ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ಜನ, ಇಂದು ಭಣಭಣ

Last Updated 1 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಕ್ಷದ ಕಾರ್ಯಕರ್ತರು, ಸಾರ್ವಜನಿಕರಿಂದ ಸದಾ ಗಿಜಿಗುಡುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸ ಈಗ ಜನಾಕರ್ಷಣೆ ಕಳೆದುಕೊಳ್ಳುತ್ತಿದೆ. ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಮರುದಿನವೇ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಅವರ ನಿವಾಸದ ಆವರಣ ಜನರಿಲ್ಲದೇ ಸೊರಗಿತು!

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ರೇಸ್‌ಕೋರ್ಸ್ ರಸ್ತೆಯ ನಿವಾಸವೇ ಅವರ ಅಧಿಕೃತ ನಿವಾಸವಾಗಿತ್ತು. ನಿತ್ಯವೂ ನೂರಾರು ಜನರು ಅಲ್ಲಿಗೆ ಭೇಟಿ ನೀಡುತ್ತಿದ್ದರು. ಕಾರ್ಯಕರ್ತರು, ಶಾಸಕರು, ಅಧಿಕಾರಿಗಳ ದಂಡೇ ಅಲ್ಲಿರುತ್ತಿತ್ತು. ಹಾರ, ತುರಾಯಿಗಳ ಭರಾಟೆಯೂ ಇರುತ್ತಿತ್ತು.

ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಭಾನುವಾರವೂ ಯಡಿಯೂರಪ್ಪ ನಿವಾಸದ ಬಳಿ ನೂರಾರು ಜನರು ಸೇರಿದ್ದರು. ಆದರೆ, ಸೋಮವಾರ ಚಿತ್ರಣ ಸಂಪೂರ್ಣ ಬದಲಾಗಿತ್ತು. ಯಡಿಯೂರಪ್ಪ ಬಣದ ಶಾಸಕರು ಕಾರಿನಲ್ಲಿ ಬಂದು ಹೋಗುತ್ತಿದ್ದರು. ಸಾರ್ವಜನಿಕರ ಸಂಖ್ಯೆಯಂತೂ ಬೆರಳೆಣಿಕೆಯಷ್ಟಿತ್ತು.

ತೆರೆದ ಬಾಗಿಲು: ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ನಿವಾಸದ ಪ್ರವೇಶ ದ್ವಾರವನ್ನು ಮೂರು ದಿನಗಳಿಂದ ಮುಚ್ಚಲಾಗಿತ್ತು. ಭಾನುವಾರ ಸಂಜೆಯವರೆಗೂ ಶಾಸಕರು, ಸಂಸದರು ಮತ್ತು ಯಡಿಯೂರಪ್ಪ ಅವರ ನಿಕಟವರ್ತಿಗಳಿಗೆ ಮಾತ್ರವೇ ಒಳಕ್ಕೆ ಬಿಡಲಾಗುತ್ತಿತ್ತು.

ಸೋಮವಾರ ಬೆಳಿಗ್ಗೆಯೇ ಪ್ರವೇಶ ದ್ವಾರವನ್ನು ತೆರೆಯಲಾಯಿತು. ಪೊಲೀಸರು ಒಳಕ್ಕೆ ಹೋಗುವವರ ತಪಾಸಣೆ ನಡೆಸಿದ ಬಳಿಕ, ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದರು. ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು ಬೆಳಿಗ್ಗೆಯಿಂದಲೂ ಅವರ ಮನೆಯಲ್ಲಿ ಇದ್ದರು.

ಸಂಸದರಾದ ಡಿ.ವಿ.ಸದಾನಂದಗೌಡ, ಆಯನೂರು ಮಂಜುನಾಥ್, ಉಸ್ತುವಾರಿ ಸಚಿವ ಸಂಪುಟದ ಸದಸ್ಯರಾದ ಉಮೇಶ್ ಕತ್ತಿ, ಎಂ.ಪಿ.ರೇಣುಕಾಚಾರ್ಯ, ಸಿ.ಎಂ.ಉದಾಸಿ, ವಿ.ಸೋಮಣ್ಣ, ರೇವುನಾಯಕ ಬೆಳಮಗಿ ಮತ್ತಿತರರು ಆಗಾಗ ಕಾರಿನಲ್ಲಿ ಬಂದುಹೋದರು. ಮಧ್ಯಾಹ್ನ 1 ಗಂಟೆಯ ಬಳಿಕ ಯಡಿಯೂರಪ್ಪ ಅವರ ನಿರ್ದೇಶನದಂತೆ ಅವರ ಬಣದ ಎಲ್ಲ ಶಾಸಕರು ಖಾಸಗಿ ಹೋಟೆಲ್‌ಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT