ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿಗಿರಣಿಗಳ ಬಂದ್‌ಗೆ ಉತ್ತಮ ಬೆಂಬಲ

ಕಾರಟಗಿ, ಗಂಗಾವತಿ: ರಾಜ್ಯ ಸರ್ಕಾರದ ಲೆವಿ ಅಕ್ಕಿ ನೀತಿಗೆ ವ್ಯಾಪಕ ವಿರೋಧ
Last Updated 17 ಡಿಸೆಂಬರ್ 2013, 6:03 IST
ಅಕ್ಷರ ಗಾತ್ರ

ಗಂಗಾವತಿ: ರಾಜ್ಯ ಸರ್ಕಾರದ ಅಕ್ಕಿ ಗಿರಣಿಗಳ ಮೇಲಿನ ಲೆವಿ ನೀತಿ ಖಂಡಿಸಿ ನಗರದ 38ಕ್ಕೂ ಹೆಚ್ಚು ಅಕ್ಕಿ ಗಿರಣಿಗಳ ಚಟುವಟಿಕೆ ಸೋಮವಾರದಿಂದ ಸ್ಥಗಿತಗೊಂಡಿದೆ. ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಕ್ಕಿಗಿರಣಿ ಮಾಲಿಕರು ಸಂಘದ ತಾಲ್ಲೂಕು ಘಟಕದ ಕಚೇರಿಯಲ್ಲಿ ಸಭೆ ನಡೆಸಿದರು.

ಅಕ್ಕಿ ಗಿರಣಿ ಮಾಲಿಕರ ಸಂಘದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಪರಣ್ಣ ಮುನವಳ್ಳಿ ಮತ್ತು ಅಕ್ಕಿ ಗಿರಣಿ ಮಾಲಿಕರ ಸಂಘದ ಗಂಗಾವತಿ ತಾಲ್ಲೂಕು ಘಟಕದ ಅಧ್ಯಕ್ಷ ಎನ್‌. ಸೂರಿಬಾಬು ನೇತೃತ್ವದಲ್ಲಿ ಅಕ್ಕಿಗಿರಣಿ ಮಾಲಿಕರ ಸಭೆ ನಡೆಯಿತು.

ಎನ್‌.ಸೂರಿಬಾಬು ಮಾತನಾಡಿ, 30 ವರ್ಷದಿಂದ ಯಾವ ಸರ್ಕಾರಗಳು ಅಕ್ಕಿ ಗಿರಣಿ ಮಾಲಿಕರಿಗೆ ಭಾರವಾಗಿರಲಿಲ್ಲ. ವಾರ್ಷಿಕ 1.5 ಲಕ್ಷ ಟನ್ ಲೆವಿ ಗುರಿ ನೀಡಲಾಗಿತ್ತು. ಅಧಿಕ ಎಂದರೆ 2.5 ಲಕ್ಷ ಟನ್‌ ನೀಡಲಾಗಿದೆ. ಈಗ ರಾಜ್ಯ ಸರ್ಕಾರ 13.5 ಲಕ್ಷ ಟನ್‌ ಗುರಿ ನಿಗದಿಪಡಿಸಿದೆ. ರಾಜ್ಯದ ಎಲ್ಲ ರೈಸ್‌ಮಿಲ್‌ಗಳು 24ಗಂಟೆ ಕೆಲಸ ಮಾಡಿದರೂ ಈ ಗುರಿ ತಲುಪಲು ಸಾಧ್ಯವಿಲ್ಲ ಎಂದರು.

ರೈತರ ಭತ್ತಕ್ಕೆ ₨ 1,600 ಬೆಂಬಲ ಬೆಲೆ ನೀಡಲಾಗುತ್ತಿದೆ. ಅದೇ ಬೆಲೆಯನ್ನು ಲೆವಿ ಅಕ್ಕಿಗೆ ನೀಡಿದರೂ ₨ 2,650 ಮೊತ್ತವಾಗುತ್ತದೆ. ಸರ್ಕಾರ ಅಕ್ಕಿ ಗಿರಣಿ ಮಾಲಿಕರ ಶೋಷಣೆಗೆ ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ಕಿಗಿರಣಿ ಗಳನ್ನು ಬಂದ್‌ ಮಾಡದೆ ಬೇರೆ ದಾರಿಯಿಲ್ಲ ಎಂದು ಸಭೆಗೆ ತಿಳಿಸಿದರು.

ಪರಣ್ಣ ಮುನವಳ್ಳಿ ಮಾತನಾಡಿ, ಲೆವಿ ಸಮಸ್ಯೆ ಉಂಟಾಗುವ ಬಗ್ಗೆ ನಾಲ್ಕು ತಿಂಗಳ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರ ಗಮನ ಸೆಳೆಯಲಾಗಿತ್ತು. ಅವರು ಅಕ್ಕಿಗಿರಣಿ ಮಾಲಿಕರ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ನಂತರ ಯಾವ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ಗಿರಣಿ ಗಳನ್ನು ಬಂದ್‌ ಮಾಡಲಾಗಿದೆ ಎಂದರು.

ಅಕ್ಕಿ ಗಿರಣಿಗಳನ್ನು ಪ್ರತ್ಯಕ್ಷ, ಪರೋಕ್ಷವಾಗಿ ಅವಲಂಭಿಸಿದ ವರ್ತಕರು, ರೈತರು, ಕಾರ್ಮಿಕರು ಬಂದ್‌ಗೆ ಬೆಂಬಲ ನೀಡುವಂತೆ ಅವರು ಮನವಿ ಮಾಡಿದರು.

ಕಾರ್ಮಿಕ ಮುಖಂಡ ಜೆ.ಭಾರದ್ವಾಜ್‌ ಮಾತನಾಡಿ, ಲೆವಿ ಸಮಸ್ಯೆ ಹಿಂದೆ ಕಾಣದ ಕೈಗಳಿವೆ. ಕಾರ್ಪೋರೇಟ್‌ ಸಂಸ್ಥೆಗಳು ಸರ್ಕಾರ ವನ್ನು ನಿಯಂತ್ರಿಸುತ್ತಿವೆ. ಅಕ್ಕಿ ಗಿರಣಿ ಬಂದ್‌ ನಿಂದ ಕಾರ್ಮಿಕರು ಕೆಲಸವಿಲ್ಲದೆ ಪರದಾಡ ಬೇಕಾಗುತ್ತದೆ. ಸರ್ಕಾರ ಸೂಕ್ತ ಪರಿಹಾರ ಸೂಚಿಸಬೇಕು ಎಂದು ಆಗ್ರಹಿಸಿದರು.

ಅಕ್ಕಿಗಿರಣಿ ಮಾಲಿಕರ ಹೋರಾಟಕ್ಕೆ ಹಾಗೂ ಸಮಸ್ಯೆ ಶೀಘ್ರ ಇತ್ಯರ್ಥಕ್ಕೆ ರೈತರ ಮನವೊಲಿಸುವುದಾಗಿ ಹೇಳಿದರು.
ದಲಾಲಿಗಳ ಸಂಘದ ಅಧ್ಯಕ್ಷ ಕೆಲೋಜಿ ಶ್ರೀನಿವಾಸ ಶ್ರೇಷ್ಠಿ, ವರ್ತಕರ ಸಂಘದ ಅಧ್ಯಕ್ಷ ಬಾಹುಬಲಿ, ಸಾರಿಗೆ ಸಂಘದ ಅಧ್ಯಕ್ಷ ಲಿಂಗಪ್ಪ, ಕ್ಯಾನ್ವರ್ಸ್‌ ಸಂಘದ ಅಧ್ಯಕ್ಷ ಸುರೇಶ್‌, ಕಾರ್ಮಿಕ ಮುಖಂಡ ವಿರೂಪಾಕ್ಷಪ್ಪ ಇದ್ದರು.

ಉದ್ಯಮಿಗಳಾದ ಕೆ.ಕಾಳಪ್ಪ, ಕಲ್ಯಾಣ ನಾಗೇಶ್ವರ ರಾವ್‌, ಎನ್‌.ಆರ್‌. ಕೃಷ್ಣಮೂರ್ತಿ, ಎಂ.ಸರ್ವೇಶ, ಕೃಷ್ಣಪ್ಪ, ನಭೀಸಾಬ, ರಾಜೇಂದ್ರ ಸೇಠ್‌, ಮಸ್ಕಿ ಶರಣಪ್ಪ, ವೆಂಕಟೇಶ ಉಪ್ಪಾರ, ಸುರೇಶ ಸೋಳಂಕಿ, ಬಾಬಣ್ಣ, ಪ್ರಕಾಶ ಚೋಪ್ಡಾ, ಸುರೇಶ ಸುರಾನ ಇದ್ದರು.

ಕಾರಟಗಿ ವರದಿ: ರಾಜ್ಯ ಸರ್ಕಾರದ ಲೆವಿ ಅಕ್ಕಿ ನೀತಿ ಕೈಬಿಡಬೇಕು ಎಂದು ಆಗ್ರಹಿಸಿ ರಾಜ್ಯ ಸಂಘದ ಕರೆಯ ಮೇರೆಗೆ ಸೋಮವಾರದಿಂದ ಇಲ್ಲಿನ ಅಕ್ಕಿ ಗಿರಣಿಗಳು ಬಂದ್ ಆಗಿವೆ. ಇದರಿಂದ ವ್ಯಾಪಾರ, ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದು, ಅಕ್ಕಿಗಿರಣಿಗಳು ಬಿಕೋ ಎನ್ನುತ್ತಿವೆ.

ಇಲ್ಲಿನ ಸಂಘದ ಕಚೇರಿಯಲ್ಲಿ ಜಮಾಯಿಸಿದ ಅಕ್ಕಿಗಿರಣಿ ಮಾಲಿಕರು ಸಮಾಲೋಚನೆ ನಡೆಸಿ ದರು. ಬಳಿಕ ಮುಖ್ಯಮಂತ್ರಿಗೆ ವಿಶೇಷ ತಹಶೀ ಲ್ದಾರ್‌ ಮೂಲಕ ಮನವಿ ಸಲ್ಲಿಸಿದರು.

ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂ ಡಿದೆ. ಇದು ಸರಿಯಲ್ಲ. ಭತ್ತದ ಬೆಂಬಲ ಬೆಲೆ ಹಾಗೂ ಲೆವಿ ಅಕ್ಕಿ ಬೆಲೆಯಲ್ಲೂ ತಾರತಮ್ಯ ಮಾಡಲಾಗಿದೆ. ಇದನ್ನು ಸರಿಪಡಿಸಬೇಕು. ವಾರ್ಷಿಕ 1. 25 ಲಕ್ಷ ಮೆಟ್ರಿಕ್ ಟನ್ ಅನ್ನು ಏಕಾಏಕಿಯಾಗಿ 13. 5 ಲಕ್ಷ ಮೆಟ್ರಿಕ್ ಟನ್‌ಗೆ ನಿಗದಿಪಡಿಸಿದ ಅವೈಜ್ಞಾನಿಕ ಕ್ರಮ ಕೈಬಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಸೋನಾಮಸೂರಿ ಭತ್ತ ಬೆಳೆ ಬೆಳೆಯುವಲ್ಲಿ 2005–06ರಲ್ಲಿ ಲೆವಿಯಿಂದ ವಿನಾಯಿತಿ ನೀಡಲಾಗಿತ್ತು. ಅದನ್ನು ಈಗಲೂ ಮುಂದುವರಿ ಸಬೇಕು. ವರ್ತಕರಿಂದ ಶೇ 35ರಷ್ಟು ಭತ್ತ ಹೊರ ರಾಜ್ಯಗಳಿಗೆ ಹೋಗುತ್ತಿದ್ದರೂ ಮಿಲ್‌ ಗಳ ಮೇಲೆ ಹೊರೆ ಹಾಕುವುದನ್ನು ಕೈಬಿಡ ಬೇಕು. ಭತ್ತದ ದಾಸ್ತಾನಿಗೆ 30 ದಿನಗಳ ಗಡುವು ಕೈಬಿಡಬೇಕು. ಇಲ್ಲದಿದ್ದರೆ ಮಿಲ್ ನಡೆಸಲು ಸಾಧ್ಯವೆ ಇಲ್ಲ. ಸರ್ಕಾರ ನಿಗದಿಪ ಡಿಸಿದ ಲೆವಿ ಹಾಕಲು ಮಿಲ್‌ಗಳಿಗೆ ಸಾಧ್ಯವಿಲ್ಲ ಎಂಬುದನ್ನು ಮನಗಂಡು ಲೆವಿ  ನೀತಿ  ಕೈಬಿಡಬೇಕು ಎಂದು ಒತ್ತಾಯಿಸಲಾಗಿದೆ.

ಅಕ್ಕಿಗಿರಣಿದಾರರ ಸಂಘದ ಅಧ್ಯಕ್ಷ ಎನ್.ಶ್ರೀನಿವಾಸ ಮಾತನಾಡಿ, ಲೆವಿ  ನೀತಿ ಸಲುವಾಗಿ ಎರಡು ತಿಂಗಳಿಂದ ಯತ್ನಿಸಿದರೂ ಸರ್ಕಾರ ನಮ್ಮ ನೋವಿಗೆ ಸ್ಪಂದಿಸಿಲ್ಲ. ರಾಜ್ಯ ಸಂಘದ ಕರೆಯ ಮೇರೆಗೆ ನಮ್ಮಲ್ಲಿಯೂ ಮಿಲ್‌ಗಳನ್ನು ಅನಿರ್ಧಿಷ್ಟಾವಧಿಯವರೆಗೆ ಬಂದ್ ಮಾಡಲಾಗುತ್ತಿದೆ ಎಂದರು.

ಸಂಘದ ಗೌರವಾಧ್ಯಕ್ಷ ಸುಂಕದ ಲಿಂಗಪ್ಪ ಮಾತನಾಡಿ, ನಮ್ಮ ಭಾಗ ಸೋನಾಮಸೂರಿ ಭತ್ತ ಬೆಳೆಯುವ ಪ್ರದೇಶವಾಗಿದೆ. ಬಾಸುಮತಿ ಭತ್ತದ ಮಾದರಿಯಲ್ಲಿ ಸೋನಾಮಸೂರಿ ಭಾಗ ಎಂದು ಘೋಷಣೆಗೆ ಒತ್ತಡ ಹಾಕು ತ್ತಿದ್ದೇವೆ. ಕೇಂದ್ರ ಸರ್ಕಾರ ನಮ್ಮ ನೋವಿಗೆ ಸ್ಪಂದಿಸಬೇಕು ಎಂದರು.

ರಾಜ್ಯ ಅಕ್ಕಿಗಿರಣಿ ಮಾಲಿಕರ ಸಂಘದ ಉಪಾ ಧ್ಯಕ್ಷ ಕೆ.ಸಣ್ಣಸೂಗಪ್ಪ ಮಾತನಾಡಿ, ಸರ್ಕಾರ ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸದೆ, ಮಿಲ್‌ಗಳ ಮೇಲೆ ಹೊರೆ ಹಾಕಿದೆ. ಉಳಿವಿಗಾಗಿ ಬಂದ್ ಘೋಷಿಸಿದ್ದೇವೆ ಎಂದರು.
ಸಂಘದ ಕಾರ್ಯದರ್ಶಿ ಶರಣಪ್ಪ ಯಾಡ್ಕಿ, ಉದ್ಯಮಿಗಳಾದ ಕೆ.ವೆಂಕಟರಡ್ಡೆಪ್ಪ, ಜಿ. ಅಮರೇಶಪ್ಪ, ಕೆ.ಸಿದ್ದನಗೌಡ ಮಾತನಾಡಿದರು. ಅಕ್ಕಿಗಿರಣಿಗಳ ಮಾಲಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT