ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತೂ ಬಂತು ಪರತಂತ್ರ ಜೀವಿ

Last Updated 24 ಫೆಬ್ರುವರಿ 2011, 8:20 IST
ಅಕ್ಷರ ಗಾತ್ರ

ಚಾಮರಾಜನಗರ: ಜೈವಿಕ ವಿಧಾನದಡಿ ಪರತಂತ್ರ ಜೀವಿಯಾದ ‘ಅಸೆರೋಫ್ಯಾಗಸ್ ಪಪ್ಪಾಯೆ’ ಕೀಟ ಬಿಡುವ ಮೂಲಕ ಜಿಲ್ಲೆಯಲ್ಲಿ ಹಿಪ್ಪುನೇರಳೆಗೆ ಕಾಣಿಸಿಕೊಂಡಿರುವ ಪಪ್ಪಾಯಿ ಹಿಟ್ಟು ತಿಗಣೆ (ಪಪ್ಪಾಯಿ ಮಿಲಿಬಗ್) ಬಾಧೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ. ತಮಿಳುನಾಡಿನಿಂದ ಗಡಿ ಜಿಲ್ಲೆಗೆ ದಾಳಿ ಇಟ್ಟಿರುವ ಪಪ್ಪಾಯಿ ಮಿಲಿಬಗ್ ಹತೋಟಿಗೆ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರ, ಜಿಲ್ಲಾ ರೇಷ್ಮೆ ಇಲಾಖೆ, ರಾಷ್ಟ್ರೀಯ ಕೃಷಿ ಪ್ರಾಮುಖ್ಯ ಕೀಟಗಳ ಬ್ಯೂರೊ ಹಾಗೂ ಕೇಂದ್ರ ರೇಷ್ಮೆ ಸಂಶೋಧನಾ ಮತ್ತು ತರಬೇತಿ ಕೇಂದ್ರದಿಂದ ಜಂಟಿ ಕಾರ್ಯಾಚರಣೆ ಆರಂಭಗೊಂಡಿದೆ.

ಅಸೆರೋಫ್ಯಾಗಸ್ ಪಪ್ಪಾಯೆ ಪರತಂತ್ರ ಜೀವಿ ಉತ್ಪಾದಿಸಿ ರೇಷ್ಮೆ ಬೆಳೆಗಾರರಿಗೆ ಉಚಿತವಾಗಿ ನೀಡಲಾಗುತ್ತಿದೆ. ಈ ಜೀವಿ ಕನಿಷ್ಠ 16ದಿನದವರೆಗೆ ಜೀವಿಸಲಿದ್ದು, ಕನಿಷ್ಠ 3ರಿಂದ 6 ತಿಂಗಳೊಳಗೆ ಪಪ್ಪಾಯಿ ಮಿಲಿಬಗ್ ಬಾಧೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲಿದೆ. ಜತೆಗೆ, ರೈತರು ಸ್ವತಃ ಈ ಪರತಂತ್ರ ಜೀವಿ ಉತ್ಪಾದಿಸಿಕೊಳ್ಳಬಹುದು.

ಪಪ್ಪಾಯಿ ಮಿಲಿಬಗ್‌ನ ಮೊಟ್ಟೆಚೀಲದೊಳಗೆ ಈ ಪರತಂತ್ರ ಜೀವಿ ತನ್ನ ಮೊಟ್ಟೆ ಇಡಲಿದೆ. ಅದರ ಮರಿಗಳು ಮೊಟ್ಟೆ ಒಡೆದು ಹೊರಬರುವಾಗ ಪಪ್ಪಾಯಿ ಮಿಲಿಬಗ್ ಹಾವಳಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಲಿದೆ. ಈಗಾಗಲೇ, ತಮಿಳುನಾಡಿನಲ್ಲಿ ಪರಂಗಿ ಗಿಡ ಮತ್ತು ಹಿಪ್ಪುನೇರಳೆ ಬೆಳೆಗೆ ಕಾಣಿಸಿಕೊಂಡಿದ್ದ ಪಪ್ಪಾಯಿ ಹಿಟ್ಟು ತಿಗಣೆ ಹಾವಳಿಯನ್ನೂ ಈ ಜೈವಿಕ ವಿಧಾನದ ಮೂಲಕ ನಿಯಂತ್ರಿಸಲಾಗಿದೆ.

ಶೇ90ರಷ್ಟು ಹತೋಟಿ:  ‘ಚಾ.ನಗರ ತಾಲ್ಲೂಕಿನ ಗಡಿ ಭಾಗದಿಂದಲೇ ಪಪ್ಪಾಯಿ ಮಿಲಿಬಗ್ ರಾಜ್ಯಕ್ಕೆ ದಾಳಿ ಇಟ್ಟಿದೆ. ಜೈವಿಕ ನಿಯಂತ್ರಣದ ಮೂಲಕ ರೋಗದ ಹತೋಟಿ ಸಾಧ್ಯ. ಬೆಳೆಗಾರರು ಹೆದರ ಬೇಕಿಲ್ಲ. ಈಗಾಗಲೇ, ಬೆಂಗಳೂರಿನ  ರಾಷ್ಟ್ರೀಯ ಕೃಷಿ ಪ್ರಾಮುಖ್ಯ ಕೀಟಗಳ ಬ್ಯೂರೊದಿಂದ ಪರತಂತ್ರ ಜೀವಿ ಅಭಿವೃದ್ಧಿಪಡಿಸಿ ಉಚಿತವಾಗಿ ವಿತರಿಸಲಾಗುತ್ತಿದೆ’ ಎಂದು ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನಾ ಮತ್ತು ತರಬೇತಿ ಕೇಂದ್ರದ ನಿರ್ದೇಶಕ ಡಾ.ಎಸ್.ಎಂ.ಎಚ್. ಖಾದ್ರಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಪ್ಪಾಯಿ ಮಿಲಿಬಗ್ 60ಕ್ಕೂ ಹೆಚ್ಚು ಸಸ್ಯಗಳಿಗೆ ಹಾನಿ ಮಾಡುತ್ತದೆ. ತರಕಾರಿಯಿಂದ ಹಿಡಿದು ತೇಗ, ಪಾರ್ಥೇನಿಯಂ ಭಕ್ಷಿಸುವ ಗುಣ ಈ ಕೀಟಕ್ಕಿದೆ. ದೇಶದಲ್ಲಿ ಪಿಂಕ್ ಪಪ್ಪಾಯಿ ಮಿಲಿಬಗ್ ಹಾವಳಿಯಿದೆ. ಇದು ರೇಷ್ಮೆ ಬೆಳೆ ಮೇಲೆ ಹೆಚ್ಚಿನ ಹಾನಿ ಮಾಡುವುದಿಲ್ಲ ಎಂದರು.

ಬೆಂಗಳೂರಿನ ರಾಷ್ಟ್ರೀಯ ಕೃಷಿ ಪ್ರಾಮುಖ್ಯ ಕೀಟಗಳ ಬ್ಯೂರೊದ ಪ್ರಧಾನ ವಿಜ್ಞಾನಿ ಡಾ.ಎ.ಎಚ್. ಶೈಲೇಶ್ ಮಾತನಾಡಿ, ಪರತಂತ್ರ ಜೀವಿಯು ಪಪ್ಪಾಯಿ ಮಿಲಿಬಗ್ ಹೊರತುಪಡಿಸಿ ಯಾವುದೇ ಸಸ್ಯಕ್ಕೂ ಹಾನಿ ಮಾಡುವುದಿಲ್ಲ. ಪ್ರಸ್ತುತ ಬ್ಯೂರೊದಲ್ಲಿ ನಿತ್ಯವೂ 4ರಿಂದ 5 ಸಾವಿರ ಪರತಂತ್ರ ಜೀವಿ ಉತ್ಪಾದಿಸಲಾಗು ತ್ತಿದೆ. ಕನಿಷ್ಠ 1 ಎಕರೆ ಹಿಪ್ಪುನೇರಳೆ ತೋಟಕ್ಕೆ 250 ಅಸೆರೋಫ್ಯಾಗಸ್ ಪಪ್ಪಾಯೆ ಬಿಟ್ಟರೆ ರೋಗ ಪೂರ್ಣ ಹತೋಟಿಗೆ ಬರುತ್ತದೆ ಎಂದು ವಿವರಿಸಿದರು.

ರೈತರೇ ಸ್ವತಃ ಈ ಪರತಂತ್ರ ಜೀವಿ ಬೆಳೆಸಬಹುದು. ಆಲೂಗೆಡ್ಡೆ ಅಥವಾ ರೇಷ್ಮೆ ಎಲೆಯ ಮೇಲೆ ಪರತಂತ್ರ ಜೀವಿ ಬಿಟ್ಟಾಗ ನಿರ್ದಿಷ್ಟ ವೇಳೆಗೆ 60ರಿಂದ 100 ಸಂಖ್ಯೆವರೆಗೆ ಪರತಂತ್ರ ಜೀವಿ ಬೆಳೆಯುತ್ತವೆ. ಅವುಗಳನ್ನು ಪಪ್ಪಾಯಿ ಮಿಲಿಬಗ್ ಹಾವಳಿ ಇರುವ ಕಡೆಗಳಲ್ಲಿ ಬಿಡಬಹುದು ಎಂದರು. ಜಿಲ್ಲಾಧಿಕಾರಿ ಕೆ. ಅಮರನಾರಾಯಣ ಮಾತನಾಡಿ, ‘ರೇಷ್ಮೆ ಇಲಾಖೆಯಿಂದ ಮೊಬೈಲ್ ವ್ಯಾನ್‌ಗಳ ಮೂಲಕ ರೈತರಿಗೆ ಅರಿವು ಮೂಡಿಸಬೇಕು.

ರೋಗಬಾಧೆಗೆ ತುತ್ತಾದ ತೋಟಗಳಿಗೆ ಭೇಟಿ ನೀಡಿ ಪರತಂತ್ರ ಜೀವಿ ಬಿಡಬೇಕು. ಇದಕ್ಕೆ ಜಿಲ್ಲಾಡಳಿತದಿಂದ ಎಲ್ಲಾ ನೆರವು ನೀಡಲಾಗುವುದು. ಜತೆಗೆ, ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಹೆಚ್ಚಿನ ನೆರವು ಪಡೆಯಲಾಗುವುದು’ ಎಂದು ಭರವಸೆ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ಯೋಜನಾ ಸಂಯೋಜಕ ಡಾ.ಸಿ. ದೊರೆಸ್ವಾಮಿ, ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಪೃಥ್ವಿರಾಜ್, ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರದ ಜಂಟಿ ನಿರ್ದೇಶಕ ಡಾ.ಡಿ.ಎಸ್. ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT