪ ಹೆಚ್ಚಳವನ್ನು ಕಂಡಿದೆ. ಹ್ಯುಂಡೈ ಚೇತರಿಕೆ ಕಂಡಿದೆ ಎಂದು ಹೇಳುವುದಕ್ಕಿಂತ, ಕುಸಿದಿಲ್ಲ ಎಂದು ಹೇಳಬಹುದಷ್ಟೇ.

೨೦೧೨ ರ ಆಗಸ್ಟ್ ತಿಂಗಳಲ್ಲಿ ೨೮,೨೫೭ ಕಾರ್‌ಗಳನ್ನು ಮಾರಾಟ ಮಾಡಿದ್ದ ಹ್ಯುಂಡೈ ೨೦೧೩ ರ ಆಗಸ್ಟ್ ವರೆಗೆ ೨೮,೩೧೧ ಕಾರ್‌ಗಳನ್ನು ಮಾರಾಟ ಮಾಡಿದೆ. ಫೋಕ್ಸ್‌ವೇಗನ್ ಸಹ ಶೇ ೯ ರಷ್ಟು ಪ್ರಗತಿಯನ್ನು ತೋರಿಸಿದೆ. ೨೦೧೨ರ ಆಗಸ್ಟ್‌ನಲ್ಲಿ ೪,೪೧೦ ಕಾರ್‌ಗಳನ್ನು ಮಾರಾಟ ಮಾಡಿದ್ದ ಕಂಪೆನಿ, ೨೦೧೩ರ ಆಗಸ್ಟ್ ವರೆಗೆ ೪,೮೦೫ ಕಾರ್‌ಗಳನ್ನು ಮಾರಾಟ ಮಾಡಿದೆ.

ಕುಸಿದ ಟಾಟಾ, ಮಹಿಂದ್ರಾ

ಟಾಟಾ ಮೋಟಾರ್ಸ್‌ಗೆ ಗ್ರಹಚಾರ ಕೆಟ್ಟಂತೆಯೇ ಆಗಿದೆ. ೨೦೧೩ ರ ಆಗಸ್ಟ್ ತಿಂಗಳವರೆಗೆ ಶೇ ೨೮ ರಷ್ಟು ಮಾರುಕಟ್ಟೆ ಕುಸಿತ ಕಂಡಿದೆ. ಟಾಟಾ ಮೋಟಾರ್ಸ್ ದೇಶದ ಎರಡನೇ ಅತ್ಯಧಿಕ ಮಾರಾಟವಾಗುವ ಕಾರ್ ಕಂಪೆನಿ.

ಆದರೆ ರೂಪಾಯಿ ಅಪಮೌಲ್ಯ, ಹೆಚ್ಚಿದ ತೆರಿಗೆ, ಹೆಚ್ಚಿದ ಬಡ್ಡಿ ಮೊತ್ತದಿಂದಾಗಿ ಕಳೆದ ವರ್ಷದಂತೆಯೇ ಈಗಲೂ ಸೋಲು ಮುಂದುವರೆದಿದೆ. ಆಗಸ್ಟ್ ತಿಂಗಳಲ್ಲೇ ಶೇ ೩೩ ರಷ್ಟು ಕುಸಿತ ಕಂಡು ಕಂಪೆನಿಯಲ್ಲಿ ತಳಮಳ ಆರಂಭವಾಗಿದೆ.

ಮಹಿಂದ್ರಾ ಅಂತೂ ನಷ್ಟದ ಪರಮಾವಧಿಯನ್ನು ಅನುಭವಿಸುತ್ತಿದೆ. ೨ ತಿಂಗಳಲ್ಲಿ ಸುಮಾರು ೧೦೦೦ ಗುತ್ತಿಗೆ ಹಾಗೂ ಅರೆಕಾಲಿಕ ನೌಕರರನ್ನು ಕೆಲಸದಿಂದ ತೆಗೆದಿದೆ. ತಿಂಗಳಿಗೆ ೬ ದಿನ ಉತ್ಪಾದನೆ ನಿಲ್ಲಿಸಿ, ತಾನೂ ನಷ್ಟದಲ್ಲಿ ಇರುವುದನ್ನು ಬಹಿರಂಗಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT