ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿ ಪಡೆಯರಿ, ಹೆಚ್ಚು ದುಡಿಯಿರಿ; ಕಾಗೋಡು ತಿಮ್ಮಪ್ಪ

ಶಿವಮೊಗ್ಗ: `ಅನ್ನ ಭಾಗ್ಯ ಯೋಜನೆ'ಗೆ ಚಾಲನೆ
Last Updated 11 ಜುಲೈ 2013, 9:51 IST
ಅಕ್ಷರ ಗಾತ್ರ

ಶಿವಮೊಗ್ಗ:  ಒಂದು ರೂಪಾಯಿಗೆ ಅಕ್ಕಿ ನೀಡುವುದರಿಂದ ಜನ ಸೋಮಾರಿ ಗಳಾಗುತ್ತಾರೆಂಬ ಟೀಕೆಗಳಿವೆ. ಆದರೆ, ಜನ ಈ ಅಕ್ಕಿಯನ್ನು ಉಪಯೋಗಿಸಿಕೊಂಡು ತಮ್ಮ ದುಡಿಮೆ ಅವಧಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸಲಹೆ ಮಾಡಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಆಹಾರ, ನಾಗರಿಕ ಸರಬರಾಜು ಇಲಾಖೆ, ಕರ್ನಾಟಕ ಆಹಾರ, ನಾಗರಿಕ ಪೂರೈಕೆ ನಿಗಮ ಸಂಯುಕ್ತವಾಗಿ ಬುಧವಾರ ಹಮ್ಮಿಕೊಂಡಿದ್ದ `ಅನ್ನ ಭಾಗ್ಯ ಯೋಜನೆ' ಚಾಲನೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೆ 5 ಗಂಟೆ ದುಡಿಯುವವರು ಇನ್ನು ಮುಂದೆ 8 ಗಂಟೆ ದುಡಿಮೆ ಮಾಡಬೇಕು. ಅನ್ನದ ಸಮಸ್ಯೆ ನೀಗಿದ್ದರಿಂದ ಜನ ದುಡಿಮೆ ಮಾಡುವುದರಲ್ಲಿ ಹೆಚ್ಚಿನ ಉತ್ಸಾಹ ತೋರಬೇಕು. ಹೊಸ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಖು  ಎಂದರು.
`ಅನ್ನ ಭಾಗ್ಯ ಯೋಜನೆ'ಯಡಿ ಸಿಗುವ ಅಕ್ಕಿಯನ್ನು ಯಾವುದೇ ಕಾರಣಕ್ಕೂ ಮಾರಿಕೊಳ್ಳಬೇಡಿ ಎಂದು ಮನವಿ ಮಾಡಿದ ಅವರು, ಅಕ್ಕಿ ಮಾರಿಕೊಂಡರೆ ಒಳ್ಳೆಯ ದಾಗುವುದಿಲ್ಲ; ಸರ್ಕಾರದ ಶಾಪ ತಟ್ಟುತ್ತದೆ ಎಂದು ಫಲಾನುಭವಿಗಳಿಗೆ ಎಚ್ಚರಿಕೆ ನೀಡಿದರು.

`ಅನ್ನ ಭಾಗ್ಯ ಯೋಜನೆ' ಸೌಭಾಗ್ಯದ ಕಾರ್ಯಕ್ರಮ. ಇದರ ಲಾಭ ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು. ಇದರಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತುಕೊಂಡು ಕೆಲಸ ಮಾಡಬೇಕು. ಪ್ರತಿ ತಾಲ್ಲೂಕಿನಲ್ಲೂ ತಹಶೀಲ್ದಾರ್, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು ಆಸಕ್ತಿ ವಹಿಸಬೇಕು ಎಂದರು.

ಜನರಿಗೆ ತುತ್ತು ಅನ್ನ ನೀಡುವ ಈ ಕಾರ್ಯಕ್ರಮದಲ್ಲಿ ನ್ಯಾಯಬೆಲೆ ಅಂಗಡಿ ಅವರ ಕಾರ್ಯ ಶುದ್ಧ, ಅರ್ಥಪೂರ್ಣವಾಗಿರಬೇಕು. ಪ್ರತಿ ಅಂಗಡಿ ಎದುರು ಕಾರ್ಡುದಾರರ ಸಂಖ್ಯೆ, ಪಡಿತರ ವಿವರಗಳನ್ನು ಒಳಗೊಂಡ ದೊಡ್ಡ ಬೋರ್ಡ್ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಫಲಾನುಭವಿಗಳು ಕಾರ್ಯಕ್ರಮದ ನೇರ ಪ್ರಯೋಜನ ಪಡೆದುಕೊಳ್ಳುವ ರೀತಿಯಲ್ಲಿ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಸೂಚಿಸಿದರು.

ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ವಿಧಾನ ಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಹಾರೋಗುಳಿಗೆ ಪದ್ಮನಾಭ, ಕಲಗೋಡು ರತ್ನಾಕರ, ಶಿವಮೊಗ್ಗ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ದೇವಿಬಾಯಿ ಧರ್ಮನಾಯ್ಕ, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಲ್ಲಾ ಪಂಚಾಯ್ತಿ ಸಿಇಒ ಸಸಿಕಾಂತ್ ಸೆಂಥಿಲ್ ಉಪಸ್ಥಿತರಿದ್ದರು.

ಸಮನ್ವಯ ಕಾಶಿ ಕಾರ್ಯಕ್ರಮ ನಿರೂಪಿಸಿದರು.

`ಯೋಜನೆ ನಿಲ್ಲಿಸಬೇಡಿ'
`ಅನ್ನ ಭಾಗ್ಯ ಯೋಜನೆ'ಯನ್ನು ಸರ್ಕಾರ ಮುಂದುವರಿಸಬೇಕು. ಕೇವಲ 2 ತಿಂಗಳಿಗೆ ನಿಲ್ಲಿಸಬಾರದು ಎಂದು ಫಲಾನುಭವಿಯೊಬ್ಬರು ವೇದಿಕೆಗೆ ಬಂದು ಹೇಳಿದ ಘಟನೆ ನಡೆಯಿತು.

ಕಾರ್ಯಕ್ರಮ ನಡೆಯುತ್ತಿದ್ದಾಗ ಪ್ರೇಕ್ಷಕರ ಮುಂಭಾಗದಲ್ಲಿ ಕುಳಿತಿದ್ದ ಅವರು ಎದ್ದು ನಿಂತು ಹೇಳುತ್ತಿದ್ದಾಗ, ಅವರನ್ನು ಕಾಗೋಡು ತಿಮ್ಮಪ್ಪ ವೇದಿಕೆಗೆ ಬರುವಂತೆ ಸೂಚಿಸಿದರು. ಅದರಂತೆ ಅವರು ವೇದಿಕೆಗೆ ಬಂದು, `ಯಾವುದೇ ಕಾರಣಕ್ಕೂ ಈ ಯೋಜನೆ ನಿಲ್ಲಿಸಬಾರದು; ನಿಲ್ಲಿಸಿದರೆ ಪ್ರತಿಭಟನೆ ನಡೆಸಲಾಗುವುದು' ಎಂದು ಎಚ್ಚರಿಕೆ ನೀಡಿದ ಪ್ರಸಂಗ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT