ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದ ಬರೀ ದೇಹಕ್ಕಲ್ಲ...

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕಳೆದ 20 ವರ್ಷಗಳಿಂದ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತಾ ಬಂದಿದ್ದೇವೆ. ಆದರೆ ಈ ಅವಧಿಯಲ್ಲಿ ಹೆಚ್ಚಿನದೇನನ್ನೂ ಸಾಧಿಸಲಾಗಿಲ್ಲ ಎಂಬ ಕಟು ಸತ್ಯ ಭಾರತದ ಮನೋವೈದ್ಯಕೀಯ ಅಂಕಿ-ಅಂಶಗಳನ್ನು ನೋಡಿದಾಗ ಗೋಚರವಾಗುತ್ತದೆ.

ಮನೋವೈದ್ಯಕೀಯ ಸಮಸ್ಯೆಗಳಲ್ಲಿ ಸಾಮಾನ್ಯವಾದ `ಖಿನ್ನತೆ~ 70 ದಶಲಕ್ಷ ಭಾರತೀಯರನ್ನು ಕಾಡುತ್ತಿದೆ. ನಮ್ಮಲ್ಲಿ ಖಿನ್ನತೆಯಂತಹ ಸಾಮಾನ್ಯ ಕಾಯಿಲೆಗೂ ಚಿಕಿತ್ಸೆಗಾಗಿ ವೈದ್ಯರನ್ನು ನೋಡುವುದಕ್ಕೆ ಹೋಗಲು ಕೆಲವು ವರ್ಷಗಳೇ ಹಿಡಿಯುತ್ತವೆ!

ಇನ್ನು ಚಿತ್ತವಿಕಲತೆ- ಗೀಳು- ಉನ್ಮಾದದಂತಹ ಸಮಸ್ಯೆಗಳಿಗಂತೂ ಕೇವಲ ರೋಗಿಯಷ್ಟೇ ಅಲ್ಲ, ಅವರಿಂದ ಕುಟುಂಬದವರೂ ಮನೋಕ್ಲೇಶಕ್ಕೆ ಒಳಗಾದ ನಂತರವಷ್ಟೇ ವೈದ್ಯರ ಬಳಿಗೆ ಕರೆತರುವ ಪ್ರಯತ್ನ ನಡೆಯುತ್ತದೆ!

ಮನೋವೈದ್ಯರನ್ನು ನೋಡಲು, ನಮ್ಮ ಕಾಯಿಲೆ `ಮಾನಸಿಕ~ ಕ್ಷೇತ್ರಕ್ಕೆ ಸಂಬಂಧಿಸಿದ್ದು ಎಂದು ಒಪ್ಪಿಕೊಳ್ಳಲು ಇಷ್ಟೊಂದು ಹಿಂಜರಿಕೆ ಏಕೆ? ಉತ್ತರ ಸುಸ್ಪಷ್ಟ. ದೇಹದ ಇತರ ಭಾಗಗಳಂತೆಯೇ `ಮನಸ್ಸು~ ಎಂಬ ವೈಜ್ಞಾನಿಕ ಸತ್ಯ ಇನ್ನೂ ಜನರನ್ನು ತಲುಪದಿರುವುದು.
 
ಅದರ ಪರಿಣಾಮ ಇನ್ನೊಬ್ಬರಿಗೆ ಮಾನಸಿಕ ಕಾಯಿಲೆಯಾದಾಗ ಅದನ್ನು ಗೇಲಿ ಮಾಡುವುದು, ಕೀಳಾಗಿ ನೋಡುವುದು, ತಮಗೇ ಬಂದಾಗ ಅದನ್ನು ಮುಚ್ಚಿಡುವುದು, ಮನೋವೈದ್ಯರ ಕೊರತೆ, ಔಷಧಿಯಿಲ್ಲದೇ ನಿಮ್ಮ ಎಲ್ಲ ಕಾಯಿಲೆಗಳನ್ನೂ ಗುಣಪಡಿಸುತ್ತೇವೆ ಎನ್ನುವ `ನಕಲಿ~ ವೈದ್ಯರು, `ದೇವ~ ಮನುಷ್ಯರು... ಇವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿವೆ.  

ಬಹುತೇಕ ಸಂದರ್ಭಗಳಲ್ಲಿ ಮನಸ್ಸಿನ ಆತಂಕ- ಖಿನ್ನತೆಗಳು, ಏರುಪೇರುಗಳ ಲಕ್ಷಣ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಾಗಿಯೇ ರೋಗಿ ತಲೆನೋವು ಎಂದಾಕ್ಷಣ `ಯಾರು ನಿನ್ನ ತಲೆನೋವು?~ ಎಂದು ಕೇಳು, ಬೆನ್ನು ನೋವು ಎಂದರೆ `ಏನು ನಿನ್ನ ಬೆನ್ನಿನ ಮೇಲಿನ ಹೊರೆ?~ ಎಂದು ಕೇಳು ಎನ್ನುವ ನಾಣ್ನುಡಿಗಳು ಇಂದಿಗೆ ಹೆಚ್ಚು ಪ್ರಸ್ತುತ.
 
ಮೂಳೆ ಮುರಿದಿರಲಿ, ಸಕ್ಕರೆ ಕಾಯಿಲೆಯಿರಲಿ, ಹೊಟ್ಟೆನೋವಿರಲಿ, ಕೊನೆಗೆ ಸಾಮಾನ್ಯ ನೆಗಡಿಯೇ ಆಗಿರಲಿ ಮೆದುಳಿನ ಸಹಾಯದಿಂದಲೇ ಈ ಎಲ್ಲ `ನೋವು~ಗಳೂ ಅನುಭವಕ್ಕೆ ಬರುತ್ತವೆ. ಹಾಗಾಗಿ ಮನಸ್ಸಿನ ಕೇಂದ್ರವಾದ ವೆುದುಳಿನ ಕೆಲವು ಭಾಗಗಳು ಈ ಎಲ್ಲ ಕಾಯಿಲೆಗಳಲ್ಲೂ ನರಳುತ್ತವೆ.

ಹಾಗೆಯೇ ಮೆದುಳಿನ ಈ `ಮನಸ್ಸಿನಲ್ಲಿ~ ಆಗುವ ರಾಸಾಯನಿಕಗಳ ಏರುಪೇರು ದೇಹದ ಹಲವು ಭಾಗಗಳಿಗೆ ನೋವಿನ, ವಿವಿಧ ಸ್ಪಂದನೆಗಳ ಸಂಕೇತಗಳನ್ನು ಕಳುಹಿಸುತ್ತದೆ. ಹಾಗಾಗಿಯೇ ದೇಹ- ಮನಸ್ಸು ಜೊತೆಯಾಗಿ ಯಾವುದೇ ಕಾಯಿಲೆಯನ್ನೂ ಅನುಭವಿಸುತ್ತವೆ!

ಮಾನಸಿಕ ಸ್ಥಿರತೆ- ಸ್ವಾಸ್ಥ್ಯ ದೇಹದ ರೋಗನಿರೋಧಕ ಶಕ್ತಿಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಯಾವುದೇ ರೋಗವನ್ನೂ ಮನೋಸ್ಥೈರ್ಯದಿಂದ ಗೆಲ್ಲಲು ಸಾಧ್ಯವಿದೆ ಎಂಬುದು ವೈಜ್ಞಾನಿಕ ಸತ್ಯ. ಹಾಗಾಗಿಯೇ ಇಂದು ರಕ್ತದೊತ್ತಡ, ಆಸ್ತಮಾ, ಮಧುಮೇಹ, ಕ್ಯಾನ್ಸರ್, ಏಡ್ಸ್ ಇವೆಲ್ಲವೂ ಕೇವಲ ದೈಹಿಕ ಕಾಯಿಲೆಗಳಾಗಿ ಉಳಿಯದೆ `ಮನೋದೈಹಿಕ~ ಕಾಯಿಲೆಗಳೆನಿಸಿವೆ. ಇವೆಲ್ಲದರ ಚಿಕಿತ್ಸೆಯಲ್ಲಿ ರೋಗಿಯ `ಮನಸ್ಸೂ~ ಮುಖ್ಯವೇ.

ದೇಹದ ಆರೈಕೆ- ಸುಸ್ಥಿತಿ- ಸೌಂದರ್ಯದ ಅವಶ್ಯಕತೆಯಂತೆಯೇ ಮನಸ್ಸಿನ ಆರೈಕೆ, ಸೌಂದರ್ಯ ಸಹ ಮುಖ್ಯ. ನಕಾರಾತ್ಮಕ ಭಾವನೆಗಳು, ಅತಿಯಾದ ಕೋಪ ಮನಸ್ಸನ್ನು ಕೆಡಿಸುವುದಷ್ಟೇ ಅಲ್ಲ ದೇಹದ ಮೇಲೂ ಪರಿಣಾಮ ಬೀರುತ್ತವೆ. ಬೊಜ್ಜು, ಮಧುಮೇಹ, ಪಾರ್ಶ್ವವಾಯು, ಕ್ಯಾನ್ಸರ್, ರಕ್ತದೊತ್ತಡ ಈ ಎಲ್ಲಕ್ಕೂ ನಕಾರಾತ್ಮಕ ಭಾವನೆಗಳನ್ನು ಒಂದು ಕಾರಣವಾಗಿ ವಿಜ್ಞಾನ ಗುರುತಿಸುತ್ತದೆ.

ಇನ್ನು ಸಮಾಜದ ದೊಡ್ಡ ಪಿಡುಗಾದ ಮಾದಕದ್ರವ್ಯ ವ್ಯಸನಗಳಂತೂ ಮನೋವೈದ್ಯಕೀಯ ಜಗತ್ತಿನ ಬಹು ದೊಡ್ಡ ಸವಾಲು. ಖಿನ್ನತೆ, ಆತಂಕ, ಗೀಳಿನಂತಹ ಕಾಯಿಲೆ ಬಂದಾಗ ಕಾಣಿಸಿಕೊಳ್ಳುವ ದೈಹಿಕ ಲಕ್ಷಣಗಳ ಬಗೆಗಿನ ತಪ್ಪು ನಂಬಿಕೆಗಳು ರೋಗಿ ಮನೋವೈದ್ಯಕೀಯ ಚಿಕಿತ್ಸೆಯನ್ನು ಬಿಟ್ಟು ಅನಗತ್ಯ ಪರೀಕ್ಷೆಗಳಿಗೆ ಒಳಗಾಗುವಂತೆ, ತಪ್ಪು ಔಷಧಿಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ.

ಮನೋರೋಗಿಗಳನ್ನು, ಅವರ ಕುಟುಂಬದವರನ್ನು ಅತ್ಯಂತ ನೋವಿಗೀಡು ಮಾಡುವ, ಹಿಂಜರಿಯುವಂತೆ ಮಾಡುವ ಸಂಗತಿಯೆಂದರೆ ಬೇರೆ ರೋಗಗಳಿಗೆ ಇರುವ `ರೋಗಿ~ ಎಂಬ ಸಾಮಾನ್ಯ ಹಣೆಪಟ್ಟಿಯು `ಮನೋರೋಗಿ~ ಎಂಬ `ವಿಶೇಷ~ ಅಡ್ಡ ಹೆಸರಾಗಿ ಅವರ ವಿಷಯದಲ್ಲಿ ಬದಲಾಗುವುದು. ಇದರಿಂದ ಮನೋವೈದ್ಯರ ಬಳಿ ಹೋಗಲು ಹಿಂಜರಿಯುವುದು, ಚಿಕಿತ್ಸೆಗೆ ಬರುವ ರೋಗಿಗಳೂ ಮತ್ತೆ ಮತ್ತೆ ಚಿಕಿತ್ಸೆಯನ್ನು ಮಧ್ಯದಲ್ಲೇ ನಿಲ್ಲಿಸುವಂತಹ ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ.

ವೈದ್ಯ ವಿಜ್ಞಾನದ ಸಂಶೋಧನೆಗಳು `ದೇಹ- ಮನಸ್ಸು~ ಎಂಬ ಭಿನ್ನತೆಯನ್ನು ಹೋಗಲಾಡಿಸಿ `ಮನೋದೈಹಿಕ~ ಎಂಬ ಸತ್ಯವನ್ನು ಹೊರತಂದಿವೆ. ಇದನ್ನು  ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಈ ಸಂದರ್ಭದಲ್ಲಿ `ಮನಸ್ಸಿ~ರುವ ಮನುಷ್ಯರೆಲ್ಲರೂ ತಿಳಿದುಕೊಳ್ಳಬೇಕು. ಆರೋಗ್ಯಕ್ಕಾಗಿ ಮನಸ್ಸು- ದೇಹಗಳೆರಡರ ಪೋಷಣೆ, ಅನಾರೋಗ್ಯವಾದಾಗ ಎರಡಕ್ಕೂ ಸಮಾನ ಚಿಕಿತ್ಸೆ ಅಗತ್ಯ ಎಂಬುದನ್ನು ಮನಗಾಣಬೇಕು.

ನಮ್ಮ ಬಲ ನಮ್ಮ ಕೈಯಲ್ಲಿ
ದೇಶ ಮನೋವೈದ್ಯರ ತೀವ್ರ ಕೊರತೆ ಎದುರಿಸುತ್ತಿದೆ. ನಮ್ಮ ರಾಜ್ಯದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ದೇಶದ 100 ಕೋಟಿಗೂ ಹೆಚ್ಚು ಜನಸಂಖ್ಯೆಗೆ ಕೇವಲ 4 ಸಾವಿರ ಮನೋವೈದ್ಯರಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ವೈದ್ಯರ ಕೊರತೆಯನ್ನೇ ನೀಗಿಸಲು ಸಾಧ್ಯವಾಗಿಲ್ಲ, ಇನ್ನು ಮನೋ ರೋಗಿಗಳ ಸಂಖ್ಯೆಗೆ ತಕ್ಕಷ್ಟು ಮನೋವೈದ್ಯರನ್ನು ನಿಯೋಜಿಸುವುದಂತೂ ದೂರದ ಮಾತೇ ಸರಿ  ಎಂಬಂತಹ ಪರಿಸ್ಥಿತಿ ಇದೆ.

ಮನೋರೋಗದ ಚಿಕಿತ್ಸೆಗೆ ಬೇಕಾದ ಅಗತ್ಯ ಔಷಧಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಅಮಾವಾಸ್ಯೆ- ಹುಣ್ಣಿವೆುಯಂತೆ ಬಂದು ಹೋಗುತ್ತವೆ. 1987ರ ಮಾನಸಿಕ ಕಾಯಿಲೆ ಕಾಯ್ದೆ ಪ್ರಕಾರ ಮಾನಸಿಕ ಆರೋಗ್ಯದ ಚಿಕಿತ್ಸೆ ಪ್ರಾಥಮಿಕ ಹಂತದಲ್ಲೂ ಲಭ್ಯವಿರಬೇಕು ಮತ್ತು ಅದು ಪ್ರಜೆಗಳ ಹಕ್ಕು ಕೂಡ.

ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿ ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಗಳೆಂದು ವಿಂಗಡಣೆಯಾಗಿದ್ದು, ಪ್ರತಿ ನಾಗರಿಕನಿಗೂ ಮನೋವ್ಯಾಧಿಗೆ ಚಿಕಿತ್ಸೆ ಲಭ್ಯವಿರಬೇಕು. ಆದರೆ ನೈಜ ಸ್ಥಿತಿ ಬೇರೆಯೇ ಇದೆ. ಹೀಗಾಗಿ  ನಮ್ಮ ಮನೋಬಲವನ್ನು ನಾವೇ ಕಾಪಾಡಿಕೊಳ್ಳಬೇಕಾಗಿದೆ.

ಖಿನ್ನತೆಗೆ ಕಾರಣ
ಖಿನ್ನತೆಗೆ ಹಲವಾರು ಕಾರಣಗಳುಂಟು. ಇದು ಕೇವಲ ಆನುವಂಶೀಯತೆಯಿಂದ ಬರದು. ಸಾಮಾಜಿಕ ತೊಂದರೆಗಳು, ಬರ, ತೀವ್ರ ಕಷ್ಟ ನಷ್ಟ, ಸೋಲು, ಸ್ಥಾನಮಾನ ಕಳೆದುಕೊಳ್ಳುವುದು, ದುರಂತ, ಅಪಘಾತ, ಶೋಷಣೆ, ವ್ಯಕ್ತಿತ್ವ ದೋಷ, ಅಂಗವೈಕಲ್ಯ, ದೀರ್ಘಕಾಲ ಅಥವಾ ಪ್ರಾಣಾಂತಿಕವಾದ ಕಾಯಿಲೆಗಳು, ಹಾರ್ಮೋನ್ ವ್ಯತ್ಯಾಸ, ಅವಮಾನ, ಕಳಂಕಗಳಿಂದಲೂ ಬರುತ್ತದೆ.

ಈ ಲಕ್ಷಣಗಳು ಇವೆಯೇ?
ಖಿನ್ನತೆಗೆ ಒಳಗಾದವರಲ್ಲಿ ಬಲಹೀನತೆ, ಆಲಸ್ಯ, ನಿರಾಸೆ, ಮಂದಗತಿ, ಏಕಾಗ್ರತೆ ಕೊರತೆ, ಜ್ಞಾಪಕಶಕ್ತಿ ಕ್ಷೀಣಿಸುವುದು, ಕಮ್ಮಿ ಅಥವಾ ಹೆಚ್ಚು ನಿದ್ರೆ ಮತ್ತು ಹಸಿವು, ಕಣ್ಣೀರಿಡುವುದು, ನಕಾರಾತ್ಮಕ ಆಲೋಚನೆ, ಅಪರಾಧಿ ಮನೋಭಾವ, ಲೈಂಗಿಕ ನಿರಾಸಕ್ತಿ, ಕಾರ್ಯದಕ್ಷತೆಯ ವೈಫಲ್ಯ, ಬಾಂಧವ್ಯದಲ್ಲಿ ವಿರಸ ಹಾಗೂ ಆತ್ಮಹತ್ಯೆಯ ಯೋಚನೆ ಕಾಣಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT