ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಪರಿನಿರ್ವಾಣ ದಿನಕ್ಕೆ ರಕ್ತದಾನ

Last Updated 6 ಡಿಸೆಂಬರ್ 2013, 19:52 IST
ಅಕ್ಷರ ಗಾತ್ರ

ಬೆಂಗಳೂರು: ಸಂವಿಧಾನಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನದಂದು ಎಲ್ಲ ಜಿಲ್ಲೆಗಳಲ್ಲಿ ಮುಂದಿನ ವರ್ಷದಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸ ಲಾಗುವುದು ಎಂದು ಸಮಾಜ  ಕಲ್ಯಾಣ ಸಚಿವ ಎಚ್‌. ಆಂಜನೇಯ ತಿಳಿಸಿದರು. ವಿಧಾನಸೌಧದ ಮುಂಭಾಗ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 57ನೇ ಮಹಾಪರಿ ನಿರ್ವಾಣ ದಿನಾಚರಣೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಇದೇ ಪ್ರಥಮ ಬಾರಿ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಈ ಬಾರಿ 57 ಮಂದಿ ರಕ್ತದಾನ ಮಾಡಿದ್ದಾರೆ. ಇದೇ ಪದ್ಧತಿಯನ್ನು ಎಲ್ಲ ಜಿಲ್ಲೆಗಳಲ್ಲೂ ಮುಂದುವರಿಸಲಾಗುವುದು ಎಂದು ತಿಳಿಸಿದರು.

ಈ ದೇಶಕ್ಕೆ ದಲಿತರು ರಕ್ತ ಮತ್ತು ಬೆವರು ಹರಿಸಿದ್ದಾರೆ. ದಲಿತರಿಗೆ ಶಕ್ತಿ ತುಂಬಿದವರು ಅಂಬೇಡ್ಕರ್‌. ದಲಿತರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಅವರು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ಎಲ್ಲ ಜನಾಂಗಗಳಿಗೂ ನಾಯಕ ಎಂದು ನುಡಿದರು. ಕವಿ ಡಾ. ಸಿದ್ದಲಿಂಗಯ್ಯ ಮಾತನಾಡಿ, ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಮಸೂದೆಯನ್ನು ವಿಧಾನಸಭೆ ಅಂಗೀಕರಿ ಸಿರುವುದು ಕ್ರಾಂತಿಕಾರಿ ಹೆಜ್ಜೆ ಯಾಗಿದೆ.

ಇದಕ್ಕಾಗಿ ಸರ್ಕಾರ ನಡೆಸಿದ ಪ್ರಯತ್ನ ಶ್ಲಾಘನೀಯ ಎಂದರು. ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವೆಂಕಟಯ್ಯ, ಆಯುಕ್ತ ಎಸ್‌.ಎನ್‌. ಜಯರಾಂ, ಹಾಜರಿದ್ದರು. ರಂಗಾಯಣದ ನಿರ್ದೇಶಕ ಎಚ್‌. ಜನಾರ್ದನ ಕ್ರಾಂತಿಗೀತೆಗಳನ್ನು ಹಾಡಿದರು.

ಸರ್ವಧರ್ಮ ಪ್ರಾರ್ಥನೆ ಕೈಬಿಟ್ಟ ಇಲಾಖೆ
ಬೆಂಗಳೂರು:
ದಲಿತ ಸಂಘಟನೆಗಳ ಒತ್ತಡಕ್ಕೆ ಮಣಿದು ಸರ್ವಧರ್ಮಗಳ ಪ್ರಾರ್ಥನೆಯನ್ನು ಕೈಬಿಟ್ಟ ಸಮಾಜ ಕಲ್ಯಾಣ ಇಲಾಖೆ, ಎಂದಿನಂತೆ ಬೌದ್ಧ ಧರ್ಮದ ವಿಧಿವಿಧಾನದಂತೆಯೇ ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನವನ್ನು ಆಚರಿಸಿತು.

ಈ ಬಾರಿಯ ಪರಿನಿರ್ವಾಣ ದಿನದಂದು ಸರ್ವಧರ್ಮಗಳ ಪ್ರಾರ್ಥನೆ ಆಯೋಜಿಸುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಹೇಳಿಕೆ ನೀಡಿದ್ದರು. ಇದನ್ನು ದಲಿತ ಪರ ಸಂಘಟನೆಗಳು ವಿರೋಧಿಸಿ,   ಇದು ಅಂಬೇಡ್ಕರ್‌ ತತ್ವಾದರ್ಶಗಳಿಗೆ ವಿರುದ್ಧ ಎಂದು ಗುಡುಗಿದ್ದವು. ಸಚಿವರಿಗೆ ತಿಳಿವಳಿಕೆ ಇಲ್ಲದೆ ಈ ರೀತಿ ಮಾಡಿದ್ದು, ಅದಕ್ಕೆ ತಮ್ಮ ವಿರೋಧ ಇದೆ.

ಇದನ್ನು ಕೈಬಿಡದಿದ್ದರೆ ಪ್ರತಿಭಟನೆ ಮಾಡುವುದಾಗಿ   ದಲಿತ ಸಂಘರ್ಷ ಸಮಿತಿ (ಸಮತಾವಾದ) ಎಚ್ಚರಿಕೆ ನೀಡಿತ್ತು. ಈ ವಿಷಯದಲ್ಲಿ ವಿವಾದ ಬೇಡ ಎನ್ನುವ ಕಾರಣಕ್ಕೆ ಸರ್ಕಾರ ಸರ್ವಧರ್ಮಗಳ ಪ್ರಾರ್ಥನೆಯನ್ನು ಕೈಬಿಟ್ಟಿತು.

ಸಂವಿಧಾನ ಶಿಲ್ಪಿ ಆಶಯದಂತೆ ಸರ್ಕಾರ
ಬೆಂಗಳೂರು:
ಅಂಬೇಡ್ಕರ್ ಅವರ ಆಶಯದಂತೆಯೇ ರಾಜ್ಯ ಸರ್ಕಾರ ಕೆಲಸ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಅಂಬೇಡ್ಕರ್ ಅವರ ಮಹಾಪರಿ ನಿರ್ವಾಣ ದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂದೆ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT