ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದಗೆಟ್ಟ ಅಲಿಗದ್ದಾ

Last Updated 9 ಫೆಬ್ರುವರಿ 2011, 11:10 IST
ಅಕ್ಷರ ಗಾತ್ರ

ಕಾರವಾರಕ್ಕೆ ಹೊಂದಿಕೊಂಡಿರುವ ಅರಬ್ಬಿ ಸಮುದ್ರ ತೀರದ ಉದ್ದಕ್ಕೂ ಇರುವ ಕಿನಾರೆಗೆ ಹಲವು ಹೆಸರುಗಳಿವೆ.

ಕಾರವಾರವನ್ನು ಕರ್ನಾಟಕದ ಕಾಶ್ಮೀರ ಎಂದು ಕರೆಯುತ್ತಾರೆ. ಪಟ್ಟಣದ ಬದಿಗೇ ಇರುವ ಕಡಲ ತೀರಗಳಲ್ಲದೆ ಅಕ್ಕಪಕ್ಕ ಹತ್ತು ಹಲವು ಸುಂದರ ತೀರ ಪ್ರದೇಶಗಳಿವೆ. ಸೀಬರ್ಡ್ ನೌಕಾ ನೆಲೆ ಸ್ಥಾಪನೆಯಾದ ಬಳಿಕ ಅಂಜುದೀ(ತೀ)ವ್ ದ್ವೀಪ ಹಾಗೂ ಕೆಲ ಬೀಚ್‌ಗಳು ಪ್ರವಾಸಿಗರಿಂದ ದೂರವಾದವು. ಇತ್ತೀಚಿನ ಕೆಲವರ್ಷಗಳವರೆಗೆ ಪ್ರವಾಸಿಗರಿಗೆ ಮುದ ನೀಡುತ್ತಿದ್ದ ಕೆಲವು ಕಡಲ ತೀರಗಳ ಚಿತ್ರಣ ಈಗ ಬದಲಾಗಿ ಹೋಗಿದೆ!

 ಕಾರವಾರ ಪಟ್ಟಣಕ್ಕೆ ಹೊಂದಿಕೊಂಡಿರುವ ಕಡಲ ತೀರ ಇದ್ದುದರಲ್ಲಿ ಪರವಾಗಿಲ್ಲ. ಆದರೆ ಕಡಲಂಚಿಗೆ ಬಹಿರ್ದೆಸೆಗೆ ಕುಳಿತುಕೊಳ್ಳುವ ಜನರ ಪ್ರವೃತ್ತಿ ಇನ್ನೂ ಮುಂದುವರಿದಿದೆ. ಇದರಿಂದಾಗಿ ಕಡಲ ಅಂಚಿಗೆ ಹೋಗಿ ಸ್ವಲ್ಪ ಹೊತ್ತು ನಿಲ್ಲಲೂ ಆಗದ ಪರಿಸ್ಥಿತಿ ಇದೆ. ಕಾರವಾರದ ಕಡಲ ತೀರಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸೋದ್ಯಮ ಬೆಳೆಸುವ ಮಾತುಗಳು ಕೇಳಿ ಬರುತ್ತಿವೆಯೇ ಹೊರತು ಅವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ಸ್ಥಳೀಯ ಆಡಳಿತ ಹಾಗೂ ಜಿಲ್ಲಾಡಳಿತದ ಪ್ರಯತ್ನಗಳು ಸಫಲವಾಗಿಲ್ಲ.

ಬೈತ್‌ಕೋಲ್ ಬಂದರಿಗೆ ಹೊಂದಿಕೊಂಡಿರುವ ಅಲಿಗದ್ದಾ ಕಡಲ ತೀರ ಕೆಲ ವರ್ಷಗಳ ಹಿಂದೆ ಅತ್ಯಂತ ಮನಮೋಹಕವಾಗಿತ್ತು. ಅತ್ಯಂತ ಶುಭ್ರ  ಹಾಗೂ ಸುಂದರವಾಗಿದ್ದ ಈ ಕಡಲ ತೀರಕ್ಕೆ ನಿತ್ಯ ಸ್ಥಳೀಯರು ಹಾಗೂ ಪ್ರವಾಸಿಗಳು ಭೇಟಿ ಕೊಡುತ್ತಿದ್ದರು. ವಿದೇಶಿಯರು ಇಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಇಲ್ಲಿನ ತೀರದ ಒಂದು ತುದಿಯಲ್ಲಿ ಬಣ್ಣ, ಬಣ್ಣದ ದೋಣಿಗಳು ಸಾಲುಗಟ್ಟಿ ನಿಂತಿರುತ್ತಿದ್ದವು. ಈಗ ಬಣ್ಣಗೆಟ್ಟ ತುಕ್ಕು ಹಿಡಿದ ದೋಣಿಗಳು ನಿಂತಿವೆ.

ಸುಮಾರು ಐನೂರು ಮೀಟರ್ ಉದ್ದದ ಅಲಿಗದ್ದಾ ಕಡಲ ತೀರ ಒಂದು ಕಾಲದಲ್ಲಿ ಕಾರವಾರದ ಬೀಚುಗಳ ಪೈಕಿ ಅತ್ಯಂತ ಸುಂದರ ಎಂಬ ಹೆಸರು ಪಡೆದಿತ್ತು. ಇಲ್ಲಿ ಆಸಕ್ತರಿಗೆ ಬೋಟಿಂಗ್ ಮತ್ತು ಈಜು ಕಲಿಸಲಾಗುತ್ತಿತ್ತು. ಆದರೆ ಇಂದು ಬೀಚ್‌ನಲ್ಲಿ ಕ್ಷಣ ಹೊತ್ತು ನಿಂತುಕೊಳ್ಳಲು ಆಗದು. ತೀರದ ಉದ್ದಕ್ಕೂ ಹಲವು ಬಗೆಯ ತ್ಯಾಜ್ಯ ವಸ್ತುಗಳು ಬಂದು ಬಿದ್ದಿವೆ!

ಕಡಲ ದಡಕ್ಕೆ ಕೆಂಪು ಹಾಗೂ ಕಪ್ಪು ಮಿಶ್ರಿತ ಬಣ್ಣದ ಅಲೆಗಳು ಬಂದು ಅಪ್ಪಳಿಸುತ್ತವೆ. ಅದರ ಜತೆಗೆ ಅನೇಕ ಬಗೆಯ  ‘ಕೊಳಕು’ ದಡಕ್ಕೆ ಬಂದು ಸೇರುತ್ತಿದೆ. ಈ ವಸ್ತುಗಳು ಕೊಳೆತು ನಾರುತ್ತಿವೆ. ಇಲ್ಲಿಗೆ ಯಾರೇ ಬಂದರೂ ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ಕಾಲ್ತೆಗೆಯುತ್ತಾರೆ.

ಅದಕ್ಕೆ ಕಾರಣ. ಮ್ಯಾಂಗನೀಸ್ ಹಾಗೂ ಕಬ್ಬಿಣದ ಅದಿರು ಸಂಗ್ರಹ. ಇತ್ತೀಚಿನವರೆಗೂ ಅಲಿಗದ್ದಾ ಬೀಚ್‌ನ ಮೇಲ್ಭಾಗದಲ್ಲಿ ಅದಿರು ಸಂಗ್ರಹಿಸಲಾಗುತ್ತಿತ್ತು. ಈಗ ನಿಂತಿದೆ. ಅಲ್ಲಿ ಇಂದಿಗೂ ಉಳಿದಿರುವ ಅದಿರಿನ ಪುಡಿ ಆಗಾಗ ಸಮುದ್ರ ಸೇರುತ್ತಿದೆ. ಕಡಲ ತೀರದ ಕಲ್ಲುಗಳ ಮೇಲೆ ದಟ್ಟ ಕೆಂಪು ಬಣ್ಣ ಮಡುಗಟ್ಟಿದೆ.

ಕಡಲ ತೀರಕ್ಕೆ ಹೊಂದಿಕೊಂಡಿರುವ ಬಂದರು ಇಲಾಖೆಯಾಗಲಿ, ಅದರ ಎದುರೇ ಇರುವ ಮೀನುಗಾರಿಕೆ ಇಲಾಖೆಯಾಗಲಿ ಈ ಕುರಿತು ಲಕ್ಷ್ಯ ವಹಿಸಿಲ್ಲ. ಕಡಲ ತೀರವನ್ನು ಶುಚಿಗೊಳಿಸುವತ್ತ ನಗರಸಭೆ ಅಥವಾ ಪ್ರವಾಸೋದ್ಯಮ ಇಲಾಖೆಯಾಗಲಿ ಕಿಂಚಿತ್ತೂ ಗಮನಹರಿಸಿಲ್ಲ.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT