ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧ ಮಕ್ಕಳ ಸಾಕಲು ಸುಸ್ತಾದ ಪಾಲಕರು

Last Updated 7 ಜನವರಿ 2012, 9:20 IST
ಅಕ್ಷರ ಗಾತ್ರ

ಚಿಕ್ಕೋಡಿ: ಪೂರ್ವ ಜನ್ಮದ ಪಾಪವೋ, ಶಾಪವೋ? ಜನಿಸಿದ ಮೂರು ಮಕ್ಕಳೂ ಹುಟ್ಟು ಕುರುಡರು. ನಾಲ್ಕು ದಶಕಗಳಿಂದ ಅಂಧ ಮಕ್ಕಳನ್ನು ಸಲಹುವಲ್ಲಿ ಸುಸ್ತಾಗುತ್ತಿರುವ ವೃದ್ಧ ತಂದೆ-ತಾಯಿಗೆ ಈಗ ಮಕ್ಕಳ ಭವಿಷ್ಯದ ಚಿಂತೆ ಆವರಿಸಿದೆ.

ಇದು ಚಿಕ್ಕೋಡಿ ತಾಲ್ಲೂಕಿನ ನಣದಿ ಗ್ರಾಮದಲ್ಲಿರುವ ಬಡ ಕುಟುಂಬವೊಂದರ ವ್ಯಥೆಯ ಕಥೆ. ಎದೆ ಎತ್ತರ ಬೆಳೆದು ನಿಂತಿರುವ ಮಕ್ಕಳನ್ನು ಪೋಷಿಸಲು ಪಾಲಕರು ಪಡುತ್ತಿರುವ ಕಷ್ಟಗಳನ್ನು ಕಂಡರೆ ಕರುಳು ಕಿತ್ತು ಬಂದಂತಾಗುತ್ತದೆ. ನಣದಿ ಗ್ರಾಮದ ವಿಮಲಾ ಮತ್ತು ಮಹಾದೇವ ಭೂಯಿ ದಂಪತಿಗೆ ಜನಿಸಿರುವ ಒಂದಲ್ಲ, ಎರಡಲ್ಲ, ಮೂರೂ ಜನ ಮಕ್ಕಳಿಗೆ ಹುಟ್ಟಿನಿಂದಲೇ ದೇವರು ದೃಷ್ಟಿ ಭಾಗ್ಯವನ್ನು ಕರುಣಿಸಿಲ್ಲ.
 
ವೈದ್ಯಕೀಯ ಉಪಚಾರ ಅಥವಾ ಶಸ್ತ್ರ ಚಿಕಿತ್ಸೆ ಮಾಡಿಸಿದರೂ ಮಕ್ಕಳು ಜಗತ್ತನ್ನು ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ ಎಂಬ ತಜ್ಞರ ಮಾತು ಕೇಳಿದಾಗ  ಎದೆಗುಂದದೇ ಕಳೆದ ಸುಮಾರು ನಾಲ್ಕು ದಶಕಗಳಿಂದ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಪೋಷಿಸುತ್ತಿದ್ದಾರೆ.

ಹಿರಿಮಗ ರಾಜೇಂದ್ರನಿಗೆ ಈಗ 43 ವರ್ಷ. ಲತಾಳಿಗೆ 33 ವರ್ಷವಾದರೆ ಕಿರಿ ಮಗಳು ಗೀತಾಳಿಗೆ 28 ವರ್ಷ. ಹುಟ್ಟು ಕುರುಡರಾದ ಹಿನ್ನೆಲೆಯಲ್ಲಿ ಕಂಕಣ ಭಾಗ್ಯವೂ ಕೂಡಿ ಬಂದಿಲ್ಲ. ಕುಟುಂಬಕ್ಕೆ ಒಂದು ಹೆಂಚಿನ ಮನೆಯನ್ನು ಬಿಟ್ಟರೆ ಬೇರೇನೂ ಆಸ್ತಿಪಾಸ್ತಿಯ ಆಧಾರವಿಲ್ಲ. ಜೀವನದ ಮುಸ್ಸಂಜೆಯಲ್ಲಿಯೂ ಹಡೆದ ಮಕ್ಕಳನ್ನು ಪೋಷಿಸುವ ದೌರ್ಭಾಗ್ಯ ಈ ವೃದ್ಧ ದಂಪತಿಗೆ ಒಂದಗಿ ಬಂದಿದೆ.

ವಿಮಲಾ ಮತ್ತು ಮಹಾದೇವ ಭೂಯಿ ದಂಪತಿ ರಟ್ಟೆಯ ಕಸುವನ್ನೇ ನಂಬಿ ಕೂಲಿನಾಲಿ ಮಾಡಿ ಮಕ್ಕಳನ್ನು ಸಲಹುತ್ತಿದ್ದಾರೆ. ಅಂಧ ಮಕ್ಕಳಿಗೆ 1980 ರಿಂದ ಮಾಸಿಕ ತಲಾ 40 ರೂಪಾಯಿ ಅಂಗವಿಕಲ ವೇತನ ನೀಡಲಾಗುತ್ತಿತ್ತು. 2008 ರಿಂದ ತಲಾ 400 ರೂ ನೀಡುತ್ತಿದ್ದ ಮಾಸಿಕ ವೇತನವನ್ನು ಈಗ ತಲಾ 1000 ರೂ.ಗಳಿಗೆ ಹೆಚ್ಚಿಸಿರುವುದರಿಂದ ಜೀವನ ನಿರ್ವಹಣೆಗೆ ಕೊಂಚ ಆಧಾರವಾಗಿದೆ ಎನ್ನುತ್ತಾರೆ ಮಹಾದೇವ ಭೂಯಿ.

ಆದರೆ ಮಕ್ಕಳ ಭವಿಷ್ಯದ ಬಗೆಗೆ ಅವರಲ್ಲಿರುವ ಕೊರಗು ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ತಾವು ಜೀವಂತ ಇರುವವರೆಗೆ ಮಕ್ಕಳನ್ನು ನೋಡಿಕೊಳ್ಳುತ್ತೇವೆ. ತಾವಿಲ್ಲದ ಸಮಯದಲ್ಲಿ ಈ ನತದೃಷ್ಟ ಮಕ್ಕಳ ಗತಿ ಏನು? ಎಂದು ವಿಮಲಾ ಭೂಯಿ ಕಣ್ಣೀರಾಗುತ್ತಾರೆ. ಹಿರಿಮಗ ರಾಜೇಂದ್ರ ಅಂಧನಾದರೂ ಬುದ್ದಿವಂತ. ಮಾತುಗಾರ.

ತನ್ನ ಮನೆಯ ಪರಿಸರದಲ್ಲಿ ಯಾರ ಸಹಾಯವೂ ಇಲ್ಲದೇ ತಿರುಗಾಡಬಲ್ಲ. ಆದರೆ, ಇಬ್ಬರು ಹೆಣ್ಣು ಮಕ್ಕಳ ಜೀವನ ಮಾತ್ರ ಕತ್ತಲಮಯ. ಮನೆಯಿಂದ ಆಚೆ ಹೋಗದ ಇವರ ಬಗೆಗೆ ತಂದೆ-ತಾಯಿಗೆ ಹೆಚ್ಚಿನ ಕಾಳಜಿ. ವಿಮಲಾ ಮತ್ತು ಮಹಾದೇವ ಭೂಯಿ ದಂಪತಿಗೆ ಮುಪ್ಪು ಆವರಿಸಿದೆ. ದುಡಿಯಲು ಆಗುತ್ತಿಲ್ಲ. ಸರಕಾರ ನೀಡುತ್ತಿರುವ ಅಂಗವಿಕಲ ವೇತನವೇ ಕುಟುಂಬಕ್ಕೆ ಜೀವನಧಾರವಾಗುತ್ತಿದೆ.

ಅಂಗವೈಕಲ್ಯ ಶಾಪವಲ್ಲ, ನಿಜ. ಆದರೆ, ಹುಟ್ಟಿನಿಂದಲೇ ಅಂಧತ್ವವನ್ನು ಹೊತ್ತುಕೊಂಡು ಬಂದು ದಟ್ಟ ದಾರಿದ್ರ್ಯದಲ್ಲಿ ಬದುಕುವ ತಂದೆ-ತಾಯಂದಿರ ಆಸರೆಯಲ್ಲಿ ಜೀವನವನ್ನು ಸವೆಸುತ್ತಿರುವ ಈ ಸಹೋದರ-ಸಹೋದರಿಯರು ಕ್ಷಣಕ್ಷಣಕ್ಕೂ ಅನುಭವಿಸುತ್ತಿರುವ ಮಾನಸಿಕ ಯಾತನೆ ಮಾತ್ರ ಅಪರಿಮಿತ. ಸರಕಾರದಿಂದ ಇಂತಹ ಕುಟುಂಬಗಳಿಗೆ ವಿಶೇಷ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ  ಚುನಾಯಿತ ಪ್ರತಿನಿಧಿಗಳು ಚಿಂತನೆ ನಡೆಸುವ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT