ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದದ ಮನೆಗೆ ಸುಗಂಧ...

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಅಂದದ ಮನೆ. ಚೆಂದದ ಪೀಠೋಪಕರಣಗಳು. ಸೌಂದರ್ಯ ಚೆಲ್ಲುವ ಕಿಟಕಿ- ಬಾಗಿಲು ಪರದೆಗಳು. ಗೋಡೆಯ ಮೇಲೆ ದುಬಾರಿ ಪೇಂಟಿಂಗ್ಸ್. ಮನೆಗೆ ಭೇಟಿ ನೀಡುವ ಅತಿಥಿ- ಅಭ್ಯಾಗತರ ಮನದಲ್ಲಿ ಇವನ್ನೆಲ್ಲಾ ನೋಡಿ ಅಸೂಯೆ ಇಣುಕಬೇಕು. ಆದರೆ, ಮನೆ ಪ್ರವೇಶಿಸಿದ ಕೂಡಲೇ, ಮೂಲೆ ಮೂಲೆಯ ಪರಿಚಯ ಮಾಡಿಕೊಳ್ಳುವಷ್ಟರಲ್ಲೇ ಮೂಗಿಗೆ ಏನೋ ವಿಚಿತ್ರ ವಾಸನೆ ಅಡರಿದ ಹಾಗೇ ಅನುಭವ. ಹೊರಗೆ ಹೋಗಿ ತಾಜಾ ಗಾಳಿಯನ್ನು ಶ್ವಾಸಕೋಶದ ತುಂಬ ಭರ್ತಿ ಮಾಡಿಕೊಳ್ಳಬೇಕೆಂಬ ಅನಿಸಿಕೆ.

ಮನೆಯೊಳಗೆ ತೇವಾಂಶ ಜಾಸ್ತಿಯಿರುವುದರಿಂದ ಗಾಳಿಯಲ್ಲಿ ಸೇರಿಕೊಂಡ ಫಂಗಸ್ ವಾಸನೆ ಕಿರಿಕಿರಿ ಉಂಟು ಮಾಡುತ್ತದೆ. ಜೊತೆಗೆ ಅಡುಗೆಮನೆಯಿಂದ ಹೊರಸೂಸುವ ವಾಸನೆಯೂ ಬೆರೆತು ಮುಳ್ಳಿನ ಮೇಲೆ ಕುಳಿತಂತಹ ತಹತಹ. ಚಳಿಗಾಲವಾದರಂತೂ ಕಿಟಕಿಗಳನ್ನು ಮುಚ್ಚುವುದರಿಂದ ಇನ್ನಷ್ಟು ಮುಗ್ಗು ವಾಸನೆ.

ಮನೆಯೊಳಗಿನ ಈ ದುರ್ಗಂಧ ಹೊಡೆದೋಡಿಸುವುದು ಹೇಗೆ? ಸುಗಂಧ ಸೂಸುವ ವಸ್ತುಗಳ ಬಳಕೆ. ಮಾರುಕಟ್ಟೆಯಲ್ಲಿ ಇದರ ಹೆಸರು `ಹೋಂ ಫ್ರಾಗ್ಸನ್ಸ್~. 1920ರ ಸುಮಾರಿಗೇ ವಿದೇಶಗಳಲ್ಲಿ ಕೃತಕ ಹಾಗೂ ನೈಸರ್ಗಿಕ ಸುಗಂಧಗಳನ್ನು ಬಳಸಿ ಮನೆಯೊಳಗಿನ ದುರ್ಗಂಧ ಓಡಿಸುವ ಪರಿಪಾಠವಿತ್ತು. 1960ರವರೆಗೂ ಇವುಗಳ ಮಾರಾಟ ಸೀಮಿತವಾಗಿತ್ತು. ಆದರೆ ಈಗ ಈ ಸುಗಂಧವನ್ನು ಮನೆಯ ಒಳಾಂಗಣ ಅಲಂಕಾರದ ಭಾಗವಾಗಿ, ಮನೆಯೊಳಗಿನ ಜಾಗ ಜಾಸ್ತಿಯಾಗುವಂತೆ ಕಾಣಲು ವ್ಯಾಪಕವಾಗಿ ಬಳಸಲಾಗುತ್ತಿದೆ.

ಮನೆ ಗೋಡೆಗಳಿಗೆ ಬಳಸುವ ಬಣ್ಣದಂತೆ ಈ ಸುಗಂಧ ಕೂಡಾ. ಕೊಠಡಿಗಳನ್ನು ವಿಶಾಲವಾಗಿ, ಅಂದವಾಗಿ ಕಾಣಿಸುವ, ಮನಸ್ಸಿಗೆ ಆಹ್ಲಾದ ಉಂಟು ಮಾಡುವ ಗುಣ ಈ ಸುಗಂಧದಲ್ಲಿದೆ. ಭಾವನೆಗಳ ಮೇಲೆ ಪರಿಣಾಮ ಬೀರಬಲ್ಲದು. ಶೇ. 75ರಷ್ಟು ಭಾವನೆಗಳನ್ನು ನಿಯಂತ್ರಿಸುವುದೇ ನಾವು ಮೂಗಿನಿಂದ ಎಳೆದುಕೊಳ್ಳುವ ವಾಸನೆ. 

ಮನೆಯೊಳಗೆ ಸುಗಂಧದ ಬಳಕೆ ಹುಟ್ಟಿದ್ದು ಗಂಧದ ಕಡ್ಡಿಗಳಿಂದ. ಮುಂಜಾನೆ, ಸಂಜೆ ದೇವರ ಪಟಕ್ಕೆ ಹಚ್ಚುವುದರ ಹಿಂದೆ ಮನೆಯೊಳಗಣ ದುರ್ಗಂಧ ಓಡಿಸುವ ಇರಾದೆಯೂ ಇದೆ. ಈಗ ಡಿಯೋಡರೆಂಟ್, ನೈಸರ್ಗಿಕ ತೈಲ, ಏರ್ ಫ್ರೆಷ್‌ನರ್, ಡಿಫ್ಯೂಸರ್, ಮೇಣದಬತ್ತಿ, ವೇಪರೈಜರ್ ಮೊದಲಾದವುಗಳು ಮಾರುಕಟ್ಟೆಗೆ ಬಂದಿವೆ.

ಮನೆಯಲ್ಲಿ ಬಳಸುವ ಸುಗಂಧವೆಂದರೆ ಮೊದಲು ನೆನಪಾಗುವುದು ಸುಗಂಧಮಯ ಮೇಣದಬತ್ತಿಗಳು. ಹಲವಾರು ವರ್ಷಗಳಿಂದ ಇವು ಬಳಕೆಯಲ್ಲಿವೆ. ಮೇಣದಬತ್ತಿಗೆ ವಿವಿಧ ಬಗೆಯ ಸುಗಂಧದ್ರವ್ಯ ಸೇರಿಸಿ ತಯಾರಿಸಲಾಗುವುದು. ಜೊತೆಗೆ ಪ್ಯಾರಾಫಿನ್ ಮೇಣಕ್ಕಿಂತ ಜೇನು ಮೇಣ, ಸೋಯಾ ಮೇಣ, ಉಪ್ಪಾಗೆ ಮೇಣ, ಪುನಪಪ್ಳಿ ಮೇಣ ಹೆಚ್ಚು ನೈಸರ್ಗಿಕ ಎನಿಸುತ್ತದೆ.

ಮನುಷ್ಯನ ಮೂಗು ಸುಮಾರು 10,000 ಸುಗಂಧಗಳನ್ನು ಪತ್ತೆ ಮಾಡುತ್ತದೆ. ಆದರೆ, ನಮಗೆ ನಿಕಟ ಎನಿಸುವ ಪರಿಮಳವನ್ನು ಆಯ್ಕೆ ಮಾಡುವುದು ಉತ್ತಮ. ಹೂವಿನ ಪರಿಮಳ, ಹಣ್ಣು, ಆಹಾರ, ಕಾಡಿನ ಸಸ್ಯಗಳು, ಮಸ್ಕ್ ಪರಿಮಳ.. ಹೀಗೆ ವೈವಿಧ್ಯತೆಗಳಿವೆ. ಕೆಲವು ಘಾಟಾದ ವಾಸನೆ ಹೊಂದಿರುವಂಥವು. ಯಾವುದು ನಿಮಗೆ ಹೊಂದುತ್ತದೋ ಅದನ್ನು ಬಳಸಿ. ಮತ್ತೆ ಕಾಲಕ್ಕೆ ತಕ್ಕಂತೆ ಅಂದರೆ ಚಳಿಗಾಲದಲ್ಲಿ ಸೇಬು, ಏಲಕ್ಕಿ ಪರಿಮಳವನ್ನು ಬಳಸಬಹುದು.

ಹೆಚ್ಚಾಗಿ ಬಳಕೆಯಲ್ಲಿರುವ ಸುಗಂಧವೆಂದರೆ ಲ್ಯಾವೆಂಡರ್, ಮಲ್ಲಿಗೆ, ಮಜ್ಜಿಗೆ ಹುಲ್ಲು, ಮ್ಯಾಗ್ನೋಲಿಯ, ಸೆಡಾರ್, ವೆನಿಲ್ಲಾ, ಲಿಂಬೆ, ಟೀ ಟ್ರೀ, ಪೆಪ್ಪರ್‌ಮಿಂಟ್ ಮೊದಲಾದವು. ಇವು ಮನಸ್ಸಿಗೆ ಹಿತವಾದ ಅನುಭವ ನೀಡುವಂತಹ ಪರಿಮಳ ಹೊಂದಿರುವ ಅವಶ್ಯಕ ತೈಲಗಳು. ಈ ಸುಗಂಧಮಯ ಮೇಣದ ಬತ್ತಿಗಳು ವಿವಿಧ ಬಣ್ಣ, ಗಾತ್ರ, ವಿನ್ಯಾಸಗಳಲ್ಲಿ ಲಭ್ಯ.       ಮಲಗುವ ಕೊಠಡಿಯಲ್ಲಿ ಒಳ್ಳೆಯ ನಿದ್ರೆಗೆ ಹಿತವಾದ ಮಲ್ಲಿಗೆ ಅಥವಾ ಶಾಮೊಮೈಲ್‌ನಂತಹ ಸೌಮ್ಯ ಸುಗಂಧ ಬಳಸಬಹುದು. ಮಜ್ಜಿಗೆ ಹುಲ್ಲು, ಗುಲಾಬಿ, ಶುಂಠಿ ಪರಿಮಳ ಹೊಂದಿರುವ ಮೇಣದ ಬತ್ತಿಗಳನ್ನು ಅತಿಥಿಗಳ ಸಂಖ್ಯೆ ಜಾಸ್ತಿ ಇರುವಾಗ ಹಾಲ್‌ನಲ್ಲಿ ಬಳಸಿದರೆ ಒಳಿತು. ಹಾಗೇ ಸ್ನಾನದ ಕೊಠಡಿಯಲ್ಲಿ ವಿರಾಮವಾಗಿ ದೀರ್ಘಕಾಲ ಸ್ನಾನದ ಖುಷಿ ಅನುಭವಿಸಬೇಕಾದರೆ ಕೂಡಾ ಮನಸ್ಸನ್ನು ಸಾಂತ್ವನಗೊಳಿಸುವಂತಹ ಸೌಮ್ಯ ಪರಿಮಳದ ಮೇಣದಬತ್ತಿ ಇಟ್ಟುಕೊಳ್ಳಬಹುದು.
ಚೆಂದದ ಮೇಣದಬತ್ತಿ ಸ್ಟ್ಯಾಂಡ್‌ಗಳೂ ಈಗ ಮಾರುಕಟ್ಟೆಯಲ್ಲಿ ಸಿಗುತ್ತವೆ. ಮೇಣದಬತ್ತಿಯಿಂದ ಅಗ್ನಿ ಅನಾಹುತ ಆಗುವ ಸಂಭವ ಜಾಸ್ತಿ. ಇದನ್ನು ತಪ್ಪಿಸಲು ನೀರಿನಲ್ಲಿ ತೇಲುವ ಮೇಣದಬತ್ತಿಗಳು ಈಗ ಮಾರುಕಟ್ಟೆಯಲ್ಲಿ ಸಿಗುತ್ತವೆ.

ಇನ್ನೊಂದು ಬಗೆ ಡಿಫ್ಯೂಸರ್. ಹೂಜಿಯಲ್ಲಿ ಸುಗಂಧಭರಿತ ತೈಲ ಹಾಕಿ ಅದರಲ್ಲಿ ಕಡ್ಡಿಗಳನ್ನು ಅರ್ಧ ಮುಳುಗುವಂತೆ ಇಡಲಾಗುವುದು. ಇತ್ತೀಚೆಗೆ ವಿದ್ಯುತ್ ಪ್ಲಗ್‌ಗೆ ಜೋಡಿಸುವ ವಾರ್ಮರ್, ವೇಪರೈಸರ್ ಕೂಡಾ ಬಂದಿದೆ. ಸುಗಂಧ ತೈಲ ಹಾಕಿದ ದ್ರವಕ್ಕೆ ಬಿಸಿ ತಗುಲಿದಾಗ ಸುವಾಸನೆ ಮನೆಯೊಳಗೆ ಹರಡುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT