ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದ ಹೆಚ್ಚಿಸುವ ಕೈತೋಟ

Last Updated 28 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗೃಹಾಲಂಕಾರದಲ್ಲಿ ಮನೆಯ ಒಳ ಆವರಣ ಎಷ್ಟು ಮುಖ್ಯವೋ,    ಹೊರ ಆವರಣವೂ ಅಷ್ಟೇ   ಮುಖ್ಯ.  ಒಂದು ಮನೆ ಎಷ್ಟೇ ಭವ್ಯವಾಗಿ, ಸುಂದರವಾಗಿ,    ವಿನ್ಯಾಸ ಮಾಡಿದ್ದರೂ, ಆ ಮನೆಯ ಹೊರಭಾಗ ಬಿಕೋ ಎನ್ನುವಂತಿದ್ದರೆ ಶೋಭೆ ತರದು.
 
ಸುಂದರವಾಗಿ ಅಲಂಕೃತಳಾದ ಸ್ತ್ರೀ ಹಣೆಗೆ ಕುಂಕುಮ ಇಡಲು ಮರೆತ ರೀತಿಯಲ್ಲಿ ಆ ಮನೆಯು ಬೋಳಾಗಿ ಕಾಣುತ್ತದೆ. ಚಂದದ      ಮನೆಯ ಮುಂದೆ ಅಂದದ ಕೈತೋಟ ಇದ್ದರೆ ಅದು  ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

ಮನೆಯ ಮುಂದಿನ ಸ್ಥಳವನ್ನು ಆಧರಿಸಿ ಚಿಕ್ಕ, ಮಧ್ಯಮ ಅಥವಾ ದೊಡ್ಡ ಕೈತೋಟಗಳನ್ನು ಮಾಡಬಹುದು. 30್ಡ40 ಅಥವಾ 40್ಡ60 ನಿವೇಶನಗಳಲ್ಲಿ ಮನೆಯನ್ನು ಕಟ್ಟಬಯಸುವವರು ನಿವೇಶನವನ್ನೆಲ್ಲಾ ಆವರಿಸುವಂತೆ ಮನೆಯನ್ನು ಕಟ್ಟುವ ಬದಲು ಸರಿಯಾದ ರೀತಿಯಲ್ಲಿ ಯೋಜನೆ ಮಾಡಿ ಮನೆಯ ಮುಂದೆ 6ರಿಂದ 10-12 ಅಡಿ ಜಾಗಬಿಟ್ಟು ಅಲ್ಲಿ ನಳನಳಿಸುವ ಕೈತೋಟವ ಮಾಡಬಹುದು. ಇದರಿಂದ ಮನೆಗೆ ಶೋಭೆ-ಮನಸ್ಸಿಗೂ ಸಂತಸ.

ಇನ್ನು 50್ಡ80 ಅಥವಾ ಸ್ವಲ್ಪ ದೊಡ್ಡ ಜಾಗವುಳ್ಳವರಂತೂ ಮನೆಯ ಸುತ್ತಲೂ ಹಸಿರು ವನರಾಶಿಯನ್ನೇ ಸೃಷ್ಟಿಸಬಹುದು.
ಮನೆಯ ಮುಂದೆ ಹುಲ್ಲಿನ ಹಾಸು, ಬದಿಯಲ್ಲಿ ನಮಗಿಷ್ಟದ ಆಕೃತಿಯಲ್ಲಿ ಕತ್ತರಿಸಬಹುದಾದಂತಹ ಅಲಂಕಾರಿಕ ಡ್ಯುರೆಂಟಾ, ಕ್ರೋಟನ್ ಗಿಡಗಳು, ಮಧ್ಯೆ ಬಗೆಬಗೆಯ ದಾಸವಾಳ, ಗುಲಾಬಿ, ಪರಿಮಳ ಸೂಸುವ ಮಲ್ಲಿಗೆ ಬೆಳೆಸಬಹುದು.  ಪುನ್ನಾಗ, ಜರೇನಿಯಂ, ಝರ್ಬೆರಾ ಹೀಗೆ ಹೂ-ಗಿಡಗಳ ಚಂದದ ತೇರು ಗಾಳಿಯಲ್ಲಿ ನರ್ತಿಸುವಾಗ ನೋಡುಗರ ಮನವೂ ನರ್ತಿಸತೊಡಗುತ್ತದೆ.

ಹುಲ್ಲು ಹಾಸು-ಗಿಡ-ಬಳ್ಳಿಗಳ ಮಧ್ಯೆ ಒಂದೆಡೆ ಪುಟ್ಟ ಕೊಳವೊಂದನ್ನು ನಿರ್ಮಿಸಿ ಅದರಲ್ಲಿ ಬಣ್ಣದ ಮೀನುಗಳನ್ನೋ, ಕಮಲದ ಬಳ್ಳಿಗಳನ್ನೋ ಬಿಟ್ಟರೆ ಅವು ನಿಮ್ಮ ಕೈತೋಟಕ್ಕೆ ನೀಡುವ ಚೆಲುವೇ ಬೇರೆ! ಕೊಳದ ನೀರನ್ನು ಕುಡಿಯಲು ಬರುವ ಹಕ್ಕಿಗಳು, ಹೂವಿನ ಮಕರಂದಕ್ಕಾಗಿ ಬರುವ ಜೇನ್ನೊಣಗಳ, ಚಿಟ್ಟೆಗಳ ಹಾರಾಟದಿಂದ ನಿಮ್ಮ ಮನೆ ಆವರಣ ನಂದನವನವಾಗುತ್ತದೆ. ಈ ಸೊಬಗನ್ನು ಅಸ್ವಾದಿಸುತ್ತಾ ಶುದ್ಧ ಹವೆಗೆ ಮೈಯ್ಯ್‌ಡ್ಡಲು ಒಂದೆರಡು ಕಲ್ಲು ಅಥವಾ ಸಿಮೆಂಟಿನ ಪುಟ್ಟ ಪುಟ್ಟ ಬೆಂಚಗಳನ್ನು ಇಡಬಹುದು. ಇದರಿಂದ ನಿಮ್ಮ ಮನೆಗೆ ಬರುವ ಸ್ನೇಹಿತರು, ಅತಿಥಿಗಳು ನಿಮ್ಮ ಕೈತೋಟದಲ್ಲೇ ಸಮಯಕಳೆಯಬಯಸಬಹುದು.

ಮನೆಯ ಹಿತ್ತಿಲು ಅಥವಾ ಅಕ್ಕಪಕ್ಕದ ಜಾಗಗಳಲ್ಲಿ ಕೊತ್ತಂಬರಿ, ಮೆಂತ್ಯ, ಪಾಲಕ್, ದಂಟು ಹೀಗೆ ಸಣ್ಣಪುಟ್ಟ ಸೊಪ್ಪುಗಳು, ತೊಂಡೆ, ಬದನೆ, ಬೆಂಡೆಕಾಯಿಯಂತಹ ತರಕಾರಿಗಳು, ಸೀಬೆ, ಸಪೋಟಾ, ಪಪ್ಪಾಯಿಯಂತಹ ಹಣ್ಣಿನ ಗಿಡಗಳನ್ನು ಬೆಳೆಸಬಹುದು. ಇದರಿಂದ  ರಾಸಾಯನಿಕ ಮುಕ್ತ ತಾಜಾ ಬೆಳೆಯೂ ನಮ್ಮ ಮನೆಗಳಲ್ಲೇ ಲಭ್ಯ!

ಸ್ಥಳದ ಅಭಾವವಿರುವವರು ಕೈತೋಟ ಮಾಡಲಾಗದೇ ನಿರಾಸೆ ಆಗಬೇಕಾಗಿಲ್ಲ. ಅಂತವರು ಟೆರೇಸ್ ಗಾರ್ಡನ್ ಮಾಡಬಹುದು ಅಥವಾ ತಮ್ಮ ಮನೆಯ ಬಾಲ್ಕನಿಯ ಮೇಲೆ, ಕಿಟಕಿಯ ದಂಡೆಗಳ ಮೇಲೆ ಹೂದಾನಿಗಳಲ್ಲಿ ಗಿಡಗಳನ್ನು ಬೆಳಸಿ ಮನೆಯನ್ನು ಹಸಿರಾಗಿಸಬಹುದು.

ಮನೆಗೆ ಭೂಷಣವಾದ ಕೈತೋಟದಿಂದ ಇನ್ನೊಂದು ಪ್ರಯೋಜನವುಂಟು. ದಿನದ ಸ್ವಲ್ಪ ಸಮಯವನ್ನು ತೋಟಕ್ಕಾಗಿ ಮೀಸಲಿರಿಸಿದರೆ, ಆ ಕೆಲಸದಿಂದ ನಮಗೆ ಹಿತಮಿತವಾದ ವ್ಯಾಯಾಮವು ದೊರಕಿ, ನಮ್ಮ ಮೈ ಮನಗಳೆರಡೂ ಚೈತನ್ಯಪೂರ್ಣವಾಗಿರುತ್ತವೆ.

ಸದಾ ಓದು, ಟಿ.ವಿ., ಕಂಪ್ಯೂಟರ್ ಹೀಗೆ ಇವುಗಳ ಮಧ್ಯೆಯೇ ಯಾವಾಗಲೂ ವ್ಯಸ್ತರಾಗಿರುವ ನಮ್ಮ ಮಕ್ಕಳನ್ನೂ ಆಗಾಗ ಕೈತೋಟದ ಕೆಲಸಕ್ಕೆ  ಕರೆಯುತ್ತಿದ್ದರೆ ಅವರಿಗೂ ಪರಿಸರದ ಕುರಿತು ಅರಿವು, ಕಾಳಜಿ, ಪ್ರೀತಿ ಮೂಡುತ್ತದೆ. ಮನೆಯ ಸುತ್ತಲಿನ ಹಸಿರು ಕೈತೋಟವು ಮನೆಯ ಅಂದವನ್ನು ಹೆಚ್ಚಿಸುವುದರ ಜತೆಗೆ ಮನಸ್ಸನ್ನೂ ಅರಳಿಸುತ್ತದೆ. 
        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT