ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕನಬಳಗದ ಅಮೃತ ಮಹೋತ್ಸವ

Last Updated 6 ಜನವರಿ 2014, 5:44 IST
ಅಕ್ಷರ ಗಾತ್ರ

ಧಾರವಾಡ: ‘12ನೇ ಶತಮಾನದಲ್ಲಿ ಜಗತ್ತಿಗೆ ಸಮಾ­ನತೆ ಮತ್ತು ಸ್ತ್ರೀ ಸ್ವಾತಂತ್ರ್ಯದ ಕಲ್ಪನೆ ಕೊಟ್ಟ­ವರು ಬಸವಣ್ಣನವರು. ಇಂದಿಗೂ ಬಸವಣ್ಣನವರ ತತ್ವಗಳು, ಆದರ್ಶ ಪ್ರಸ್ತುತ. ಹೀಗಾಗಿ 21ನೇ ಶತಮಾನ ಬಸವಯುಗ’ ಎಂದು ಯಕ್ಸಂಬಾ ಶಾಸಕಿ ಶಶಿಕಲಾ ಜೊಲ್ಲೆ ಅಭಿಪ್ರಾಯಪಟ್ಟರು.

ಭಾನುವಾರ ಇಲ್ಲಿನ ಅಕ್ಕನ ಬಳಗದಲ್ಲಿ ಹಮ್ಮಿಕೊಂಡಿದ್ದ ಅಕ್ಕ ಮಹಾದೇವಿ ಜಯಂತಿ ಆಚರಣೆ ಮತ್ತು ಅಕ್ಕನ ಬಳಗದ ಅಮೃತ­ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ‘ಅಂದು ಬಸವಣ್ಣನವರು ಸ್ತ್ರೀ ಸ್ವಾತಂತ್ರ್ಯದ ಕಲ್ಪನೆ ಕೊಡದೇ ಹೋಗಿದ್ದಲ್ಲಿ, ಅಕ್ಕಮಹಾದೇವಿ ಸೇರಿ­ದಂತೆ ಹಲವಾರು ಶರಣೆಯರು ಬೆಳಕಿಗೆ ಬರುವ ಸಾಧ್ಯತೆ ಇರಲಿಲ್ಲ. ಹೀಗಾಗಿ ಪ್ರತಿ ಮಹಿಳೆಯ ಯಶಸ್ಸಿನ ಹಿಂದೆ ಉತ್ತಮ ಪುರುಷರ ಕೊಡುಗೆ ಇದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಅಕ್ಕ­ಮಹಾದೇವಿ ಭೌತಿಕ ಸುಖಗಳನ್ನು ತ್ಯಾಗ ಮಾಡಿ, ಧೈರ್ಯ, ದಿಟ್ಟತನದಿಂದ ತನ್ನನ್ನು ಅಭಿವ್ಯಕ್ತಿಸಿ­ಕೊಂಡ­ವಳು. ಆಕೆಯ ಆದರ್ಶಮಹಿ­ಳಾ ಸಮು­ದಾಯಕ್ಕೆ ಪ್ರೇರಣೆಯಾಗಬೇಕು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಗದಗ ತೋಂಟ­ದಾರ್ಯ ಸಂಸ್ಥಾನಮಠದ ಡಾ.ಸಿದ್ಧಲಿಂಗ ಸ್ವಾಮೀಜಿ, ‘ಪ್ರಸ್ತುತ ಲಿಂಗಾಯತ ಸಮುದಾಯ ಜಡ­ಗೊಂಡಿದೆ. ನಾವು ಕೇವಲ ಭೂತಕಾಲದಲ್ಲಿ ಬದು­ಕುತ್ತಿದ್ದೇವೆ. ವರ್ತಮಾನ, ಭವಿಷ್ಯ ಕುರಿತು ಯೋಚಿಸುತ್ತಿಲ್ಲ. ಬಸವಾದಿ ಶರಣರ ಅನು­ಯಾಯಿ­ಗಳೆಂದು ಹೇಳಿಕೊಳ್ಳುತ್ತೇವೆ. ಆದರೆ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿ­ಕೊಳ್ಳುವ ಕುರಿತು ಚಿಂತನೆ ನಡೆಯುತ್ತಿಲ್ಲ. ಒಂದ­ರ್ಥದಲ್ಲಿ ನಾವು ಬಾವಿಯೊಳಗಿನ ಕಪ್ಪೆಗಳಂತೆ ಬದು­ಕುತ್ತಿದ್ದೇವೆ’ ಎಂದು ಹೇಳಿದರು.

‘ಭಾರತೀಯ ಪರಂಪರೆ ಮತ್ತು ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಶೂದ್ರರನ್ನಾಗಿ ಪರಿಗಣಿಸಲಾಗುತ್ತಿತ್ತು. ಮನುಷ್ಯ, ಮನುಷ್ಯರ ನಡುವೆ ಭೇದ–ಭಾವ ಮಾಡುವ ನಿಯಮಗಳನ್ನು ರೂಢಿಸಿಕೊಳ್ಳಲಾಗಿತ್ತು. ಮನುಸ್ಮೃತಿಯೇ ಅವರ ಸಂವಿಧಾನವಾಗಿತ್ತು. ಮಹಿಳೆಯರನ್ನು ಶೋಷಣೆ­ಯಿಂದ ಮುಕ್ತಗೊಳಿಸಲು ಮಹಿಳೆಯರು ಮುಂದಾ­ದ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ’ ಎಂದರು.

ಶಾಸಕರಾದ ವಿನಯ ಕುಲಕರ್ಣಿ ‘ಅಮೃತ ವಿರಾಗಿಣಿ’ ಸ್ಮರಣ ಸಂಚಿಕೆ, ಅರವಿಂದ ಬೆಲ್ಲದ ‘ಕದಳಿಯ ಕಲ್ಪತರು‘ ಸ್ಮರಣ ಸಂಪುಟ ಬಿಡು­ಗಡೆಗೊಳಿಸಿದರು. ಪ್ರಭಾವತಿ ಮೂರಶಿಳ್ಳಿ, ಶಾರದಾ ಬೆಲ್ಲದ, ನಳಿನಾಕ್ಷಿ ಅರಳಗುಪ್ಪಿ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT