ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದಗಾತಿ ಅರ್ಚನಾ

Last Updated 29 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

`ಪ್ರತಿಭೆ ತೋರುವ ಅವಕಾಶ ಇದ್ದರೆ ಗ್ಲಾಮರಸ್ ಪಾತ್ರ ಮಾಡಲು ಸಿದ್ಧ~ ಎನ್ನುತ್ತಾರೆ ನಟಿ ಅರ್ಚನಾ ವೇಲು. ರಂಗಭೂಮಿ ಹಿನ್ನೆಲೆಯ ಕಲಾವಿದ ಅನಂತವೇಲು ಅವರ ಪುತ್ರಿ ಈಕೆ. ಪ್ರಸ್ತುತ `ಅರಸಿ~, `ಸೀತೆ~, `ಮೂಕಾಂಬಿಕಾ~ ಮತ್ತು ತಮಿಳಿನ `ಪಾರಿಜಾತಂ~ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

ಫ್ಯಾಶನ್ ವಿನ್ಯಾಸ ಕಲಿತಿರುವ ಅರ್ಚನಾ ನಟಿಯಾಗಬೇಕೆಂದು ಅನಿಸಿದಾಗ ಅಪ್ಪನ ಮುಂದೆ ಹೇಳಿಕೊಂಡರಂತೆ. ಅಪ್ಪ ನೀಡಿದ ಸಲಹೆ ಸೂಚನೆಗಳನ್ನು ಪಡೆದು ಮೊದಲ ಬಾರಿಗೆ `ಕಾಮಧೇನು~ ಧಾರಾವಾಹಿಯಲ್ಲಿ ನಟಿಸಿದರಂತೆ.
 
ನಂತರ `ಸುಕನ್ಯಾ~ ಹಾಗೂ ತಮಿಳಿನ `ಕಣ್ಮಣಿ~ ಧಾರಾವಾಹಿಯಲ್ಲೂ ನಟಿಸಿ ಬಂದಿದ್ದಾರೆ. ಮಾತೃಭಾಷೆ ತಮಿಳಾದ ಕಾರಣ ಅಲ್ಲಿಯೂ ಪ್ರತಿಭೆ ತೋರುತ್ತಿರುವುದಾಗಿ ಹೇಳುವ ಅರ್ಚನಾಗೆ ಪೊಲೀಸ್, ಆ್ಯಕ್ಷನ್, ಹುಚ್ಚಿ, ಖಳನಾಯಕಿ ಸೇರಿದಂತೆ ಅಪರೂಪದ ಪಾತ್ರಗಳಲ್ಲಿ ನಟಿಸುವಾಸೆ ಇದೆ.

`ಕಲೆಗೆ ಕಿರುತೆರೆ, ಬೆಳ್ಳಿತೆರೆ ಎಂಬ ಬೇಧವಿಲ್ಲ. ಎರಡೂ ಕಡೆ ಪ್ರತಿಭೆ ಮಾತ್ರ ಮುಖ್ಯವಾಗುತ್ತದೆ. ಪ್ರತಿಭೆ ಇರುವವರು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದು ತಪ್ಪಲ್ಲ~ ಎನ್ನುವ ಅವರಿಗೆ ಅಪ್ಪನೇ ಗಾಡ್ ಫಾದರ್.

`ಚಿಕ್ಕವಯಸ್ಸಿನಲ್ಲಿ ಬಂದಿದ್ದ ಅವಕಾಶವನ್ನು ಅಮ್ಮ ಬೇಡ ಎಂದಿದ್ದರು. ಇದೀಗ ಅಭಿನಯ ಕ್ಷೇತ್ರದ ಔಟ್‌ಲುಕ್ ಬದಲಾಗಿರುವ ಕಾರಣ ಅವರ ಬೆಂಬಲ ದೊರಕಿದೆ~ ಎನ್ನುವ ಅರ್ಚನಾಗೆ ಅಭಿನಯವನ್ನು ಕೋರ್ಸ್ ಮೂಲಕ ಕಲಿಯುವುದಕ್ಕಿಂತ ಅಭಿನಯಿಸುತ್ತಾ ಪ್ರಯೋಗಿಕವಾಗಿ ಕಲಿಯುವುದು ಮುಖ್ಯ ಎನಿಸಿದೆ.

ಇಂದಿಗೂ ಪಾತ್ರಗಳ ಬಗ್ಗೆ ಅಪ್ಪನೊಂದಿಗೆ ಚರ್ಚಿಸುವುದಾಗಿ ಹೇಳುವ ಅವರಿಗೆ ವಸ್ತ್ರ ವಿನ್ಯಾಸದಲ್ಲೂ ಆಸಕ್ತಿ ಇದೆ. `ಎರಡೂ ಕಡೆ ಗಮನ ಹರಿಸಿದರೆ ನಿಭಾಯಿಸುವುದು ಕಷ್ಟವಾಗುತ್ತದೆ. ಅದಕ್ಕೆ ಸದ್ಯಕ್ಕೆ ನಟನೆ ಸಾಕು ಎಂದು ತೀರ್ಮಾನಿಸಿರುವೆ~ ಎನ್ನುವ ಅವರು ಐದು ಭಾಷೆ ಬಲ್ಲವರು.

`ಯಾವುದೇ ಪಾತ್ರ ಒಪ್ಪಿಕೊಂಡ ನಂತರ ಅದಕ್ಕೆ ಹತ್ತಿರದ ಪಾತ್ರಗಳನ್ನು ಸಿನಿಮಾಗಳಲ್ಲಿ ನೋಡಿ ಗಮನಿಸುವೆ. ಅದರಲ್ಲಿ ನನ್ನ ಶೈಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವೆ.

ಹಾಸ್ಯ, ಜಗಳ, ಭಾವನಾತ್ಮಕ ಹೀಗೆ ಭಿನ್ನ ದೃಶ್ಯಗಳನ್ನು ಗಮನಿಸುವುದರಿಂದಲೂ ಕಲಿಯುವುದು ಇದೆ. ಉದಾಹರಣೆಗೆ ಒಂದೇ ಸಂಭಾಷಣೆಯನ್ನು ಹತ್ತು ರೀತಿ ಹೇಳಬಹುದು. ಅದರ ತಿಳಿವಳಿಕೆ ಗಮನಿಸುವುದರಿಂದ ಬರುತ್ತದೆ~ ಎನ್ನುತ್ತಾರೆ ಅರ್ಚನಾ.

ಅಪ್ಪನಂತೆ ರಂಗಭೂಮಿಯಲ್ಲೂ ನಟಿಸುವಾಸೆ ಇರುವುದಾಗಿ ಹೇಳುವ ಅವರು ಧಾರಾವಾಹಿಗಳಲ್ಲಿ ರೀಟೇಕ್ ಇರುತ್ತದೆ ನಾಟಕಗಳಲ್ಲಿ ಅದಕ್ಕೆ ಅವಕಾಶ ಇರುವುದಿಲ್ಲ ಅದಕ್ಕೆ ರಂಗಭೂಮಿ ಆಸಕ್ತಿಕರ ಎನ್ನುತ್ತಾರೆ.

`ಕ್ಯಾಮೆರಾ ಕೆಲಸ ಮತ್ತು ಪೋಟೋಗ್ರಫಿ ಕಲಿಯುವಾಸೆಯನ್ನು ಅರುಹುವ ಅರ್ಚನಾಗೆ ಮದುವೆಗೆ ಮುಂಚೆ ಅಪ್ಪನಿಂದ ಸಿಕ್ಕಷ್ಟೇ ಬೆಂಬಲ ಮದುವೆ ನಂತರ ಪತಿಯಿಂದಲೂ ಸಿಗುತ್ತಿರುವುದು ಸಂತೋಷ ನೀಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT