ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಡೆಮಿಕ್ ಹುಡುಗಿಯ `ಹಾಟ್' ಬೀಟ್‌ಗಳು!

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ಶಿಖೆಯಿಂದ ನೋಡಬೇಕು. ರೇಷಿಮೆಯಂಥ ಕೂದಲು ಹರಡಿಕೊಂಡಿದೆ. ಹಣೆಗೆ ಎರಡು ವಿಚಿತ್ರ ಬಣ್ಣದ ಲೇಸ್‌ಗಳು; ಗ್ರೀಸ್ ರಾಜಕುಮಾರಿಯರು ಕಿರೀಟ ಎಂಬಂತೆ ಕಟ್ಟಿಕೊಳ್ಳುತ್ತಾರಲ್ಲ ಹಾಗೆ. ತೋಳಿಲ್ಲದ ಜೀನ್ಸ್ ಜಾಕೆಟ್‌ನ ಒಂದೇ ಗುಂಡಿ ಹಾಕಿರುವುದು. ಉಳಿದ ಭಾಗಗಳದ್ದು ಕುತೂಹಲ ಹುಟ್ಟಿಸುವ ಕೆಲಸ. ವಕ್ಷಸ್ಥಲದ ಮರ್ಯಾದೆ ಕಾಪಾಡಲೋ ಎಂಬಂತೆ ಎಣಿಕೆ ತಪ್ಪುವಷ್ಟು, ಬಗೆಬಗೆ ಗಾತ್ರದ ಸರಗಳು ಅಲಂಕೃತವಾಗಿವೆ. ಆ ಸರಗಳಲ್ಲಿ ಒಂದರ ಬಿಲ್ಲೆ ಹೊಕ್ಕುಳನ್ನು ಅರ್ಧವಷ್ಟೆ ಮುಚ್ಚಿದೆ.

ಅರೆರೆ... ಗ್ರೀಸ್ ಸುಂದರಿಯ ವೇಷವೇನೂ ಇದಲ್ಲ; ಯಾಕೆಂದರೆ ಹಾಕಿರುವುದು ಜೀನ್ಸ್ ಚೆಡ್ಡಿ. ಸಾಧ್ಯವಾದಷ್ಟೂ ತೊಡೆಗಳನ್ನು ತೋರಿಸಲೆಂದೇ ವಿನ್ಯಾಸಗೊಳಿಸಿದ ಚೆಡ್ಡಿ ಅದು. ಬಲಗೈಲಿ ಎರಡು ದೊಡ್ಡ ಬಳೆಗಳು. ಪಾದಗಳಲ್ಲಿ ಚರ್ಮದ ಬೆಲ್ಟಿನ ಬೂಟು. ಇಂಥ ವೇಷಭೂಷಣ ತೊಟ್ಟು ಕುಳಿತು ಕಣ್ಣುಗಳಲ್ಲಿ ತುಸುವೂ ಸಂಕೋಚ ತುಳುಕಿಸದೆ ಇದ್ದವರ ಹೆಸರು ಅಮಿಷಾ ಪಟೇಲ್.

ಅವರ ವಯಸ್ಸು ಚಿಕ್ಕದೇನಲ್ಲ. 1975, ಜೂನ್ 9ನೇ ತಾರೀಕು ಹುಟ್ಟಿದ ಅವರು ಚಿನ್ನದ ಚಮಚೆಯನ್ನು ಬಾಯಿಯಲ್ಲೇ ಇಟ್ಟುಕೊಂಡು ಬೆಳೆದವರು. ಅಕಡೆಮಿಕ್ ಹುಡುಗಿ. ಮೆಸಾಶ್ಯುಸೆಟ್ಸ್‌ನ ಟಫ್ಟ್ಸ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪದವಿ ಓದಿ, ಆರ್ಥಿಕ ವಿಶ್ಲೇಷಕಿಯಾಗಿ ಕೆಲಸ ಕೂಡ ಮಾಡಿದವರು.

ಮಗಳಿಗೆ ಸಂಸ್ಕಾರವನ್ನು ಎರಕ ಹೊಯ್ಯಬೇಕೆಂಬುದು ತಾಯಿ ಆಶಾ ಪಟೇಲ್ ಕನಸಾಗಿತ್ತು. ಅದಕ್ಕೇ ಐದನೇ ವಯಸ್ಸಿನ ಮಗಳನ್ನು ಭರತನಾಟ್ಯದ ಶಾಲೆಗೆ ಸೇರಿಸಿದ್ದರು. ಅಪ್ಪ ಅಮಿತ್ ಪಟೇಲ್‌ಗೂ ಮಗಳಿಗೂ ಮೊದಲಿನಿಂದಲೂ ಅಷ್ಟಕ್ಕಷ್ಟೆ. ತಾತ ರಜನಿ ಪಟೇಲ್ ಬಾಂಬೆಯ ಕಾಂಗ್ರೆಸ್ ಪ್ರದೇಶ ಸಮಿತಿಯ ಅಧ್ಯಕ್ಷರಾಗಿದ್ದವರು. ಬ್ಯಾರಿಸ್ಟರ್ ಆಗಿದ್ದ ಅವರ ಗತ್ತು ದೊಡ್ಡದಿತ್ತು.

ಇಷ್ಟೆಲ್ಲಾ ಹಿನ್ನೆಲೆಯ ಅಮಿಷಾ ಸೌಂದರ್ಯವನ್ನು ಮಾಡೆಲಿಂಗ್ ಲೋಕ ಸೆಳೆಯಿತು. ಆಮೇಲೆ ರಾಕೇಶ್ ರೋಷನ್ ತಮ್ಮ ಮಗನ ಚೊಚ್ಚಲ ಚಿತ್ರಕ್ಕೆ ಸುಂದರವಾದ ನಟಿಯ ಹುಡುಕಾಟದಲ್ಲಿದ್ದರು. ಅವರು ಅಮಿಷಾ ತಂದೆಯ ಸಹಪಾಠಿಯಾಗಿದ್ದವರು. ಇಬ್ಬರೂ ಪಾರ್ಟಿಗಳಲ್ಲಿ ಸೇರುತ್ತಿದ್ದರು. ಆಗ `ಅಮಿಷಾಗೆ ಅವಕಾಶ ಕೊಡುತ್ತೀರಾ, ನೋಡಿ' ಎಂದು ಪ್ರಸ್ತಾಪ ಮುಂದಿಟ್ಟದ್ದು ಅಮಿತ್ ಪಟೇಲ್.

ಮೊದಲು ಅಮಿಷಾ ಓದೇ ತಮಗೆ ಮುಖ್ಯವೆಂದು ಪಟ್ಟು ಹಿಡಿದರು. ಆಮೇಲೆ ಕರೀನಾ ಕಪೂರ್ ಸ್ಕ್ರೀನ್ ಟೆಸ್ಟ್ ನಡೆಯಿತು. ಕರೀನಾಗಿಂತ ಅಮಿಷಾ ಪಟೇಲ್ ನಾಯಕಿಯಾಗುವುದೇ ಲೇಸು ಎಂಬುದು ರಾಕೇಶ್ ರೋಷನ್ ಅಭಿಪ್ರಾಯವಾಗಿತ್ತು. ಅವರು ಮನಸ್ಸಿನಲ್ಲಿ ಹಾಗೆಂದುಕೊಂಡ್ದ್ದಿದಾಗಲೇ ಇನ್ನೊಂದು ಪಾರ್ಟಿಯಲ್ಲಿ ಅಮಿಷಾ ಸಿಕ್ಕರು. `ಏನಮ್ಮಾ, ಆ ಚಿತ್ರದ ನಾಯಕಿ ಆಗ್ತೀಯಾ?' ಎಂದು ಅವರು ಕೇಳಿದ್ದೇ, ಅಮಿಷಾ ಒಪ್ಪಿಗೆ ನೀಡಿ ಅಚ್ಚರಿ ಮೂಡಿಸಿದರು. ಆ ಸಿನಿಮಾ `ಕಹೋ ನಾ ಪ್ಯಾರ್ ಹೈ'.

ಅದಾದ ಮೇಲೆ `ಗದರ್: ಏಕ್ ಪ್ರೇಮ್ ಕಥಾ', `ಯೇ ಜಿಂದಗಿ ಕಾ ಸಫರ್', `ಹಮ್‌ರಾಜ್', `ಕ್ರಾಂತಿ' ಮೊದಲಾದ ಚಿತ್ರಗಳಲ್ಲಿ ಅಮಿಷಾ ನಟಿಸಿದರು. ಅವುಗಳಲ್ಲಿ ಸೋತ ಸಿನಿಮಾಗಳೇ ಹೆಚ್ಚು. ತೆಲುಗು, ತಮಿಳು ಚಿತ್ರಗಳಲ್ಲೂ ಅವರು ಆಗೀಗ ನಟಿಸಿದ್ದುಂಟು. 2008ರಲ್ಲಿ `ಥೋಡಾ ಪ್ಯಾರ್ ಥೋಡಾ ಮ್ಯಾಜಿಕ್' ಹಿಂದಿ ಚಿತ್ರ ಬಂದಮೇಲೆ ಮತ್ತೆ ಅವರು ಬಣ್ಣಹಚ್ಚಿದ್ದು 2011ರಲ್ಲಿ; `ಪರಮವೀರ ಚಕ್ರ' ಎಂಬ ತೆಲುಗು ಚಿತ್ರದಲ್ಲಿ.

ಅಷ್ಟರಲ್ಲಿ ಅವರು ನಿರ್ದೇಶಕ `ವಿಕ್ರಂ ಭಟ್' ಜೊತೆ ಡೇಟಿಂಗ್ ನಡೆಸಿ ಆಗಿತ್ತು. `ಆಪ್ ಮುಝೆ ಅಚ್ಛೆ ಲಗ್ನೆ ಲಗೇ' ಚಿತ್ರದಲ್ಲಿ ಶುರುವಾದ ಅವರಿಬ್ಬರ ಪ್ರೇಮದ ಆಯುಸ್ಸು ಬರೋಬ್ಬರಿ ಐದು ವರ್ಷ. ಆಮೇಲೆ ಕಣವ್ ಪುರಿ ಎಂಬ ಉದ್ಯಮಪತಿಗೆ ಅಮಿಷಾ ಒಲಿದರು. ಆ ಪ್ರೇಮದ ಆಯುಸ್ಸು ಎರಡೇ ವರ್ಷ. ನಡುವೆ ತಮ್ಮ 12 ಕೋಟಿ ರೂಪಾಯಿಯನ್ನು ಗುಳುಂ ಮಾಡಿರುವುದು ಸರಿಯಲ್ಲ; ಅದನ್ನು ಕಕ್ಕಬೇಕು ಎಂದು ತಂದೆಗೇ ವಕೀಲರಿಂದ ನೋಟಿಸ್ ಕಳುಹಿಸಿದ ಮಗಳು ಈ ಅಮಿಷಾ.

ಸಂಬಂಧಗಳಿಗೆ ಅಲ್ಪವಿರಾಮ ಹಾಕಿ, ಚಿತ್ರಗಳಿಗೆ ಸಹಿ ಹಾಕತೊಡಗಿರುವ ಅವರ ಕೈಲೀಗ ಹಲವು ಚಿತ್ರಗಳಿವೆ. `ರೇಸ್ 2' ಸಿದ್ಧಗೊಂಡಿದೆ. `ಶಾರ್ಟ್ ಕಟ್ ರೋಮಿಯೊ', `ಭಯ್ಯಾಜಿ ಸೂಪರ್‌ಹಿಟ್', `ಸಿಂಗ್ ಸಾಹೇಬ್ ಗ್ರೇಟ್', `ದೇಸಿ ಮ್ಯಾಜಿಕ್', `ಪ್ಯಾರಡೈಸ್ ಸ್ಟ್ರೀಟ್' ಚಿತ್ರಗಳಿಗೆ ನಾಯಕಿಯಾಗಿ ಆಯ್ಕೆಯಾದದ್ದೂ ಆಗಿದೆ.

ನಿಯತಕಾಲಿಕೆಗಳನ್ನು ಓದುವ ಅಭ್ಯಾಸ ತಮಗಿಲ್ಲ ಎನ್ನುವ ಅಮಿಷಾ, ಅವುಗಳ ಪುಟಗಳನ್ನು ತಿರುವಿ ಹಾಕುತ್ತಾ ಚಿತ್ರಗಳನ್ನು ಮಾತ್ರ ಗಂಭೀರವಾಗಿ ನೋಡುತ್ತಾರೆ. ತಮಗಿಂತ ಯಾವ ನಟಿ ಹೆಚ್ಚು `ಹಾಟ್' ಎಂಬುದು ಸದ್ಯದ ಅವರ ಹುಡುಕಾಟ. `ಈ ವಯಸ್ಸಿನಲ್ಲೂ ನೀವು ತಮಾಷೆ ಮಾಡುತ್ತೀರಾ' ಎಂದು ಯಾರೋ ಒಬ್ಬರು ಕೇಳಿದಾಗ, ಅಮಿಷಾ ಕಣ್ಣು ಮಿಟುಕಿಸಿ ನಕ್ಕರಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT