ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ಕೆರೆ, ಇಂದು ಆಟದ ಮೈದಾನ...!

Last Updated 30 ಜುಲೈ 2012, 6:35 IST
ಅಕ್ಷರ ಗಾತ್ರ

ಗದಗ: ಅಂದು ಕೆರೆ, ಇಂದು ಕ್ರಿಕೆಟ್ ಮೈದಾನ... ಹೌದು.. ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಭೀಷ್ಮಕೆರೆ ಇಂದು ಕ್ರಿಕೆಟ್ ಮೈದಾನವಾಗಿದೆ. ಎರಡು ವರ್ಷಗಳಿಂದ ಆವರಿಸಿರುವ ಬರಗಾಲದಿಂದ ನೀರು ಸಂಗ್ರಹವಾಗದೇ ಭೀಷ್ಮಕೆರೆ ಮಕ್ಕಳಿಗೆ ಕ್ರಿಕೆಟ್ ಆಟವಾಡಲು ಹಾಗೂ ಜಾನುವಾರುಗಳ ಮೇಯುವ ಸ್ಥಳವಾಗಿ ಮಾರ್ಪಟ್ಟಿದೆ.


130 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಈ ಕೆರೆಯಲ್ಲಿ ನೀರು ಸಂಗ್ರಹ ಗೊಂಡರೆ ಗದಗ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಾಗಿ ಕೊಳವೆ ಬಾವಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಎರಡು ವರ್ಷಗಳಿಂದ ಮಳೆ ಇಲ್ಲದೆ ಕೆರೆ ಸಂಪೂರ್ಣ ಬತ್ತಿ ಹೋಗಿದೆ.

ಪ್ರತಿ ದಿನ ಜಾನುವಾರುಗಳು ಇಲ್ಲಿ ಹುಲ್ಲು ಮೇಯುತ್ತವೆ. ಶಾಲೆ ಬಿಟ್ಟ ಬಳಿಕ ಕೆರೆ ಸುತ್ತಮುತ್ತಲ ಪ್ರದೇಶದ ಮಕ್ಕಳು ಸಹ ಇಲ್ಲಿ ಆಟವಾಡುತ್ತಾರೆ.  ಎರಡು ವರ್ಷದ ಹಿಂದೆ ಜಿಲ್ಲೆಯಲ್ಲಿ ಮಳೆ ಹೆಚ್ಚು ಬಂದಿದ್ದರಿಂದ ಕೆರೆ ಭರ್ತಿಯಾಗಿತ್ತು.

ಆಗ ರಜೆಯಲ್ಲಿ ಮಕ್ಕಳು, ಯುವಕರು ಈಜಾಡುತ್ತಿದ್ದರು. ಬಹುತೇಕ ರಜೆ ದಿನಗಳನ್ನು ಮಕ್ಕಳು ನೀರಿನಲ್ಲಿಯೇ ಆಟವಾಡುತ್ತ ಕಳೆಯುತ್ತಿದ್ದರು. ಮಹಿಳೆಯರು ಬಟ್ಟೆಗಳನ್ನು ತೊಳೆದುಕೊಂಡು ಹೋಗುತ್ತಿದ್ದರು. ಜಾನುವಾರುಗಳ ಮೈಗಳನ್ನು ಇಲ್ಲಿಯೇ ಸ್ವಚ್ಛ ಮಾಡಲಾಗುತ್ತಿತ್ತು.

ಜಿಲ್ಲೆಯಲ್ಲಿ ಈಗ ಬರಗಾಲ. ಕುಡಿಯುವ ನೀರಿಗೂ ಜನರು ಪರದಾಡುವಂತಾಗಿದೆ. ಅಂತರ್ಜಲ ಬತ್ತಿಹೋಗಿ ಕೊಳವೆಬಾವಿಗಳಲ್ಲಿ ನೀರು ಸಹ ಬರುತ್ತಿಲ್ಲ.  

ಭೀಷ್ಮಕೆರೆಗೆ ಬರುವ ನೀರಿನ ಮೂಲವನ್ನೇ ಬಂದ್ ಮಾಡಲಾಗಿದೆ. ಸಣ್ಣ ಪ್ರಮಾಣದಲ್ಲಿ ಮಳೆಯಾದರೂ ಕೆರೆಗೆ ನೀರು ಬರುತ್ತಿತ್ತು. ಕೆರೆ ಭರ್ತಿಯಾದ ಸಂದರ್ಭದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ಬರುತ್ತಿತ್ತು ಎಂಬ ಕಾರಣಕ್ಕೆ ನೀರಿನ ಎಲ್ಲ ಮೂಲಗಳನ್ನೇ ಮುಚ್ಚಲಾಗಿದೆ ಎಂಬ ಆರೋಪವೂ ಇದೆ.

ರಾಷ್ಟ್ರೀಯ ಕೆರೆ ಸಂರಕ್ಷಣೆ ಯೋಜನೆಯಿಡಿ ರೂ. 2.50 ಕೋಟಿ ಅನುದಾನ ಬಿಡುಗಡೆ ಮಾಡಿ ಭೀಷ್ಮಕೆರೆಯ ನೈಸರ್ಗಿಕ ಪುನಶ್ಚೇತನ ಹಾಗೂ ಅಭಿವೃದ್ಧಿಯನ್ನು 2005ರಲ್ಲಿ ಕೈಗೊಂಡಿತು.  ಕೆರೆಯಲ್ಲಿ ನೀರು ಇಲ್ಲದಿರುವುದರಿಂದ ಬಯಲು ಮೈದಾನವಾಗಿದೆ.

ಕೆರೆ, ಸಾರ್ವಜನಿಕ ಸೌಕರ್ಯಗಳು, ತರಿಭೂಮಿ, ವಿಹಾರ ಮಾರ್ಗ, ದೋಣಿ ವಿಹಾರ ತಾಣ, ಉದ್ಯಾನ, ಸಸ್ಯ ಪಾಲನಾಲಯ, ಕೆರೆ ಒಡ್ಡು ಬಲ ಪಡಿಸುವ ಪ್ರದೇಶ ಎಂದು ವಿಂಗಡಿಸಲಾಗಿದೆ. ಕೆರೆಯನ್ನು ಅಭಿವೃದ್ಧಿ ಪಡಿಸಿ ಆಕರ್ಷಣಾ ಕೇಂದ್ರವನ್ನಾಗಿ ಮಾಡಬೇಕು ಎಂದು ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT