ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತೂ ಬಂತು ಸೇವಂತಿಗೆಗೆ ಬಂಪರ್ ಬೆಲೆ

Last Updated 21 ಸೆಪ್ಟೆಂಬರ್ 2011, 5:30 IST
ಅಕ್ಷರ ಗಾತ್ರ

ಡಂಬಳ: ಈ ಬಾರಿ ಮಾರುಕಟ್ಟೆಯಲ್ಲಿ ಹೂ ಬೆಳೆಗೆ ಬಂಪರ್ ಬೆಲೆ ಇರುವುದರಿಂದ ಹೂ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. 

 ಕಳೆದ ವರ್ಷಕ್ಕಿಂತ ಈ ವರ್ಷ ಹೂವಿಗೆ ಬೇಡಿಕೆ ಹೆಚ್ಚಾಗಿದ್ದು, ರೈತರಿಗೂ ಸೂಕ್ತ ಬೆಲೆ ದೊರಕುತ್ತಿದೆ.
ಡಂಬಳ ಸೇರಿದಂತೆ ಡೋಣಿ, ಅತ್ತಿಕಟ್ಟಿ, ಕದಾಂಪುರ, ಸಿಂಗಟಾ ರಾಯನ ಕೆರೆ ತಾಂಡೆ, ಶಿವಾಜಿ ನಗರ, ಜಂತ್ಲಿ- ಶಿರೂರ, ನಾರಾಯಣಪುರ, ಪೇಟಾ ಆಲೂರ ಪ್ರದೇಶಗಳಲ್ಲಿ ವಿವಿಧ ಬಗೆಯ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ.

ಈ ಬಾರಿ ಇಲ್ಲಿನ ರೈತರು ಹೂ ಬೆಳೆಯನ್ನು ವಿಪುಲವಾಗಿ ಬೆಳೆಯುವ ಮೂಲಕ ಭರಪೂರ ಆದಾಯ ಪಡೆಯುತ್ತಿದ್ದಾರೆ.

ಈ ಭಾಗದಲ್ಲಿ ಸೇವಂತಿ, ಚೆಂಡು ಹೂ, ಸುಗಂಧಿ, ಕರ್ನೂಲ್, ರಾಜ್, ಕಾಕಡಾ, ಸರವಾಳ, ಮತ್ತೂರ ಅಷ್ಟೇ ಅಲ್ಲದೆ ನೀಲಂ, ಚಂದ್ರಿಕಾ, ಎಲೋಗೋಲ್ಡ್ ತಳಿಯ ಹೂ ಬೆಳೆಯನ್ನು ಬೆಳೆಯಲಾಗಿದೆ.

ಇದೀಗ ರಾಜ್ಯದ ವಿವಿಧ ಪ್ರಮುಖ ಮಾರುಕಟ್ಟೆಗಳಿಗೆ ಇಲ್ಲಿನ ಹೂವಿಗೆ ಬೇಡಿಕೆ ಇದ್ದು, ಮಾರಾಟವಾಗುತ್ತಿದೆ.
ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ, ಬೆಂಗಳೂರು ಸೇರಿದಂತೆ ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗೋವಾ, ಕೊಲ್ಲಾಪುರ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹೂವಿಗೆ ಈ ಬಾರಿ ಉತ್ತಮ ಧಾರಣೆ ದೊರೆತಿದೆ. 

ಸಾಂಪ್ರದಾಯಿಕ ಬೆಳೆಗಳ ಬದಲಾಗಿ ಪರ್ಯಾಯ ಬೆಳೆಯಾಗಿ ಕಂಡುಕೊಂಡ ಹೂ ಬೆಳೆ ಪ್ರತಿ ಎಕರೆ ಪ್ರದೇಶದಲ್ಲಿ ಪ್ರತಿ ಕಟಾವಿಗೆ 3-4 ಕ್ವಿಂಟಲ್ ಹೂವನ್ನು ರೈತರು ಪಡೆಯುತ್ತಿದ್ದಾರೆ. ಇದೀಗ ಮಾರುಕಟ್ಟೆಯಲ್ಲಿ ಕರ್ನೂಲ್ ಹೂವಿಗೆ 80 ರೂಪಾಯಿ, ರಾಜ್ ಇತರೆ ಹೂವಿಗೆ 70ರಿಂದ 80 ರೂಪಾಯಿ ಬೆಲೆ ಇದೆ.

ನಾಟಿ ಮಾಡಿದ ಆರು ತಿಂಗಳಲ್ಲಿ ಹೂ ಬೆಳೆ ರೈತರಿಗೆ ಬಂಪರ್ ಲಾಭ ತಂದು ಕೊಟ್ಟಿದೆ. ನಮ್ಮ ಹೂವಿಗೆ ಹಬ್ಬದ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಬೆಲೆ ದೊರೆಯುತ್ತದೆ. ಇದರಿಂದ ನಮ್ಮ ಆದಾಯ ಹೆಚ್ಚುತ್ತದೆ ಎಂದು ರಮೇಶ ಹಳ್ಳಿ `ಪ್ರಜಾವಾಣಿ~ಗೆ ತಿಳಿಸಿದರು.

ಹೂ ಬೆಳೆಯ ಮಧ್ಯ ಮಿಶ್ರ ಬೇಸಾಯವಾಗಿ ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದಾರೆ.
28.33 ಹೆಕ್ಟೇರ್ ಪ್ರದೇಶದಲ್ಲಿ ಹೂ ಬೆಳೆ ಬೆಳೆಯಲಾಗಿದೆ. ಇದರ ಮೂಲಕ ರೈತರು ಕೃಷಿಯಲ್ಲಿ ಹೊಸತನವನ್ನು ಕಂಡುಕೊಂಡಿದ್ದಾರೆ.

ಅತಿ ಹೆಚ್ಚು ಪ್ರಮಾಣದ ಒಣ ಭೂಮಿ ಪ್ರದೇಶ ಹೊಂದಿರುವ ಈ ಪ್ರದೇಶದಲ್ಲಿ ಕೊಳವೆ ಬಾವಿ ಮೂಲಕ ನೀರನ್ನು ಪಡೆದು  ಹೂ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಇಲ್ಲಿನ ರೈತರರು ಇತರರಿಗೆ ಮಾದರಿಯಾಗಿದ್ದಾರೆ.

ಹೂ ಬೆಳೆಗಳ ಸಂರಕ್ಷಣೆಗಾಗಿ ಅಗತ್ಯವಿರುವ ಶೈತ್ಯಗಾರವನ್ನು ಡಂಬಳ ಹೋಬಳಿಯ ಪ್ರದೇಶ ವ್ಯಾಪ್ತಿಯಲ್ಲಿ ಸರ್ಕಾರ ನಿರ್ಮಿಸಬೇಕು ಎಂಬುದು ಹೂವು ಬೆಳೆಯುವವರ ಕೋರಿಕೆ ಆಗಿದೆ.

ಹೂವಿನ ಸಂರಕ್ಷಣೆ, ಮಾರಾಟ ಕುರಿತಂತೆ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆ ತರಬೇತಿ ನೀಡಬೇಕು. ಇದು ನಿರಂತರವಾಗಿ ನಡೆಯಬೇಕು. ಜೊತೆಗೆ ಆಧುನಿಕತೆ ಅಳವಳಡಿಸಿಕೊಳ್ಳಲು ಸೂಕ್ತ ತಜ್ಞರಿಂದ ವಿಚಾರ ಸಂಕಿರಣವನ್ನು ಆಗಾಗ ಏರ್ಪಡಿಸಬೇಕು ಜೊತೆಗೆ ತರಬೇತಿಯನ್ನು  ಏರ್ಪಡಿಸಬೇಕು ಎಂಬುದು ಈ ಭಾಗದ ಹೂವಿನ ಬೆಳೆಗಾರರ ಆಗ್ರಹವಾಗಿದೆ.                
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT