ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬಾಮಠ ಜಾತ್ರೆಗೆ ಭರದ ಸಿದ್ಧತೆ

Last Updated 7 ಜನವರಿ 2012, 9:45 IST
ಅಕ್ಷರ ಗಾತ್ರ

ಸಿಂಧನೂರು: ಉತ್ತರ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರ, ಭಕ್ತರ ಕಾಮಧೇನು ಎಂದೇ ಖ್ಯಾತಿ ಪಡೆದಿರುವ ಸಿದ್ಧಪರ್ವತ ಅಂಬಾದೇವಿ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ಹಿನ್ನೆಲೆಯಲ್ಲಿ ದೇವಸ್ಥಾನ ಸಮಿತಿಯು ಸಕಲ ಸಿದ್ಧತೆಗಳನ್ನು ನಡೆಸಿದೆ.

ಜ.9ರಂದು ರಥೋತ್ಸವ, 11ರಂದು ಹೂವಿನ ರಥೋತ್ಸವ, 12ರಂದು ಕುಂಭೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲ್ದ್ದಿದಾರೆ. ಪ್ರತಿದಿನ 25ಸಾವಿರಕ್ಕಿಂತ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಲಿದ್ದು, ಜಾತ್ರೆ ಮುಗಿಯುವುದರೊಳಗೆ ಸುಮಾರು 3ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬಹುದೆಂದು ದೇವಸ್ಥಾನ ಸಮಿತಿ ನಿರೀಕ್ಷೆ ಇಟ್ಟುಕೊಂಡಿದೆ.

ಈಗಾಗಲೇ ಹೊಟೇಲ್‌ಗಳು, ಸ್ಟೇಷನರಿ ಅಂಗಡಿಗಳು, ಸರ್ಕಸ್, ಮಿಠಾಯಿ ಅಂಗಡಿಗಳನ್ನು ಹಾಕಲಾಗಿದೆ. ಸಿರುಗುಪ್ಪ ರಸ್ತೆಗೆ ಕೂಡುವ ವೆಂಕಟೇಶ್ವರ ಕ್ಯಾಂಪಿನಿಂದ ಅಂಬಾಮಠದವರೆಗಿನ ರಸ್ತೆ ಸುಧಾರಣಾ ಕಾರ್ಯ ಭರದಿಂದ ನಡೆದಿದೆ. ರಥವನ್ನು ಅಲಂಕರಿಸುವ ಚಟುವಟಿಕೆಯೂ ನಡೆಯುತ್ತಿದೆ. ಅಂಬಾಮಠದಲ್ಲಿ ದೊಡ್ಡದೊಂದು ಕೆರೆ ಇದ್ದರೂ ಅದರ ನೀರು ಕುಡಿಯಲು ಯೋಗ್ಯವಾಗಿಲ್ಲ. ಮಠದ ಪಕ್ಕದಲ್ಲಿ ಹರಿಯುವ ಕಾಲುವೆಯೂ ಬರಿದಾಗಿದೆ.
 
ಮೂರ‌್ನಾಲ್ಕು ದಿನದ ಹಿಂದೆಯೇ ಬಂದು ವಿವಿಧ ಅಂಗಡಿಗಳನ್ನು ಹಾಕಿಕೊಂಡಿರುವ ವ್ಯಾಪಾರಸ್ಥರು ಕುಡಿಯುವ ನೀರು ಮತ್ತು ವಿದ್ಯುತ್ ಕೊರತೆ ಎದುರಿಸುತ್ತಿದ್ದಾರೆ. ಜಾತ್ರೆಯ ಅಂಗವಾಗಿ ಅಂಬಾಮಠದಲ್ಲಿರುವ ಮದ್ಯದಂಗಡಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದರೂ ಅನಧಿಕೃತವಾಗಿ ಜಾತ್ರೆಯಲ್ಲಿಯೇ ಮಾರಾಟ ಮಾಡುತ್ತಿದ್ದಾರೆನ್ನುವುದು ಜಾತ್ರೆಗೆ ಬಂದಿರುವ ಭಕ್ತರ ಆರೋಪ.

ದೇವಸ್ಥಾನ ಸಮಿತಿಯ ಅಧ್ಯಕ್ಷರೂ ಆದ ತಹಶೀಲ್ದಾರ ಕೆ.ನರಸಿಂಹ ಅವರನ್ನು `ಪ್ರಜಾವಾಣಿ~ ಸಂಪರ್ಕಿಸಿದಾಗ ಪ್ರತಿವರ್ಷಕ್ಕಿಂತ ಈ ಬಾರಿ ಅತ್ಯಂತ ಸಡಗರದಿಂದ ಜಾತ್ರೋತ್ಸವವನ್ನು ಆಚರಿಸಲು ತೀರ್ಮಾನಿಸಲಾಗಿದ್ದು, ಹತ್ತು ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತದೆ. ಖಾಸಗಿ ಕೆರೆಗಳನ್ನು ಜಾತ್ರೆಗೋಸ್ಕರ ದೇವಸ್ಥಾನ ಸಮಿತಿ ಪಡೆದುಕೊಂಡಿದೆ.
 
ಅಂಬಾಮಠದ ಕೆರೆಯ ನೀರನ್ನು ಬಳಕೆಗೆ ಉಪಯೋಗಿಸಬಹುದಾಗಿದೆ. ತುಂಗಭದ್ರಾ ಎಡದಂಡೆ ನಾಲೆಯ ನೀರನ್ನು ಜ.7ರಿಂದ 13ರವರೆಗೆ ನಿರಂತರವಾಗಿ ಹರಿಸಲಾಗುತ್ತದೆ. ಕುಡಿಯುವ ನೀರಿಗೆ ಆತಂಕ ಪಡುವ ಅಗತ್ಯವಿಲ್ಲ. ವಿದ್ಯುತ್ ಸಮಸ್ಯೆ ನಿವಾರಣೆಗೆ ಹೊಸ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದ್ದು 15ಜನ ಲೈನ್‌ಮೆನ್‌ಗಳು, ಒಬ್ಬ ಎಂಜಿನೀಯರ್‌ರನ್ನು ವಿದ್ಯುತ್ ವ್ಯವಸ್ಥೆಗಾಗಿ ನಿಯೋಜಿಸಲಾಗಿದೆ. ಆರೋಗ್ಯ ಇಲಾಖೆಯಿಂದ 10ಕ್ಕೂ ಹೆಚ್ಚು ಸಿಬ್ಬಂದಿಯು ಕಾರ್ಯನಿರ್ವಹಿಸಲು ಆರೋಗ್ಯ ಕೇಂದ್ರವನ್ನು ತೆರೆಯಲಾಗುತ್ತಿದೆ. ಬಂದೋಬಸ್ತ್‌ಗಾಗಿ 150 ಜನ ಹೋಮ್ ಗಾರ್ಡ್ಸ್‌ಗಳನ್ನು ಪಡೆಯಲಾಗುತ್ತಿದೆ. ಜಾತ್ರೆಗೆ ಬರುವ ಭಕ್ತರಿಗೆ ಸಿರುಗುಪ್ಪ, ಗಂಗಾವತಿ ಮತ್ತು ಸಿಂಧನೂರಿನಿಂದ 20ನಿಮಿಷಕ್ಕೊಂದರಂತೆ ಬಸ್ಸುಗಳು ಸಂಚರಿಸಲಿವೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT