ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ವೇಷದಲ್ಲಿ ಆಂಜನೇಯ!

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸುವರ್ಣಸೌಧ (ಬೆಳಗಾವಿ): ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತೆ ಸೂಟು ಬೂಟು ಹಾಕಿಕೊಂಡು ಬಂದು ಸದನದಲ್ಲಿ ಗುರುವಾರ ಮಿಂಚಿದರು. ಈ ಬಗ್ಗೆ ಸ್ವಾರಸ್ಯಕರ ಚರ್ಚೆ ಕೂಡ ನಡೆಯಿತು. ಅಂಬೇಡ್ಕರ್ ಅವರ 57ನೇ ಮಹಾ ಪರಿನಿರ್ವಾಣದ  (ಡಿ.೬) ಮುನ್ನಾ­ದಿನವಾದ ಗುರುವಾರ ವಿಧಾನಸಭೆ­ಯಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಮಸೂದೆ ಮಂಡಿಸುವುದಕ್ಕಾಗಿ ಇಂತಹ ವಿಶೇಷ ವೇಷ ಅವರದ್ದು.

ಸಚಿವರು ಮಸೂದೆ ಮಂಡನೆಗೆ ಅನುವಾಗುತ್ತಿದ್ದಂತೆಯೇ ಬಿಜೆಪಿಯ ಸುರೇಶ ಕುಮಾರ್ ಅವರು 'ಇವತ್ತು ನೀವು ತುಂಬಾ ಸ್ಮಾರ್ಟ್ ಆಗಿ ಕಾಣುತ್ತಿದ್ದೀರಿ' ಎಂದು ಅಭಿನಂದಿಸಿ­ದರು. 'ಎಲ್ಲಾ ನಿಮ್ಮ ಕೃಪೆ ಸ್ವಾಮಿ' ಎಂದು ಆಂಜನೇಯ ಉತ್ತರಿಸಿದರು. 'ಅಂಬೇಡ್ಕರ್ ತರಹ ಸೂಟು ಬೂಟು ಹಾಕಿಕೊಂಡಿದ್ದೀರಿ. ಗಡ್ಡ ಬೋಳಿಸಿಲ್ಲ ಅಷ್ಟೆ' ಎಂದು ಕೆ.ಎಸ್.­ಪುಟ್ಟಣ್ಣಯ್ಯ ಕಾಲೆಳೆಯಲು ಯತ್ನಿಸಿ­ದರು.

'ನೀವು ಇದನ್ನು ಮೂಢ ನಂಬಿಕೆ ಎಂದರೂ ಅಡ್ಡಿ ಇಲ್ಲ. ಆದರೆ ಇವತ್ತು ಚೆನ್ನಾಗಿ ಕಾಣ್ತಾ ಇದ್ದೀರಿ. ಮನೆಗೆ ಹೋಗಿ ದೃಷ್ಟಿ ತೆಗೆಸಿಕೊಳ್ಳಿ' ಎಂದು ಬಿಜೆಪಿಯ ಸಿ.ಟಿ.ರವಿ ಸಲಹೆ ಮಾಡಿದರು. ‘ಅಂಬೇಡ್ಕರ್ ಅವರು ಸಂವಿಧಾನದ ಕರಡು ಪ್ರತಿಯನ್ನು ಹಿಡಿದು ಬಂದಂತೆ ಆಂಜನೇಯ ಅವರು ಈ ಮಸೂದೆ ಹಿಡಿದು ಥೇಟ್ ಅವರಂತೆ ಬಂದಿದ್ದಾರೆ’ ಎಂದು ಕಾಂಗ್ರೆಸ್‌ನ ತುಕಾರಾಂ ಅಭಿನಂದಿಸಿದರು.

ಸಚಿವರ ಕಣ್ಣೀರು!
ಎಲ್ಲ ಸದಸ್ಯರ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಲು ಯತ್ನಿಸಿದ ಆಂಜನೇಯಗೆ ಒಂದು ಹಂತದಲ್ಲಿ ಕಣ್ಣೀರು ತಡೆದುಕೊಳ್ಳಲು ಆಗಲಿಲ್ಲ. ಅಂಬೇಡ್ಕರ್ ಅವರ ಪರಿ­ನಿರ್ವಾಣ­ದ ಮುನ್ನಾ ದಿನ ಅವರ ಸಮಾನತೆಯ ರಥವನ್ನು ಮುಂದೆ ಎಳೆಯಲು ಈ ಮಸೂದೆ ತಂದಿರುವುದಾಗಿ ಹೇಳುತ್ತಾ ಅವರು ಭಾವುಕರಾದರು.

ಯಾರ ಕುಡಿತ ಹೆಚ್ಚು?
ಪರಿಶಿಷ್ಟರು ಹೆಚ್ಚು ಕುಡಿಯುತ್ತಾರೋ ಅಥವಾ ಮೇಲ್ವರ್ಗದವರು ಹೆಚ್ಚು ಕುಡಿಯುತ್ತಾರೋ ಎನ್ನುವ ಪ್ರಶ್ನೆ ಕೂಡ ಈ ಸಂದರ್ಭದಲ್ಲಿ ಎದುರಾಯಿತು. ಮಸೂದೆ ಬೆಂಬಲಿಸಿ ಮಾತನಾಡಿದ ಕಾಂಗ್ರೆಸ್‌ನ ಪಿ.ಎಂ.ನರೇಂದ್ರಸ್ವಾಮಿ,  'ಅಬ್ಕಾರಿ ಇಲಾಖೆಗೆ ಅತಿ ಹೆಚ್ಚು ಆದಾಯ ತಂದುಕೊಡುವವರು ನಮ್ಮ ಜನಾಂಗದವರು. ಆದರೆ ಒಬ್ಬನೇ ಒಬ್ಬ ದಲಿತ ವ್ಯಕ್ತಿಗೆ ಮದ್ಯದಂಗಡಿ ಪರವಾನಿ ಕೊಟ್ಟಿಲ್ಲ. ನಾವು ಕುಡಿಯುವುದಕ್ಕೆ ಮಾತ್ರ ಸೀಮಿತವಾ?' ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರ ನೀಡಿದ ಕೆಜೆಪಿಯ  ಬಿ.ಎಸ್.ಯಡಿಯೂರಪ್ಪ, 'ಈಗ ಪರಿಶಿಷ್ಟರೂ ವಿದ್ಯಾವಂತರಾಗಿದ್ದಾರೆ. ಬುದ್ಧಿವಂತರಾಗಿದ್ದಾರೆ. ಅವರು ಕುಡಿಯುತ್ತಿಲ್ಲ. ಅವರಿಂದ ಹೆಚ್ಚಿನ ಆದಾಯ ಬರುತ್ತಿಲ್ಲ. ಇತರ ಮೇಲ್ವರ್ಗದ ಜನರೇ ಕುಡಿತ ಅಭ್ಯಾಸ ಮಾಡಿಕೊಂಡು ಹೆಚ್ಚಿನ ಆದಾಯ ತರುತ್ತಿದ್ದಾರೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT