ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿಹೊಂಡ ಮಾರುಕಟ್ಟೆ ಸ್ಥಳಾಂತರಕ್ಕೆ ಸಿದ್ಧತೆ

Last Updated 19 ಸೆಪ್ಟೆಂಬರ್ 2011, 9:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸದಾ ಸಂಚಾರ ದಟ್ಟಣೆಯ ಕಿರಿಕಿರಿ, ವ್ಯಾಪಾರಸ್ಥರು-ಗ್ರಾಹಕರಿಂದ ಗಿಜಿಗುಡುವ ಇಲ್ಲಿನ ಪುರಾತನ ಅಕ್ಕಿಹೊಂಡ ಮಾರುಕಟ್ಟೆಯ ಸಂಕಷ್ಟಗಳ ನಿವಾರಣೆಗೆ  ಮುಹೂರ್ತ ಕೂಡಿ ಬಂದಿದೆ.

ಅಕ್ಕಿಹೊಂಡ ಮಾರುಕಟ್ಟೆಯನ್ನು ಅಮರಗೋಳದ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸುವ ಹಲವು ವರ್ಷಗಳ ಈಗ ಕನಸು ನನಸಾಗುವತ್ತ ಸಾಗಿದೆ. ನೂತನ ಮಾರುಕಟ್ಟೆ ಪ್ರಾಂಗಣದಲ್ಲಿ ಮೂಲಸೌಕರ್ಯ ಕಲ್ಪಿಸಲು ನೀರು, ವಿದ್ಯುತ್ ರಸ್ತೆ ಹಾಗೂ ವ್ಯಾಪಾರಿಗಳಿಂದ ಉಗ್ರಾಣಗಳ ನಿರ್ಮಾಣದ ಕಾಮಗಾರಿ ಅಂತಿಮ ಹಂತದಲ್ಲಿದೆ.

ಪುರಾತನ ಮಾರುಕಟ್ಟೆ: ವಾಣಿಜ್ಯ ನಗರ ಎಂಬ ಹುಬ್ಬ ಳ್ಳಿಯ ಮುಕುಟಕ್ಕೆ ಹಕ್ಕುದಾರ ಎಂಬಂತಿರುವ ಅಕ್ಕಿಹೊಂಡ ನಗರದ ಅತ್ಯಂತ ಪುರಾತನ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿದೆ. ಸುಮಾರು 30 ಎಕರೆ ವಿಸ್ತೀರ್ಣ ಹೊಂದಿರುವ ಅಕ್ಕಿಹೊಂಡ ಮಾರುಕಟ್ಟೆ ಇಲ್ಲಿನ ಗಣೇಶನ ದೇವಸ್ಥಾನವನ್ನು ಕೇಂದ್ರವಾಗಿಟ್ಟುಕೊಂಡು ಭೂಸಪೇಟೆ, ಕಂಬದ ಓಣಿ, ಶಿಂಪಿ ಗಲ್ಲಿ, ಅಳಗುಂಡಿಗಿ ಓಣಿ, ಹಿರೇಪೇಟೆ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳನ್ನು ಒಳಗೊಂಡಿದೆ. ಮಾಸಿಕ ನೂರಾರು ಕೋಟಿ ವಹಿವಾಟು ನಡೆಯುವ ಇಲ್ಲಿ ಹೆಸರೇ ಸೂಚಿಸುವಂತೆ ಅಕ್ಕಿ ವ್ಯಾಪಾರವನ್ನು ಮುಖ್ಯವಾಗಿಟ್ಟುಕೊಂಡು ಗೋಧಿ, ಬೆಲ್ಲ, ಜೋಳ, ಎಣ್ಣೆ ಹೀಗೆ ದಿನ ಬಳಕೆಯ ವಸ್ತುಗಳ ಸಗಟು ಹಾಗೂ ಚಿಲ್ಲರೆ ವ್ಯಾಪಾರ ನಡೆಯುತ್ತದೆ.

ಶತಮಾನದ ಹೊಳಹು: `ನೂರು ವರ್ಷಗಳ ಹಿಂದಿನಿಂದಲೂ ಇಲ್ಲಿ ವ್ಯಾಪಾರ ನಡೆಯುತ್ತಿದೆ~ ಎನ್ನುತ್ತಾರೆ ಕಳೆದ 60 ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿರುವ ಅಕ್ಕಿ ಹೊಂಡ ವರ್ತಕರ ಸಂಘದ ಅಧ್ಯಕ್ಷ ಜಿ.ಎಂ. ಚಿಕ್ಕಮಠ.  ಮೊದಲಿಗೆ ಇಲ್ಲೊಂದು ಹೊಂಡವಿತ್ತು. ಅವಿಭಜಿತ ಧಾರ ವಾಡ ಜಿಲ್ಲೆಯ ಹಾನಗಲ್, ತಡಸ, ದುಂಡಸಿ, ಕಲಘಟಗಿ ಯಲ್ಲಿ ಆಗ ಹೆಚ್ಚಾಗಿ ಬತ್ತ ಬೆಳೆಯುತ್ತಿದ್ದರು. ಅಲ್ಲಿಂದ ಅಕ್ಕಿ ಖರೀದಿಸಿ ತಂದು ಹುಬ್ಬಳ್ಳಿಯ ವ್ಯಾಪಾರಿಗಳು ಇಲ್ಲಿನ ಹೊಂಡದ ದಡದಲ್ಲಿ ಇಟ್ಟು ಮಾರಾಟ ಮಾಡುತ್ತಿದ್ದರು. ಅದೇ ಮುಂದೆ ಅಕ್ಕಿ ಹೊಂಡ ಎಂಬ ಹೆಸರಿಗೆ ಕಾರಣ ವಾಯಿತು. ಆಗ ಹುಬ್ಬಳ್ಳಿಯ ಜನಸಂಖ್ಯೆ ಸುಮಾರು 40 ಸಾವಿರದ ಆಸುಪಾಸಿನಲ್ಲಿತ್ತು.  ಜನಸಂಖ್ಯೆ ಹೆಚ್ಚಾದಂತೆ ಮಾರುಕಟ್ಟೆ ವಿಸ್ತಾರಗೊಂಡಿದ್ದು, ಹೊಂಡ ಮುಚ್ಚಿದ ನಗರಾಡಳಿತ ವ್ಯಾಪಾರಕ್ಕೆ ಅವಕಾಶವನ್ನು ಮಾಡಿಕೊಟ್ಟಿತು ಎನ್ನುವ ಚಿಕ್ಕಮಠ,  ತಮ್ಮ ತಂದೆ ರಾಚಯ್ಯಸ್ವಾಮಿ ಚಿಕ್ಕಮಠ ಹಾಗೂ ಅಜ್ಜ ಕೂಡ ಇಲ್ಲಿಯೇ ಅಕ್ಕಿ ವ್ಯಾಪಾರ ಮಾಡು ತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ.

ಬತ್ತದ ಕೊಯ್ಲಿನ ನಂತರ ಅದೇ ಗದ್ದೆಗಳಲ್ಲಿ ಬೆಳೆಯುತ್ತಿದ್ದ ಅವರೆ, ಹೆಸರು, ಕಡಲೆಯನ್ನು ರೈತರಿಂದ ಖರೀದಿಸಿ ತಂದು ಅಕ್ಕಿಯೊಂದಿಗೆ ಮಾರಾಟ ಮಾಡಲು ಆರಂಭಿಸಲಾಯಿತು. ಇಲ್ಲಿ ವಹಿವಾಟಿನ ಒತ್ತಡ ಹೆಚ್ಚಿ ಮುಂದೆ ಕಾಟನ್ ಮಾರು ಕಟ್ಟೆ ಹುಟ್ಟಿಕೊಳ್ಳಲು  ಕಾರಣವಾಯಿತು ಎನ್ನುತ್ತಾರೆ ಅಕ್ಕಿ ಹೊಂಡದ ವ್ಯಾಪಾರಿ ರಾಚಪ್ಪ ವೀರಭದ್ರಪ್ಪ ಬೋರಟ್ಟಿ.

ಪ್ರಸ್ತುತ ಅಕ್ಕಿಹೊಂಡ ಮಾರುಕಟ್ಟೆ ಪ್ರದೇಶದಲ್ಲಿ 250ಕ್ಕೂ ಹೆಚ್ಚು ವ್ಯಾಪಾರಿಗಳಿದ್ದು, ಮೊದಲಿಗೆ ಸ್ಥಳೀಯವಾಗಿ ನಡೆ ಯುತ್ತಿದ್ದ ಇಲ್ಲಿನ ವಹಿವಾಟು ಈಗ ರಾಜಸ್ತಾನ, ಪಂಜಾಬ್, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಗೆ ವಿಸ್ತರಿಸಿದೆ. ಎಪಿಎಂಸಿಯಿಂದ ವಾರಕ್ಕೊಮ್ಮೆ ಇಲ್ಲಿನ ಗಣೇಶ ಗುಡಿಯಲ್ಲಿ ವ್ಯಾಪಾರಿಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಮೊತ್ತದ ಸೆಸ್ ವಸೂಲಿ ಮಾಡಲಾಗುತ್ತಿದೆ.

ಸ್ಥಳಾಂತರ ಯೋಜನೆ: ಹುಬ್ಬಳ್ಳಿಯ ಜನಸಂಖ್ಯೆ ಇಂದು 10 ಲಕ್ಷಕ್ಕೆ ತಲುಪಿದ್ದು, ಇದರಿಂದ ಮಾರುಕಟ್ಟೆ ವಿಸ್ತಾರ ಗೊಂಡಿತು. ಇರುವ ಜಾಗ ಕಿರಿದಾಗಿ ಸಮಸ್ಯೆಯೂ ಹೆಚ್ಚಳ ಗೊಂಡಿತು. ಇಲ್ಲಿನ ಇಕ್ಕಟ್ಟಾದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಾಮಾನ್ಯ ಎನಿಸಿತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಎಂಟು ವರ್ಷಗಳ ಹಿಂದೆ ಅಮರಗೋಳದ ಎಪಿಎಂಸಿ ಪ್ರಾಂಗ ಣಕ್ಕೆ ಅಕ್ಕಿಹೊಂಡ ಮಾರುಕಟ್ಟೆ ಸ್ಥಳಾಂತರಿಸುವ ಯೋಜನೆ ಹಾಕಿಕೊಳ್ಳಲಾಯಿತು.

ಅಕ್ಕಿಹೊಂಡ ವರ್ತಕರಿಗೆ ಅಮರಗೋಳದ ಮಾರುಕಟ್ಟೆ ಪ್ರಾಂಗಣಕ್ಕೆ ಅಂಗಡಿಗಳನ್ನು ಸ್ಥಳಾಂತರಿಸುವಂತೆ ಸೂಚಿಸಿ, ಮೊದಲ ಹಂತದಲ್ಲಿ 207 ವರ್ತಕರಿಗೆ ಹಾಗೂ ಎರಡನೇ ಹಂತದಲ್ಲಿ 47 ವರ್ತಕರಿಗೆ ಅಲ್ಲಿ ಸ್ಥಳಾವಕಾಶ ಕಲ್ಪಿಸಿತ್ತು. ಅಮರಗೋಳದಲ್ಲಿ ಮೂಲ ಸೌಕರ್ಯದ ಕೊರತೆಯ ಕಾರಣ ನೀಡಿ ವರ್ತಕರು ಅಲ್ಲಿಗೆ ತೆರಳಲು ಇಲ್ಲಿಯವರೆಗೆ ಹಿಂದೇಟು ಹಾಕಿದ್ದರು.

ಮೂಲ ಸೌಕರ್ಯಕ್ಕೆ ಒತ್ತು: ಅಮ್ಮಿನಭಾವಿಯಿಂದ ಹುಬ್ಬಳ್ಳಿಗೆ ಕುಡಿಯುವ ನೀರು ಪೂರೈಸುವ ಮಲಪ್ರಭಾ ಎರಡನೇ ಹಂತದ ಯೋಜನೆಯಲ್ಲಿ ನೃಪತುಂಗ ಬೆಟ್ಟದಿಂದ ಎಪಿಎಂಸಿ ಪ್ರಾಂಗಣಕ್ಕೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನೀರು ಪೂರೈಕೆಗೆ ಎಪಿಎಂಸಿ ಆಡಳಿತ ಮುಂದಾಗಿದೆ. ರೂ. 3.24 ಕೋಟಿ ವೆಚ್ಚದಲ್ಲಿ ವಿದ್ಯುತ್ ಸೌಕರ್ಯ ಕಲ್ಪಿಸಿದೆ. ಒಳಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ.

ಅಕ್ಕಿಹೊಂಡ ಮಾರುಕಟ್ಟೆಯ ವರ್ತಕರು ಬಯಸಿದಂತೆ ಇಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿದೆ ಎನ್ನುವ ಎಪಿಎಂಸಿ ಕಾರ್ಯದರ್ಶಿ ಪಾತಲಿಂಗಪ್ಪ,  150ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಲಾಗುತ್ತಿದ್ದು, ಅಂತಿಮವಾಗಿ ಛಾವಣಿ ಹೊದಿಸುವ ಕಾರ್ಯ ಪೂರ್ಣಗೊಳ್ಳಬೇಕಿದೆ. ಮೂರು ತಿಂಗಳ ಒಳಗೆ ಅಕ್ಕಿಹೊಂಡ ಮಾರುಕಟ್ಟೆಯನ್ನು ಇಲ್ಲಿಗೆ ಸ್ಥಳಾಂತರಿ ಸಲಾಗುವುದು ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT