ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಡೆಮಿ: ಹೊಸ ಯೋಜನೆಗಳಿಗೆ ಸಿಗದ ಚಾಲನೆ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ನಾಟಕ ಅಕಾಡೆಮಿ, ಯಕ್ಷಗಾನ ಬಯಲಾಟ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಸಂಗೀತ ನೃತ್ಯ ಅಕಾಡೆಮಿಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿ ಇದೇ 6ಕ್ಕೆ ನಾಲ್ಕು ತಿಂಗಳು ಪೂರ್ಣಗೊಳ್ಳುತ್ತದೆ. ಆದರೆ, ಈ ಅಕಾಡೆಮಿಗಳಿಗೆ ಸದಸ್ಯರ ನೇಮಕ ಇನ್ನೂ ಆಗಿಲ್ಲ. ಇದು ಅಕಾಡೆಮಿಯ ಅಧ್ಯಕ್ಷರಿಗೆ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗದ ಸ್ಥಿತಿ ತಂದೊಡ್ಡಿದೆ.

ಯಕ್ಷಗಾನ ಬಯಲಾಟ ಅಕಾಡೆಮಿಗೆ ಪ್ರೊ.ಎಂ.ಲಕ್ಷ್ಮೀನಾರಾಯಣ ಸಾಮಗ, ನಾಟಕ ಅಕಾಡೆಮಿಗೆ ಮಾಲತಿ ಸುಧೀರ್, ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಕಾಸರಗೋಡು ಚಿನ್ನಾ (ಎಸ್. ಶ್ರೀನಿವಾಸ ರಾವ್) ಹಾಗೂ ಸಂಗೀತ ನೃತ್ಯ ಅಕಾಡೆಮಿಗೆ ವೈಜಯಂತಿ ಕಾಶಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸರ್ಕಾರ 2011ರ ಸೆಪ್ಟೆಂಬರ್ 6ರಂದು ಆದೇಶ ಹೊರಡಿಸಿತ್ತು.

ಅಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಅಕಾಡೆಮಿಗಳಿಗೆ ಸದಸ್ಯರನ್ನು ಶೀಘ್ರದಲ್ಲೇ ನೇಮಕ ಮಾಡಲಾಗುವುದು ಎಂಬ ಭರವಸೆಯನ್ನೂ ನೀಡಿದ್ದರು.

ಅಧ್ಯಕ್ಷರ ನೇಮಕ ಸಂದರ್ಭದಲ್ಲೇ, ಅಕಾಡೆಮಿಗಳ ಸದಸ್ಯರನ್ನೂ ನೇಮಕ ಮಾಡುವುದು ಪದ್ಧತಿ. ಇತ್ತೀಚೆಗೆ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಅವಧಿ ಮುಗಿದ ನಂತರ ತುಳು ಅಕಾಡೆಮಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಯಿತು. ಅದಕ್ಕೆ ಸದಸ್ಯರ ನೇಮಕಾತಿಯೂ ವಿಳಂಬವಿಲ್ಲದೆ ಆಗಿದೆ.
 
ಆದರೆ ಈ ನಾಲ್ಕು ಅಕಾಡೆಮಿಗಳಿಗೆ ಮಾತ್ರ ಹೊಸ ಸದಸ್ಯರ ನೇಮಕ ಆಗಿಲ್ಲ. ಅಕಾಡೆಮಿಗೆ ಕೂಡಲೇ ಸದಸ್ಯರ ನೇಮಕ ಮಾಡುವಂತೆ ಮಾಲತಿ ಸುಧೀರ್ ಅವರು ಬೆಂಗಳೂರಿನಲ್ಲಿ ನವೆಂಬರ್ 26ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಸರ್ಕಾರವನ್ನು ಕೋರಿಕೊಂಡಿದ್ದರು. ಸದಸ್ಯರಿಲ್ಲದೆ ಅಕಾಡೆಮಿಗೆ ಸಂಬಂಧಿಸಿದ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದರು.

ಹೊಸ ಸದಸ್ಯರ ನೇಮಕ ಆಗದ ಕಾರಣ ಅಕಾಡೆಮಿಗಳ ಕೆಲವು ಚಟುವಟಿಕೆಗಳು ಸ್ಥಗಿತಗೊಂಡಿವೆ. ನಾಲ್ಕೂ ಅಕಾಡೆಮಿಗಳ ಫೆಲೊಷಿಪ್ ಕಾರ್ಯಕ್ರಮ, ಸಂಗೀತ ನೃತ್ಯ ಅಕಾಡೆಮಿಯ ವಿದ್ಯಾರ್ಥಿ ವೇತನ ಕಾರ್ಯಕ್ರಮಗಳು ನಿಗದಿತವಾಗಿ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

ಸಚಿವರ ಬಳಿ ಕಡತ: `ಅಕಾಡೆಮಿಗಳಿಗೆ ಸದಸ್ಯರ ಹೆಸರು ಅಂತಿಮಗೊಳಿಸಿ, ಅದಕ್ಕೆ ಸಂಬಂಧಿಸಿದ ಕಡತವನ್ನು ಸಚಿವ ಗೋವಿಂದ ಕಾರಜೋಳ ಅವರಿಗೆ ಕಳುಹಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಹೊಸ ಸದಸ್ಯರ ನೇಮಕ ಆಗುತ್ತದೆ. ಈ ಕುರಿತು ಸಚಿವರೂ ಸ್ಪಷ್ಟ ಭರವಸೆ ನೀಡಿದ್ದಾರೆ~ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.

`ನಾಲ್ಕು ಅಕಾಡೆಮಿಗಳಿಗೆ ಹೊಸ ಸದಸ್ಯರ ನೇಮಕ ಆಗದ ಕಾರಣ ಅವುಗಳ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಆಗಿಲ್ಲ. ಅಕಾಡೆಮಿಗಳ ದೈನಂದಿನ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗಿಲ್ಲ. ಕಾರ್ಯ ಯೋಜನೆಯ ಅನ್ವಯ ಅಕಾಡೆಮಿಗಳ ಕೆಲಸ ಮುಂದುವರೆದಿದೆ~ ಎಂದು ಅವರು ಸ್ಪಷ್ಟಪಡಿಸಿದರು.

`ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಇಬ್ಬರಿಂದಲೇ ಅಕಾಡೆಮಿಯ ಕಾರ್ಯಕ್ರಮಗಳನ್ನು ರೂಪಿಸುವುದು ಸಾಧ್ಯವಿಲ್ಲ. ಸದಸ್ಯರ ನೇಮಕವಾಗದ ಕಾರಣ ಯಾವುದೇ ಹೊಸ ಯೋಜನೆ ಕೈಗೆತ್ತಿಕೊಳ್ಳಲು ಆಗುತ್ತಿಲ್ಲ. ಸದಸ್ಯರ ನೇಮಕ ತ್ವರಿತವಾಗಿ ಆದರೆ ಅಂದುಕೊಂಡ ಕೆಲಸಗಳನ್ನು ಅನುಷ್ಠಾನಕ್ಕೆ ತರಬಹುದು~ ಎಂದು ಅಕಾಡೆಮಿಯ ಅಧ್ಯಕ್ಷರೊಬ್ಬರು ಸಚಿವ ಗೋವಿಂದ ಕಾರಜೋಳ ಅವರಿಗೆ ಈಗಾಗಲೇ 3-4 ಬಾರಿ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT