ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ಸಂಭ್ರಮ... ಇಂದು ಬಿಕೋ...

Last Updated 23 ಏಪ್ರಿಲ್ 2013, 6:43 IST
ಅಕ್ಷರ ಗಾತ್ರ

ರಾಯಚೂರು: ಐದೂವರೆ ವರ್ಷಗಳ ಆ ಆಸ್ಪತ್ರೆಯ ಆವರಣದಲ್ಲಿ ಹಬ್ಬದ ಸಡಗರ... ಆಸ್ಪತ್ರೆಗೆ ಹೆಸರಷ್ಟೇ ಇಟ್ಟರೆ ಸಾಕೇ. ಅವರ ಪುತ್ಥಳಿಯೂ ಸ್ಥಾಪನೆಯಾಗಬೇಕು ಎಂಬ ಆಶಯ ಈಡೇರಿದ ಘಳಿಗೆ ಅದು! ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ರೋಗಿಗಳು, ಅಭಿಮಾನಿಗಳು ಸಂಭ್ರಮ ಪಟ್ಟ ದಿನ ಅದಾಗಿತ್ತು.

ವರ್ಷಗಳು ಸರಿದಿವೆ... ಆಗ ಸಂಭ್ರಮವಿದ್ದ ಆ ಆಸ್ಪತ್ರೆ ಈಗ ಬಿಕೋ ಎನ್ನುತ್ತಿದೆ. ಐದುವರೆ ವರ್ಷಗಳ ಹಿಂದೆ ಅನಾವರಣಗೊಂಡ ಆ ಮಹಾನ್ ದೂರದೃಷ್ಟಿ ನಾಯಕನ `ಪುತ್ಥಳಿ'ಗೆ ಧೂಳು ಮೆತ್ತಿಕೊಂಡಿದೆ. ಕಂಡಲ್ಲೆಲ್ಲಾ ಹಾಳು ಸುರಿಯುವ ವಾತಾವರಣ..
ಇದು ಇಲ್ಲಿನ ಹೈದರಾಬಾದ್ ರಸ್ತೆಯಲ್ಲಿರುವ ಒಪೆಕ್ ನೆರವಿನ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನೋಟ.

ಐದುವರೆ ವರ್ಷಗಳ ಹಿಂದೆ ಈ ಆಸ್ಪತ್ರೆಯ ಆವರಣದಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವಗಾಂಧಿ ಅವರ ಪುತ್ಥಳಿಯನ್ನು ಅವರ ಪುತ್ರ ಆಗಿನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಈಗ ಎಐಸಿಸಿ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿ ಅನಾವರಣಗೊಳಿಸಿ ಸಂಭ್ರಮಿಸಿದ್ದರು. ಕಾಂಗ್ರೆಸ್ ನಾಯಕರು, ಅಭಿಮಾನಿಗಳು ಖುಷಿ ಪಟ್ಟಿದ್ದರು.

ಐದುವರೆ ವರ್ಷದ ಬಳಿಕ ರಾಹುಲ್ ಗಾಂಧಿ ಅವರು ಜಿಲ್ಲೆಗೆ ಇದೇ 23ರಂದು ಆಗಮಿಸುತ್ತಿದ್ದಾರೆ. ಸಿಂಧನೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಐದುವರೆ ವರ್ಷದ ಹಿಂದೆ ಇಲ್ಲಿಗೆ ಬಂದಾಗ ಈ ಆಸ್ಪತ್ರೆ ಆವರಣದಲ್ಲಿ ತಮ್ಮ ತಂದೆ ಪುತ್ಥಳಿ ಅನಾವರಣ ಮಾಡಿದ್ದು, ಆಸ್ಪತ್ರೆಯ ಸ್ಥಿತಿಯ ಬಗ್ಗೆ ಈಗೇನಾದರೂ ಕೇಳಿದರೆ ಬರುವ ಉತ್ತರಕ್ಕೆ ರಾಹುಲ್ ಹೌಹಾರುತ್ತಾರೆ.

ಕಾರಣ ಒಪೆಕ್ ಆಸ್ಪತ್ರೆ ಬಂದ್ ಆಗಿ ವರ್ಷಗಳೇ ಆಗಿದೆ. ಆಸ್ಪತ್ರೆ ಆವರಣದಲ್ಲಿನ ರಾಜೀವಗಾಂಧಿಯವರ ಪುತ್ಥಳಿಗೆ ಧೂಳು ಮೆತ್ತುತ್ತಿದೆ.
ಹೈದರಾಬಾದ್ ಕರ್ನಾಟಕ ಪ್ರದೇಶದ ಬಡ ಜನರಿಗೆ ಹಾಗೂ ಸಮಸ್ತ ಜನತೆಗೆ ವಿಶಿಷ್ಟ ಚಿಕಿತ್ಸಾ ಸೌಲಭ್ಯ ದೊರಕಿಸಿ ನಾಗರೀಕರ ಆರೋಗ್ಯ ಸೇವೆಗೆ ವರದಾನವಾಗುತ್ತದೆ ಎಂಬ ವಿಷಯ ಕೇಳಿ ಮೆಚ್ಚಿದ್ದರು. ಆದರೆ, ಈಗ ಆಸ್ಪತ್ರೆ ಹಾಳು ಬಿದ್ದಿದೆ.

ಅಪೊಲೊ ಸಂಸ್ಥೆಯ ಗುತ್ತಿಗೆ ಅವಧಿ ಮುಗಿದ ಬಳಿಕ ಈ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 286 ಜನ ನೌಕರರು ಮತ್ತು ಸಿಬ್ಬಂದಿ ಬೀದಿಪಾಲಾದರು. ಇದೇ ಆಸ್ಪತೆಯಲ್ಲಿ ಸೇವೆ ಮುಂದುವರಿಸಬೇಕು ಎಂಬ ಹೋರಾಟ ನಡೆಸಿದರು. ನ್ಯಾಯಾಲಯದ ಮೆಟ್ಟಿಲು ಏರಿದರು. ಬೆನ್ನೆಲುಬಾಗಿ ನಿಂತ ಕರ್ನಾಟಕ ರೈತ ಸಂಘದ ಅಧ್ಯಕ್ಷ ಆರ್ ಮಾನಸಯ್ಯ ಅವರು  ವಿವಿಧ ಜನಪರ ಸಂಘಟನೆಗಳೊಂದಿಗೆ ಸರ್ಕಾರದ ಮಟ್ಟದಲ್ಲಿ ನಿಂತು ಹೋರಾಟ ನಡೆಸಿದರು.

ಕಣ್ಣೊರೆಸುವ ತಂತ್ರ ಮಾಡಿದ ಸರ್ಕಾರ ಒಪೆಕ್ ಸಂಸ್ಥೆಯನ್ನು ವೈದ್ಯಕೀಯ ಆಸ್ಪತ್ರೆಗೆ ವಹಿಸುವ ಬದಲು ಸ್ವಾಯತ್ತ ಸಂಸ್ಥೆಯಾಗಿ ಅಭಿವೃದ್ಧಿ ಪಡಿಸುತ್ತೇವೆ. ಮೊದಲು ಕೆಲಸ ಮಾಡಿದ ನೌಕರರು ಮತ್ತು ಸಿಬ್ಬಂದಿಯನ್ನು ಹಂತ ಹಂತವಾಗಿ ನೇಮಕ ಮಾಡಿಕೊಳ್ಳುವ ಭರವಸೆ ನೀಡಿತ್ತು. ಆದರೆ ಬಳಿಕ ಹೊರಡಿಸಿದ ಆದೇಶದಲ್ಲಿ ಸರ್ಕಾರವೇ ಉಲ್ಟಾ ಹೊಡೆದಿತ್ತು. ಪರಿಣಾಮ ನೌಕರರು ಮತ್ತು ಸಿಬ್ಬಂದಿ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಕಾನೂನು ಸಮರ ಮುಂದುವರಿಸಿದ್ದಾರೆ.

ಆಸ್ಪತ್ರೆ ಪುನರಾರಂಭ ಮತ್ತು ದುರಸ್ತಿಗೆ ರಾಜ್ಯ ಸರ್ಕಾರವು 40 ಕೋಟಿ ಘೋಷಣೆ ಮಾಡಿ ಕೇವಲ 2 ಕೋಟಿ ದೊರಕಿಸಿ ಕೈ ತೊಳೆದುಕೊಂಡು ತಿಂಗಳಾನುಗಟ್ಟಲೇ ಕಾಲ ಹರಣ ಮಾಡಿತು. ಶಂಕರ ಮಾಲ್ಪುರೆ ಅವರು ವಿಶೇಷಾಧಿಕಾರಿಯಾಗಿ ನೇಮಕಗೊಂಡು ಆಸ್ಪತ್ರೆ ಬೇಗ ಆರಂಭಿಸಲು ಅಗತ್ಯವಾದ ದುರಸ್ತಿ ಕಾರ್ಯವನ್ನು ಸರ್ಕಾರ ಕೊಟ್ಟ ಆ 2 ಕೋಟಿ ಮೊತ್ತದಲ್ಲೇ ಆರಂಭಿಸಲು ಮುಂದಾಗುವಷ್ಟರಲ್ಲಿ ವಿಧಾನಸಭೆ ಚುನಾವಣೆ ಘೋಷಣೆ ಆಗಿದೆ.

ಮುಂದಿನ ಸರ್ಕಾರವೇ ಈ ಆಸ್ಪತ್ರೆ ಉದ್ಧಾರ, ನೌಕರರು ಮತ್ತು ಸಿಬ್ಬಂದಿ ಹಿತರಕ್ಷಣೆಗೆ ಮುಂದಾಗಬೇಕಾದ ಸ್ಥಿತಿ ಬಂದಿದೆ. ಅಂದ ಹಾಗೆ ಇದೆಲ್ಲ ನಡೆದಿದ್ದು ಐದುವರೆ ವರ್ಷದ ಹಿಂದೆ ರಾಹುಲ್ ಗಾಂಧಿ ಅವರು ಅನಾವರಣ ಮಾಡಿದ ರಾಜೀವಗಾಂಧಿ ಪುತ್ಥಳಿ ಎದುರೇ!
ನೌಕರರು ಮತ್ತು ಸಿಬ್ಬಂದಿ ಬೀದಿಗೆ ಬಿದ್ದರೆ `ರಾಜೀವಗಾಂಧಿ ಅವರ ಪುತ್ಥಳಿ' ಬಿಕೋ ಎನ್ನುವ ಆಸ್ಪತ್ರೆಯ ಆವರಣದಲ್ಲಿ ಏಕಾಂಗಿಯಾಗಿ ನಿಂತಿದೆ. ಕಣ್ತೆರೆದು ನೋಡುವವರ‌್ಯಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT