ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದಾಜು ಶೇ 63ರಷ್ಟು ಮತದಾನ

Last Updated 1 ಜನವರಿ 2011, 6:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲಾ ಪಂಚಾಯ್ತಿ ಹಾಗೂ ಮೂರು ತಾಲ್ಲೂಕು ಪಂಚಾಯ್ತಿಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಂದಾಜು ಶೇ 63ರಷ್ಟು ಮತದಾನವಾಗಿದೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಅತ್ಯಧಿಕ ಸರಾಸರಿ ಶೇ 66.93, ಮಡಿಕೇರಿ ತಾಲ್ಲೂಕಿನಲ್ಲಿ ಅಂದಾಜು ಶೇ 63 ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ ಶೇ 54 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿ ಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಗಡಿ ಭಾಗ ಹಾಗೂ ಕುಗ್ರಾಮಗಳಿಂದ ಕೆಲವು ಮತಪೆಟ್ಟಿಗೆಗಳು ಬರುವುದು ತಡವಾಗಿದ್ದ ರಿಂದ ಸ್ಪಷ್ಟ ಹಾಗೂ ಸರಾಸರಿ ಮತದಾನದ ವಿವರ ಲಭ್ಯವಾಗುವುದು ರಾತ್ರಿ ತಡವಾಯಿತು.

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿ ಗಳು ಕಳೆದ ರಾತ್ರಿಯಿಂದ ಗೆಲುವಿಗೆ ಇನ್ನಿಲ್ಲದ ಪ್ರಯತ್ನ ನಡೆಸಿದರು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಬಿಜೆಪಿ- ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಂತೆ ಕಂಡು ಬಂದರೆ, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಂತೆ ಕಂಡು ಬಂದಿತು. ಮಡಿಕೇರಿ, ವಿರಾಜ ಪೇಟೆ ತಾಲ್ಲೂಕುಗಳಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಹಣಾಹಣಿ ಏರ್ಪಟ್ಟರೆ, ಕೆಲವೆಡೆ ಜೆಡಿಎಸ್ ಕೂಡ ಎರಡೂ ಪಕ್ಷಗಳ ಲಾಭ ಪಡೆಯಲು ಹವಣಿಸುತ್ತಿದೆ.

ಜಿ.ಪಂ. ಅಧ್ಯಕ್ಷ ವಿ.ಎಂ. ವಿಜಯ (ಜೆಡಿಎಸ್), ಮಾಜಿ ಅಧ್ಯಕ್ಷರಾದ ಕೆ.ಪಿ. ಚಂದ್ರಕಲಾ (ಕಾಂಗ್ರೆಸ್), ಎಚ್.ಬಿ. ಜಯಮ್ಮ (ಜೆಡಿಎಸ್), ಪಾಪು ಸಣ್ಣಯ್ಯ (ಕಾಂಗ್ರೆಸ್), ಪ್ರಮುಖ ಅಭ್ಯರ್ಥಿಗಳಾದ ಎಸ್.ಎನ್. ರಾಜಾರಾವ್ (ಬಿಜೆಪಿ), ಪಕ್ಷೇತರ ಸದಸ್ಯ ವಿ.ಪಿ. ಶಶಿಧರ್, ವಿರಾಜಪೇಟೆ ತಾ.ಪಂ. ಅಧ್ಯಕ್ಷೆ ಸರಿತಾ ಪೂಣಚ್ಚ, ಮಾಜಿ ಸಚಿವ ಬಿ.ಎ. ಜೀವಿಜಯ ಪುತ್ರ ಸಂಜಯ್ ಜೀವಿಜಯ (ಜೆಡಿಎಸ್), ವಿರಾಜಪೇಟೆ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷೆ ಕಾಂತಿ ಬೆಳ್ಯಪ್ಪ (ಬಿಜೆಪಿ), ಜಿ.ಪಂ. ಹಾಲಿ ಸದಸ್ಯರಾಗಿದ್ದ ಕರುಣ್ ಕಾಳಯ್ಯ ಪತ್ನಿ ಆಶಾ ಕಾಳಯ್ಯ ಸೇರಿದಂತೆ ಪ್ರಮುಖ ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಯಲ್ಲಿ ಭದ್ರವಾಗಿ ಉಳಿದಿದೆ.

ಮತದಾನ ಮುಗಿದ ಹಿನ್ನೆಲೆಯಲ್ಲಿ ಇನ್ನು ಮೂರು ದಿನ ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ಆಯಾ ಪಕ್ಷಗಳ ಮುಖಂಡರು ಮುಳುಗಲಿದ್ದಾರೆ. ಕಳೆದ ಬಾರಿ ಅತಂತ್ರ ಜಿ.ಪಂ. ರಚನೆಯಾಗಿದ್ದರಿಂದ ಯಾವ ಪಕ್ಷಕ್ಕೂ ಬಹುಮತ ಸಿಗಲಿಲ್ಲ. ಈ ಬಾರಿ ಸ್ಪಷ್ಟ ಬಹು ಮತ ಪಡೆಯುವ ಭರವಸೆಯನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ವ್ಯಕ್ತಪಡಿಸುತ್ತಿದ್ದು, ಜೆಡಿಎಸ್ ಕೂಡ ನಿರ್ಣಾಯಕ ಪಾತ್ರ ವಹಿಸುವ ವಿಶ್ವಾಸ ವ್ಯಕ್ತಪಡಿಸುತ್ತಿದೆ.

ಒಟ್ಟಿನಲ್ಲಿ ಜಿ.ಪಂ. ಹಾಗೂ ತಾ.ಪಂ. ಚುನಾ ವಣೆಯ ಭವಿಷ್ಯ ತಿಳಿಯಬೇಕಾದರೆ ಜನವರಿ 4ರ ವರೆಗೆ ಕಾಯಬೇಕು. ತನ್ನ ಗುಟ್ಟು ಬಿಟ್ಟುಕೊಡದ ಮತದಾರ ಮಾತ್ರ ಮುಗುಂ ಆಗಿ ಮತ ಚಲಾ ಯಿಸಿದ್ದಾನೆ. ಈ ನಡುವೆ, ಪ್ರಜ್ಞಾವಂತ ಹಾಗೂ ಸುಶಿಕ್ಷಿತ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕೊಡಗಿನಲ್ಲಿ ಚುನಾವಣೆ ಬಗ್ಗೆ ಈ ಬಾರಿ ನಿರುತ್ಸಾಹ ಕಂಡು ಬಂದಿದ್ದು ಮಾತ್ರ ಎತ್ತಿ ತೋರುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT